ಶನಿವಾರ, ಮೇ 8, 2021
26 °C

ಭಂಗಿಗಳ ವಸ್ತುಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಬಳಿಯಲ್ಲಿ ಒಬ್ಬ ವ್ಯಕ್ತಿ ಆತನಿಗಿಂತ ನಾಲ್ಕೈದು ಪಟ್ಟು ಉದ್ದವಿರುವ ಕೋಲೋಂದನ್ನು ಪಕ್ಕದಲ್ಲಿಟ್ಟುಕೊಂಡು ಕುಳಿತಿದ್ದ. ಕಂದು ಬಣ್ಣದ ಅಂಗಿ ಹಾಗೂ ಖಾಕಿ ಪ್ಯಾಂಟ್ ತೊಟ್ಟಿದ್ದ ಆತನ ಕೈ ಬೆರಳ ನಡುವೆ ಬೀಡಿ ಸಣ್ಣಗೆ ಹೊಗೆಯಾಡುತ್ತಿತ್ತು. ಶರ್ಟ್-ಪ್ಯಾಂಟ್ ಒಗೆದು ಬಹಳ ದಿನ ಆಗಿದ್ದಂತೆ ಕಾಣುತ್ತಿತ್ತು.ಯಾಕಂದ್ರೆ ಬೆವೆತು ಬೆವೆತು ಆತನ ಅಂಗಿ ಮೇಲೆಲ್ಲಾ ಬಿಳಿಗೆರೆಗಳು ಮೂಡಿದ್ದವು. ಅವನಿಗೆ ವಯಸ್ಸು ಸುಮಾರು 45 ಆಗಿದ್ದಂತೆ ತೋರುತ್ತಿತ್ತು. ಮೈ ಕೈ ಮೇಲೆಲ್ಲಾ ಸಣ್ಣ ಸಣ್ಣ ಗುಳ್ಳೆಗಳೆದ್ದಿದ್ದವು. ನವೆ ಆದಾಗೆಲ್ಲಾ ಆತ ಕೈನಲ್ಲಿದ್ದ ಬೀಡಿಯನ್ನು ಬಾಯಿಗಿಟ್ಟುಕೊಂಡು ಪರಪರ ಎಂದು ಕೆರೆದುಕೊಳ್ಳುತ್ತಿದ್ದ. ಸಿಕ್ಕಾಪಟ್ಟೆ ಕೆರೆದಿದ್ದರಿಂದಲೋ ಏನೋ ಆತನ ಮೈ-ಕೈನ ಕೆಲವು ಭಾಗ ವ್ರಣವಾಗಿತ್ತು. ಆ ಬಗ್ಗೆ ಆತನಿಗೆ ಚಿಂತೆ ಇದ್ದಂತಿರಲಿಲ್ಲ. ಆತನನ್ನು ನೋಡಿದರೆ ಭಂಗಿ ಅಂತ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಅಷ್ಟರಲ್ಲಿ ಯಾರೋ ಒಬ್ಬರು ವ್ಯಕ್ತಿ ಬಂದು ಆತನೊಟ್ಟಿಗೆ ಮಾತನಾಡತೊಡಗಿದರು.`ನಮ್ಮ ಮನೆಯ ಕಕ್ಕಸ್ಸು ಗುಂಡಿ ತುಂಬಿದೆ. ಬಂದು ತೆಗೆದು ಕೊಡ್ತಿಯಾ?~ ಎಂದು ಆ ವ್ಯಕ್ತಿ ಕೇಳಿದರು.ಗಿರಾಕಿ ಸಿಕ್ಕ ಖುಷಿಯಲ್ಲಿ ಕಣ್ಣರಳಿಸಿಕೊಂಡು, `ಒಂದ್ಸಾವ್ರ ಆಯ್ತದೆ ಸ್ವಾಮಿ~ ಎಂದ ಭಂಗಿ ಥಟ್ಟನೆ ವ್ಯವಹಾರಕ್ಕಿಳಿದ. `ಒಂದು ಸಾವಿರ ತುಂಬಾ ಜಾಸ್ತಿ ಆಯ್ತು. ನಾನೂರು ರೂಪಾಯಿ ಕೊಡ್ತೀನಿ ಬಾ~ ಎಂದು ಆ ವ್ಯಕ್ತಿ ಕೂಡ ಚೌಕಾಸಿಗೆ ಇಳಿದ.`ಆಗಲ್ಲ ಸ್ವೋಮಿ. ಗುಂಡಿ ಒಳಗೆ ಇಳಿಯೋಕು ಮೊದ್ಲು ನನ್ ಹೊಟ್ಟೆ ಒಳೀಕೆ ನೂರು ರೂಪಾಯ್ದು ಹೆಂಡ ಇಳೀಬೇಕು~ ಅಂದ ಭಂಗಿ.`ಮೈಯಲ್ಲಿರೋ ಮೂಳೆನೆಲ್ಲಾ ಎಣಿಸಬಹುದು ಅಂಗಿದ್ದೀಯಾ. ಒಂದೇ ಸಲಕ್ಕೆ ಅಷ್ಟೊಂದು ಎಣ್ಣೆ ಕುಡಿತೀಯಾ ಮಾರಾಯಾ~ ಅಂದ ಆತ ಅಚ್ಚರಿಯಿಂದ.`ಮತ್ತಿನ್ನೇನು ಸ್ವಾಮಿ..? ಗುಂಡಿಯೊಳಕ್ಕೆ ಇಳಿಯೋ ಮುಂಚೆ ನಾನು ಕಂಠಪೂರ್ತಿ ಕುಡಿಲೇಬೇಕು. ಇಲ್ಲಾ ಅಂದ್ರೆ ಕಕ್ಕಸ್ಸಿನ ದುರ್ನಾತ ಸಹಿಸ್ಕೋಳಕ್ಕೆ ಆಯ್ತದಾ~ ಅಂದ ಭಂಗಿ.ಸರಿ. ಒಂದು ಸಾವಿರ ಆಗಲ್ಲ. ಆರು ನೂರು ರೂಪಾಯಿ ಕೊಡ್ತೀನಿ ಬಾ~ ಅಂದ ಆ ವ್ಯಕ್ತಿ.

ನೋಡಿ ಸೇರ‌್ಸಿ ಕೊಡಿ ಸ್ವಾಮಿ. ಕಕ್ಕಸ್ಸಿನ ಗುಂಡಿ ಒಳೀಕೆ ಇಳ್ದು ಮೇಲೆದ್ದ ಮೇಲೆ ಎಲ್ಡ್ ದಿನ ನವೆ ತಡೆಯಕ್ಕಾಗಲ್ಲ. ಆ ನೋವೆಲ್ಲಾ ಮರೀಬೇಕು ಅಂದ್ರೆ ಮತ್ತೆ ಹೆಂಡ ಕುಡೀಲೇಬೇಕು. ಅದರಲ್ಲಿ ಮಿಕ್ಕಿದ ಹಣಾನೇ ಮನೆಗೂ ಕೊಡಬೇಕು ಎಂದ ಭಂಗಿ.`ಆಯ್ತು ಬಾ, ಇನ್ನೇನ್ಮಾಡಕಾಗುತ್ತೆ, ಏಳ್ನೂರು ಕೊಡ್ತೀನಿ. ಮತ್ತೆ ಕೇಳಬೇಡಾ~ ಅಂತ ವ್ಯವಹಾರ ಮುಗಿಸಿದ ಆ ವ್ಯಕ್ತಿ.ಏಳ್ನೂರು ರೂಪಾಯಿ ಅಂದ ತಕ್ಷಣ ಆತನ ಮುಖ ಅರಳಿತು. `ಸರಿ ಇಲ್ಲೇ ಇರಿ ಸ್ವಾಮಿ ಹಂಗ್ ಹೋಗಿ ಹಿಂಗ್ ಬಂದು ಬುಡ್ತೀನಿ~ ಅಂದವನೇ ವೈನ್ ಶಾಪ್‌ನತ್ತ ಹೆಜ್ಜೆ ಹಾಕಿದ...ಮಲ ಹೊರುವ ಪದ್ಧತಿ ವಿರುದ್ಧ ಅನೇಕ ಪ್ರತಿಭಟನೆ, ಹೋರಾಟಗಳು ಆದ ನಂತರ ಈ ಪದ್ಧತಿಯನ್ನು ನಿಷೇಧಿಸಿ ಕಾನೂನು ರೂಪಿಸಲಾಯಿತು. ಮನುಷ್ಯರಿಂದ ಮಲ ತೆಗೆಸುವುದು ಈಗ ಕಾನೂನಿನ ಪ್ರಕಾರ ಅಪರಾಧ. ಆದರೂ ಕೂಡ ಈ ಪದ್ಧತಿ ಇನ್ನೂ ಜೀವಂತವಾಗಿದೆ!ಮಲ ತೆಗೆಯುವುದರಿಂದ ಭಂಗಿಗಳಿಗೆ ಪುಡಿಗಾಸು ಸಿಕ್ಕುತ್ತದೆ. ಅರ್ಧ ದಿನದ ಕೆಲಸಕ್ಕೆ ಕಮ್ಮಿ ಅಂದರೂ ಏಳು ನೂರು, ಎಂಟು ನೂರು ಸಿಕ್ಕೇ ಸಿಗುತ್ತದೆ. ಆದ್ದರಿಂದ ಭಂಗಿಗಳು ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಬೆಳಕು ಹರಿಯುವ ಮುನ್ನ ಅಥವಾ ಕತ್ತಲು ಆವರಿಸಿದ ನಂತರ ಕದ್ದು ಮುಚ್ಚಿ ಇಂದಿಗೂ ಈ ವೃತ್ತಿ ಮಾಡುತ್ತಿದ್ದಾರೆ.ಗುತ್ತಿಗೆ ಪೌರ ಕಾರ್ಮಿಕರು ಈ ವೃತ್ತಿಯಲ್ಲಿ ತೊಡಗಿರುವುದರ ಸಂಬಂಧ ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ ಹೇಳುವುದೇ ಬೇರೆ. ಪೌರ ಕಾರ್ಮಿಕರೇ ಬೇರೆ, ಭಂಗಿಗಳೇ ಬೇರೆ. ಭಂಗಿಗಳು ನಮ್ಮಲ್ಲಿ ಇಲ್ಲ. ಗುತ್ತಿಗೆ ಪೌರ ಕಾರ್ಮಿಕರು ಈ ಕೆಲಸ ಮಾಡುವುದಿಲ್ಲ. ಮಾಡಿದರೂ ಕೂಡ ಅದಕ್ಕೂ ನಮಗೂ ಸಂಬಂಧವಿಲ್ಲ. ಮ್ಯಾನ್‌ಹೋಲ್ ಅಥವಾ ಶೌಚಾಲಯ ತುಂಬಿದರೆ ನಮ್ಮಲ್ಲಿಗೆ ಬಂದು ದೂರು ದಾಖಲಿಸಿದರೆ ಸಕ್ಕಿಂಗ್ ಯಂತ್ರದ ಮೂಲಕ ನಾವೇ ಕೆಲಸ ಮಾಡಿಸಿ ಕೊಡುತ್ತೇವೆ. ನಾವು ಮಲ ಹೊರುವ ಪದ್ದತಿಯನ್ನು ಪ್ರೋತ್ಸಾಹಿಸುವುದಿಲ್ಲ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಯೊಬ್ಬರು.ಕಾನೂನು ಹೀಗಿದೆ...

ತಲೆಯ ಮೇಲೆ ಮಲ ಹೊರುವ ಪದ್ಧತಿ ಕಾನೂನಿನ ಪ್ರಕಾರ ಅಪರಾಧ. ಇದು ನಾಗರಿಕ ಸಮಾಜಕ್ಕೆ ಕಳಂಕ ತರುವ ಹೀನ ಕೃತ್ಯ. ಮಾನವ ಹಕ್ಕುಗಳ ಉಲ್ಲಂಘನೆ ಕೂಡ ಆಗುತ್ತದೆ. ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ಮಾಡುವುದು ಮತ್ತು ಮಾಡಿಸುವುದು ಎರಡೂ `ಎಂಪ್ಲಾಯ್‌ಮೆಂಟ್ ಆಫ್ ಮ್ಯಾನ್ಯುಯಲ್ ಸ್ಕಾವೆಂಜಿಂಗ್ ಅಂಡ್ ಕನ್‌ಸ್ಟ್ರಕ್ಷನ್ ಆಫ್ ಡ್ರೈ ಲೆಟ್ರಿನ್ (ಪ್ರಾಹಿಬಿಷನ್) ಆಕ್ಟ್ 1993~ ಪ್ರಕಾರ ಅಪರಾಧ.ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈ ಅನಿಷ್ಟ ಪದ್ಧತಿಯನ್ನು ನಿವಾರಿಸಲು ಎಲ್ಲ ನಾಗರಿಕರು ಸಹಕರಿಸಬೇಕು. ಶೌಚಾಲಯ ಗುಂಡಿಯಗಳನ್ನು ಸ್ವಚ್ಛ ಮಾಡಲು ಕೇವಲ ಸಕ್ಕಿಂಗ್ ಯಂತ್ರಗಳನ್ನು ಬಳಕೆ ಮಾಡಿ. ತಂತ್ರಜ್ಞಾನ ಬಳಸಿ ಅನಿಷ್ಟ ಪದ್ಧತಿ ತೊಲಗಿಸಿ ಎನ್ನುತ್ತದೆ. 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.