ಸೋಮವಾರ, ನವೆಂಬರ್ 18, 2019
28 °C

`ಬ್ಲಾಕ್ ಔಟ್ ಟ್ರಾಫಿಕ್'

Published:
Updated:

ಬೆಂಗಳೂರಿನಲ್ಲಿ ಡಬ್ಬಲ್ ರೋಡ್ ಮಾಡಿದರೆ ಸಾಕು ಟ್ರಾಫಿಕ್ ನಿಯಂತ್ರಣಕ್ಕೆ ಬರುತ್ತದೆ ಎಂದು ರಸ್ತೆಯನ್ನು ವಿಭಜಿಸಲಾಯಿತು. ನಂತರ ಇದು ಬೇಡಎಂದು ಏಕಮುಖ ಸಂಚಾರವನ್ನೇ ಮತ್ತೆ ಜಾರಿಗೆ ತರಲಾಯಿತು. ಆಗಲೂ ಬಗೆಹರಿಯದ ಟ್ರಾಫಿಕ್ ಕಿರಿಕಿರಿಯಿಂದ ಪಾರಾಗಲು ಮೇಲು ರಸ್ತೆ ನಿರ್ಮಿಸಲಾಯಿತು. ನಂತರವೂ ನಿಯಂತ್ರಣಕ್ಕೆ ಬಾರದ ಟ್ರಾಫಿಕ್ ಜಾಮ್ ಪರಿಹಾರಕ್ಕೆ ಮೆಟ್ರೋ ರೈಲು ಆರಂಭಿಸಲಾಯಿತು. ಹಾಗಿದ್ದೂ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದು ಸುಗಮ ಸಂಚಾರ ಸಾಧ್ಯವಾಗಲಿದೆ ಎಂಬುದು ಕನಸಿನ ಮಾತೇ ಸರಿ ಎನ್ನುವ ಹಂತಕ್ಕೆ ಬೆಂಗಳೂರು ಬಂದಿದೆ.ಕೊಚ್ಚಿಯ `ಅಮಿದ್ ರೇ ಟೆಕ್ನಾಲಜೀಸ್'ನ ಸಂಶೋಧಕರ ತಂಡ `ಸಾಮುದಾಯಿಕ ಆ್ಯಂಡ್ರಾಯ್ಡ ತಂತ್ರಾಂಶ' ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅಂದರೆ, ಮೊಬೈಲ್ ಫೋನ್ ಮೂಲಕವೇ ನಾವು ಸಾಗುತ್ತಿರುವ  ಮಾರ್ಗದಲ್ಲಿ ದೂರದಲ್ಲಿ ಉಂಟಾಗಿರುವ ಅಡೆತಡೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅಂದರೆ, ದೂರದಲ್ಲಿ ರಸ್ತೆಯಲ್ಲಿ ಆಗಿರುವ  ಟ್ರಾಫಿಕ್ ಜಾಮ್, ಅಪಘಾತ, ರಸ್ತೆ ತಡೆ ಮೊದಲಾದ ಮಾಹಿತಿಗಳು ಮೊಬೈಲ್ ಫೋನ್‌ಗೆ ಕ್ಷಣಾರ್ಧದಲ್ಲಿಯೇ ಲಭಿಸಲಿವೆ. ಆಗ ಬೇರೆ ಮಾರ್ಗದಲ್ಲಿಯಾದರೂ ಸಾಗಲು ಅನುಕೂಲವಾಗಲಿದೆ.`ಬ್ಲಾಕ್ ಔಟ್ ಟ್ರಾಫಿಕ್' ಎಂಬ ಹೆಸರಿನ ಈ ತಂತ್ರಾಂಶ 25-30 ಕಿ.ಮೀ. ವ್ಯಾಪ್ತಿಯಲ್ಲಿನ ರಸ್ತೆ ಸಂಚಾರದಲ್ಲಿನ ಸಮಸ್ಯೆಗಳ ಬಗ್ಗೆ ಮೊಬೈಲ್ ಫೋನ್‌ಗೆ ಮಾಹಿತಿ ರವಾನಿಸುತ್ತದೆ. ದೇಶದಲ್ಲಿ ಇದು ಮೊದಲನೆಯ ಉಚಿತ ಹಾಗೂ ಸುಗಮ ಟ್ರಾಫಿಕ್‌ಗೆ ಸಂಬಂಧಿಸಿದ ಮೊಬೈಲ್ ತಂತ್ರಾಂಶವಾಗಿದೆ' ಎಂದು ಇದರ ಸಂಶೋಧಕರು ಪ್ರಕಟಿಸಿದ್ದಾರೆ.ಇದು ಸಂಪೂರ್ಣವಾಗಿ ಸಮುದಾಯ ಆಧಾರಿತ ತಂತ್ರಾಂಶ. ಈ ತಂತ್ರಾಂಶದ ಸದಸ್ಯರು ತಾವು ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಕುರಿತ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸುತ್ತಾರೆ. ಇದೇ ಹಾದಿಯಲ್ಲಿ ಬರುವ ಇನ್ನಿತರ ಮಂದಿಗೆ ತಂತ್ರಾಂಶವು ಸಂದೇಶವನ್ನ ಬಿತ್ತರಿಸಿ ಅವರು ಆ ರಸ್ತೆಯಲ್ಲಿ ಹೋಗದಂತೆ  `ಮಾರ್ಗ'ದರ್ಶನ ಮಾಡುತ್ತದೆ. ಇದಕ್ಕೆ ಮುಖ್ಯವಾಗಿ ಮೊಬೈಲ್‌ನಲ್ಲಿ ಜಿಪಿಎಸ್ ಹಾಗೂ ಅಂತರ್ಜಾಲ ಸಂಪರ್ಕ ಇರಬೇಕಾಗುತ್ತದೆ. ಸದ್ಯ ಈ ತಂತ್ರಾಂಶ ಗೂಗಲ್ ಪ್ಲೇ ಸ್ಟೋರ್‌ನಲ್ಲಿ  ಉಚಿತವಾಗಿ ಲಭ್ಯವಿದೆ.  ಇದು ಕೇವಲ ಆ್ಯಂಡ್ರಾಯ್ಡ ತಂತ್ರಾಂಶದಲ್ಲಿ ಮಾತ್ರ ಕೆಲಸ ಮಾಡುತ್ತದೆ. http://­www.­amidray.com/ ನಲ್ಲಿ ಇದು ಉಚಿತವಾಗಿ ಲಭ್ಯವಿದೆ.

ಪ್ರತಿಕ್ರಿಯಿಸಿ (+)