ಬ್ರೇನ್ ಮ್ಯಾಪಿಂಗ್‌ಗೆ ಸಿದ್ಧ

ಬುಧವಾರ, ಜೂಲೈ 17, 2019
30 °C

ಬ್ರೇನ್ ಮ್ಯಾಪಿಂಗ್‌ಗೆ ಸಿದ್ಧ

Published:
Updated:

ಬೆಳಗಾವಿ: “ಮೇಯರ್ ಮಂದಾ ಬಾಳೆಕುಂದ್ರಿ ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬುದನ್ನು ಸಾಬೀತುಪಡಿಸಲು ಬ್ರೇನ್ ಮ್ಯಾಪಿಂಗ್ ಹಾಗೂ ನಾರ್ಕೊ ಪರೀಕ್ಷೆ ಮಾಡಿಸಿಕೊಳ್ಳಲು ನಾನು ಸಿದ್ಧನಿದ್ದೇನೆ” ಎಂದು ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್ ಧನರಾಜ ಗವಳಿ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಹಣ ಕೇಳಿದ್ದೇನೆ ಎಂದು ಮೇಯರ್ ಮಾಡಿರುವ ಆರೋಪದಲ್ಲಿ ಯಾವುದೇ ಆಧಾರವಿಲ್ಲ. ನನ್ನನ್ನು ತೇಜೋವಧೆ ಮಾಡುವ ಉದ್ದೇಶದಿಂದಲೇ ಆರೋಪ ಮಾಡಲಾಗಿದೆ” ಎಂದು ಹೇಳಿದರು.“ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸ್ವಯಂ ಸ್ಫೂರ್ತಿಯಿಂದ ಯಾರು ಬೇಕಾದರೂ ವಿಧಿವಿಜ್ಞಾನ ಪ್ರಯೋಗ ಮಾಡಿಸಿಕೊಳ್ಳಬಹದು. ನಾನು ಇದನ್ನು ಮಾಡಿಸಿಕೊಳ್ಳಲು ನಿರ್ಧರಿಸಿದ್ದೇನೆ. ಮೇಯರ್ ಸಹ ಇದನ್ನು ಮಾಡಿಸಿಕೊಳ್ಳಲಿ” ಎಂದು ಸವಾಲು ಹಾಕಿದರು.“ವಿರೋಧ ಪಕ್ಷವಾದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯಿಂದ ಸರ್ವ ಭಾಷಿಕ ಸಂವಿಚಾರಿ ವಿಕಾಸ ವೇದಿಕೆಗೆ ಬಂದ 11 ಜನರ ಪಾಲಿಕೆ ಸದಸ್ಯರನ್ನು ಬಾಳೆಕುಂದ್ರಿ ಮೇಯರ್ ಆಗಿ ಆಯ್ಕೆಯಾದ ಬಳಿಕ ಮೂಲೆಗುಂಪು ಮಾಡಿದ್ದಾರೆ” ಎಂದು ಆರೋಪಿಸಿದರು.“ಮೇಯರ್ ಚುನಾವಣೆ ಬಳಿಕ ಅವರನ್ನು ಭೇಟಿ ಮಾಡಿದ್ದೇ ಅಪರೂಪ. ಪಾಲಿಕೆ ಸಭೆ ನಡೆಸಲು ಸಹಕರಿಸಲೆಂದು ವೇದಿಕೆಯ ಸದಸ್ಯರಿಗೆ ಹಣ ನೀಡಲು 20 ಲಕ್ಷ ರೂಪಾಯಿ ನಾನು ಕೇಳಿಲ್ಲ. ಬದಲಿಗೆ, ಉಪಮೇಯರ್ ಆಗಿ ನನ್ನನ್ನು ಆಯ್ಕೆ ಮಾಡಲು ಮತ ಚಲಾಯಿಸಲೆಂದು ಬಾಳೆಕುಂದ್ರಿಯೇ 50 ಸಾವಿರ ರೂಪಾಯಿಯನ್ನು ಪಡೆದಿದ್ದರು” ಎಂದು ಗವಳಿ ತಿಳಿಸಿದರು.“ಮಹಾನಗರ ಪಾಲಿಕೆ ತೆರವುಗೊಳಿಸಿದ ಗೂಡಂಗಡಿಗಳಿಗೆ ಪುನರ್ವಸತಿ ಕಲ್ಪಿಸುವಾಗ ತನಗೂ ಎರಡು ಅಂಗಡಿಗಳನ್ನು ನೀಡುವಂತೆ ಮೇಯರ್ ಬೇಡಿಕೆ ಇಟ್ಟಿದ್ದರು. 43 ವಾರ್ಡ್‌ಗಳ ನೈರ್ಮಲ್ಯ ಗುತ್ತಿಗೆದಾರರಿಂದ ಪ್ರತಿ ತಿಂಗಳು ತಲಾ 10 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ” ಉಪಮೇಯರ್ ಆರೋಪಿಸಿದರು.“ಪಾಲಿಕೆಯು ನೈರ್ಮಲ್ಯ ಗುತ್ತಿಗೆದಾರರಿಗೆ ಹೆಚ್ಚುವರಿ ಹಣ ಸಂದಾಯ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿತು. ಈ ಬಗ್ಗೆ ಆಯುಕ್ತರನ್ನು ಕೇಳಿದಾಗ, ಅಷ್ಟು ಹಣ ನೀಡುವಂತೆ ಮೇಯರ್ ಪತ್ರ ನೀಡಿದ್ದಾರೆ ಎಂದು ಹೇಳಿ ತನಿಖೆ ನಡೆಸಲು ಬಿಡಲಿಲ್ಲ” ಎಂದು ಹೇಳಿದರು.ಎಂಇಎಸ್‌ನ ಪಾಲಿಕೆ ಸದಸ್ಯರಾದ ಕಿರಣ ಸಾಯನಾಕ್, ನೇತಾಜಿ ಜಾಧವ, ಬಾಳಾಸಾಹೇಬ ಕಾಕತ್‌ಕರ್, ಪಂಡರಿ ಪರಬ್, ನೇತಾಜಿ ಮನಗುತಕರ್ ಮೇಯರ್ ಚುನಾವಣೆಯಲ್ಲಿ ಸದಸ್ಯರನ್ನು ಶೋಷಿಸಿದ್ದಾರೆ. ಕಳೆದ ಸಂಸತ್ ಚುನಾವಣೆಯಲ್ಲಿ ಅಭ್ಯರ್ಥಿಗಳಿಂದ ಸದಸ್ಯರ ಹೆಸರಿನಲ್ಲಿ ಅವರೆಲ್ಲ ಹಣ ಪಡೆದಿದ್ದಾರೆ” ಎಂದು ಅವರು ದೂರಿದರು.ನಾಯಕತ್ವ ಬದಲಾಯಿಸಿದರೆ ಹುಶಾರ್!

“ಸರ್ವ ಭಾಷಿಕ ಸಂವಿಚಾರಿ ವಿಕಾಸ ವೇದಿಕೆ ನನ್ನನ್ನು ನಾಯಕತ್ವದಿಂದ ತೆಗೆಯಲು ಮುಂದಾರೆ, ಸಭೆಯ ನಾಯಕತ್ವದ ಮೇಲೆ ಇರುವ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ ಕಾಯ್ದೆ (ಕೆಎಂಸಿ)ಯನ್ನು ಬಳಸಬೇಕಾಗುತ್ತದೆ” ಎಂದು ಮಹಾನಗರ ಪಾಲಿಕೆ ಹಿರಿಯ ಸದಸ್ಯ ಸಾಂಭಾಜಿ ಎಚ್ಚರಿಕೆ ನೀಡಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಉಪಮೇಯರ್ ಧನರಾಜ ಗವಳಿ ನೇತೃತ್ವದಲ್ಲಿ ಸದಸ್ಯರು ಸಭೆ ಸೇರಿ ನನ್ನನ್ನು ವೇದಿಕೆಯ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ, ದೀಪಕ ವಾಘೇಲಾ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡುವಂತೆ ನಿರ್ಧಾರ ಕೈಗೊಂಡಿದ್ದಾರೆ” ಎಂದು ಅವರು ತಿಳಿಸಿದರು.“ನಾಯಕತ್ವ ಬದಲಾವಣೆ ಮಾಡುವಾಗಲೂ ಸಭೆಯನ್ನು ಗುಂಪಿನ ನಾಯಕರೇ ಕರೆಯಬೇಕು. ಆದರೆ, ಇಲ್ಲಿ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ. ಅವರು ತಮ್ಮ ನಾಯಕತ್ವ ಬದಲಾವಣೆ ಪ್ರಸ್ತಾವಕ್ಕೆ ಕಟ್ಟುಬಿದ್ದರೆ, ಕೆಎಂಸಿ ಕಾಯ್ದೆಯನ್ನು ಬಳಸಬೇಕಾಗುತ್ತದೆ. ಕಾಯ್ದೆಯ ಪ್ರಕಾರ ಮೇಯರ್ ಸಭಾನಾಯಕನನ್ನು ಆಯ್ಕೆಮಾಡಿ ಆಯುಕ್ತರಿಗೆ ಮಾಹಿತಿ ನೀಡಬೇಕು” ಎಂದು ತಿಳಿಸಿದರು.“2009ರಲ್ಲಿ ನಾನು ರಾಜೀನಾಮೆ ನೀಡದರೂ ಅದು ಸ್ವೀಕೃತಗೊಂಡಿರಲಿಲ್ಲ. ಕಳೆದ ಒಂದು ವರ್ಷದಲ್ಲಿ ನಾನು ಪಕ್ಷದ ಎರಡು ಸಭೆ ಕರೆದರೂ ಯಾರೂ ಬಂದಿಲ್ಲ” ಎಂದ ಅವರು, ಪ್ರಸ್ತುತ ವೇದಿಕೆಯಲ್ಲಿನ ವಾತಾವರಣ ಸರಿಯಾಗಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry