ಸೋಮವಾರ, ಸೆಪ್ಟೆಂಬರ್ 28, 2020
24 °C

ಬ್ಲೇಡ್‌ನಿಂದ ಹಲ್ಲೆ, ಚಿನ್ನದ ಸರ, ಪರ್ಸ್ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಲೇಡ್‌ನಿಂದ ಹಲ್ಲೆ, ಚಿನ್ನದ ಸರ, ಪರ್ಸ್ ಕಳವು

ಮಂಗಳೂರು: `ಅವರ ವರ್ತನೆ ಅಮಾನುಷವಾಗಿತ್ತು. ಯುವತಿಯರು ಅಂಗಲಾಚಿದರೂ ಕೇಳದೆ ಬೇಕಾಬಿಟ್ಟಿ ಹಲ್ಲೆ ನಡೆಸಿದ್ದಲ್ಲದೆ ಅಂಗಾಗ ಸ್ಪರ್ಶಿಸಿದರು. ನಮ್ಮೆಲ್ಲರಿಗೂ ಅರ್ಧ ಗಂಟೆ ಕಾಲ ಹಿಗ್ಗಾಮುಗ್ಗ ಥಳಿಸಿದರು.... ಕೆಲವರು ಬ್ಲೇಡ್ ಬಳಸಿ ರಕ್ತ ಬರುವಂತೆ ಹಲ್ಲೆ ನಡೆಸಿದರು~ನಗರದ ಹೊರವಲಯದ ಪಡೀಲ್‌ನ `ಮಾರ್ನಿಂಗ್ ಮಿಸ್ಟ್~ ಹೋಂ ಸ್ಟೇನಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಯುವಕರು ಪಾಂಡೇಶ್ವರದಲ್ಲಿ ಭಾನುವಾರ `ಪ್ರಜಾವಾಣಿ~ ಜತೆ ಘಟನೆಯ ಬಗ್ಗೆ ವಿವರಿಸಿದ್ದು ಹೀಗೆ...`ನಮ್ಮ ಜತೆ ಇದ್ದ ಒಬ್ಬ ಹುಡುಗಿಗೆ ಹಾಗೂ ಪ್ರಜ್ವಲ್‌ನಿಗೆ ಬ್ಲೇಡ್‌ನಿಂದ ಗೀರಿ ಹಲ್ಲೆ ನಡೆಸಲಾಗಿದೆ~ ಎಂದು ಹಲ್ಲೆಗೊಳಗಾದ ಯುವಕರು ದೂರಿದರು.ಅದು ಕೇವಲ ಬರ್ತ್ ಡೇ ಪಾರ್ಟಿ: `ನನ್ನ ಹಾಗೂ ಇನ್ನೊಬ್ಬ ಹುಡುಗಿಯ (ಸಂಜನಾ) ಬರ್ತ್ ಡೇ ಪಾರ್ಟಿ ಆಚರಿಸುವ ಬಗ್ಗೆ ನಾವು ಅಲ್ಲಿ ಸೇರಿದ್ದೆವು. ನಾವು ಮಧ್ಯಾಹ್ನ 2.30ಕ್ಕೆ `ಸ್ಟೇ ಹೋಂ~ಗೆ ಹೋಗಿದ್ದೆವು. ಸುಮಾರು 3.30ರ ವೇಳೆಗೆ ಕೇಕ್ ಕತ್ತರಿಸಿ, ತಂದಿದ್ದ ತಿನಿಸುಗಳನ್ನು ತಿಂದು ಹರಟೆ ಹೊಡೆಯುತ್ತಿದ್ದೆವು. ನಮ್ಮ ಇಬ್ಬರು ಗೆಳೆಯರು ಸಂಜೆ 6.30ಕ್ಕೆ ಸೇರಿಕೊಂಡರು.

 

ನಾವು 7.30ರ ಹೊತ್ತಿಗೆ ಪಾರ್ಟಿ ಮುಗಿಸಿ ಮನೆಗೆ ಹೋಗುವವರಿದ್ದೆವು. ಅದಕ್ಕಿಂತ ಅರ್ಧ ಗಂಟೆ ಮುಂಚೆ `ಹೋಂ ಸ್ಟೇ~ಗೆ  40ಕ್ಕೂ ಅಧಿಕ ಮಂದಿ ಟಿ.ವಿ. ಕ್ಯಾಮೆರಾಮನ್‌ಗಳ ಜತೆ ಒಳಗೆ ನುಗ್ಗಿ ಏಕಾಏಕಿ ನಮ್ಮನ್ನು ಥಳಿಸಿದರು. ಏಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದರೂ ಬಿಡದೆ ಚಚ್ಚಿದರು. ಹುಡುಗಿಯರನ್ನು ಮನಬಂದಂತೆ ಎಳೆದಾಡಿ ಹೊಡೆದರು.

 

ನನ್ನ ಟೀ ಶರ್ಟ್ ಎಳೆದು ಹಾಕಿ ದರದರನೇ ಎಳೆದೊಯ್ದು ಹಿಗ್ಗಾ ಮುಗ್ಗಾ ಥಳಿಸಿದರು~ ಎಂದು ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ವಿಜಯ್ `ಪ್ರಜಾವಾಣಿ~ಗೆ ತಿಳಿಸಿದರು. ವಿಜಯ್ ಕಾರ್ಯಕ್ರಮ ಸಂಘಟನೆ (ಈವೆಂಟ್ ಮ್ಯಾನೇಜ್‌ಮೆಂಟ್) ವೃತ್ತಿಯಲ್ಲಿ ಇರುವವರು. ತಮ್ಮ ಜನ್ಮ ದಿನದ ಪ್ರಮಾಣ ಪತ್ರವನ್ನೂ ಅವರು ಪ್ರದರ್ಶಿಸಿದರು. ಅವರ ಮುಖದ ಮೇಲೆ ಹಲ್ಲೆಯಿಂದಾದ ಗಾಯದ ಗುರುತುಗಳಿವೆ.  `ಬರ್ತ್‌ಡೇ ಪಾರ್ಟಿ ಯಲ್ಲಿ  ಗುರುದತ್ ಕಾಮತ್, ವಿಜಯ್, ಜೈಸನ್, ಮಾರ್ಲನ್, ಪ್ರಜ್ವಲ್, ಅರವಿಂದ್, ಅರ್ಜುನ್ ಸಹಿತ ಎಂಟು ಮಂದಿ ಯುವಕರು ಹಾಗೂ ಐದು ಮಂದಿ ಯುವತಿಯರು ಭಾಗವಹಿಸಿದ್ದೆವು. ನಾವೆಲ್ಲ ಗೆಳೆಯರು. ಬಹುತೇಕರು ಮಂಗಳೂರಿನವರೇ. ನಮ್ಮಲ್ಲಿ ಹೆಚ್ಚಿನವರು ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗದ ಹುಡುಕಾಟದಲ್ಲಿ ತೊಡಗಿದವರು. ಕೆಲವರು ವಿದ್ಯಾರ್ಥಿಗಳಾಗಿದ್ದರು~ ಎಂದು ಹಲ್ಲೆಗೊಳಗಾದವರು ತಿಳಿಸಿದರು.ಗುಲ್ಬರ್ಗ ವರದಿ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿಲ್ಲ ಎನ್ನುವುದಕ್ಕೆ ಮಂಗಳೂರಿನ ಹೋಂ ಸ್ಟೇನಲ್ಲಿ ಇದ್ದ ಯುವತಿಯರ ಮೇಲೆ ಸಂಘ ಪರಿವಾರದವರು ದಾಳಿ ನಡೆಸಿರುವ ಘಟನೆಯೇ ಸಾಕ್ಷಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದರು.

ಗುಲ್ಬರ್ಗ ಸಮೀಪದ ಕುರಿಕೋಟಾ ಸೇತುವೆ ಕುಸಿದಿರುವುದನ್ನು ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಹೋಂ ಸ್ಟೇ, ರೆಸಾರ್ಟ್ ಇತ್ಯಾದಿಗಳಿಗೆ ರಾಜ್ಯ ಸರ್ಕಾರವೇ ಅನುಮತಿ ನೀಡುತ್ತದೆ. ಅಲ್ಲಿ ಏನಾದರೂ ಅನೈತಿಕ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸುವುದಕ್ಕೆ ಅವಕಾಶವಿದೆ. ಐ.ಪಿ.ಸಿ., ಸಿ.ಆರ್.ಪಿ.ಸಿ, ಪೊಲೀಸ್ ಕಾಯ್ದೆ ಜಾರಿಯಲ್ಲಿದ್ದರೂ ಕಾನೂನು ಕೈಗೆತ್ತಿಕೊಂಡು ಹೋಂ ಸ್ಟೇ ಮೇಲೆ ದಾಳಿ ನಡೆಸಿರುವುದು ತೀವ್ರ ಖಂಡನೀಯ ಎಂದರು.`ದಾಳಿ ನಡೆಸಿದ್ದು ಹೊರಗಿನವರು~: ನಗರದ ಹೊರವಲಯದ ಪಡೀಲ್ ಬಡ್ಲಗುಡ್ಡೆ `ಮಾರ್ನಿಂಗ್ ವಿಸ್ಟ್~ ಹೋಂ ಸ್ಟೇ ಮೇಲೆ ದಾಳಿ ನಡೆಸಿದವರು ಸ್ಥಳೀಯರಲ್ಲ. ಹೊರಗಿನಿಂದ ಬಂದವರೇ ಈ ದಾಳಿ ನಡೆಸಿದ್ದಾರೆ. ಈ ದಾಳಿಗೂ ಸ್ಥಳೀಯರಿಗೂ ಯಾವುದೇ ಸಂಬಂಧವಿಲ್ಲ. ಇದು  ಒಂದು ವ್ಯವಸ್ಥಿತ ಪಿತೂರಿ ಎಂದು ಆರೋಪಿಸಿರುವ ಸ್ಥಳೀಯರು, `ಮಾಧ್ಯಮ,ಸಂಘಟನೆಯವರು ಒಟ್ಟೊಟ್ಟಿಗೆ ಬರಲು ಹೇಗೆ ಸಾಧ್ಯ?~ ಎಂದಿದ್ದಾರೆ.ಹಲ್ಲೆ ದೂರು ನೀಡಿಲ್ಲ
ಹಲ್ಲೆ ನಡೆದ ಬಗ್ಗೆ ಯುವತಿಯರು ದೂರು ನೀಡಿಲ್ಲ. ಸ್ವಯಂ ಪ್ರೇರಣೆಯಿಂದ ದೂರು ಸ್ವೀಕರಿಸುವ ಪ್ರಕರಣ ಇದಲ್ಲ. ಒಂದು ಸಂಘಟನೆಯ ವಿರುದ್ಧ ಅಪಪ್ರಚಾರ ಮಾಡುವ ವ್ಯವಸ್ಥಿತ ಸಂಚು ಇದು. ಹಿಂದೂ ಜಾಗರಣ ವೇದಿಕೆ ಇಂತಹ ದಾಳಿ ನಡೆಸಿದ್ದೇ ಆದರೆ ಅದು ಇನ್ನಷ್ಟು ಸಂಘಟಿತವಾಗಿರುತ್ತಿತ್ತು. ಅನ್ಯಾಯ ಕಂಡು ರೊಚ್ಚಿಗೆದ್ದ ಕೆಲವರ ಕೃತ್ಯ ಇದಾಗಿರಬಹುದು ಎಂದು ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ್ ಕಾರಂತ ಹೇಳಿದ್ದಾರೆ.

`ಸಂಜೆ ಸುಮಾರು 6.30ರ ಬಳಿಕ ಬೈಕಿನಲ್ಲಿ ಸುಮಾರು 40 ಮಂದಿ  ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಗೆ ಧಾವಿಸಿದರು. ಅಲ್ಲಿ ಏನು ನಡೆಯಿತು ಎಂಬುದೇ ನಮಗೆ ತಿಳಿದಿಲ್ಲ. ಅವರು ಅಲ್ಲಿ ಹುಡುಗಿಯರ ಮೇಲೆ ಹಲ್ಲೆ ನಡೆಸಿದ ವಿಷಯವೂ ನಮಗೆ ಆಗ ತಿಳಿದಿರಲಿಲ್ಲ. ಅದಾದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಾವು ಅಲ್ಲಿ ಏನು ನಡೆಯುತ್ತಿದೆ ಎಂದು ನೋಡಲು ಹೋಗಿದ್ದು ಮಾತ್ರ. ಆದರೆ ನಮ್ಮ ಮೇಲೆಯೇ ಪೊಲೀಸರು ಲಾಠಿ ಪ್ರಹಾರ ನಡೆಸಿದರು~ ಎಂದು ಸ್ಥಳೀಯರು ತಿಳಿಸಿದ್ದಾರೆ.`ನಮ್ಮ ವಾರ್ಡ್‌ನಲ್ಲಿ ಇಂತಹ ಹೋಂ ಸ್ಟೇ ನಡೆಸಲು ಅವಕಾಶ ನೀಡುವ ಮೂಲಕ ಗಲಾಟೆಗೆ ಆಸ್ಪದ ನೀಡಬೇಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಳ್ಳುತ್ತಿದ್ದೆವು. ಅಷ್ಟರಲ್ಲಿ ಒಬ್ಬ ವ್ಯಕ್ತಿ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ. ಆತನೂ ಇಲ್ಲಿಯವನಲ್ಲ. ಅದನ್ನೇ ನೆಪವನ್ನಾಗಿಸಿ ಪೊಲೀಸರು ನಮ್ಮ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದರು. ಕಾರ್ಪೊರೇಟರ್ ಮೋಹನ್ ಪಡೀಲ್ ಅವರನ್ನು ಹೀನಾಯ ಸ್ಥಿತಿಯಲ್ಲಿ ಎಳೆದೊಯ್ದು ಜೀಪಿನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು. ಇದು ನಮಗೆಲ್ಲ ಬೇಸರ ತರಿಸಿದೆ~ ಎಂದು ಸ್ಥಳೀಯರು `ಪ್ರಜಾವಾಣಿ~ಗೆ ತಿಳಿಸಿದರು.`ನಾವಿಲ್ಲಿ ಬಡ್ಲಗುಡ್ಡೆ-ಶಾಂತಿನಗರ ನಿವಾಸಿಗಳ ಒಕ್ಕೂಟ ರಚಿಸಿಕೊಂಡಿದ್ದೇವೆ. ಸ್ಥಳೀಯ ಗೊಂದಲಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಶನಿವಾರ ರಾತ್ರಿ ನಡೆದ ಘಟನೆಯಿಂದ ನಮ್ಮ ಊರಿಗೆ ಕೆಟ್ಟ ಹೆಸರು ಬಂದಿದೆ~ ಎಂದು ಒಕ್ಕೂಟದ ಅಧ್ಯಕ್ಷ ಜಯರಾಜ್ ದೂರಿದರು.ಇಂತಹ ಹೋಂ ಸ್ಟೇಗಳಿಗೆ ವಸತಿ ಪ್ರದೇಶದಲ್ಲಿ ಅವಕಾಶ ಕಲ್ಪಿಸಬಾರದು. ಈ ಹೋಂ ಸ್ಟೇ~ಯನ್ನು ಮುಚ್ಚಿಸಬೇಕು ಎಂದೂ ಸ್ಥಳೀಯರಾದ ಅಶೋಕ್ ಒತ್ತಾಯಿಸಿದರು.

`ಡ್ರಗ್ಸ್ ಇದ್ದದ್ದು ಶುದ್ಧ ಸುಳ್ಳು~

ನಾವು ಬಿಯರ್ ಕುಡಿದದ್ದು ನಿಜ. ಆದರೆ, ನಮ್ಮ ಬಳಿ ಹಾಟ್ ಡ್ರಿಂಕ್ಸ್ ಇರಲಿಲ್ಲ. ನಾವು ಡ್ರಗ್ಸ್ ಸೇವಿಸುತ್ತಿದ್ದೆವು, ಕಾಂಡೋಮ್ ಸಿಕ್ಕಿತ್ತು ಎಂಬ ಆರೋಪಗಳೆಲ್ಲ ಸುಳ್ಳು. ನಾವು ಧ್ವನಿವರ್ಧಕದ ಮೂಲಕ ಸಂಗೀತ ಹಾಕಿರಲಿಲ್ಲ. ನಾವು ಸಂಗೀತಕ್ಕೆ ನೃತ್ಯ ಮಾಡುತ್ತಲೂ ಇರಲಿಲ್ಲ. ಲ್ಯಾಪ್‌ಟಾಪ್‌ನಲ್ಲಿ ಹಾಡುಗಳನ್ನು ಪ್ಲೇ ಮಾಡಿ ಹರಟೆ ಹೊಡೆಯುತ್ತಿದ್ದೆವು.ಅಷ್ಟರಲ್ಲೇ ಏಕಾಏಕಿ ದಾಳಿ ನಡೆಯಿತು. ಎಂಬಿಎ ಮುಗಿಸಿ ಉದ್ಯೋಗದ ಹುಡುಕಾಟದಲ್ದ್ದ್‌ದೇನೆ. ಡಿ.ಜೆ. ಆಗಿಯೂ ಕಾರ್ಯ ನಿರ್ವಹಿಸುತ್ತೇನೆ~ ಎಂದು ಕೆನರಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಮಂಗಳೂರಿನವರೇ ಆದ ಗುರುದತ್ ಕಾಮತ್ ತಿಳಿಸಿದರು.ಚಿನ್ನದ ಸರ ಕಳವು

`ನಮ್ಮವರ ಪೈಕಿ ಇಬ್ಬರ ಕತ್ತಿನಲ್ಲಿದ್ದ ಚಿನ್ನದ ಸರ ಕಾಣೆಯಾಗಿದೆ. ನನ್ನ ಕತ್ತಿನಲ್ಲಿದ್ದ ಚಿನ್ನದ ಸರ 20 ಪವನ್ ತೂಗುತ್ತಿತ್ತು. ಇನ್ನಿಬ್ಬರ ಪರ್ಸ್ ಕಳವಾಗಿದೆ. ಒಬ್ಬರ ಮೊಬೈಲ್ ಕಾಣೆಯಾಗಿದೆ~ ಎಂದು ಹಲ್ಲೆಗೊಳಗಾದ ಜೈಸನ್ ತಿಳಿಸಿದರು.

 

ರಾಜ್ಯಕ್ಕೆ ಕೆಟ್ಟ ಹೆಸರು:`ಪಾಪು~ ಟೀಕೆಧಾರವಾಡ: 
ಮಂಗಳೂರು ಬಳಿಯ ಪಡೀಲ್ ಬಡ್ಲಗುಡ್ಡೆ ಬಳಿಯ ಹೋಮ್ ಸ್ಟೇಯಲ್ಲಿದ್ದ ಯುವತಿಯರನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮನಬಂದಂತೆ ಥಳಿಸಿದ ಘಟನೆಯನ್ನು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅವರು ತೀವ್ರವಾಗಿ ಖಂಡಿಸಿದ್ದು, `ಈ ಘಟನೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ~ ಎಂದಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಹಿಂದೂ ಧರ್ಮ ರಕ್ಷಣೆ ಬಗ್ಗೆ ಆ ಯುವಕರು ಮಾತನಾಡಿದ್ದಾರೆ. ಆದರೆ, ವಾಸ್ತವವಾಗಿ ಹಿಂದೂ ಧರ್ಮ ಸಹನಶೀಲವಾದುದು ಎಂಬುದನ್ನು ಮರೆತಿದ್ದಾರೆ. ಸರ್ಕಾರ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು. ತಪ್ಪಿತಸ್ಥರಿಗೆ ಉಗ್ರ ದಂಡನೆ ವಿಧಿಸಬೇಕು~ ಎಂದು ಒತ್ತಾಯಿಸಿದರು.

ದಾಳಿ ಸರಿಯಲ್ಲ: ಈಶ್ವರಪ್ಪ

ಮಂಗಳೂರಿನಲ್ಲಿ ಹೋಂ ಸ್ಟೇ ಮೇಲೆ ದಾಳಿ ನಡೆಸಿ ಯುವಕ-ಯುವತಿಯರ ಮೇಲೆ ಹಲ್ಲೆ ನಡೆಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಕ್ರಮ ಸರಿಯಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಕೃತಿ ರಕ್ಷಣೆ ಮಾಡುವ ಕಾರ್ಯಕರ್ತರ ನಿಲುವು ಸರಿಯಾಗಿದೆ. ಆದರೆ, ಸಂಸ್ಕೃತಿಗೆ ಧಕ್ಕೆಯಾಗಿದೆ ಎಂದು ಆಕ್ರೋಶಭರಿತರಾಗಿ, ಕಾನೂನು ಕೈಗೆತ್ತಿಕೊಂಡಿದ್ದು ಸರಿಯಲ್ಲ.

 

ಇದನ್ನು ತಾವು ಸಮರ್ಥಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕೆಲ ರೆಸಾರ್ಟ್‌ಗಳಲ್ಲಿ ಅನೈತಿಕ, ಕಾನೂನುಬಾಹಿರ, ಸಂಸ್ಕೃತಿಗೆ ಧಕ್ಕೆ ತರುವಂತ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ಇದಕ್ಕೆ ಯಾವುದೇ ಕಾರಣಕ್ಕೂ ಸರ್ಕಾರ ಅವಕಾಶ ನೀಡುವುದಿಲ್ಲ. ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ಸಾಣೇಹಳ್ಳಿ ಶ್ರೀ ಖಂಡನೆ

ಚಿತ್ರದುರ್ಗ: ಮಂಗಳೂರಿನ ಹೋಂಸ್ಟೇನಲ್ಲಿ ಯುವತಿಯರ ಮೇಲೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನಡೆಸಿರುವ ಹಲ್ಲೆ ಘಟನೆಯನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಈ ಘಟನೆಯನ್ನು ಮಾನವೀಯ ನೆಲೆಯಲ್ಲಿ  ನೋಡಬೇಕು. ತಪ್ಪು ಯಾರೇ ಮಾಡಿದ್ದರೂ, ಯಾವುದೇ ಧರ್ಮದವರಾದರೂ ಅವರಿಗೆ ಶಿಕ್ಷೆ ನೀಡಬೇಕು~ ಎಂದು ಆಗ್ರಹಿಸಿದರು. ಮಾಧ್ಯಮಗಳು ಯಾವುದು ಮುಖ್ಯ, ಯಾವುದು ಮುಖ್ಯ ಅಲ್ಲ ಎನ್ನುವುದನ್ನು ನಿರ್ಧರಿಸಬೇಕು. ಜನರಲ್ಲಿ ಜಾಗೃತಿ ಮೂಡಿಸುವ, ಸಮಾಜ ಬದಲಿಸುವ ವಿಚಾರಗಳಿಗೆ ಸ್ಥಾನ ದೊರೆಯಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಬೇಡದ ಸುದ್ದಿಗಳಿಗೆ ಮುಖಪುಟದಲ್ಲಿ ಜಾಗ ನೀಡಲಾಗುತ್ತದೆ. ದೃಶ್ಯ ಮಾಧ್ಯಮ ಕೂಡ ಬೇಡದ ಸುದ್ದಿಯನ್ನು ಪದೇಪದೇ ತೋರಿಸುತ್ತದೆ~ ಎಂದರು.ವಾಸ್ತವವಾಗಿ ಹಿಂದೂ ಸಂಸ್ಕೃತಿ ಎನ್ನುವುದೇ ಇಲ್ಲಿಲ್ಲ. ಹಿಂದೂ ಧರ್ಮ ಅವಾಂತರಗಳಿಂದ ಕೂಡಿದೆ. ಸಿಂಧೂ ನದಿ ಬಯಲಲ್ಲಿ ವಾಸಿಸುವವರನ್ನು ಹಿಂದೂಗಳು ಎನ್ನುತ್ತಾರೆ  ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.