ಬ್ಲೂಸ್ಟಾರ್ ನೆನಪಿಸಿದ ಬ್ರಾರ್ ಮೇಲಿನ ಹಲ್ಲೆ

7

ಬ್ಲೂಸ್ಟಾರ್ ನೆನಪಿಸಿದ ಬ್ರಾರ್ ಮೇಲಿನ ಹಲ್ಲೆ

Published:
Updated:

ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಕುಲದೀಪ್ ಸಿಂಗ್ ಬ್ರಾರ್ (78) ಅವರ ಮೇಲೆ ಲಂಡನ್‌ನಲ್ಲಿ ಸೆಪ್ಟೆಂಬರ್ 30ರಂದು ನಡೆದ ಹಲ್ಲೆ ಪ್ರಕರಣವು, 28 ವರ್ಷಗಳ ಹಿಂದೆ ಪಂಜಾಬ್‌ನಲ್ಲಿ ನಡೆದಿದ್ದ ಸೇನಾ  ಕಾರ್ಯಾಚರಣೆ  (ಆಪರೇಷನ್ ಬ್ಲೂಸ್ಟಾರ್) ಮತ್ತು ನಂತರ ನಡೆದ ಹಲವಾರು ಕಹಿ ಘಟನೆಗಳನ್ನು ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡಿದೆ.ಚಂಡೀಗಡದಿಂದ 250 ಕಿ. ಮೀ ದೂರದಲ್ಲಿ ಇರುವ ಅಮೃತಸರದಲ್ಲಿನ ಸಿಖ್‌ರ ಪವಿತ್ರ ಯಾತ್ರಾ ಸ್ಥಳ `ಸ್ವರ್ಣ ಮಂದಿರ~ದಲ್ಲಿ ಆಶ್ರಯ ಪಡೆದಿದ್ದ ಪಂಜಾಬ್ ಭಯೋತ್ಪಾದಕರನ್ನು ಹೊರ ಹಾಕಲು ಈ ಸೇನಾ ಕಾರ್ಯಾಚರಣೆಯು 1984ರ ಜೂನ್ 1 ರಿಂದ 10ರವರೆಗೆ ನಡೆದಿತ್ತು.ಈ ಕಾರ್ಯಾಚರಣೆಯಲ್ಲಿ ಪವಿತ್ರ ಗರ್ಭಗುಡಿ ಹೊರತುಪಡಿಸಿ ಸುವರ್ಣ ಮಂದಿರ ಸಂಕೀರ್ಣವು ತೀವ್ರವಾಗಿ ಹಾನಿಗೆ ಒಳಗಾಗಿತ್ತು. ಆನಂತರ ಪಂಜಾಬ್ ಜನತೆ `ಕರಸೇವೆ~ ನಡೆಸಿ ಜೀರ್ಣೋದ್ಧಾರ ನಡೆಸಿದ್ದರು.

ಪ್ರತ್ಯೇಕ `ಖಲಿಸ್ತಾನ್~ ದೇಶ  ಸ್ಥಾಪಿಸುವ ಉದ್ದೇಶದಿಂದ ಸಿಖ್ ಪ್ರತ್ಯೇಕತಾವಾದಿಗಳು ನಡೆಸಿದ ಭಯೋತ್ಪಾದನಾ ಚಟುವಟಿಕೆ ಮತ್ತು ಹಿಂಸಾಚಾರಗಳ ಉಪಟಳದಿಂದ 1981ರಿಂದ 1992ರವರೆಗೆ ಪಂಜಾಬ್ ತೀವ್ರವಾಗಿ ನಲುಗಿತ್ತು. ಸಾವಿರಾರು ಮಂದಿ ಹತರಾಗಿದ್ದರು.ಸದ್ಯಕ್ಕೆ ಪಂಜಾಬ್‌ನಲ್ಲಿ ಇಂತಹ ಪ್ರತ್ಯೇಕತಾ ಚಳವಳಿ ಸಕ್ರಿಯವಾಗಿಲ್ಲ. ಕೆಲ ಸಾಂಪ್ರದಾಯಿಕ ಶಕ್ತಿಗಳು  ಮಾತ್ರ ಪ್ರತ್ಯೇಕತೆಯ ಕೂಗು ಜೀವಂತವಾಗಿಡಲು ಹವಣಿಸುತ್ತಲೇ ಇವೆ. ಬ್ರಾರ್ ಮೇಲಿನ ಹಲ್ಲೆಯು ಖಲಿಸ್ತಾನ್ ಪರ ಸಹಾನುಭೂತಿ ಇರುವವರ ಕೃತ್ಯವಾಗಿರಬೇಕು ಎನ್ನುವ ಬಲವಾದ ಶಂಕೆಯನ್ನೂ ಮೂಡಿಸಿದೆ. ಸೇನಾ ಕಾರ್ಯಾಚರಣೆಯಲ್ಲಿ ಹತರಾದ ಹುತಾತ್ಮರಿಗಾಗಿ `ಸ್ವರ್ಣ ಮಂದಿರ~ದಲ್ಲಿ ಸ್ಮಾರಕ ನಿರ್ಮಿಸಬೇಕು ಎನ್ನುವ ಬೇಡಿಕೆ ಇನ್ನೂ ಜೀವಂತವಾಗಿಯೇ ಇದೆ.ಬೆಲೆ ತೆತ್ತ ಇಂದಿರಾ:  ರಾಜಕೀಯ ಕಾರಣಗಳಿಗಾಗಿ ಇಂದಿರಾ ಗಾಂಧಿ ಅವರು,  ಜರ್ನೆಲ್ ಸಿಂಗ್ ಭಿಂದ್ರನ್‌ವಾಲೆಯನ್ನು ಪೋಷಿಸಿ ಬೆಳೆಸಿದ್ದರು. ಸರ್ಕಾರಕ್ಕೆ ಸವಾಲೊಡ್ಡುವ ರೀತಿಯಲ್ಲಿ ಬೆಳೆದ ಭಿಂದ್ರನ್‌ವಾಲೆ ನೇತೃತ್ವದಲ್ಲಿ ಸಿಖ್ ಉಗ್ರಗಾಮಿಗಳು ಖಲಿಸ್ತಾನ ಕನಸು ನನಸಾಗಿಸಲು ಹೊರಟಿದ್ದರು. ಸ್ವರ್ಣ ಮಂದಿರದಲ್ಲಿಯೇ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿದ್ದರು.ಉಗ್ರರ ಉಪಟಳವನ್ನು ಬುಡಸಮೇತ ಮಟ್ಟ ಹಾಕಲು ದೃಢ ನಿಶ್ಚಯ ಮಾಡಿದ್ದ ಆಗಿನ ಪ್ರಧಾನಿ ಇಂದಿರಾ ಗಾಂಧಿ, ಮಂದಿರದ ಮೇಲೆ ಸೇನಾ ಕಾರ್ಯಾಚರಣೆ ನಡೆಸಲು ಮುಂದಾಗಿದ್ದರು. ಸೇನಾ ಕಾರ್ಯಾಚರಣೆಯು ಸಿಖ್‌ರ ಧಾರ್ಮಿಕ ನಂಬಿಕೆಗೆ ತೀವ್ರ ಹಾನಿ ಉಂಟು ಮಾಡಲಿರುವುದರಿಂದ ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ಸೇನೆಯ ಮುಖ್ಯಸ್ಥರಾಗಿ ನೇಮಕಗೊಳ್ಳಬೇಕಾಗಿದ್ದ ಉಪ ಮುಖ್ಯಸ್ಥ  ಲೆಫ್ಟಿನೆಂಟ್ ಜನರಲ್ ಎಸ್. ಕೆ. ಸಿನ್ಹಾ  ನೀಡಿದ್ದ ಸಲಹೆ ಪ್ರಧಾನಿ ಇಂದಿರಾ ಗಾಂಧಿ  ಅವರಿಗೆ ಅಪಥ್ಯವಾಗಿತ್ತು.ವಿವಾದಾತ್ಮಕ ನಿರ್ಧಾರ ತೆಗೆದುಕೊಂಡ ಇಂದಿರಾ, ಸಿನ್ಹಾ ಬದಲಿಗೆ ಅರುಣ್ ಶ್ರೀಧರ್ ವೈದ್ಯ ಅವರನ್ನು ಸೇನೆಯ ಮುಖ್ಯಸ್ಥರನ್ನಾಗಿ ನೇಮಿಸಿ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದರು.  ವೈದ್ಯ ಅವರು, ಲೆ. ಜ  ಸುಂದರಜೀ ಅವರ  ಸಹಯೋಗದಲ್ಲಿ ಈ ಕಾರ್ಯಾಚರಣೆಗೆ  ಮುಂದಾದರು. ಕುಲದೀಪ್ ಸಿಂಗ್ ಬ್ರಾರ್ ನೇತೃತ್ವದಲ್ಲಿ ಸೇನೆ ಕಾರ್ಯಾ    ಚರಣೆ    ನಡೆಸಿ ಉಗ್ರರನ್ನು ಕೊಂದು ಮಂದಿರವನ್ನು ವಶ    ಪಡಿಸಿಕೊಂಡಿತು.ಸೇನೆಯು ಟ್ಯಾಂಕ್, ಹೆಲಿಕಾಪ್ಟರ್ ಮತ್ತು ಶಸ್ತ್ರಸಜ್ಜಿತ ವಾಹನಗಳಿಂದಲೂ ದಾಳಿ ನಡೆಸಿತ್ತು. ಕಾರ್ಯಾಚರಣೆಯಲ್ಲಿ 83 ಸೈನಿಕರು, 492 ಮುಗ್ಧ ನಾಗರಿಕರು ಮೃತಪಟ್ಟ್ದ್ದಿದಾರೆ ಎಂದು ಸರ್ಕಾರ ಶ್ವೇತಪತ್ರ ಹೊರಡಿಸಿತ್ತು. ಆದರೆ, ಅನಧಿಕೃತ ಅಂಕಿ ಅಂಶಗಳು ಬೇರೆ  ಕಥೆ ಹೇಳುತ್ತವೆ.ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಸಂಖ್ಯೆ 8 ಸಾವಿರದಷ್ಟಿತ್ತು ಎಂದೂ ಅಂದಾಜಿಸಲಾಗಿತ್ತು.

ಕಾರ್ಯಾಚರಣೆ ಮುನ್ನ ಮಾಧ್ಯಮಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿತ್ತು. ಪಂಜಾಬ್‌ನ ಪ್ರಮುಖ ಪಟ್ಟಣಗಳಲ್ಲಿ ಕರ್ಫ್ಯೂ ಹೇರಲಾಗಿತ್ತು. ಪಂಜಾಬ್ ಜತೆಗಿನ ದೇಶದ ಇತರ ಭಾಗದ ಸಂಪರ್ಕ ಕಡಿದು ಹಾಕಲಾಗಿತ್ತು.ಪರಿಣಾಮಗಳು: `ಬ್ಲ್ಯೂ ಸ್ಟಾರ್~ ವಿರೋಧಿಸಿ ಕೆಲ ಸಿಖ್ ಸೈನಿಕರು ದಂಗೆ ಕೂಡ ಎದ್ದಿದ್ದರು. ಅನೇಕರು ಪದವಿ, ಗೌರವವನ್ನು ಸರ್ಕಾರಕ್ಕೆ ಮರಳಿಸಿದ್ದರು. ಘಟನೆ ನಡೆದ ನಾಲ್ಕು ತಿಂಗಳ ನಂತರ 1984ರ ಅಕ್ಟೋಬರ್ 31ರಂದು ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಇಬ್ಬರು ಅಂಗರಕ್ಷಕರಾದ ಸತ್ವಂತ್‌ಸಿಂಗ್ ಮತ್ತು ಬಿಯಾಂತ್ ಸಿಂಗ್‌ರಿಂದಲೇ ನವದೆಹಲಿಯಲ್ಲಿನ ತಮ್ಮ ನಿವಾಸದಲ್ಲಿ ಹತರಾದರು.

ಈ ಹತ್ಯೆಗೆ ಪ್ರತೀಕಾರಾರ್ಥ ದೆಹಲಿ ಮತ್ತು ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ  ಅಂದಾಜು 5 ಸಾವಿರಷ್ಟು ಸಿಖ್ ಮಾರಣಹೋಮ ನಡೆಯಿತು. ಈ ಸೇನಾ ಕಾರ್ಯಾಚರಣೆ ವೇಳೆ ಸೇನಾ ಮುಖ್ಯಸ್ಥರಾಗಿದ್ದ ಎ. ಎಸ್. ವೈದ್ಯ ಅವರನ್ನೂ 1986ರಲ್ಲಿ ಪುಣೆಯಲ್ಲಿ ಹರಿಜಿಂದರ್ ಸಿಂಗ್ ಜಿಂದಾ ಮತ್ತು ಸುಖದೇವ್ ಸಿಂಗ್    ಸುಖಾ ಹತ್ಯೆ ಗೈದಿದ್ದರು.

ಇವರಿಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.  ದೇಶದ ಇತಿಹಾಸದಲ್ಲಿ `ಬ್ಲ್ಯೂಸ್ಟಾರ್~ ಕಾರ್ಯಾಚರಣೆ ಮತ್ತು ನಂತರದ ಅನೇಕ ದುರಂತ ಘಟನಾವಳಿಗಳು ಇತಿಹಾಸದ ಪುಟಗಳಲ್ಲಿ ಕಪ್ಪು ಚುಕ್ಕೆಗಳಾಗಿಯೇ ದಾಖಲಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry