ಸೋಮವಾರ, ಸೆಪ್ಟೆಂಬರ್ 28, 2020
28 °C

ಬ್ರಹ್ಮೋಸ್‌ನಿಂದ ಸಿಕ್ಕ ವಿಶ್ವನಾಯಕನ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮೋಸ್‌ನಿಂದ ಸಿಕ್ಕ ವಿಶ್ವನಾಯಕನ ಪಟ್ಟ

ತುಮಕೂರು: ಕ್ಷಿಪಣಿ ತಂತ್ರಜ್ಞಾನದ ವಿಷಯದಲ್ಲಿ ಭಾರತ ತಡವಾಗಿ ಎಚ್ಚೆತ್ತುಕೊಂಡರೂ, ವಿಶ್ವ ನಾಯಕನಾಗಿ ಹೊರಹೊಮ್ಮಿದೆ ಎಂದು ಹೆಸರಾಂತ ವಿಜ್ಞಾನಿ, ಡಿಆರ್‌ಡಿಒ ಮುಖ್ಯನಿಯಂತ್ರಕ ಹಾಗೂ ಬ್ರಹ್ಮೋಸ್ ಏರೋಸ್ಪೇಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಶಿವತನು ಪಿಳ್ಳೈ ಅಭಿಪ್ರಾಯಪಟ್ಟರು.ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ವಿಶ್ವವಿದ್ಯಾನಿಲಯ ಸಂಶೋಧನ ಕೇಂದ್ರಗಳ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇರೆಲ್ಲ ದೇಶಗಳು ಕ್ಷಿಪಣಿ ತಂತ್ರಜ್ಞಾನದಲ್ಲಿ ಸಾಕಷ್ಟು ಸಾಧನೆ ಮಾಡಿದ ಬಳಿಕ ಭಾರತ ಈ ಬಗ್ಗೆ ಗಂಭೀರವಾಗಿ ಯೋಚಿಸಿತು. ಆದರೂ ಭಾರತದ ಕ್ಷಿಪಣಿ ತಂತ್ರಜ್ಞಾನ ಸಶಕ್ತವಾಗಿ ಬೆಳೆದಿದ್ದು, ವಿಶ್ವದ ಯಾವ ಶಕ್ತಿ ಕೇಂದ್ರಕ್ಕೂ ಕಡಿಮೆ ಇಲ್ಲ ಎಂದರು.ಭಾರತದ ಬ್ರಹ್ಮೋಸ್‌ನಂತಹ ಕ್ಷಿಪಣಿಯನ್ನು ಪ್ರಪಂಚದ ಇನ್ಯಾವ ದೇಶವೂ ಉಡಾಯಿಸಿಲ್ಲ. ಜಾಗತಿಕವಾಗಿ ರಕ್ಷಣಾ ತಂತ್ರಜ್ಞಾನದಲ್ಲಿ ಬ್ರಹ್ಮೋಸ್ ದೊಡ್ಡ ಮೈಲಿಗಲ್ಲು. ಪ್ರಪಂಚಕ್ಕೆ ಭಾರತ- ರಷ್ಯ ಜಂಟಿ ಯೋಜನೆಯ ಒಂದು ಮಹತ್ವದ ಕೊಡುಗೆ. ಬ್ರಹ್ಮೋಸ್ ಭಾರತಕ್ಕೆ ಜಾಗತಿಕ ನಾಯಕತ್ವ ನೀಡಿದೆ ಎಂದು ಅವರು ತಿಳಿಸಿದರು.ವಿಜ್ಞಾನದಿಂದ ಭಾರತವೂ ಸೇರಿದಂತೆ ವಿಶ್ವದ ವಿವಿಧ ದೇಶಗಳು ಅನೇಕ ಸಾಧನೆ ಮಾಡಿವೆ. ಇದರರ್ಥ ನಮ್ಮ ಪ್ರಾಚೀನರಿಗೆ ಏನೂ ತಿಳಿದಿರಲಿಲ್ಲ ಎಂದಲ್ಲ. ಅವರ ಜ್ಞಾನ ಹಾಗೂ ಬುದ್ಧಿವಂತಿಕೆ ವಿಸ್ಮಯಕರವಾದದ್ದು. ಅನೇಕ ಪ್ರಾಚೀನ ರಚನೆಗಳು ಆ ಕಾಲದ ತಾಂತ್ರಿಕ ಮುನ್ನಡೆಯ ಹೆಚ್ಚುಗಾರಿಕೆಯನ್ನು ಸಾರುತ್ತವೆ ಎಂದು ನಿದರ್ಶನಗಳೊಂದಿಗೆ ವಿವರಿಸಿದರು.ಪ್ರಾಚೀನ ಕಾಲದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದ ಭಾರತ ವೈಜ್ಞಾನಿಕ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದೊರೆಯುವ ವೇಳೆಗೆ ಕನಿಷ್ಠ ಮಟ್ಟ ತಲುಪಿತ್ತು. ಆದರೆ ಪ್ರಸಕ್ತ ಜ್ಞಾನಯುಗದಲ್ಲಿ ತನ್ನ ಸ್ವಂತ ಶಕ್ತಿಯಿಂದ ಮತ್ತೆ ಉಚ್ಛ್ರಾಯ ಸ್ಥಿತಿ ತಲುಪಿದೆ. ರಕ್ಷಣಾ ತಂತ್ರಜ್ಞಾನದ ವಿಷಯದಲ್ಲಿ ಭಾರತ ಇನ್ನಷ್ಟು ಮುಂದುವರಿಯ ಬೇಕಾಗಿದೆ ಎಂದರು.ಕುಲಪತಿ ಡಾ.ಎಸ್.ಸಿ.ಶರ್ಮಾ, ಕುಲಸಚಿವರಾದ ಪ್ರೊ.ಡಿ.ಶಿವಲಿಂಗಯ್ಯ, ಎನ್.ಲಕ್ಷ್ಮೀಕಾಂತ್, ಸಂಶೋಧನ ಕೇಂದ್ರಗಳ ಒಕ್ಕೂಟದ ಸಂಯೋಜಕ ಡಾ.ಎಂ.ಜಯರಾಮು ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.