ಶುಕ್ರವಾರ, ಮೇ 27, 2022
31 °C

ಬ್ರಹ್ಮಾವರ ಉಪ ಖಜಾನಾಧಿಕಾರಿ ಲೋಕಾಯುಕ್ತ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ಕಾಲೇಜಿಗೆ ಸಂಬಂಧಪಟ್ಟ ಬಿಲ್ಲುಗಳ ಕ್ಲಿಯರೆನ್ಸ್‌ಗೆ ಹಣ ಬೇಡಿಕೆ ಒಡ್ಡಿ ಲಂಚ ಹಣ ಪಡೆದುಕೊಳ್ಳುತ್ತಿದ್ದ ಸಂದರ್ಭ ಬ್ರಹ್ಮಾವರ ಉಪ ಖಜಾನಾಧಿಕಾರಿ ಎನ್.ಎಂ.ಶಿವಶಂಕರ ಗುರುವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಬಾರ್ಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಲ್ಲುಗಳ ಕ್ಲಿಯರೆನ್ಸ್‌ಗೆ ಹಾಗೂ ಚೆಕ್ ವಿತರಿಸಲು ಲಂಚವಾಗಿ ರೂ. 16 ಸಾವಿರ ಪಡೆಯುವಾಗ ಬಲೆಗೆ ಬಿದ್ದರು. ಆರೋಪಿ ಅಧಿಕಾರಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಇದೇ 26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೂಲತಃ ಮೈಸೂರಿನವರಾದ ಶಿವಶಂಕರ್, 3 ವರ್ಷಗಳಿಂದ ಬ್ರಹ್ಮಾವರದಲ್ಲಿ ಕೆಲಸ ಮಾಡುತ್ತಿದ್ದಾರೆ.ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ರೂ. 28 ಲಕ್ಷ ಬಿಲ್ಲುಗಳ ಪಾವತಿಗಾಗಿ ಬ್ರಹ್ಮಾವರದ ಉಪ ಖಜಾನೆಗೆ ಮಾ. 8ರಿಂದ 18 ಅವಧಿ ಒಳಗೆ ಬಿಲ್ಲು ಹಾಜರು ಪಡಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆಯಿಂದ ಟೆಂಡರ್ ಆದ ಪಾವತಿಗೆ ಬಂದ ಬಿಲ್ಲುಗಳ ಪಾವತಿಗೆ ಹಣದ ಬೇಡಿಕೆ ಇಟ್ಟಿದ್ದರು. ರೂ. 8 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ಲು ಮತ್ತು ಉಳಿದ ಬಿಲ್ಲುಗಳಿಗೆ ಶೇ. 1ರ ಲೆಕ್ಕದಲ್ಲಿ ಲಂಚ ಕೋರಿ, ನಗದು ರೂಪದಲ್ಲಿ ಅಥವಾ ಬ್ರಹ್ಮಾವರ ಗಣೇಶ್ ಎಲೆಕ್ಟ್ರಾನಿಕ್ಸ್ ರತ್ನಾಕರ ಭಟ್ ಎಂಬವರಲ್ಲಿ ನೀಡುವಂತೆ ಸೂಚಿಸಿದ್ದರು. ಶೇ. 1ರ ಲೆಕ್ಕದಲ್ಲಿ ರೂ. 28 ಸಾವಿರವನ್ನು ಅಧಿಕಾರಿ ಬೇಡಿಕೆ ಇಟ್ಟಿದ್ದರು. ಆದರೆ ಪ್ರಾಂಶುಪಾಲರು ರೂ. 16 ಸಾವಿರ ನೀಡುವ ಭರವಸೆ ನೀಡಿದ್ದರು.ಈ ಹಿಂದೆ ಪ್ರಾಂಶುಪಾಲರ ಹಾಗೂ ಅವರ ಸಹೋದ್ಯೋಗಿಗಳ ಹತ್ತಿರ ಯುಜಿಸಿ ವೇತನ ಬಾಕಿ ವಿತರಣೆ ಹಾಗೂ ಅತಿಥಿ ಉಪನ್ಯಾಸಕರ ಗೌರವಧನ ನೀಡುವುದುಕ್ಕೂ ಸಾಕಷ್ಟು ಲಂಚ ಪಡೆದಿದ್ದರು ಎಂದು ಹೆಬ್ಬಾರ್ ದೂರಿದ್ದಾರೆ. ಅಲ್ಲದೇ ಹಣಕ್ಕಾಗಿ ಬೇಡಿಕೆ ಒಡ್ಡಿ ಹಣ ನೀಡದಿದ್ದಾಗ ಬಿಲ್ಲುಗಳ ಕ್ಲಿಯರೆನ್ಸ್‌ಗೆ ಅಡ್ಡಿ ಮಾಡಿ ಸತಾಯಿಸುತ್ತಿದ್ದರು ಎಂದು ದೂರಲಾಗಿದೆ.ಪ್ರಾಂಶುಪಾಲರು, ಮೊಬೈಲ್ ಫೋನ್‌ನಲ್ಲಿ ಶಿವಕುಮಾರ್ ಜತೆ ಹಲವು ದಿನ ಮಾತನಾಡಿದ್ದನ್ನು ಧ್ವನಿಮುದ್ರಿಸಿಕೊಂಡಿದ್ದರು. ಮಾ. 22ರಂದು ಉಡುಪಿ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಪಿ.ದಿನೇಶ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು. 23ರಂದು ಪ್ರಾಂಶುಪಾಲರು ಕರೆ ಮಾಡಿದ್ದಾಗ, ರೂ 16 ಸಾವಿರವನ್ನು 24ರ ಬೆಳಿಗ್ಗೆ ಉಪ ಖಜಾನೆಗೆ ತಂದು ಕೊಡುವಂತೆ ಆರೋಪಿ ಅಧಿಕಾರಿ ತಿಳಿಸಿದ್ದರು. ಗುರುವಾರ ಮಧ್ಯಾಹ್ನ ಶಿವಶಂಕರ್ ಲಂಚ ಪಡೆಯುತ್ತಿದ್ದಾಗ ದಿನೇಶ್ ಕುಮಾರ್ ಸಿಬ್ಬಂದಿ ಜತೆಗೂಡಿ ದಾಳಿ ನಡೆಸಿ ಬಂಧಿಸಿದರು. ಲಂಚದ ಹಣ, ಸಂಬಂಧಿಸಿದ ಪತ್ರಗಳನ್ನು ವಶಪಡಿಸಿಕೊಂಡರು.ಇನ್ಸ್‌ಪೆಕ್ಟರ್ ಸಿ.ಇ.ತಿಮ್ಮಯ್ಯ, ಕೆ.ಎಚ್.ದಿಲೀಪ್ ಕುಮಾರ್, ಸಿಬ್ಬಂದಿ ದಿವಾಕರ ಸುವರ್ಣ, ದಿವಾಕರ ಶರ್ಮ, ರಾಮಚಂದ್ರ ಭಟ್, ಶೋಭಾ, ಶ್ರೀಧರ, ಉಮೇಶ್, ಶಿವರಾಯ ಬಿಲ್ಲವ, ಸಂತೋಷ, ಅಶೋಕ ಹಾಗೂ ಲಕ್ಷ್ಮಿದರ ಸೇಠಿ ದಾಳಿಗೆ ಸಹಕರಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.