ಗುರುವಾರ , ಜೂನ್ 17, 2021
29 °C

ಭಗವತಿ ಕೆರೆಯಲ್ಲಿ ಚಿಮ್ಮುವ ಜಲಲ ಜಲಧಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಟ್ಟೀಹಳ್ಳಿ: ಎಂತಹ ಬೇಸಿಗೆಯೇ ಇರಲಿ, ಬರಗಾಲವೇ ಇರಲಿ ಇಲ್ಲಿ ಮಾತ್ರ ಸಿಹಿ ನೀರಿನ ಚಿಲುಮೆ ಸದಾ ಚಿಮ್ಮುತ್ತಲೇ ಇರುತ್ತದೆ. ಇಂತಹ ಅಪರೂಪದ ದೃಶ್ಯ ಇಲ್ಲಿಗೆ ಸಮೀಪದ ಭಗವತಿ ಕೆರೆಯಲ್ಲಿ ಕಂಡು ಬರುತ್ತಿದೆ.ಕಣವಿಸಿದ್ಧೇಶ್ವರ ದೇವಸ್ಥಾನದಿಂದ ಬೆಟ್ಟವನ್ನು ಸುತ್ತುವರಿದು ಬಂದರೆ 3 ಕಿ.ಮೀ. ದೂರ. ಜೋಕನಹಳ್ಳಿ ಗ್ರಾಮದ ಮೂಲಕ ಬಂದರೆ ನೇರವಾಗಿ ಕೆರೆಯ ದರ್ಶನವಾಗುತ್ತದೆ.ಇಲ್ಲಿನ ಜಲಧಾರೆ ಸದಾಕಾಲ ಹರಿಯುತ್ತಿರು ವುದರಿಂದ ನಿಸರ್ಗದ ವಿಸ್ಮಯ.ಎರಡು ಬೆಟ್ಟಗಳ ಮಧ್ಯೆ ಈ ಚಿಲುಮೆಯಿದೆ. ಕ್ರಿ.ಶ 1238 ರಿಂದಲೂ ಇಲ್ಲಿ ಕೆರೆಯಿತ್ತು ಎಂಬುದು ಶಿಲಾ ಶಾಸನಗಳಿಂದ ತಿಳಿಯುತ್ತದೆ. ಕಣವಿಸಿದ್ದೇಶ್ವರ ದೇವಸ್ಥಾನದಲ್ಲಿರುವ ಶಿಲಾಶಾಸನದ ಪ್ರಕಾರ ಭಗವತಿ ಘಟ್ಟದ ರಾಮೇಶ್ವರ ದೇವರಿಗೆ ಪಾಂಡ್ಯನೂ ಕುಮಾರ ಚೌಂಡರಸನು 1238ರಲ್ಲಿ ನೀಡಿದ ದಾನಗಳ ಉಲ್ಲೇಖವಿದೆ.ನೀರಿನ ಮೂಲ ಮಾತ್ರ ಎಲ್ಲಿಯೂ ಗೋಚರವಾಗುವುದಿಲ್ಲ. ನೀರಿನ ಹರಿವು ಮಾತ್ರ ಕಾಣಿಸುತ್ತದೆ. ಈಗ ಇದು ಕೆರೆಯಂತೆ ಗೋಚರವಾಗುವುದಿಲ್ಲ. ಕೇವಲ ಒಂದು ಕಾಲುವೆಯಂತೆ ಕಂಡು ಬರುತ್ತದೆ.ಆದರೂ ಕೆರೆಯೆಂದೇ ಪ್ರಸಿದ್ಧಿ ಪಡೆದಿದೆ. ಸದಾಕಾಲ ನೀರು ಇರುವುದು ಇಲ್ಲಿನ ವಿಶೇಷತೆ. ನೀರು ಮುಂದೆ ಹರಿದು ಹೋಗುವುದು ಕಡೂರ ಗ್ರಾಮದ ಮಾಜಿಗೌಡ್ರ ಎಂಬುವವರ ಹೊಲಕ್ಕೆ ಮಾತ್ರ. ಮುಂದೆ ನೀರು ಎಲ್ಲಿ ಇಂಗುತ್ತದೆ ಎಂಬುವುದು ಗೊತ್ತಾಗುವುದೇ ಇಲ್ಲ. ಮಾಜಿಗೌಡ್ರ ಹೊಲವನ್ನು ಬಿಟ್ಟು ಬೇರೆ ಕಡೆಗೆ ನೀರು ಹಾಯಿಸಿದರೂ ನೀರು ಹರಿಯುವುದಿಲ್ಲ.ವರ್ಷಕ್ಕೊಮ್ಮೆ ಇಲ್ಲಿ ಸಣ್ಣ ಪ್ರಮಾಣದ ಜಾತ್ರೆ ನಡೆಯುತ್ತದೆ. ದಶಕಗಳ ಹಿಂದೆ ಕೆರೆಯ ಅಭಿವೃದ್ಧಿ ಗಾಗಿ ಕಾಮಗಾರಿ ನಡೆದಾಗ ನೀರೆಲ್ಲ ಕೆಂಪಾಯಿತು ಎನ್ನಲಾಗಿದೆ. ಹೀಗಾಗಿ ಎಂಜಿನಿಯರ್ ಕಾಮಗಾರಿ ಮುಂದುವರಿಸಲು ಒಪ್ಪಲಿಲ್ಲ. ಕಾರಣಾಂತರ ಗಳಿಂದ ಕೆರೆಯ ಅಭಿವೃದ್ಧಿ ಕೈಬಿಡಲಾಗಿದೆ. ಇಲ್ಲಿಗೆ ಹೋಗುವ ದಾರಿ ದುರ್ಗಮವಾಗಿದೆ.

ಗ್ರಾಮದಿಂದ ದೂರ ಇರುವ ಕಾರಣ ಇಲ್ಲಿ ಗಲೀಜು ಕಾಣಿಸುವುದಿಲ್ಲ. ಜನರೂ ಕೂಡಾ ಇಲ್ಲಿಗೆ ಬರಲು ಹಿಂಜರಿಯುತ್ತಾರೆ.ಪ್ರಕೃತಿಯ ರಮ್ಯ ಸೊಬಗು ಸವಿಯಲು ಇದೊಂದು ಅತ್ಯುತ್ತಮ ಪ್ರದೇಶವಾಗಿದೆ. ಹೆಜ್ಜೇನುಗಳ ಕಾಟ ಇಲ್ಲಿ ಜಾಸ್ತಿ. ಹಾಗಾಗಿ ಇಲ್ಲಿಗೆ ಬಂದಾಗ ಕೂಗಾಟ-ಗಲಾಟೆ ಮಾಡದೇ ನಿಶ್ಯಬ್ದವಾಗಿ ಪ್ರಕೃತಿಯ ಸೊಬಗನ್ನು ಸವಿಯಬೇಕು ಪ್ರವಾಸೋದ್ಯಮ ಇಲಾಖೆ ಇತ್ತ ಕಡೆ ಗಮನ ಹರಿಸಿದರೆ ಸುಂದರ ತಾಣವನ್ನಾಗಿ ಮಾಡಬಹುದು.

-ವಿನಾಯಕ ಭೀಮಪ್ಪನವರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.