ಬುಧವಾರ, ಮೇ 25, 2022
22 °C

ಭಗತ್‌ಗೆ ನಮನ- ಭ್ರಷ್ಟಾಚಾರ ವಿರೋಧಿ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ನಗರದ ಕಾಲೇಜು ವಿದ್ಯಾರ್ಥಿಗಳು, ‘ಡೌನ್ ಡೌನ್ ಕ್ಯಾಪಿಟಲಿಸಂ’ ಎಂದು ಕೂಗುತ್ತಿದ್ದರು. ಅವರೆಲ್ಲ ಸಮಾಜವಾದದ ಬೆಳಕು ಚೆಲ್ಲುವ ದೀಪ ಹಿಡಿದಿದ್ದರು. ಹುತಾತ್ಮ ಭಗತ್ ಸಿಂಗ್ ಅವರನ್ನು ನೆನೆಯುತ್ತ ಬುಧವಾರ ನಗರದ ಪ್ರಮುಖ ರಸ್ತೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟವು (ಎಐಎಸ್‌ಎಫ್) ದೀಪಯಾತ್ರೆಯನ್ನು ಹಮ್ಮಿಕೊಂಡಿತ್ತು.

‘ಭಗತ್‌ಸಿಂಗ್ ಸಾಮ್ರಾಜ್ಯಶಾಹಿ ನೀತಿ ವಿರುದ್ಧ ಹೋರಾಡಿ ನೇಣುಗಂಬವನ್ನು ಏರಿದರು. ಹುತಾತ್ಮ ಭಗತ್ ಅವರ ಚೇತನ ಕ್ರಾಂತಿಯ ಕಿಡಿಯನ್ನು ಯುವಜನಾಂಗದ ಹೃದಯದಲ್ಲೂ ಹೊತ್ತಿಸಲು ಈ ದೀಪಯಾತ್ರೆಯನ್ನು ಆಯೋಜಿಸಲಾಗಿದೆ’ ಎಂದು ಸಿಪಿಐನ ಜಿಲ್ಲಾ ಘಟಕದ ಕಾರ್ಯದರ್ಶಿ ಶೌಕತ್ ಅಲಿ ಆಲೂರ ತಿಳಿಸಿದರು.

 

ಸಮಾಜವಾದದ ಬಗ್ಗೆ ಒಲವು ಹಾಗೂ ಆಸ್ಥೆ ಮೂಡಬೇಕು. ಸಮಾಜವನ್ನು ಕಿತ್ತು ತಿನ್ನುತ್ತಿರುವ ಸಾಮ್ರಾಜ್ಯಶಾಹಿ ದೊರೆಗಳು, ಭ್ರಷ್ಟಾಚಾರಿ ಅಧಿಕಾರಿಗಳ ಕಾರ್ಯವೈಖರಿಯನ್ನು ವಿರೋಧಿಸಲು ಈ ದಿನವನ್ನು ಎಐಎಸ್‌ಎಫ್ ಹಮ್ಮಿಕೊಂಡಿದೆ ಎಂದು ವಿವರಿಸಿದರು.ಭಗತ್‌ಸಿಂಗ್, ರಾಜಗುರು ಹಾಗೂ ಸುಖದೇವ್ ಸಾಮ್ರಾಜ್ಯಶಾಹಿಯ ವಿರುದ್ಧ ಬಂಡೆದ್ದ ಯುವಕರಾಗಿದ್ದರು. ಆದರೆ ಇಂದಿನ ಯುವಜನಾಂಗ ಬ್ರ್ಯಾಂಡ್‌ಗಳ ಹುಚ್ಚಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ದಾಸರಾಗುತ್ತಿದ್ದಾರೆ. ಇಂಥ ಗುಲಾಮಗಿರಿಯಿಂದ ಯುವಜನಾಂಗ ಆಚೆ ಬರಬೇಕಿದೆ ಎಂದು ಕರೆ ನೀಡಿದರು.

 

ವಿದ್ಯಾರ್ಥಿಗಳು ಸಮಾಜವಾದ ಪರ ಘೋಷಣೆಗಳನ್ನು ಕೂಗಿದರು. ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದರು. ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಿಂದ ಸರ್ದಾರ್ ವಲ್ಲಭಭಾಯಿ ಪಟೇಲ ವೃತ್ತದವರೆಗೆ ದೀಪ ಹಿಡಿದ ಯುವಕ ಯುವತಿಯರು ನೆರೆದ ಜನರಲ್ಲಿ ಆಸಕ್ತಿ ಕೆರಳಿಸಿದರು. ವಿದ್ಯಾರ್ಥಿ ನಾಯಕರು ಕ್ರಾಂತಿಗೀತೆಗಳನ್ನು ಹಾಡಿದರು. ಅಲಿಸಾಬ ಎಂ.ಸಿಂದಗಿ, ನಿಂಗಪ್ಪ ಪೂಜಾರಿ, ಅನಿಲ ಕಾಂಬಳೆ, ಮಹೇಶ ರಾಠೋಡ ಹಾಗೂ ಇತರರು ಯಾತ್ರೆ ಮುಖಂಡತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.