ಭಾನುವಾರ, ನವೆಂಬರ್ 17, 2019
28 °C

ಭಕ್ತಿಯ ಪ್ರತೀಕ ಈ ನೀರಿನ ಆಟ!

Published:
Updated:

ಜಾಲಹಳ್ಳಿ: ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಜಾಲಹಳ್ಳಿ ಪಟ್ಟಣದ ರಂಗನಾಥ ಸ್ವಾಮಿ ಜಾತ್ರೆಯ ಅಂಗವಾಗಿ ಆಡಲಾಗುವ ನೀರಿನಾಟ ನೋಡುಗರಿಗೆ ಜಲ ಕ್ರೀಡೆಯಂತೆ ಕಂಡುಬಂದರೂ ಇದೊಂದು ಭಕ್ತಿಯ ಪ್ರತೀಕವಾಗಿದೆ ಎಂದೇ ಹೇಳಲಾಗುತ್ತದೆ.ಜಾತ್ರೆಯ ಹಿಂದಿನ ದಿನ ಹಾಗೂ ರಥೋತ್ಸವ ನಡೆಯುವ ದಿನ ಸೇರಿ ಎರಡು ದಿನಗಳ ಕಾಲ ನಡೆಯುವ ಈ ನೀರಿನಾಟ ಎಲ್ಲರ ಆಕರ್ಷಣೀಯವಾಗಿರುತ್ತದೆ. ಇದನ್ನು “ಆಂಡೆಕೊಂಬು” ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅನೇಕ ವರ್ಷಗಳ ಹಿಂದೊಮ್ಮೆ ಪಟ್ಟಣದಲ್ಲಿ ಮಳೆ ಬಾರದಿದ್ದಾಗ ಇಲ್ಲಿಯ ಜನರು ರಂಗನಾಥ ಸ್ವಾಮಿಗೆ ಬೇಡಿಕೊಂಡಿದ್ದರಿಂದ ಮಳೆ ಬಂದಿತೆಂಬ ನಂಬಿಕೆಯಿಂದ ಭಕ್ತಿಯ ಪ್ರತೀಕವಾಗಿ ಪ್ರತಿ ವರ್ಷ ರಂಗನಾಥ ಜಾತ್ರೆಯ ಸಮಯದಲ್ಲಿ ಈ ನೀರಿನಾಟವನ್ನು ಆಡಲಾಗುತ್ತದೆ. ತಗಡಿನ ಡಬ್ಬಿಗಳಲ್ಲಿ ನೀರು ತುಂಬಿ ಅದರಿಂದ ಒಬ್ಬೊರಿಗೊಬ್ಬರು ಪರಸ್ಪರ ಹೊಡೆದುಕೊಳ್ಳುತ್ತಾರೆ.

ಈ ರೀತಿ ಹೊಡೆದಾಗ ಬೀಳುವ ಹೊಡೆತ ಹೊಸದಾಗಿ ತಿಂದವರಿಗೆ ಮೂರು ದಿನವಾದರೂ ಮರೆಯಂದಾಗುತ್ತದೆ. ಆದರೆ ಇಲ್ಲಿ ಆಡುವ ಪ್ರತಿಯೊಬ್ಬರು ಕೂಡ ಪರಸ್ಪರ ಎಷ್ಟೇ ಹೊಡೆದುಕೊಂಡರೂ ಯಾವುದೇ ರೀತಿ ನೋವು ಆಗುವುದಿಲ್ಲ ಇದು ರಂಗನಾಥನ ಮಹಿಮೆ ಎಂದು ಹಿರಿಯರು ಈ ನೀರಿನಾಟದ ಬಗ್ಗೆ ಹೇಳುತ್ತಾರೆ.ಇದರಲ್ಲಿ ಯಾವುದೇ ಜಾತಿ, ಧರ್ಮ ಭೇದವಿಲ್ಲದೇ ದೊಡ್ಡವರು ಚಿಕ್ಕವರೆನ್ನದೇ ಎಲ್ಲರೂ ಕೂಡಿ ಆಡುವ ಮೂಲಕ ರಂಗನಾಥನಿಗೆ ಭಕ್ತಿಯ ಸೇವೆ ಸಲ್ಲಿಸುತ್ತಾರೆ. ಹಿಂದಿನಿಂದಲೂ ನಡೆದುಕೊಂಡು ಬಂದಂತೆ ಈ ನೀರಿನಾಟಕ್ಕೆ ಪಟ್ಟಣದ “ದೊರೆ” ವಂಶಸ್ಥರು ಚಾಲನೆ ನೀಡುವುದು ವಾಡಿಕೆಯಾಗಿದೆ. ನೀರಿನಾಟ ಆಡಲೆಂದೇ ದೇವಸ್ಥಾನದ ಆವರಣದಲ್ಲಿ ಎರಡು ದೊಡ್ಡ ಪ್ರಮಾಣದ ನೀರಿನ ಕೊಂಡಗಳನ್ನು ನಿರ್ಮಿಸಲಾಗಿದೆ.

ಇದು ರಾಜ್ಯದ ಗಮನಸೆಳೆದಿದ್ದು ನೀರಿನಾಟ ನೋಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಪಕ್ಕದ ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳಿಂದ ಕೂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ರಂಗನಾಥ ಸ್ವಾಮಿಯ ಜಾತ್ರೆ 9 ದಿನಗಳ ಕಾಲ ನಡೆಯುತ್ತದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಮಾದರಿಯಲ್ಲಿ ಇಲ್ಲಿಯೂ ಕೂಡ ಪ್ರತಿನಿತ್ಯ ರಂಗನಾಥ ಸ್ವಾಮಿಯ 9 ವಾಹನಗಳ ಸೇವೆ ನಡೆಯುತ್ತದೆ. ಪ್ರಮುಖವಾಗಿ ಗರುಡ ವಾಹನ ಸೇವೆ ಆಕರ್ಷಣೀಯವಾಗಿರುತ್ತದೆ. ಬಿಳಿಯಾನೆ ಸೇವೆ ನಡೆದ ಮರುದಿನ ವಿಜೃಂಭಣೆಯಿಂದ ರಥೋತ್ಸವ ನಡೆಯುತ್ತದೆ. ಏ.25 ರಂದು ರಥೋತ್ಸವ ಜರುಗಲಿದೆ.

-ಅಲಿಬಾಬಾ ಪಟೇಲ್ ಜಾಲಹಳ್ಳಿ

ಪ್ರತಿಕ್ರಿಯಿಸಿ (+)