ಗುರುವಾರ , ಮೇ 13, 2021
18 °C

ಬ್ರಾಹ್ಮಣ ಸಮಾಜಕ್ಕೆ ಅಗತ್ಯ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸರ್ಕಾರಿ ಜಾಗವನ್ನೇ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ ಸಮುದಾಯದವರು ಸಂವಿಧಾನದ ಚೌಕಟ್ಟಿನೊಳಗೆ ಕಟ್ಟಡ ನಿರ್ಮಿಸಿಕೊಳ್ಳುತ್ತಿರುವುದು ಮೆಚ್ಚುವಂತಹ ವಿಚಾರ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಭಿಪ್ರಾಯ ಪಟ್ಟರು.ನಗರದ ಗಾಯತ್ರಿ ದೇವಸ್ಥಾನದ ಆವರಣದ ಪಕ್ಕದಲ್ಲಿ ಭಾನುವಾರ ಬ್ರಾಹ್ಮಣ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.`ನಗರಾಭಿವೃದ್ಧಿ ಪ್ರಾಧಿಕಾರದಿಂದ ಈಗಾಗಲೇ ಕೆಲವೆಡೆ ನಿವೇಶನ ಹಂಚಿಕೆ ಮಾಡಲಾಗುತ್ತಿದ್ದು, ಬ್ರಾಹ್ಮಣರ ಸಂಘ ಕೂಡ ಅರ್ಜಿ ಸಲ್ಲಿಸಿ ಸೂಕ್ತ ನಿವೇಶನ ಪಡೆದು ವಿದ್ಯಾರ್ಥಿ ನಿಲಯ ನಿರ್ಮಿಸಬಹುದು' ಎಂದು ಸಲಹೆ ನೀಡಿದರು.ವೀರಶೈವರು, ಬ್ರಾಹ್ಮಣರು ಹಾಗೂ ವೈಶ್ಯ ಸಮುದಾಯದಲ್ಲೂ ಅನೇಕ ಮಂದಿ ಬಡವರಿದ್ದಾರೆ. ಆದ್ದರಿಂದ ಆ ಸಮುದಾಯದವರಿಗೂ ಮನೆ ನಿರ್ಮಿಸಿಕೊಳ್ಳಲು ನಿವೇಶನದ ಅಗತ್ಯವಿದೆ. ಆ ಸಮುದಾಯಗಳ ಬಡವರಿಗೂ ನಿವೇಶನ ಹಂಚಿಕೆ ಮಾಡಲು ಚಿಂತನೆ ನಡೆಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.ಕೂಡಲಿ ಶೃಂಗೇರಿ ಮಠ ಮಹಾಸಂಸ್ಥಾನದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೋಟೆಲ್ ಭಾಗದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಇಡೀ ವಿಶ್ವವೇ ಧರ್ಮದ ತಳಹದಿಯ ಮೇಲೆ ನಿಂತಿದ್ದು, ಪ್ರತಿಯೊಬ್ಬರು ಸತ್ಯ ಹಾಗೂ ಧರ್ಮದ ಪರವಾಗಿ ಕೆಲಸ ಮಾಡಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಸಂಘದವರು ಕೂಡ ನೂತನ ಕಟ್ಟಡದಿಂದ ಬರುವ ಹಣವನ್ನು ಧಾರ್ಮಿಕ ಕಾರ್ಯಕ್ಕೆ ವಿನಿಯೋಗ ಮಾಡಲು ಚಿಂತಿಸಿರುವುದು ಸಂತಸದ ವಿಚಾರ ಎಂದರು.ಬ್ರಾಹ್ಮಣ ಸಂಘದ ಅಧ್ಯಕ್ಷ ಟಿ.ಕೆ. ಚಂದ್ರಶೇಖರ್‌ರಾವ್ ಅಧ್ಯಕ್ಷತೆ ವಹಿಸಿದ್ದರು. ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ ಯು. ಆನಂದರಾಮ್ ಉಳ್ಳೂರ್, ಡಾ.ಕೆ.ಎಸ್. ಮುಕುಂದರಾವ್ ಹಾಜರಿದ್ದರು. ವಿಜಯ ದಿವಾಕರ್, ಸುಧಾ ವಾಸು ಪ್ರಾರ್ಥಿಸಿದರು. ಪ್ರಾಣೇಶ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.