ಬ್ರಾಹ್ಮಣೇತರ ಶ್ರೇಷ್ಠ ಸಾಹಿತಿಗಳೇ ಹೆಚ್ಚಿದ್ದಾರೆ

7

ಬ್ರಾಹ್ಮಣೇತರ ಶ್ರೇಷ್ಠ ಸಾಹಿತಿಗಳೇ ಹೆಚ್ಚಿದ್ದಾರೆ

Published:
Updated:

ಬೆಂಗಳೂರು: `ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬ್ರಾಹ್ಮಣೇತರ ಶ್ರೇಷ್ಠ ಸಾಹಿತಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ~ ಎಂದು ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಹೇಳಿದರು.ಅಭಿನವ ಪ್ರಕಾಶನವು ಜಯನಗರದ ಸೌತ್‌ಎಂಡ್ ವೃತ್ತದಲ್ಲಿರುವ ಸುರಾನ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಮ್ಮ `ಆಚೀಚೆ~ ಹಾಗೂ `ಪಚ್ಚೆ ರೆಸಾರ್ಟ್~ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.`ಕನ್ನಡ ಒಂದು ಅದ್ಭುತ ಲೋಕ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯಾವುದೇ ಮೀಸಲಾತಿ ಎಂಬುದಿಲ್ಲ. ಎಲ್ಲ ಜಾತಿಯ ಲೇಖಕರು ಇದ್ದಾರೆ. ಇಲ್ಲಿ ಯಾರಿಗೂ ಶ್ರೇಷ್ಠ ಸಾಹಿತಿ ಎಂಬ ಪ್ರಮಾಣಪತ್ರ ನೀಡಿಲ್ಲ. ಹಾಗಾಗಿ ಬ್ರಾಹ್ಮಣೇತರ ಶ್ರೇಷ್ಠ ಸಾಹಿತಿಗಳೇ ಹೆಚ್ಚಾಗಿದ್ದಾರೆ~ ಎಂದರು.`ಕೆ.ವಿ.ಸುಬ್ಬಣ್ಣ, ಶಂಕರನಾರಾಯಣ ಭಟ್ಟ, ಶಾಂತವೇರಿ ಗೋಪಾಲಗೌಡರೊಂದಿಗಿನ ಒಡನಾಟದಿಂದ ನನ್ನ ದೃಷ್ಟಿಕೋನ ಬದಲಾಯಿತು. ಶಿವರಾಮ ಕಾರಂತರು ಹಾಗೂ ಕುವೆಂಪು ಅವರ ಬರಹಗಳು ಬಡ ಬ್ರಾಹ್ಮಣನಾಗಿದ್ದ ನನ್ನಲ್ಲಿ ಬ್ರಾಹ್ಮಣಿಕೆಯನ್ನು ಕಳೆದುಕೊಳ್ಳಲು ನೆರವಾಯಿತು. ನನ್ನಲ್ಲಿ ಬ್ಯಾಹ್ಮಣಿಕೆ ಉಳಿದಿಲ್ಲ. ಆದರೆ ಜನರಲ್ಲಿ ಅದು ಉಳಿದಿದೆ~ ಎಂದು ಹೇಳಿದರು.`ಜಾತಿ ವ್ಯವಸ್ಥೆ ಹೋಗಬೇಕು. ಆದರೆ ಜಾತಿಯಿಂದ ಉಂಟಾಗಿರುವ ಬಹುತ್ವವನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು ಪ್ರಮುಖ ಪ್ರಶ್ನೆ. ಈ ರೀತಿಯ ಬಿಕ್ಕಟ್ಟುಗಳು ಲೇಖಕರಿಗೂ ಸವಾಲು ಇದ್ದಂತೆ~ ಎಂದರು.

`ಪಚ್ಚೆ ರೆಸಾರ್ಟ್~ ಕೃತಿಯ ಬಗ್ಗೆ ಮಾತನಾಡಿದ ಕವಿ ಎಚ್.ಎಸ್. ವೆಂಕಟೇಶಮೂರ್ತಿ, `ಈ ಕತೆ ನನ್ನ ಮೇಲೆ ಗಾಢ ಪರಿಣಾಮ ಬೀರಿದೆ.ಈ ಕತೆಯನ್ನು ಓದುತ್ತಿದ್ದಂತೆ ಘಟನೆಗಳು ಕಣ್ಣ ಮುಂದೆ ಘಟಿಸಿದಂತೆ ಭಾಸವಾಗುತ್ತವೆ. ಕತೆಯಲ್ಲಿ ವಿಲಕ್ಷಣ ಪಾತ್ರಗಳನ್ನು ರೂಪಿಸಿ ಅಕ್ಷರ ಸಂಯೋಜನೆಯಲ್ಲಿ ಮಿಶ್ರ ಜಗತ್ತನ್ನು ಸೃಷ್ಟಿಸಿದ್ದಾರೆ. ಪರ- ವಿರೋಧ ಚರ್ಚೆ ಕೂಡ ಗಮನ ಸೆಳೆಯುತ್ತದೆ~ ಎಂದರು.`ಈಚಿನ ವರ್ಷಗಳಲ್ಲಿ ಗದ್ಯ- ಪದ್ಯಗಳ ನಡುವೆ ವ್ಯತ್ಯಾಸ ಕಡಿಮೆಯಾಗುತ್ತಿದೆ. ಗದ್ಯ- ಪದ್ಯದ ಚೌಕಟ್ಟನ್ನು ಮೀರಿ ಸಾಹಿತ್ಯ ರಚನೆಯಾಗುತ್ತಿರುವುದು ಗಮನಾರ್ಹ~ ಎಂದರು.`ಅನಂತಮೂರ್ತಿ ಅವರ ಬರಹದಲ್ಲಿ ಅನುಭವದ ತುಡಿತವೇ ಪ್ರಧಾನವಾಗಿದೆ. ತಮ್ಮ ಗ್ರಹಿಕೆಯಲ್ಲಿ ತೋರುವ ಸರ್ವಧಾರಿತ್ವ ಉತ್ತಮವಾಗಿದೆ. ಮಿಶ್ರ ಜಗತ್ತಿನ ಸ್ಥಿತಿಯನ್ನು ಅದ್ಭುತವಾಗಿ ನಿರೂಪಿಸಿದ್ದಾರೆ~ ಎಂದು ಹೇಳಿದರು.`ಆಚೀಚೆ~ ಕೃತಿ ಕುರಿತು ಮಾತನಾಡಿದ ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್, `ಅನಂತಮೂರ್ತಿ ಅವರು ವರ್ತಮಾನಕ್ಕೆ ಧೈರ್ಯವಾಗಿ ಸ್ಪಂದಿಸುತ್ತಾರೆ. ಹಾಗಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಯಾವುದೇ ಮುಲಾಜಿಗೆ ಒಳಗಾಗದೇ ನೇರವಾಗಿ ತಮ್ಮ ಹೇಳಿಕೆ, ಪ್ರತಿಕ್ರಿಯೆ ನೀಡುವುದು ಅವರ ವೈಶಿಷ್ಟ್ಯ~ ಎಂದರು.`ಅನಂತಮೂರ್ತಿ ಅವರ ಬರಹ ಬಹುಮುಖಿ ಪಯಣವಿದ್ದಂತೆ. ಸಾಹಿತ್ಯದಿಂದ ಸಂಸ್ಕೃತಿ- ಸಮುದಾಯದವರೆಗೆ, ಮೌನದಿಂದ ಕ್ರಿಯಾಶೀಲತೆಯಡೆಗೆ, ನಿಷ್ಠುರತೆಯಿಂದ ಉದಾರತೆಯವರೆಗಿನ ಪಯಣದಂತೆ ಅವರ ಬರಹ ಕಾಣುತ್ತದೆ~ ಎಂದು ಬಣ್ಣಿಸಿದರು.ವಿಮರ್ಶಕಿ ತಾರಿಣಿ ಶುಭದಾಯಿನಿ ಹಾಗೂ ಕವಯತ್ರಿ ಜ.ನಾ. ತೇಜಶ್ರೀ ಅವರು ಕೃತಿ ಕುರಿತು ಪ್ರತಿಕ್ರಿಯೆ ನೀಡಿದರು. ಸುರಾನ ಕಾಲೇಜಿನ ಪ್ರಾಂಶುಪಾಲ ಎ.ಎಸ್. ಚಂದ್ರಮೌಳಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry