ಬುಧವಾರ, ಅಕ್ಟೋಬರ್ 16, 2019
21 °C

ಭಂವರಿ ದೇವಿ ಪ್ರಕರಣ ; ಕಾಲುವೆಯಿಂದ ವಸ್ತು ವಶ

Published:
Updated:

ಜೋಧಪುರ (ಪಿಟಿಐ): ಭಂವರಿ ದೇವಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿನ ಜಲೋದಾ ಗ್ರಾಮಕ್ಕೆ ಸಮೀಪದ ರಾಜೀವ್ ಗಾಂಧಿ ಎಡದಂಡೆ ಕಾಲುವೆಯಿಂದ ಕೈಗಡಿಯಾರ, ಮಣಿಸರ, ಮೂಳೆ ತುಂಡುಗಳು ಸೇರಿದಂತೆ ಹಲವು ವಸ್ತುಗಳನ್ನು ಸಿಬಿಐ ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ.ಭಂವರಿ ಅವರನ್ನು ಕೊಲೆ ಮಾಡಿದ ನಂತರ ಈ ವಸ್ತುಗಳನ್ನು ಇಲ್ಲಿ ಎಸೆಯಲಾಗಿತ್ತು ಎಂದು ಹೇಳಲಾಗಿದೆ. ಈ ಬೆಳವಣಿಗೆಯಿಂದ ಭಂವರಿ ದೇವಿ ನಾಪತ್ತೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.`2011ರ ಸೆಪ್ಟೆಂಬರ್ 1ರಂದು ಭಂವರಿ ಅವರ ಮೃತದೇಹವನ್ನು ನಮಗೆ ಒಪ್ಪಿಸಲಾಗಿತ್ತು. ಅನಂತರ ಬಿಷ್ಣೋರಾಮ್ ಬಿಷ್ಣೋಯಿ ಎಂಬುವವನ ಜೊತೆ ಸೇರಿಕೊಂಡು ಜಲೋದಾ ಸಮೀಪದ ಗುಂಡಿಯಲ್ಲಿ ಶವವನ್ನು ಸುಟ್ಟು, ಎಲ್ಲ ವಸ್ತುಗಳನ್ನೂ ಸಮೀಪದಲ್ಲೇ ಇರುವ ಕಾಲುವೆಗೆ ಎಸೆದು ಹೋಗಿದ್ದೆವು~ ಎಂದು ಆರೋಪಿ ಕೈಲಾಶ್ ಜಾಖರ್ ತನಿಖಾ ಸಂಸ್ಥೆಗೆ ತಿಳಿಸಿದ್ದ.ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶುಕ್ರವಾರ ನುರಿತ ಈಜುಗಾರರಿಂದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ಸಂದರ್ಭದಲ್ಲಿ ಕಟ್ಟಿಗೆಯ ಬ್ಯಾಟ್, ಎರಡು ಪಿಸ್ತೂಲು, ಕೆಲವು ಬಳೆಗಳು ಮತ್ತು ಮೂಳೆ ತುಂಡುಗಳು ಇದ್ದ ಪ್ಲಾಸ್ಟಿಕ್ ಬ್ಯಾಗ್ ಪತ್ತೆಯಾಗಿತ್ತು.ಸಿಬಿಐ ಮತ್ತು ಪೊಲೀಸರು ಜಂಟಿಯಾಗಿ ಶೋಧ ಕಾರ್ಯ ನಡೆಸಿದ್ದಾರೆ. ತನಿಖೆಗೆ ನೆರವಾಗುವ ಉದ್ದೇಶದಿಂದ ರಾಜಸ್ತಾನ ಸರ್ಕಾರ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಿತ್ತು.ಇದೇ ವೇಳೆ, ಪ್ರಕರಣದ ಪ್ರಮುಖ ಆರೋಪಿಯಾದ ಮಾಜಿ ಸಚಿವ ಮಹಿಪಾಲ್ ಮದೇರಣ ಅವರ ಬಂಧನದ ಅವಧಿಯನ್ನು ಸಿಬಿಐ ನ್ಯಾಯಾಲಯ ವಿಸ್ತರಿಸಿದೆ.ಮದೇರಣ ಮತ್ತು ಭಂವರಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ಸಿ.ಡಿ ಕೆಲ ತಿಂಗಳ ಹಿಂದೆ ಬಹಿರಂಗಗೊಂಡಿತ್ತು.ಇದರಿಂದಾಗಿ ಮದೇರಣ ಸಚಿವ ಸ್ಥಾನ ಕಳೆದುಕೊಂಡಿದ್ದರು. 2011ರ ಸೆಪ್ಟೆಂಬರ್ 1ರಿಂದ 36 ವರ್ಷದ ಭಂವರಿ ನಾಪತ್ತೆಯಾಗಿದ್ದರು.

 

Post Comments (+)