ಬುಧವಾರ, ನವೆಂಬರ್ 13, 2019
23 °C

ಬ್ರಹ್ಮರಥೋತ್ಸವವೂ ಕಲಾಜಾತ್ರೆಯೂ

Published:
Updated:

ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ ಸಮೀಪದ ಕಾಕೋಳಿನ ಪಾಂಚಜನ್ಯ ಸಭಾಂಗಣದಲ್ಲಿ ವೇಣುಗೋಪಾಲ ಸ್ವಾಮಿ ಬ್ರಹ್ಮರಥೋತ್ಸವ ಅಷ್ಟ ದಶಮಾನೋತ್ಸವ ಪ್ರಯುಕ್ತ ಏ.13ರಿಂದ 16ರವರೆಗೆ ಕಲಾಜಾತ್ರೆ ಆಯೋಜಿಸಲಾಗಿದೆ.

ಕಲಾಜಾತ್ರೆಯಲ್ಲಿ ಆಹ್ವಾನಿತ 11 ಕಲಾವಿದರು ಚಿತ್ರಿಸಿರುವ ಶ್ರೀಕೃಷ್ಣನ ಮನಮೋಹಕ ಭಾವ ಭಂಗಿಗಳ ಕಲಾಕೃತಿಗಳ `ಶ್ರೀಕೃಷ್ಣ ಕಲಾದರ್ಶನ' ಗಮನ ಸೆಳೆಯಲಿದೆ. ಚಿತ್ರಕಲೆ ಭಾವನೆಗಳಿಗೆ ಮೂರ್ತರೂಪ ಕೊಡುವ ಅಪ್ರತಿಮ ಮಾಧ್ಯಮ, ಅದರಲ್ಲೂ `ಕೃಷ್ಣ' ಕಲಾವಿದರ ಕುಂಚದಲ್ಲಿ ಲೀಲಾಜಾಲವಾಗಿ ಆಡಬಲ್ಲ ಮುದ್ದುಗೂಸು.`ಚಿತ್ರಕಲಾ ಪ್ರದರ್ಶನ ನಗರಕ್ಕೆ ಮಾತ್ರ ಸೀಮಿತವಾಗದೆ ಗ್ರಾಮೀಣ ಪ್ರದೇಶದ ಕಲಾಪ್ರೇಮಿಗಳಿಗೂ ತಲುಪಿಸುವುದು ಹಾಗೂ ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸುವ ಹಿನ್ನೆಲೆಯಲ್ಲಿ ಈ ಕಲಾಪ್ರದರ್ಶನ ಹಮ್ಮಿಕೊಂಡು ಅಷ್ಟಮಿಪ್ರಿಯನ ಅವಿಸ್ಮರಣೀಯ ಉತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುವುದು' ಎನ್ನುತ್ತಾರೆ ಆಯೋಜಕ ಮುರುಳಿ ಎಸ್. ಕಾಕೋಳು.ಬಾಲ ಕಲಾವಿದ ಹೃತಿಕ್ ಶ್ರೀಧರ್ ರಚಿಸಿರುವ ಮಯೂರ ಕೃಷ್ಣ, ವಿದ್ಯಾರ್ಥಿ ಮುರಳಿ ಕೃಷ್ಣ ಕುಂಚದಲ್ಲಿ ಮೂಡಿಬಂದಿರುವ `ಪಾಂಚಜನ್ಯ ಕೃಷ್ಣ', ಬಹು ರಾಷ್ಟ್ರೀಯ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೂಪಶ್ರೀ ಚಿತ್ರಿಸಿರುವ `ಶೇಷಾಸನ ಪರವಾಸುದೇವ', ಆಂಧ್ರಪ್ರದೇಶ ತಾಡಪತ್ರಿಯ ಕಲಾ ಶಿಕ್ಷಕ ಡಿ. ಶ್ರೀನಿವಾಸರಾವ್ ಅವರ ತೈಲವರ್ಣದ ಶ್ರೀಕೃಷ್ಣ ಮಾಯ, ನಾನಾ ವಿಧದ ಮಣ್ಣನ್ನು ಬಳಸಿ ಚಿತ್ರಿಸಿರುವ ಮಾಕಳಿಯ ಕಲಾ ಶಿಕ್ಷಕಿ ಸುಮಿತ್ರಾ ಅವರ `ಬಕಾಸುರ ವಧೆ', ಕಲಾವಿದ ಎಸ್.ಎಫ್. ಹುಸೇನಿ ಅವರ ಗೋಪಾಲ ಚಿತ್ರಣದಲ್ಲಿ ಭಕ್ತಿಯ ದೈವಿಕ ಧ್ಯಾನದ ದರ್ಶನವಿದೆ. ಚಿತ್ರಕಲಾ ಅಕಾಡೆಮಿಯ ರೂವಾರಿ ಮರಿಯಪ್ಪ ಗುಳೆಜ್ಜಿ ಅವರ ರಥೋತ್ಸವ ಚಿತ್ರ ವಾಸ್ತವ, ಕಾಲ್ಪನಿಕತೆಗಳ ಸಮ್ಮಿಲನದಂತೆ ಭಾಸವಾಗುತ್ತದೆ.ಕಲಾವಿದ ಎಚ್.ಎನ್. ಹರೀಶ್ ಕ್ಷೇತ್ರ ಪುರಾಣವನ್ನು ಆಧರಿಸಿ ಚಿತ್ರಿಸಿರುವ  ಶ್ರೀಪಾದರಾಜರು ಅರ್ಕಾವತಿ ನದಿ ತೀರದಲ್ಲಿ ಪೂಜಿಸುತ್ತಿರುವ ಬೃಂದಾವನದಲ್ಲಿನ ವೇಣುಗೋಪಾಲ, ಕಲಾವಿದ ಕೆ. ಸೋಮಶೇಖರ್ ಕುಂಚದಿಂದ ಚಿತ್ರಿತಗೊಂಡಿರುವ ಗೋಪಿಕಾಸ್ತ್ರೀಯರು ಭಕ್ತಿ ತನ್ಮಯತೆಯಿಂದ ಕೃಷ್ಣನ ಪಾದಗಳಿಗೆ ಪುಷ್ಪಾರ್ಚನೆ ಮಾಡುತ್ತಿರುವ ಕೃತಿ ವರ್ಣಸಂಯೋಜನೆ ಮತ್ತು ಸೂಕ್ಷ್ಮ ವಿವರಗಳಿಂದ ಗಮನ ಸೆಳೆಯುತ್ತದೆ. ಮೈಸೂರು ಸಾಂಪ್ರದಾಯಿಕ ಶೈಲಿ ಖ್ಯಾತಿಯ ಕಲಾವಿದೆ ಡಾ. ಮೀರಾಕುಮಾರ್ ಅವರ ಅಪೂರ್ವ ಕಲಾಕೃತಿ `ನವನೀತ ಚೋರ' ನೋಡುವುದೇ ಕಣ್ಮನಗಳಿಗೆ ಹಬ್ಬ.ಶನಿವಾರ (ಏ 13) ಬೆಳಿಗ್ಗೆ 10ಕ್ಕೆ ಕಲಾ ವಿಮರ್ಶಕ ಪ್ರೊ.ಮೈಸೂರು ವಿ. ಸುಬ್ರಹ್ಮಣ್ಯ ಅವರು ಕಲಾಜಾತ್ರೆಗೆ ಚಾಲನೆ ನೀಡಲಿದ್ದಾರೆ. ವಿದ್ವಾನ್ ಆರ್.ಕೆ. ಪದ್ಮನಾಭ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಕಲಾವಿದರನ್ನು ಗೌರವಿಸಲಿದ್ದಾರೆ.

ವಿವರಗಳಿಗೆ: 9035618076.

ಪ್ರತಿಕ್ರಿಯಿಸಿ (+)