ಭಟ್ಕಳ್ ಇನ್ನೂ ಒಂದುವಾರ ಎನ್ ಐ ಎ ವಶಕ್ಕೆ

7

ಭಟ್ಕಳ್ ಇನ್ನೂ ಒಂದುವಾರ ಎನ್ ಐ ಎ ವಶಕ್ಕೆ

Published:
Updated:

ನವದೆಹಲಿ (ಪಿಟಿಐ) : ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಸಹಸಂಸ್ಥಾಪಕ ಯಾಸಿನ್ ಭಟ್ಕಳ್ ಮತ್ತು ಆತನ ಆಪ್ತ ಅಸದುಲ್ಲಾ ಅಖ್ತರ್ ನನ್ನು ದೆಹಲಿ ನ್ಯಾಯಾಲಯವು ಇನ್ನೂ ಒಂದು ವಾರ ಕಾಲ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ) ವಶಕ್ಕೆ ಒಪ್ಪಿಸಿದೆ.

ಮುಂಬೈ ಮತ್ತು ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಎನ್‌ಐಎ ವಿಚಾರಣಾ ಅವಧಿ ಮುಗಿದಿದ್ದರಿಂದ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಇನ್ನಷ್ಟು ಕಾಲ ವಿಚಾರಣೆಗಾಗಿ ತನ್ನ ವಶಕ್ಕೆ ಒಪ್ಪಿಸುವಂತೆ ಎನ್ ಐ ಎ ಕೋರಿತ್ತು. ಈ ವೇಳೆ  ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಐ ಎಸ್ ಮೆಹ್ತಾ ಅವರು ಆರೋಪಿಗಳನ್ನು ಸೆ. 17ರವರೆಗೆ ಎನ್ ಐ ಎ ವಶಕ್ಕೆ ಒಪ್ಪಿಸಿದರು.

ಇದೇ ವೇಳೆ ಹೆಚ್ಚಿನ ತನಿಖೆಗಾಗಿ ಆರೋಪಿಗಳ ಡಿಎನ್‌ಎ ಮಾದರಿ ಮತ್ತು ಕೈಬರಹಗಳನ್ನು ಪಡೆಯಲು ತನಿಖಾ ಸಂಸ್ಥೆ ಸಲ್ಲಿಸಿದ ಪ್ರತ್ಯೇಕ ಅರ್ಜಿಗೆ ಕೋರ್ಟ್ ಸಮ್ಮತಿಸಿತು.

ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿದ್ದವರ ಜತೆ ಸಂಪರ್ಕದಲ್ಲಿರಲು ಭಟ್ಕಳ್ ಮತ್ತು ಅಖ್ತರ್ ಸಾಕಷ್ಟು ಇ- ಮೇಲ್ ಮತ್ತು ಚಾಟ್ ಬಳಸಿಕೊಂಡಿದ್ದಾರೆ. ಎಲ್ಲಾ ಮಾತುಕತೆಗಳೂ ಸಂಕೇತದ ರೂಪದಲ್ಲಿದ್ದು ಅವುಗಳನ್ನು ಕಂಡುಹಿಡಿಯಲು ಹೆಚ್ಚಿನ ಕಾಲಾವಕಾಶ ಬೇಕಿದೆ. ಹೀಗಾಗಿ ಆರೋಪಿಗಳನ್ನು ಇನ್ನೂ 15 ದಿನಗಳ ಅವಧಿಗೆ ತನ್ನ ವಶಕ್ಕೆ ಒಪ್ಪಿಸುವಂತೆ ಎನ್‌ಐಎ ಕೋರಿತ್ತು.

ಆದರೆ ಎನ್‌ಐಎ ಆರೋಪಗಳು 'ಸ್ವಯಂ ಸೃಷ್ಠಿ' ಎಂದು ಆರೋಪಿಗಳ ಪರ ವಕೀಲರು ದೂರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅಂತಿಮವಾಗಿ ಆರೋಪಿಗಳ ಬಂಧನ ಅವಧಿಯನ್ನು ಏಳು ದಿನಗಳ ವರೆಗೆ ವಿಸ್ತರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry