ಭಾನುವಾರ, ಜೂನ್ 13, 2021
20 °C

ಭಗ್ನಪ್ರೇಮಿಗಳ ತೂಕ ಇಳಿಯುತ್ತದೆ ಬೇಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೂಕ ಇಳಿಸಿಕೊಳ್ಳಲು ಸಾಕಷ್ಟು ಹೆಣಗಾಡುವ ಮಹಿಳೆಯರಿಗೆ ಈ ವಿಷಯ ಸ್ವಲ್ಪ ಆಶ್ಚರ್ಯ ಎನಿಸಬಹುದು. ಆದರೆ ಇದು ನಿಜ ಎನ್ನುತ್ತಿದೆ ನೂತನ ಸಂಶೋಧನೆ.ಭಗ್ನಪ್ರೇಮಿಗಳು ಅಥವಾ ವಿಚ್ಛೇದನ ಪಡೆದವರು ಅತಿ ಹೆಚ್ಚು ತೂಕ ಇಳಿಸಿಕೊಳ್ಳಬಲ್ಲರು ಎನ್ನುವ ಅಂಶ ತಿಳಿದುಬಂದಿರುವುದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಿಂದ.ಲಂಡನ್‌ನಲ್ಲಿ ಪಥ್ಯಾಹಾರಕ್ಕೆ ಸಂಬಂಧಿಸಿದ ಸಂಸ್ಥೆ ಫೋರ್ಜ ಸಪ್ಲಿಮೆಂಟ್ಸ್‌, ಭಗ್ನಪ್ರೇಮ ಮತ್ತು ತೂಕ ಇಳಿಕೆ ಕುರಿತು ಸಾವಿರ ಮಂದಿಯಯನ್ನು ಸಂಶೋಧನೆಗೆ ಒಳಪಡಿಸಿತು. ಸಂಶೋಧನೆಗೆ ಒಳಗಾದವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದು, ವಿರಹ ವೇದನೆಯಿಂದ ತೂಕ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ.ಪ್ರೀತಿಯಿಂದ ವಂಚಿತರಾದರೆ ಮಹಿಳೆಯರು ಅಥವಾ ಹುಡುಗಿಯರು ಯಾವುದೇ ಪ್ರಯತ್ನವಿಲ್ಲದೆ ಬಹು ಬೇಗ ತೂಕ ಕಳೆದುಕೊಳ್ಳುತ್ತಾರೆ. ಹೃದಯ ಒಡೆಯುವುದಕ್ಕೂ, ತೂಕ ಕಡಿಮೆಯಾಗುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಯೋಚಿಸುತ್ತಿದ್ದರೆ, ನಮ್ಮ ಮಾನಸಿಕ ಸ್ಥಿತಿಗತಿ ದೇಹದ ಮೇಲೂ ಪರಿಣಾಮ ಬೀರುತ್ತದೆ ಎನ್ನುವ ತರ್ಕವನ್ನು ಮುಂದಿಟ್ಟಿದೆ ಸಮೀಕ್ಷೆ.ಪ್ರೀತಿ ಕಳೆದುಕೊಂಡವರ ದಿನಚರಿ ಮಾಮೂಲಿಗಿಂತ ಭಿನ್ನವಾಗಿದ್ದು, ತೂಕ ಕಡಿಮೆಯಾಗಲು ಇದೂ ಕಾರಣ. ಬನ್ನಿ, ಆ ದಿನಚರಿ ಹೇಗಿದೆ ಎಂದು ನೋಡೋಣ...ಪ್ರೇಮ ವೈಫಲ್ಯವಾದ ಹುಡುಗಿಯೊಬ್ಬಳು ಬೆಳಿಗ್ಗೆ ಏಳುತ್ತಲೇ ಮನಸ್ಸಿನಲ್ಲಿ ವಿರಹದ ನೋವನ್ನು ತುಂಬಿಕೊಂಡಿರುತ್ತಾಳೆ. ಆಕೆಯನ್ನು ಈ ಒತ್ತಡ ಮನಃಪೂರ್ವಕವಾಗಿ ತಿಂಡಿ ತಿನ್ನಲು ಬಿಡುವುದಿಲ್ಲ. ಊಟದ್ದೂ ಅದೇ ಕತೆ. ಇನ್ನು ಪ್ರೀತಿ ಕೈಕೊಟ್ಟ ನೋವು ಆಕೆ ಹೊರಗೆ ಹೋಗಲೂ ಪ್ರೇರೇಪಿಸುವುದಿಲ್ಲ. ಹೀಗಾಗಿ ಹೊರಗೆ ಹೋಗಿ ತಿನ್ನುವ ಪ್ರಮಾಣವೂ ಕಡಿಮೆಯಾಗುತ್ತಾ ಹೋಗುತ್ತದೆ. ರಾತ್ರಿ ಒಂದಿಷ್ಟೇ ಊಟ ಮಾಡಿ ಮಲಗಿಬಿಡುತ್ತಾಳೆ. ಹಾಲು ಕುಡಿಯಲೂ ಮನಸ್ಸಾಗದು. ಆದ್ದರಿಂದ ಗೊತ್ತೇ ಆಗದೆ ದೇಹದ ಕೊಬ್ಬು ಕರಗುತ್ತಾ, ಸೊರಗುತ್ತಾ ಹೋಗುತ್ತದೆ.ಇನ್ನು, ಹೃದಯ ಮುದುಡಿದ ಈ ಸಮಯದಲ್ಲಿ ಏನೂ ತಿನ್ನಲು ಮನಸ್ಸಿಲ್ಲದ ಹುಡುಗಿಯರು ಒತ್ತಡದಿಂದ ಹೊರಬರಲು ಪದೇಪದೇ ಕಾಫಿ, ಟೀ ಅಥವಾ ಗ್ರೀನ್ ಟೀ ಕುಡಿಯತೊಡಗುತ್ತಾರೆ. ಕೊಲೆಸ್ಟ್ರಾಲ್ ಕರಗಿಸುವ ಅಂಶವಿರುವ ಈ ಪಾನೀಯಗಳ ಸೇವನೆ ಅವರ ದೇಹದ ತೂಕವನ್ನು ಕ್ಷಣಕ್ಷಣಕ್ಕೂ ಇಳಿಸಿಬಿಡುತ್ತದೆ.ಇದಕ್ಕೆ ಪೂರಕವಾಗಿ, ಪ್ರೇಮಿಯು ತೊರೆದ ಮೊದಲ ಒಂದು ತಿಂಗಳಲ್ಲೇ ಹುಡುಗಿಯೊಬ್ಬಳು ಸುಮಾರು 2.26ಕೆ.ಜಿ. ತೂಕ ಇಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಡೈಲಿಸ್ಟಾರ್ ವರದಿ ಮಾಡಿದೆ.ಇನ್ನು ಒಡೆದ ಸಂಬಂಧ, ಪ್ರೀತಿ ನೆನೆಸಿಕೊಳ್ಳುತ್ತಾ, ಕೊರಗುತ್ತಾ ಒಂದು ವರ್ಷ ಸಾಗಿಬಿಟ್ಟರೆ ಆ ಮಹಿಳೆ ಸಣಕಲಾಗಿ ಕಾಣುತ್ತಾಳಂತೆ.ಹೆಚ್ಚು ಕಾಲ ಒಟ್ಟಿಗೆ ಬಾಳಿ ಬದುಕಿದವರು ದೂರವಾದ ನೋವು ಆಕೆಯನ್ನು ಒಂದೇ ಸಮನೆ ಕಾಡುತ್ತಾ, ಊಟ ತಿಂಡಿ ಸರಿಯಾಗಿ ಮಾಡದೆ, ಇನ್ನಷ್ಟು ಕುಗ್ಗಿಹೋಗಿ ಆರೋಗ್ಯದ ಸಮಸ್ಯೆಗಳೂ ಕಾಡುತ್ತವೆ.ಲಾಂಗೋರಿಯಾ ಹೀಗಂದರು

ಈ ‘ಬ್ರೇಕ್ ಅಪ್’ ಮತ್ತು ತೂಕ ಇಳಿಕೆಯ ಬಗ್ಗೆ ‘ಡೆಸ್ಪರೇಟ್ ಹೌಸ್‌ವೈವ್ಸ್‌’ ಖ್ಯಾತಿಯ ತಾರೆ ಇವಾ ಲಾಂಗೋರಿಯಾ ಹೇಳಿಕೊಂಡಿದ್ದಾರೆ.  2011ರಲ್ಲಿ ಬಾಸ್ಕೆಟ್ ಬಾಲ್ ತಾರೆ ಟೋನಿ ಪಾರ್ಕರ್ ಅವರಿಂದ ವಿಚ್ಛೇದನ ಪಡೆದ ಲಾಂಗೋರಿಯಾ ಕೂಡ ಆ ಸಮಯದಲ್ಲಿ ಸಾಕಷ್ಟು ಇಳಿದು ಹೋದರಂತೆ.‘ನಾನು ಮೂಳೆ ಮೇಲೆ ಚರ್ಮ ಹೊದಿಸಿದಂತೆ ಕಾಣುತ್ತಿದ್ದೆ. ಸರಿಯಾಗಿ ತಿನ್ನುತ್ತಲೇ ಇರಲಿಲ್ಲ. ತುಂಬಾ ಒತ್ತಡ ಕಾಡುತ್ತಿತ್ತು. ದುಃಖ ತುಂಬಿಕೊಂಡಿತ್ತು. ನನ್ನ ಆಹಾರ ಕಾಫಿ ಮಾತ್ರ ಆಗಿತ್ತು. ಆದರೆ ಆ ಸಮಯದಲ್ಲಿ ಜನ ನನ್ನನ್ನು ನೀನು ತುಂಬಾ ಮೋಹಕವಾಗಿ ಕಾಣುತ್ತಿದ್ದೀಯ’ ಎನ್ನುತ್ತಿದ್ದರು. ನನಗೆ ಮಾತ್ರ ಇದು ಸರಿಯಿಲ್ಲ ಎನಿಸುತ್ತಿತ್ತು. ನಿಶ್ಶಕ್ತಿ ಕಾಡುತ್ತಿತ್ತು’ ಎಂದು ಹೇಳಿಕೊಂಡಿದ್ದಾರೆ.ಪ್ರೀತಿ ಕೈಬಿಟ್ಟ ತಕ್ಷಣ ಹುಡುಗಿಯರಲ್ಲಿ ಭಾವನಾತ್ಮಕವಾಗಿ ಕುಗ್ಗಿ ಹೋಗುವವರೇ ಹೆಚ್ಚಂತೆ. ಇದು  ಅವರ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮೊನ್ನೆ ಮೊನ್ನೆಯಷ್ಟೇ ಹೆಂಡತಿ ದಪ್ಪಗಿದ್ದ ಕಾರಣಕ್ಕೆ ವಿಚ್ಛೇದನ ಕೊಟ್ಟ ಗಂಡನ ಉದಾಹರಣೆ ಮುಂದಿರುವಾಗ, ಅಂಥ ಸನ್ನಿವೇಶವನ್ನು ಆ ಸಮಯದಲ್ಲಿ ಹುಡುಗಿಯರು ಸವಾಲಾಗಿಯೂ ಸ್ವೀಕರಿಸುತ್ತಾರೆ. ಮೂಳೆ ಎದ್ದುಕಾಣುವಷ್ಟು ತೆಳ್ಳಗಾಗಿ, ಪ್ರಿಯತಮನಿಗೆ ತಮ್ಮ ಪ್ರೇಮದಾಳವನ್ನು ವ್ಯಕ್ತಪಡಿಸುತ್ತಾರಂತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.