ಭಕ್ತರ ಮಹಾಪೂರ, ಸಜ್ಜೆರೊಟ್ಟಿ ರಾಶಿ

7

ಭಕ್ತರ ಮಹಾಪೂರ, ಸಜ್ಜೆರೊಟ್ಟಿ ರಾಶಿ

Published:
Updated:
ಭಕ್ತರ ಮಹಾಪೂರ, ಸಜ್ಜೆರೊಟ್ಟಿ ರಾಶಿ

ಆಲಮೇಲ: ಇಲ್ಲಿಗೆ ಸಮೀಪದ ಆಹೇರಿ ಗ್ರಾಮದ ಗಂಗಾಧರ ಮಹಾರಾಜರ ಜಾತ್ರೆ ಅದ್ದೂರಿಯಾಗಿ  ಇಲ್ಲಿ ಜರುಗಿತು. ಸುತ್ತಮುತ್ತಲಿನ ಹಳ್ಳಿಗಳಿಂದ ಹಾಗೂ ನೆರೆಯ ಮಹಾರಾಷ್ಟ್ರದಿಂದ ಸಹಸ್ರಾರು ಜನ ಭಕ್ತರು ಆಗಮಿಸಿ ವೈಶಿಷ್ಟ್ಯಪೂರ್ಣ ಜಾತ್ರೆಗೆ ಸಾಕ್ಷಿಯಾದರು. ಈ ಜಾತ್ರೆಯ ವಿಶೇಷವೆಂದರೆ ಬಂದ ಭಕ್ತಾದಿಗಳಿಗೆ ಸಜ್ಜೆರೊಟ್ಟಿ, ವಿವಿಧ ತರಕಾರಿ ಮತ್ತು ಕಾಳುಧಾನ್ಯದಿಂದ ಮಾಡಿದ ಭಜ್ಜಿಪಲ್ಯ ದಾಸೋಹದಲ್ಲಿ ನೀಡಲಾಯಿತು. ಈ ಜಾತ್ರೆ ರೊಟ್ಟಿ ಜಾತ್ರೆಯೆಂದೇ ಪ್ರಸಿದ್ಧಿಯಾಗಿದೆ.ಪುಟ್ಟಹಳ್ಳಿ ಆಹೇರಿಯಲ್ಲಿ ಎಲ್ಲ ಧರ್ಮಿಯರೂ ಸೇರಿ ಒಂದಾಗಿ ಈ ಜಾತ್ರೆ ಆಚರಿಸುತ್ತಾರೆ. ಪ್ರತಿ ಮನೆಯಿಂದ ರೊಟ್ಟಿಗಳನ್ನು ಸಂಗ್ರಹಿಸಲಾಗುತ್ತದೆ. ಈ ಸಲ 101  ಹಂಡೆಗಳಲ್ಲಿ ವಿಶೇಷವಾಗಿ ಬಜ್ಜಿ ಪಲ್ಯ ತಯಾರಿಸಲಾಗಿತ್ತು.ದರ್ಶನಕ್ಕೆ ಬರುವ ಪ್ರತಿ ಭಕ್ತನೂ ಇಲ್ಲಿ ಪ್ರಸಾದ ಸ್ವೀಕರಿಯೇ ಹೋಗುತ್ತಾನೆ. ಈ ಪ್ರಸಾದವನ್ನು ಸವಿಯುವ ಭಕ್ತರು ರೋಗರುಜಿನಗಳಿಂದ ಗುಣಮುಖ ಹೊಂದುತ್ತಾರೆ  ಎಂಬ ಭಾವನೆ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ  20 ಸಾವಿರಕ್ಕೂ ಹೆಚ್ಚು ಜನರು ಈ ವರ್ಷದ ಜಾತ್ರೆಯಲ್ಲಿ ಸೇರಿದ್ದರು ಎಂದು ಅಂದಾಜಿಸಲಾಗಿದೆ.ಎಲ್ಲ ಜಾತಿ ಜನಾಂಗದವರು ತಯಾರಿಸಿದ ಈ ರೊಟ್ಟಿ ಮತ್ತು ಭಜ್ಜಿ ಪಲ್ಯವನ್ನು ಭಾವೈಕ್ಯತೆಯ ಭಾವದಿಂದ ಸ್ವೀಕರಿಸಿ ಧನ್ಯರಾಗುತ್ತಾರೆ. ಒಂದು ಲಕ್ಷ ರೊಟ್ಟಿ ಮತ್ತು 101 ಹಂಡೆಗಳಲ್ಲಿ ತಯಾರಿಸಿದ ಸ್ವಾದಿಷ್ಟ ಭಜ್ಜಿ ಪಲ್ಯ (ವಿವಿಧ ತರಕಾರಿ ತೊಪ್ಪಲು, ಉಸುಳಿ, ಮುಕುಣಿ, ಬಟಾಣಿ ಮುಂತಾದ ಧಾನ್ಯ ಬಳಕೆ)  ಊಟವನ್ನು ಜನರು ತಂಡೋಪ ತಂಡವಾಗಿ ಅಲ್ಲಲ್ಲಿ ಕುಳಿತು ಉಣ್ಣುತ್ತಿದ್ದ ದೃಶ್ಯ ಎಲ್ಲಡೆ ಕಂಡು ಬಂತು. ಜನ ಪ್ರತಿನಿಧಿಗಳು ಜಾತ್ರೆಗೆ ಆಗಮಿಸಿ ಭಜ್ಯ ರೊಟ್ಟಿ ಸಾಮಾನ್ಯ ಪಂಕ್ತಿಯಲ್ಲಿ  ಸವಿದದ್ದು ವಿಶೇಷವಾಗಿತ್ತು.ಅಗ್ನಿ ಪ್ರವೇಶ 

ಬೆಳಿಗ್ಗೆ 10 ಗಂಟೆಗೆ ಪುರವಂತರು ತಮ್ಮ ಸೇವಾ ಕಾರ್ಯ ನಡೆಸಿಕೊಟ್ಟರು. ಮಧ್ಯಾಹ್ನ ಭಕ್ತರು, ಪುರವಂತರು ಅಗ್ನಿ ಪ್ರವೇಶ ಮಾಡಿದರು. ಕೆಂಡದಲ್ಲಿ ಹಾಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ತೀರಿಸಿದರು. ನಂತರ ಹೇಳಿಕೆಗಳು ನಡೆದವು. ಚರಗ ಚೆಲ್ಲುವ ಮೂಲಕ ಸಂಕ್ರಾಂತಿ ಸುಗ್ಗಿ  ಗಮನ ಸೆಳೆಯುವಂತಿತ್ತು.ಹೆಚ್ಚಿದ ಭಕ್ತರು 

ಪ್ರತಿ ವರ್ಷವೂ ಈ ಜಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಕಳೆದ ಸಲಕ್ಕಿಂತ ಹೆಚ್ಚು ಭಕ್ತರು ಆಗಮಿಸಿದ್ದರು.  ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದು ಬಂದೋಬಸ್ತ್ ಒದಗಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry