ಶುಕ್ರವಾರ, ಜೂನ್ 18, 2021
27 °C

ಭಟ್ಕಳದಲ್ಲಿ ಶಸ್ತ್ರಾಸ್ತ್ರ ಗೋದಾಮು ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ಭಟ್ಕಳದಲ್ಲಿ ಆರ್.ಡಿ.ಎಕ್ಸ್ ಹಾಗೂ ಭಾರಿ ಪ್ರಮಾಣದ ಶಸ್ತಾಸ್ತ್ರಗಳ ಸಂಗ್ರಹವಿರುವ ಗೋದಾಮೊಂದಿದೆ ಎಂಬ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಸಂಪೂರ್ಣ ಅಲ್ಲಗಳೆದಿದ್ದಾರೆ.ಶಸ್ತ್ರಾಸ್ತ್ರ ಸಂಗ್ರಹ ಮಾಡಿಡಲು ಅದೇನು ಗೊಬ್ಬರವನ್ನು ಗೋದಾಮಿನಲ್ಲಿ  ದಾಸ್ತಾನು ಮಾಡಿದಂತೆಯೇ ಎಂದು ಅವರು ಪ್ರಶ್ನಿಸಿದ್ದಾರೆ.`ಭಟ್ಕಳದಲ್ಲಿ ಶಸ್ತಾಸ್ತ್ರಗಳ ಸಂಗ್ರಹಾಗಾರವಿದೆ, ಅದನ್ನು ಬೇರೆಡೆಗೆ ಸಾಗಿಸಲು ಸಾಧ್ಯವಾಗದೆ ಅಲ್ಲಿಯೇ ನೆಲಮಾಳಿಗೆಯ ಮನೆಯೊಂದರಲ್ಲಿ ಇಡಲಾಗಿದೆ~ ಎಂದು ಕೇರಳದಲ್ಲಿ ಬಂಧಿತನಾದ ನಾಸಿರ್ ಎಂಬ ವ್ಯಕ್ತಿಯು ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಎರಡು ದಿನಗಳಿಂದ ಈ ಸುದ್ದಿ ಹರಿದಾಡುತ್ತಿದೆ.ಈ ಹಿನ್ನೆಲೆಯಲ್ಲಿ ಎಸ್ಪಿ ಅವರನ್ನು `ಪ್ರಜಾವಾಣಿ~ ಪ್ರತಿನಿಧಿ ಸಂಪರ್ಕಿಸಿದಾಗ `ನಮಗೆ ತಿಳಿದಂತೆ ಇಡೀ ಉ.ಕ. ಜಿಲ್ಲೆಯ ಪೊಲೀಸ್ ಇಲಾಖೆಗೆ, ಕೇಂದ್ರ ಗುಪ್ತಚರ ಇಲಾಖೆ ಸೇರಿದಂತೆ ನಮ್ಮ ಅಡಿಯಲ್ಲಿ ಬರುವ ಹಲವು ಇಲಾಖೆಗಳಿಗೆ ಈ ಬಗ್ಗೆ ಈವರೆಗೆ ಯಾವುದೇ ಮಾಹಿತಿಯಿಲ್ಲ. ನಾನೂ ಸಹ ಹಲವು ಬಾರಿ ಭಟ್ಕಳಕ್ಕೆ ಹೋಗಿದ್ದೇನೆ. ಅಂಥಹ ಯಾವುದೇ ಸುಳಿವಾಗಲಿ, ಭಯೋತ್ಪಾದಕ ಚಟುವಟಿಕೆಗಳಾಗಲಿ ಕಂಡುಬಂದಿಲ್ಲ. ಗುಪ್ತಚರ ಇಲಾಖೆಯೂ ಸಹ ಇದನ್ನು ಅಲ್ಲಗಳೆದಿದೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.ಇದು ಆಧಾರ ರಹಿತವಾದ ಮಾಹಿತಿಯಾಗಿದೆ ಮತ್ತು ಊಹಾಪೋಹದ, ಕಪೋಲಕಲ್ಪಿತ ಎಂದು ಸಹ ಹೇಳಬಹುದು. ಭಟ್ಕಳದ ಕುರಿತಾಗಿ ಈ ಹಿಂದೆಯೂ ಹಲವು ಊಹಾಪೋಹ ಮತ್ತು ಗಾಳಿ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಅಂಥಹ ಸುದ್ದಿಗಳ ಸಾಲಿಗೆ ಇದೂ ಸೇರಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇಲ್ಲಿನ ಡಿ.ಎಸ್.ಪಿ. ನಾರಾಯಣ ಸಹ ಇದನ್ನು ಅಲ್ಲಗಳೆದಿದ್ದಾರೆ. ನಮ್ಮ ಇಲಾಖೆ ಆಗಾಗ ಇಂತಹ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುತ್ತದೆ. ಆದರೆ ಭಟ್ಕಳದಲ್ಲಿ ಶಸ್ತಾಸ್ತ್ರಗಳ ಸಂಗ್ರಹಾಗಾರವಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ ಎಂದರು.ಅದು ಇರುವ ಬಗ್ಗೆ ಅಧಿಕೃತ ಮಾಹಿತಿಯುಳ್ಳವರು ದಾಖಲೆ ಸಮೇತ ಇಲಾಖೆಯ ಗಮನಕ್ಕೆ ತರುವಂತೆಯೂ ಅವರು ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.