ಬ್ಲೀಚಿಂಗ್ ಪೌಡರ್ ಖರೀದಿಯಲ್ಲೂ ಅಕ್ರಮ

7

ಬ್ಲೀಚಿಂಗ್ ಪೌಡರ್ ಖರೀದಿಯಲ್ಲೂ ಅಕ್ರಮ

Published:
Updated:
ಬ್ಲೀಚಿಂಗ್ ಪೌಡರ್ ಖರೀದಿಯಲ್ಲೂ ಅಕ್ರಮ

ಶ್ರೀರಂಗಪಟ್ಟಣ: ಕುಡಿಯುವ ನೀರು ಶುದ್ಧೀಕರಣಕ್ಕೆ ಬಳಸುವ ಆಲಂ ಮತ್ತು ಬ್ಲೀಚಿಂಗ್ ಪೌಡರ್ ಖರೀದಿ, ನೀರು ಸರಬರಾಜು ನಿರ್ವಹಣೆ, ಜಮಾ-ಖರ್ಚು ಬಾಬ್ತಿನಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಸದಸ್ಯರು ಗಂಭೀರ ಆರೋಪ ಮಾಡಿದ ಪ್ರಸಂಗ ಶುಕ್ರವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಜರುಗಿತು.ಪುರಸಭೆ ಸದಸ್ಯರಾದ ಎಂ.ನಂದೀಶ್, ಕಾಯಿ ವೆಂಕಟೇಶ್, ಸೋಮಶೇಖರ್ ಇತರರು ಈ ವಿಷಯಗಳನ್ನು ಪ್ರಸ್ತಾಪಿಸಿದರು. ಆರೋಪಕ್ಕೆ ಜೆಡಿಎಸ್‌ನ ಎಂ.ಎಲ್.ದಿನೇಶ್ ಇತರರು ಪ್ರತ್ಯುತ್ತರ ನೀಡುವ ವೇಳೆ ಮಾತಿನ ಚಕಮಕಿ ನಡೆಯಿತು.ನೀರು ಸರಬರಾಜು ನಿರ್ವಹಣೆಗೆ ತಿಂಗಳಿಗೆ ರೂ.65 ಸಾವಿರ ಖರ್ಚಾಗುತ್ತಿದೆ. ರೂ.85 ಸಾವಿರ ವೆಚ್ಚ ತೋರಿಸುತ್ತಿದ್ದ ರೂ.20 ಸಾವಿರಕ್ಕೆ ಲೆಕ್ಕವೇ ಇಲ್ಲವಾಗಿದೆ. ಬ್ಲೀಚಿಂಗ್ ಹಾಗೂ ಆಲಂ ಪೌಡರ್ ಖರೀದಿಗೆ ಗಂಜಾಂಗೆ ರೂ.1.25 ಲಕ್ಷ ಹಾಗೂ ಪಟ್ಟಣಕ್ಕೆ ರೂ.90 ಸಾವಿರ ಖರ್ಚು ತೋರಿಸಿದ್ದು, ಇಲ್ಲಿ ಕೂಡ ಸುಳ್ಳು ಲೆಕ್ಕ ಹೇಳುತ್ತಿದ್ದಾರೆ ಎಂದು ದೂರಿದರು.ಉಪಾಧ್ಯಕ್ಷರ ಕೊಠಡಿ ನವೀಕರಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ತೋರಿಸಲಾಗಿದೆ. ಕ್ಲೋರಿನ್ ಸಿಲಿಂಡರ್ ಉದ್ದೇಶಕ್ಕೆ ರೂ.80 ಸಾವಿರ ಖರ್ಚು ಮಾಡಲಾಗಿದೆ.ಆದರೆ, ಖರ್ಚು ಮಾಡಿದ ಹಣಕ್ಕೆ ಶುಕ್ರವಾರದ ಸಭೆಯಲ್ಲಿ ಅನುಮತಿ ಕೋರುವ ಮೂಲಕ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಸದಸ್ಯ ಎಂ.ನಂದೀಶ್ ಆಕ್ರೋಶ ವ್ಯಕ್ತಪಡಿಸಿದರು.ಮೇ 2011ಕ್ಕೆ ಸಂಬಂಧಿಸಿದಂತೆ ರೂ.25 ಸಾವಿರ ಜಮಾ ತೋರಿಸಿದ್ದು, ಇದು ಯಾವ ಮೂಲದಿಂದ ಬಂದಿದೆ ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಮತ್ತೊಬ್ಬ ಸದಸ್ಯ ಸೋಮ ಶೇಖರ್ ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಲು ಅಧಿಕಾರಿಗಳು ತಿಣುಕಾಡಿದರು.ಎಂಜಿನಿಯರ್ ಶಿವು ಮಹತ್ವದ ಸಭೆಗೆ ಗೈರು ಹಾಜರಾಗಿರುವುದು ಏಕೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪ್ರಶ್ನಿಸಿದರು. ಪಟ್ಟಣದ 14ನೇ ವಾರ್ಡ್‌ನಲ್ಲಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಇತರ ವಾರ್ಡ್‌ಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದರು.ಎಲ್ಲ ಪ್ರಶ್ನೆಗಳಿಗೆ ಮಾಜಿ ಅಧ್ಯಕ್ಷ ಎಲ್.ನಾಗರಾಜು ಉತ್ತರಿಸುತ್ತಿದ್ದು, ಅಧ್ಯಕ್ಷ ಶಿವಾಜಿರಾವ್ ಅವರೇ ಉತ್ತರಿಸಬೇಕು ಎಂದು ಕೇಳಿದ ವೇಳೆ ನಾಗರಾಜು ಮತ್ತು ಇತರರ ನಡುವೆ ವಾಗ್ವಾದ ನಡೆಯಿತು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಚೆನ್ನಾಗಿದ್ದ ಡಕ್ ಒಡೆಸಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಕಾಯಿ ವೆಂಕಟೇಶ್ ಆಗ್ರಹಿಸಿದರು.ನಿಕರ ಮಾಹಿತಿ ನೀಡದೇ ಸಭೆಗೆ ಸುಳ್ಳು ಲೆಕ್ಕ ಕೊಡುತ್ತಿದ್ದೀರಿ ಎಂದು ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.ಉಪಾಧ್ಯಕ್ಷೆ  ಗಾಯತ್ರಿ, ಸದಸ್ಯರಾದ ವಿದ್ಯಾ ಉಮೇಶ್, ಪದ್ಮಮ್ಮ, ಜಯರಾಂ, ಆಟೋ ಶೇಷಪ್ಪ, ಲಕ್ಷ್ಮಿ ನಾರಾಯಣ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಅಧಿಕಾರಿಗಳು ತಪ್ಪು ಸರಿಪಡಿಸಿಕೊಳ್ಳುವ ಭರವಸೆ ನೀಡಿದ ನಂತರ ಸಭೆ ನಡೆಯಲು ಅವಕಾಶ ಮಾಡಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry