ಸೋಮವಾರ, ಜೂನ್ 14, 2021
22 °C

ಭಂಡಾರಿಗೆ ಟಿಕೆಟ್‌: ಕಾರ್ಯಕರ್ತರ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ; ಮಂಜುನಾಥ ಭಂಡಾರಿ ಅವರಿಗೆ ಟಿಕೆಟ್‌ ನೀಡಿರುವುದನ್ನು ಪಕ್ಷ ಸ್ವಾಗತಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಆರ್‌.ಪ್ರಸನ್ನಕುಮಾರ್ ಹೇಳಿದರು.ಕೆಲವರು ತಾವು ಅಭ್ಯರ್ಥಿಗಳಾಗಬೇಕು ಎಂದು ಬಯಸುವುದು ತಪ್ಪಲ್ಲ; ಆದರೆ, ಪಕ್ಷ ಭಂಡಾರಿ ಅವರಿಗೆ ಟಿಕೆಟ್‌ ನೀಡಿರುವುದರಿಂದ ಎಲ್ಲರೂ ಒಗ್ಗಟ್ಟಿನಿಂದ ಅವರ ಪರವಾಗಿ ಕೆಲಸ ಮಾಡಬೇಕು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕುಮಾರ್‌ ಬಂಗಾರಪ್ಪ ಕೂಡ ನಮ್ಮ ನಾಯಕರು. ಅವರೇ ಹೇಳಿದಂತೆ ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ಅವರ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಅವರೂ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಎಚ್ಚರಿಕೆ: ಕುಮಾರ್‌ ಬಂಗಾರಪ್ಪಗೆ ಟಿಕೆಟ್ ತಪ್ಪಲು ಕಾಗೋಡು ತಿಮ್ಮಪ್ಪ ಕಾರಣ ಎಂಬ ಆರೋಪಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ‘ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಎಚ್ಚರಿಕೆಯಿಂದ ಮಾತನಾಡ ಬೇಕು. ಅವರ ಬಗ್ಗೆ ಮಾತನಾಡಿದರೆ ಪಕ್ಷ ತೀವ್ರ ಕ್ರಮ ಕೈಗೊಳ್ಳುತ್ತದೆ’ ಎಂದು ಎಚ್ಚರಿಕೆ ನೀಡಿದರು.ರಾಜೀನಾಮೆ ನೀಡಿಲ್ಲ: ಶಿಕಾರಿಪುರದಲ್ಲಿ ಪಕ್ಷದ ಯಾವ ಪದಾಧಿಕಾರಿಗಳೂ ರಾಜೀನಾಮೆ ನೀಡಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಟಸ್ಥವಾಗಿಲ್ಲ: ಕೆಪಿಸಿಸಿ ಸದಸ್ಯ ಶಾಂತವೀರಪ್ಪಗೌಡ ಮಾತನಾಡಿ, ಶಿಕಾರಿಪುರದಲ್ಲಿ ತಾವು ಸಕ್ರಿಯರಾಗಿದ್ದು, ಪಕ್ಷದ ಸಂಘಟನೆ ಮಾಡಿ, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಅಭ್ಯರ್ಥಿ ಮಂಜುನಾಥ ಭಂಡಾರಿ, ಕೆಪಿಸಿಸಿ ಸದಸ್ಯ ಕರಿಯಣ್ಣ, ಪದಾಧಿಕಾರಿಗಳಾದ ಎನ್‌.ರಮೇಶ್, ರಮೇಶ್‌ ಹೆಗ್ಡೆ, ಕಾಶಿ ವಿಶ್ವನಾಥ್, ಮಾರ್ಟಿಸ್‌, ಹುಸ್ಮಾನ್‌, ಹಾಲಪ್ಪ, ಶಿವಾನಂದ, ಎಸ್‌.ಪಿ.ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.ನಾಳೆ ನಾಮಪತ್ರ ಸಲ್ಲಿಕೆ

ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ ಭಂಡಾರಿ ಮಾರ್ಚ್‌ 19ರಂದು ನಾಮಪತ್ರ ಸಲ್ಲಿಸುವರು ಎಂದು ಆರ್‌.ಪ್ರಸನ್ನಕುಮಾರ್‌ ತಿಳಿಸಿದರು.

ಅಂದು ಬೆಳಿಗ್ಗೆ 11.30ಕ್ಕೆ ನಾಮಪತ್ರ ಸಲ್ಲಿಸುವರು. ಅದಕ್ಕೂ ಮೊದಲು ಬಸ್‌ ನಿಲ್ದಾಣದಿಂದ ಮೆರವಣಿಗೆ ಹೊರಟು ಅಮೀರ್‌ ಅಹಮದ್‌ ವೃತ್ತದ ಮೂಲಕ ಚುನಾವಣಾ ಕಚೇರಿಗೆ ಬಂದು ನಾಮಪತ್ರ ಸಲ್ಲಿಸುವರು ಎಂದು ತಿಳಿಸಿದರು. ಅಂದು ಸಚಿವರಾದ ವಿನಯಕುಮಾರ್‌ ಸೊರಕೆ, ಕಿಮ್ಮನೆ ರತ್ನಾಕರ ಮತ್ತು ರಾಜ್ಯಮಟ್ಟದ ಮುಖಂಡರು ಪಾಲ್ಗೊಳ್ಳುವರು ಎಂದರು. ಕ್ಷೇತ್ರದ ಪ್ರಚಾರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ  ಅಥವಾ ರಾಹುಲ್‌ ಗಾಂಧಿ ಅವರನ್ನು ಬರುವಂತೆ ಕೆಪಿಸಿಸಿ ಮೂಲಕ ಮನವಿ ಮಾಡಿದ್ದೇವೆ ಎಂದರು.ಕೆಪಿಸಿಸಿ ಆದೇಶದಂತೆ ಹಮ್ಮಿಕೊಂಡಿದ್ದ ಮಾರ್ಚ್‌ 9ರಿಂದ 14ರವರೆಗೆ ಪಾದಯಾತ್ರೆ ಮತ್ತು ಬಹಿರಂಗ ಸಭೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಕ್ಷಕ್ಕೆ ಇದರಿಂದ ಹೊಸ ಸ್ಫೂರ್ತಿ ಸಿಕ್ಕಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.