ಭಜರಂಗಿಗೆ ಬಹುಪರಾಕ್‌

7

ಭಜರಂಗಿಗೆ ಬಹುಪರಾಕ್‌

Published:
Updated:
ಭಜರಂಗಿಗೆ ಬಹುಪರಾಕ್‌

ಟ ಶಿವರಾಜ್ ಕುಮಾರ್‌ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ. ಕಿವಿಗಡಚಿಕ್ಕುವಂತೆ ಶಿಳ್ಳೆ. ಹ್ಯಾಟ್ರಿಕ್‌ ಹೀರೊನನ್ನು ಕಾಣಲು ತ್ರಿವೇಣಿ ಚಿತ್ರಮಂದಿರ ಆಸುಪಾಸು ರಸ್ತೆಗಳಲ್ಲಿ ಹಾಯ್ದು ಹೋಗುತ್ತಿದ್ದ ಜನರೂ ಶಿವಣ್ಣನಿಗೆ ಜೈ ,ಭಜರಂಗಿಗೆ ಜೈ ಬಹುಪರಾಕ್‌ ಹೇಳುತ್ತ ಚಿತ್ರಮಂದಿರ ತುಂಬಿದ್ದರು.ಶಿವರಾಜ್‌ಕುಮಾರ್‌ರ ಅದ್ದೂರಿ ಚಿತ್ರ ‘ಭಜರಂಗಿ’ಯ ಟ್ರೇಲರ್‌ ತ್ರಿವೇಣಿ ಚಿತ್ರಮಂದಿರಲ್ಲಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿಯೇ ಬಿಡುಗಡೆಯಾಗಿದೆ. ಲಾಂಗು, ಮಚ್ಚುಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ರೌಡಿಯಂತೆ ಬಡಿದಾಡಿದ್ದ ಹ್ಯಾಟ್ರಿಕ್‌ ಹೀರೊ ಹೊಸ ವೇಷತೊಟ್ಟು ಆಖಾಡಲ್ಲಿ ಕತ್ತಿ ಝಳಪಿಸಿದ್ದಾರೆ. ವೇಷಭೂಷಣಗಳು ಮತ್ತು ವೈಭವದ ಸೆಟ್‌ ಅದ್ದೂರಿತನಕ್ಕೆ ಸಾಕ್ಷಿ. ಎಲ್ಲ ದೃಶ್ಯಗಳು ರಂಗು ರಂಗಾಗಿಯೇ ಮೈದಳೆದಿವೆ.‘ಭಜರಂಗಿ’ ಕೇವಲ ಕತ್ತಿ ಝಳಪಿಸುವ ಕಥಾನಕವಲ್ಲ ಎನ್ನುವುದನ್ನು ಹೇಳಲು ಐಂದ್ರಿತಾ ಮತ್ತು ನಾಯಕನ ಮಾತುಕತೆ ಟ್ರೇಲರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ‘ಭಜರಂಗಿ’ಗಾಗಿ ಶಿವರಾಜ್‌ ಕುಮಾರ್‌ ಸಿಕ್ಸ್‌ಪ್ಯಾಕ್‌ ಕಸರತ್ತು ನಡೆಸಿದ್ದು ಗೋಚರವಾಗುತ್ತದೆ. ಸಿಕ್ಸ್‌ಪ್ಯಾಕ್‌ ದೇಹವನ್ನು ಬಂಧಿಸಲು ಖಳನಾಯಕರು ನಡೆಸುವ ಕಸರತ್ತು, ಅದಕ್ಕೆ ನಾಯಕ ಮುಷ್ಟಿ ಹುರಿಗಟ್ಟಿಸಿಕೊಡುವ ಪಂಚ್‌, ಅದ್ದೂರಿತನದ ಸೆಟ್‌ಗಳಲ್ಲಿ ಕಾಣುವ ದೇಸಿ ಸೊಗಡು ಚೆನ್ನಾಗಿಯೇ ಚಿತ್ರಿತವಾಗಿದೆ. ಟ್ರೇಲರ್‌ನಲ್ಲಿ ಕಾಣಿಸುವ ಪಾತ್ರಗಳೂ ದೇಸಿತನವನ್ನು ಹೊದ್ದಂತಿವೆ.   ‘ಭಜರಂಗಿ’ ಟ್ರೇಲರ್‌ಅನ್ನು ಜನರಿಗೆ ತಲುಪಿಸಿದ ಖುಷಿಯಲ್ಲಿದ್ದ ಹ್ಯಾಟ್ರಿಕ್‌ ಹೀರೊ ಮಾತನಾಡಿದ್ದು ಕಡಿಮೆ. ಚಿತ್ರ ಚೆನ್ನಾಗಿ ಮೂಡಿದೆ ಎಂದಷ್ಟೇ ಹೇಳಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಲಿಲ್ಲ. ‘ಬಾಲ್ಯದಿಂದಲೂ ಶಿವರಾಜ್‌ ಕುಮಾರ್‌ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಮತ್ತು ಚಿತ್ರ ನೋಡುತ್ತ ಬೆಳೆದವನು ನಾನು. ‘ಭಜರಂಗಿ’ ಚಿತ್ರರಂಗದಲ್ಲಿ ಹೊಸ ರೀತಿಯ ಓಂಕಾರಕ್ಕೆ ಮುನ್ನಡಿಯಾಗಲಿದೆ’ ಎಂದವರು ನಟ ಯಶ್‌.ನಟ ಧ್ರುವ ಸರ್ಜಾ, ಶಿವರಾಜ್‌ ಕುಮಾರ್‌ರ ಸಿಕ್ಸ್‌ಪ್ಯಾಕ್‌ ಕಸರತ್ತಿನ ಗುಣಗಾನ ಮಾಡಿ ತಾವು ಕಸರತ್ತು ಮಾಡಲು ಸಿದ್ಧತೆ ನಡೆಸಿರುವುದಾಗಿ ಹೇಳಿದರು. ನಿರ್ದೇಶಕ ಹರ್ಷ, ನಟಿ ಐಂದ್ರಿತಾ ರೇ ಮತ್ತಿತರರು ‘ಭಜರಂಗಿ’ಗೆ ಬಹುಪರಾಕ್‌ ಎನ್ನುವ ಅಭಿಮಾನಿಗಳ ಮಾತಿಗೆ ಧ್ವನಿಗೂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry