ಶುಕ್ರವಾರ, ಮೇ 14, 2021
23 °C

ಭಟ್ಕಳ, ಹೊನ್ನಾವರ, ಕುಮಟಾದಲ್ಲಿ ದಾಖಲೆ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮಂಗಳವಾರ ಗಾಳಿ, ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿತು. ಬಾನುತುಂಬ ಮೋಡ ಕವಿದಿದ್ದರಿಂದ ಮಂಗಾರು ಆರಂಭವಾದ ನಂತರ ಇದೇ ಮೊದಲ ಬಾರಿಗೆ ಸೂರ್ಯನ ಕಿರಣಗಳು ಭೂವಿಯನ್ನು ಸ್ಪರ್ಶಿಸದಂತಾಯಿತು.ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ಮತ್ತು ಗುಂಡಬಾಳ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ನದಿಗಳು ಉಕ್ಕುವ ಸಾಧ್ಯತೆ ಇದೆ.ಬಿರುಸಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ-17ರಲ್ಲಿ ವಾಹನಗಳು ಹೆಡ್‌ಲೈಟ್ ಹಾಕಿಕೊಂಡು ಸಂಚಾರ ಮಾಡಿದವು. ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳು ಒಂದರಿಂದ ಎರಡು ಗಂಟೆ ತಡವಾಗಿ ಸಂಚರಿಸುತ್ತಿವೆ.ಮಂಗಳವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡು ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 66.5 ಸೆಂ.ಮೀ ಮಳೆಯಾಗಿದೆ. ಅಂಕೋಲಾ- 90, ಭಟ್ಕಳ 155.8, ಹಳಿಯಾಳ 4.8, ಹೊನ್ನಾವರ 103.9, ಕಾರವಾರ 73.4, ಕುಮಟಾ 138.3, ಮುಂಡಗೋಡ 8, ಸಿದ್ದಾಪುರ 69.4, ಶಿರಸಿ 37, ಜೋಯಿಡಾ 25 ಹಾಗೂ ಯಲ್ಲಾಪುರ 25.4 ಮಿ.ಮೀ ಮಳೆಯಾಗಿದೆ. ಜೂನ್ 1 ರಿಂದ 18ರ ವರೆಗೆ ಸರಾಸರಿ 481.6 ಮಿ.ಮೀ ಮಳೆಯಾಗಿದೆ.ಮತ್ತೆ ಮೂರು ಮನೆಗಳಿಗೆ ಹಾನಿ

ಭಟ್ಕಳ: ತಾಲ್ಲೂಕಿನಲ್ಲಿ ಮಂಗಳವಾರವೂ ಜಿಟಿಜಿಟಿ ಮಳೆ ಮುಂದುವರಿದಿದ್ದು, ಮತ್ತೆ ಮೂರು ಮನೆಗಳಿಗೆ ಹಾನಿಯಾಗಿದೆ.ಜಾಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾಲಿಕೋಡಿಯಲ್ಲಿ ಮಾಸ್ತಮ್ಮ ಮಾದೇವ ನಾಯ್ಕ ಎಂಬವರ ಮನೆಯ ಮೇಲ್ಛಾವಣಿಯ ಹೆಂಚು, ರೀಪುಗಳು ಗಾಳಿ ಮಳೆಗೆ ಹಾರಿ ಹೋಗಿ ಸುಮಾರು 12 ಸಾವಿರ ರೂಪಾಯಿ ಹಾನಿಯನ್ನು ಅಂದಾಜಿಸಲಾಗಿದೆ. ಇದೇ ಗ್ರಾ.ಪಂ ವ್ಯಾಪ್ತಿಯ ತಗ್ಗರ್‌ಗೋಡ್‌ನಲ್ಲಿ ಅಬ್ದುಲ್ ಅಜೀಜ್ ಎಂಬವರ ಮನೆಯ ಮೇಲ್ಛಾವಣಿಯ ಹೆಂಚು, ತಗಡಿನ ಶೀಟ್‌ಗಳು ಹಾರಿಹೋಗಿ ಸಾವಿರಾರು ರೂಪಾಯಿ ಹಾನಿಯಾಗಿದೆ.ಬೇಂಗ್ರೆ ಪಂಚಾಯ್ತಿ ವ್ಯಾಪ್ತಿಯ ಬೈರ ಸುಕ್ರಯ್ಯ ದೇವಾಡಿಗ ಎಂಬವರ ಮನೆಯ ಮೇಲೆ ಸೋಮವಾರ ರಾತ್ರಿ ಗಾಳಿ ಮಳೆಗೆ ಮರವೊಂದು ಬಿದ್ದು ಮನೆ ಭಾಗಶಃ ಕುಸಿದುಬಿದ್ದು ಸುಮಾರು 25 ಸಾವಿರ ರೂಪಾಯಿ ಹಾನಿಯಾಗಿದೆ. ಕಂದಾಯ ಹಾಗೂ ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ಹಾನಿಯಾದ ಮನೆಗಳು ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾಲ್ಲೂಕಿನಲ್ಲಿ ಸೋಮವಾರದಿಂದ ಮಂಗಳವಾರ ಬೆಳಿಗ್ಗೆ 8ಗಂಟೆವರೆಗೆ 155.80 ಮಿ.ಮೀ ಮಳೆಯಾಗಿದೆ. ಈವರೆಗೆ ಒಟ್ಟು 896.2 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಇದೇ ವೇಳೆಗೆ ಹೋಲಿಸಿದರೆ ಸುಮಾರು 704 ಮಿ.ಮೀ ಮಳೆ ಹೆಚ್ಚು ಬಿದ್ದಿದೆ ಎನ್ನಲಾಗಿದೆ.ಮನೆ ಮೇಲೆ ಬಿದ್ದ ಕಲ್ಪವೃಕ್ಷ

ಅಂಕೋಲಾ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಬೀಸಿದ ಗಾಳಿಯಿಂದಾಗಿ ಇಲ್ಲಿಯ ಬೆಳಂಬಾರದ ಮಧ್ಯಖಾರ್ವಿವಾಡದಲ್ಲಿ ಮನೆ ಎದುರಿಗಿನ ತೆಂಗಿನ ಮರವೊಂದು ಮುರಿದು ಮನೆಯ ಮೇಲೆ ಬ್ದ್ದಿದು ಮನೆ ಹಾನಿಗೊಳಗಾಗಿದೆ.ಘಟನೆಯಲ್ಲಿ  ಮನೆಯ ಯಜಮಾನ ನಾಗೇಶ ಗೋವಿಂದ ಖಾರ್ವಿ ಇವರ ಕೈಗೆ ಗಾಯವಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಅಮರ ನಾಯ್ಕ, ಗ್ರಾ.ಪಂ. ಅಧ್ಯಕ್ಷ ದಿಗಂಬರ ಖಾರ್ವಿ ಭೇಟಿ ಪರಿಶೀಲನೆ ನಡೆಸಿದರು.ತುಂಬಿ ಹರಿದ ಹಳ್ಳ-ಕೊಳ್ಳ

ಸಿದ್ದಾಪುರ: ತಾಲ್ಲೂಕಿನಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಮಳೆಯ ರಭಸ  ಕಡಿಮೆಯಾಗಿದ್ದು, ಮೋಡ ಕವಿದ ವಾತಾವರಣ ಕಂಡುಬಂದಿದೆ.ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದ  ಬಹುತೇಕ ಹೊಳೆ-ಹಳ್ಳಗಳು ಜೀವಂತಿಕೆಯಿಂದ ನಳನಳಿಸತೊಡಗಿವೆ. ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ ಮಂಗಳವಾರ ಬೆಳಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ 69.4 ಮಿ.ಮೀ.ಮಳೆ ದಾಖಲಾಗಿದೆ. ಇದುವರೆಗೆ ಒಟ್ಟು 504.2 ಮಿ.ಮೀ. ಮಳೆ ದಾಖಲಾಗಿದ್ದು, ಕಳೆದ ವರ್ಷ ಇದೇ ಅವಧಿಯವರೆಗೆ ಕೇವಲ 238.2 ಮಿ.ಮೀ. ಮಳೆ ಸುರಿದಿತ್ತು.ಕಳೆದ ವರ್ಷಕ್ಕೆ ಹೋಲಿಸಿದರೆ ಪಟ್ಟಣದಲ್ಲಿ ಈ ವರ್ಷ ಈವರೆಗೆ  ದುಪ್ಪಟ್ಟು ಮಳೆ ಸುರಿದಂತಾಗಿದೆ. ಈ ಮಧ್ಯೆ ತಾಲ್ಲೂಕಿನ ಗ್ರಾಮೀಣ ಮಳೆ ಮಾಪನ ಕೇಂದ್ರಗಳಲ್ಲಿ ಪಟ್ಟಣಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ. `ಮಳೆ ನಾಡು' ಎಂದೇ ಪರಿಗಣಿಸಲ್ಪಡುವ ನಿಲ್ಕುಂದದಲ್ಲಿ ಮಂಗಳವಾರದವರೆಗೆ ಒಟ್ಟು 1015 ಮಿ.ಮೀ. ಮಳೆ ಸುರಿದಿದ್ದರೆ, ಹಲಗೇರಿಯಲ್ಲಿ 621 ಮಿ.ಮೀ. ಅರೆಂದೂರಿನಲ್ಲಿ 579 ಮಿ.ಮೀ. ಮತ್ತು ತ್ಯಾಗಲಿಯಲ್ಲಿ 558 ಮಿ.ಮೀ. ಮಳೆ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.