ಭಗ್ನ ಕೋಟೆಯಲ್ಲಿ ಶರಣರ ಲಿಂಗಪೂಜೆ

7

ಭಗ್ನ ಕೋಟೆಯಲ್ಲಿ ಶರಣರ ಲಿಂಗಪೂಜೆ

Published:
Updated:

ಚನ್ನಮ್ಮನ ಕಿತ್ತೂರು: ಕಲ್ಲು, ಕಲ್ಲು ಕತೆ ಹೇಳುವ ಐತಿಹಾಸಿಕ ಕಿತ್ತೂರು ಕೋಟೆಯ ಮಧ್ಯೆ ಷಟ್‌ಕೋನ ಯುಕ್ತ ಶುಭ್ರವಸ್ತ್ರಧಾರಿಯಾಗಿ ಕುಳಿತ ನೂರಾರು ಶರಣ -ಶರಣೆಯರು ಅಂಗೈಯಲ್ಲಿ ಇಟ್ಟುಕೊಂಡಿದ್ದ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸುವ ಮೂಲಕ ಲಿಂಗಾಯತ ಸಮುದಾಯ ಮಂಗಳವಾರ ವಿಶಿಷ್ಟ ರೀತಿಯಲ್ಲಿ ರಾಣಿ ಚನ್ನಮ್ಮಾಜಿಯ 182ನೇ ಪುಣ್ಯಸ್ಮರಣೆ ಮಾಡಿತು.ಇಷ್ಟಲಿಂಗದ ವಿಧಿವಿಧಾನಗಳನ್ನು ಪೂರೈಸಿದ ನಂತರ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು, ‘ರಾಣಿ ಚನ್ನಮ್ಮ ಇಷ್ಟಲಿಂಗ ದೀಕ್ಷೆ ಪಡೆದಿದ್ದಳು. ಶರಣ ಸಂಸ್ಕೃತಿಯನ್ನು ಕಣ, ಕಣದಲ್ಲೂ ಅಳವಡಿಸಿಕೊಂಡಿದ್ದಳು’ ಎಂದು ಹೇಳಿದರು.‘ಬಸವತತ್ವ ಪರಿಪಾಲಕಳಾಗಿದ್ದ ರಾಣಿಯ ಆತ್ಮಸ್ಥೈರ್ಯ ಗಟ್ಟಿಯಾಗಿತ್ತು. ಬಲಿಷ್ಠರಾಗಿದ್ದ ಬ್ರಿಟಿಷರ ಜೊತೆ ಸ್ವಾಭಿಮಾನಕ್ಕಾಗಿ ರಣರಂಗಕ್ಕಿಳಿದು ಹೋರಾಟ ಮಾಡುವಲ್ಲೂ ಹಿಂದೇಟು ಹಾಕಲಿಲ್ಲ. ಶರಣ ಧರ್ಮ ಪರಿಪಾಲನೆಯ ರಾಣಿಯನ್ನು ಪಡೆದ ನಾಡು ಧನ್ಯವಾಗಿದೆ’ ಎಂದು ಸ್ಮರಿಸಿದರು.ಲಿಂಗಾಯತ ಬರೆಸಿ: ‘ಜನಗಣತಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಗಣತಿ ಫಾರ್ಮಿನ 7ನೇ ಕಾಲಮ್ಮಿನಲ್ಲಿ ಲಿಂಗಾಯತ ಎಂದು ಬರೆಸಬೇಕು’ ಎಂದು ಸೂಚಿಸಿದ ಸ್ವಾಮೀಜಿ, ‘ಸಿಖ್, ಬೌದ್ಧ ಮತ್ತು ಜೈನ ಧರ್ಮಗಳು ಸ್ವತಂತ್ರ ಧರ್ಮಗಳೆಂದು ಮಾನ್ಯತೆ ಪಡೆದಿವೆಯೋ ಅವೆಲ್ಲ ಲಕ್ಷಣಗಳು ಲಿಂಗಾಯತದಲ್ಲಿದೆ’ ಎಂದು ಅವರು ಹೇಳಿದರು.ಶರಣ ಬಸವರಾಜ ಕಡೆಮನಿ, ‘ಲಿಂಗಪೂಜೆಯಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಸಾತ್ವಿಕ ಜೀವನ ಸಾಗಿಸಲು ಸಹಾಯವಾಗುತ್ತದೆ’ ಎಂದರು.

‘ಜಗತ್ತಿನ ಬೇರೆಲ್ಲ ಧರ್ಮಗಳು ಬಸವಣ್ಣನವರ ತತ್ವಾದರ್ಶಗಳನ್ನು ಒಪ್ಪಿಕೊಳ್ಳುತ್ತಿವೆ. ಧರ್ಮದ ಮೂಲ ಆಶಯ ಕಾಯಕವಾಗಿದೆ’ ಎಂದು ತಿಳಿಸಿದರು.‘ಸ್ವಾಮೀಜಿಗಳ ಕಾಯಕ ಧರ್ಮ ಜಾಗೃತಿ. ರಾಜ್ಯದಲ್ಲಿನ ಮಠಾಧೀಶರು ಧರ್ಮ ಜಾಗೃತಿ ಅಭಿಯಾನ ಮಾಡದೇ ಹೋದರೆ ಮುಂದೊಂದು ದಿನ ನಾಡಿನ ಸದ್ಭಕ್ತರೇ ಸ್ವಾಮೀಜಿಗಳಿಗೆ ಧರ್ಮ ಬೋಧನೆ ಮಾಡುವ ಕಾಲ ಎದುರಾಗಬಹುದು’ ಎಂದು ಬಸವರಾಜ ಆತಂಕ ವ್ಯಕ್ತಪಡಿಸಿದರು.ಶರಣ ಗಂಗಾಧರ ಕಟ್ಟಿ ಅವರೂ ಮಾತನಾಡಿದರು. ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಬಸವಧ್ವಜಾರೋಹಣ ನೆರವೇರಿಸಿದರು.ಶರಣೆ ಸುನಿತಾ ಜೋಡಳ್ಳಿ, ಸುಜಾತಾ ಬಾದಾಮಿ, ರಾಜೇಶ್ವರಿ ಕಟ್ಟೀಮನಿ, ಶರಣರಾದ ಅಶೋಕ ಅಳ್ನಾವರ, ಜಗದೀಶ ಕಂಬಾರಗಣವಿ, ಸುಧೀರ ವಾಲಿ, ಯಲ್ಲಪ್ಪ ಪರಮ್ಮನವರ ಮತ್ತು ಹುಬ್ಬಳ್ಳಿ, ಬೈಲಹೊಂಗಲ, ದೇಮಟ್ಟಿ, ತಿಮ್ಮಾಪುರ, ಮಲ್ಲಾಪುರ, ಅವರಾದಿ, ಗಿರಿಯಾಲ ಗ್ರಾಮಗಳಿಂದ ಆಗಮಿಸಿದ್ದ ಶರಣರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry