ಬುಧವಾರ, ಜೂನ್ 16, 2021
21 °C

ಭಗವದ್ಗೀತೆ ನಿಷೇಧ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಪಿಟಿಐ): ಭಗವದ್ಗೀತೆಯ ಅನುವಾದಿತ ಆವೃತ್ತಿಯನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬುಧವಾರ ವಜಾಗೊಳಿಸುವ ಮೂಲಕ ಇಲ್ಲಿನ ಜಿಲ್ಲಾ ನ್ಯಾಯಾಲಯ ಈ ಸಂಬಂಧದ ವಿವಾದಕ್ಕೆ ತೆರೆ ಎಳೆದಿದೆ.ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಭಗವದ್ಗೀತೆ ನಿಷೇಧ ವಿವಾದ ಸದ್ಯಕ್ಕೆ ಶಮನಗೊಂಡಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಕಿಕ್ಕಿರಿದು ತುಂಬಿದ್ದ ಸೈಬೀರಿಯಾದ ಟಾಮ್ಸ್ಕ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿಯನ್ನು ವಜಾಗೊಳಿಸಿದ ಅಂತಿಮ ತೀರ್ಪು ಹೊರಬೀಳುತ್ತಿದ್ದಂತೆಯೇ ನೂರಾರು ಭಗವದ್ಗೀತೆ ಅನುಯಾಯಿಗಳು ಸಂಭ್ರಮ ವ್ಯಕ್ತಪಡಿಸಿದರು.ಇಸ್ಕಾನ್‌ನ ಸಂಸ್ಥಾಪಕರಾದ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರು ಬರೆದ `ಭಗವದ್ಗೀತಾ ಆ್ಯಸ್ ಇಟ್ ಈಸ್~ ಅನುವಾದಿತ ಕೃತಿ ಈ ವಿವಾದದ ಕೇಂದ್ರ. ಭಗವದ್ಗೀತೆ ಉಗ್ರವಾದಿ ಸಾಹಿತ್ಯವಾಗಿದ್ದು ದ್ವೇಷ ಭಾವನೆ ಕೆರಳಿಸುತ್ತದೆ, ಹೀಗಾಗಿ ಅದನ್ನು ನಿಷೇಧಿಸಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ಕಳೆದ ಜೂನ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.ಈ ವಿಚಾರ ತೀವ್ರ ವಿವಾದವನ್ನು ಹುಟ್ಟುಹಾಕಿತ್ತಲ್ಲದೇ, ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಮಧ್ಯ ಪ್ರವೇಶಿಸಿದ್ದರು.ಕಳೆದ ತಿಂಗಳು ಭಗವದ್ಗೀತೆ ಕುರಿತು ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಅನೇಕರು ಕೃತಿಯಲ್ಲಿಯ ವಿವಾದಾತ್ಮಕ ಅಂಶಗಳನ್ನು ಗುರುತಿಸಲು ತಜ್ಞರನ್ನು ಒಳಗೊಂಡ ಸ್ವತಂತ್ರ ಮಂಡಳಿಯನ್ನು ರಚಿಸುವ ಸಲಹೆ ಮಾಡಿದ್ದರು. ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳನ್ನು ರಷ್ಯ ವಿದೇಶಾಂಗ ಸಚಿವರಿಗೆ ಸಲ್ಲಿಸಿದ್ದರು.ತೀರ್ಪು ಹೊರಬೀಳುತ್ತಿದ್ದಂತೆಯೇ ಹರ್ಷ ವ್ಯಕ್ತಪಸಿದ ಇಸ್ಕಾನ್‌ನ ಮಾಸ್ಕೊ ಶಾಖೆಯ ಸಾಧು ಪ್ರಿಯಾ ದಾಸ್, ತಮ್ಮ ಪರ ತೀರ್ಪು ಬರುವ ಆಶಾ ಭಾವನೆ ಹೊಂದಿದ್ದಾಗಿ ತಿಳಿಸಿದರು. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವುದಾಗಿ ತಿಳಿಸಿದ ಅವರು, ರಷ್ಯದ ನ್ಯಾಯಾಂಗ ವ್ಯವಸ್ಥೆಗೆ ಚಿರಋಣಿಯಾಗಿರುವುದಾಗಿ ಹೇಳಿದರು. ಇದು ತಮ್ಮ ಹೋರಾಟಕ್ಕೆ ಸಂದ ಜಯ ಎಂದು ಇಸ್ಕಾನ್‌ನ ಬೃಜೇಂದ್ರ ನಂದನ್ ದಾಸ್ ಹೇಳಿದ್ದಾರೆ.ರಷ್ಯದಲ್ಲಿರುವ ಭಾರತದ ರಾಯಭಾರಿ ಅಜಯ್ ಮಲ್ಹೋತ್ರ ಅವರು ತೀರ್ಪನ್ನು ಸ್ವಾಗತಿಸಿದ್ದಾರೆ. ರಷ್ಯದಲ್ಲಿ 1788ರಲ್ಲಿ ಮೊದಲ ಬಾರಿಗೆ ಭಗವದ್ಗೀತೆಯನ್ನು ಪ್ರಕಟಿಸಲಾಗಿತ್ತು. ಆ ನಂತರ ಹಲವಾರು ಬಾರಿ ಈ ಕೃತಿ ಮರು ಮುದ್ರಣ ಕಂಡಿದೆ.

 

ಭಾರತ ಸ್ವಾಗತ

ನವದೆಹಲಿ (ಪಿಟಿಐ): ಭಗವದ್ಗೀತೆಯ ಅನುವಾದಿತ ಆವೃತ್ತಿಯನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ ಮಾಡಿರುವ ರಷ್ಯ ನ್ಯಾಯಾಲಯದ ತೀರ್ಪನ್ನು ಭಾರತ ಸ್ವಾಗತಿಸಿದೆ.ಇದಕ್ಕಾಗಿ ಶ್ರಮಿಸಿದ ರಷ್ಯದಲ್ಲಿನ ಎಲ್ಲ ಸ್ನೇಹಿತರನ್ನೂ ಶ್ಲಾಘಿಸುವುದಾಗಿ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.