ಮಂಗಳವಾರ, ಏಪ್ರಿಲ್ 20, 2021
32 °C

ಭಕ್ತ ಸಾಗರದ ಮಧ್ಯೆ ಬೆಳ್ಳಿ ಪಲ್ಲಕ್ಕಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಕೊಲ್ಲಿಪಾಕದಿ ಉದ್ಭವಿಸಿ ಶ್ರೀಕ್ಷೇತ್ರ ರೇವಗ್ಗಿ ಗುಡ್ಡಕ್ಕೆ ಸಂಚರಿಸಿ ಅಪಾರ ಭಕ್ತರ ಮನದಲ್ಲಿ ನೆಲೆಸಿದ ಶ್ರೀ ರೇವಣಸಿದ್ಧೇಶ್ವರ ದೇವರ `ಬೆಳ್ಳಿ ಪಲ್ಲಕ್ಕಿ ಉತ್ಸವ~ವು ಶ್ರಾವಣ ಮಾಸದ ನಡುವಿನ ಸೋಮವಾರ ಸಾಯಂಕಾಲ ಚಿತ್ತಾಪುರ ತಾಲ್ಲೂಕಿನ ರೇವಣಗಿರಿ (ರೇವಗ್ಗಿ ಗುಡ್ಡ)ದಲ್ಲಿ ಜರುಗಿತು.ಈ ನಿಮಿತ್ಯ ದೇವಸ್ಥಾನ ಸಮಿತಿ ಮತ್ತು ವಿವಿಧೆಡೆಯ ಸದ್ಭಕ್ತರಿಂದ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಜರುಗಿತು. ಚನ್ನಬಸಪ್ಪ ದೇವರಮನಿ ಮನೆಯಿಂದ ಅಲಂಕೃತ ಬೆಳ್ಳಿ ಪಲ್ಲಕ್ಕಿಯ ಆಗಮನವಾಯಿತು.

ಸಂಜೆ ತಹಸೀಲ್ದಾರರು ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷರೂ ಆದ ಬಾಲರಾಜ ದೇವರಖದ್ರಾ ಅವರ ಸಮ್ಮುಖದಲ್ಲಿ ಮಂಗಳಾರತಿ ನಡೆದು `ಬೆಳ್ಳಿ ಪಲ್ಲಕ್ಕಿ~ ಗುಡ್ಡದಲ್ಲಿ ಪ್ರದಕ್ಷಿಣೆ ಹಾಕಿ ಭಕ್ತಸಾಗರದಲ್ಲಿ ತೇಲಾಡಿತು.

ರಾಜ್ಯ, ಹೊರ ರಾಜ್ಯಗಳಿಂದ ಹರಿದು ಬಂದಿದ್ದ ಭಕ್ತಸ್ತೋಮ ಬಾಳೆಹಣ್ಣು, ಉತ್ತತ್ತಿ, ತೆಂಗು, ಹೂವು, ನಾಣ್ಯ, ತೆಂಗಿನಕಾಯಿ ಎಸೆದು ಜೈಘೋಷ ಕೂಗಿದರು.ಪೂಜ್ಯ ವಿರೂಪಾಕ್ಷ ಶಿವಾಚಾರ್ಯರು, ರೇವಣಸಿದ್ಧ ಶರಣರು, ನೀಲಕಂಠ ಸ್ವಾಮೀಜಿ ಒಳಗೊಂಡಂತೆ ಅನೇಕ ಮಠಾಧೀಶರು ಹಾಗೂ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.ಶಿವಭಜನೆ, ಸಂಗೀತ, ಡೊಳ್ಳಿನ ಪದಗಳ ಹಾಡು ನಡೆಯಿತು. ಜುಲೈ 20ರಿಂದ ಸಾಗಿಬರುತ್ತಿರುವ ವೇದಮೂರ್ತಿ ಪಂಚಾಕ್ಷರಿ ಶಾಸ್ತ್ರೀಯ ವಾಣಿ ಹಾಗೂ ರೇವಣಸಿದ್ಧಯ್ಯ ಹಿರೇಮಠ, ದಯಾನಂದ ಹಿರೇಮಠ ಅವರ ಸಂಗೀತ ಬಳಗದೊಂದಿಗಿನ `ಪುರಾಣ ಕಾರ್ಯಕ್ರಮ~ ನೆರವೇರಿತು. ಶಹಾಬಾದ ಡಿವೈಎಸ್ಪಿ ಎಮ್.ವಿ.ಸೂರ್ಯವಂಶಿ, ಕಾಳಗಿ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಎಚ್.ಭೀಮಕ್ಕನವರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.