ಸೋಮವಾರ, ಮಾರ್ಚ್ 27, 2023
24 °C

ಭಟ್ಟರ ಗರಡಿಯಲ್ಲಿ ವೈಶಾಲಿ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಭಟ್ಟರ ಗರಡಿಯಲ್ಲಿ ವೈಶಾಲಿ

‘ಶಿವಲಿಂಗ’ ಚಿತ್ರದ ಯಶಸ್ಸಿನ ಪುಳಕದಲ್ಲಿರುವ ನಟಿ ವೈಶಾಲಿ ದೀಪಕ್‌ ಈಗ ಯೋಗರಾಜ್‌ ಭಟ್‌ ನಿರ್ದೇಶನದ ಹೊಸ ಸಿನಿಮಾ ‘ನನ್ನ ಹೆಸರೇ ಅನುರಾಗಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವೈಶಾಲಿ ಅವರ ವ್ಯಕ್ತಿತ್ವಕ್ಕೆ ಹತ್ತಿರವಿರುವಂತಹ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ.



ಭಟ್ಟರ ಸಿನಿಮಾ ಶೈಲಿಯನ್ನು ಮೆಚ್ಚುವ ವೈಶಾಲಿಗೆ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕು ಎಂಬುದು ಬಹುದಿನದ ಕನಸು. ಅವರ ಕನಸು ಈಗ ನಿಜವಾಗಿದೆ. ಈ ಹೊತ್ತಿನಲ್ಲಿ ಅವರು ‘ಮೆಟ್ರೊ’ ಜೊತೆ ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.



‘‘ನನ್ನ ಹೆಸರೇ ಅನುರಾಗಿ’ ಸಿನಿಮಾ ಶೀರ್ಷಿಕೆಯಲ್ಲೇ ಒಂದು ಸೆಳೆತವಿದೆ. ಈ ಚಿತ್ರದ ಪಾತ್ರಗಳೂ ಅಷ್ಟೇ; ಪ್ರೇಕ್ಷಕರ ಮನಸ್ಸನ್ನು ಕಾಡುವ ಗುಣ ಹೊಂದಿವೆ. ಈ ಸಿನಿಮಾದಲ್ಲಿ ನಾನು ಬೋಲ್ಡ್‌ ಹುಡುಗಿಯ ಪಾತ್ರ ನಿರ್ವಹಿಸಿದ್ದೇನೆ. ಈ ಹಿಂದೆ ನಾನು ಬಣ್ಣ ಹಚ್ಚಿದ ಎಲ್ಲ ಪಾತ್ರಕ್ಕಿಂತಲೂ ಇದು ಭಿನ್ನವಾಗಿದೆ. ತುಂಬು ಆತ್ಮವಿಶ್ವಾಸ, ಹೈ ಎನರ್ಜಿ ಇರುವಂತಹ ಪಾತ್ರ ಅದು. ನಿಜ ಹೇಳಬೇಕು ಅಂದರೆ, ಈ ಸಿನಿಮಾದ ಪಾತ್ರಕ್ಕೂ ನನ್ನ ವ್ಯಕ್ತಿತ್ವಕ್ಕೂ ನೇರಾನೇರ ಸಂಬಂಧವಿದೆ.



ಹಾಗಾಗಿ ಈ ಪಾತ್ರವನ್ನು ತುಂಬ ಸುಲಭವಾಗಿ, ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲೇ ಎಂಬ ವಿಶ್ವಾಸ ನನಗಿದೆ. ಮಾಡ್‌ ಕಾಲೇಜು ಹುಡುಗಿಯ ಆ್ಯಟಿಟ್ಯೂಡ್‌, ಮ್ಯಾನರಿಸಂ ಹೇಗಿರುತ್ತದೆ ಎಂಬುದನ್ನು ತಿಳಿದು ಅದನ್ನು ಅಳವಡಿಸಿಕೊಳ್ಳುತ್ತಿದ್ದೇನೆ. ಉಳಿದಂತೆ ಹೆಚ್ಚಿನ ತಯಾರಿಯನ್ನೇನು ನಡೆಸಿಲ್ಲ. ಈ ಸಿನಿಮಾದ ಚಿತ್ರೀಕರಣ ಸದ್ಯದಲ್ಲೇ ಆರಂಭಗೊಳ್ಳಲಿದೆ’ ಎಂದು ತಮ್ಮ ಪಾತ್ರ ಹಾಗೂ ಅದರ ತಯಾರಿ ಕುರಿತು ಹೇಳಿಕೊಳ್ಳುತ್ತಾರೆ ವೈಶಾಲಿ.



ಮೊದಲ ಬಾರಿ ಭಟ್ಟರ ಚಿತ್ರತಂಡ ಸೇರಿರುವ ವೈಶಾಲಿ ಆ ಬಗ್ಗೆ ತುಂಬ ಖುಷಿಯಿಂದ ಹೇಳಿಕೊಳ್ಳುತ್ತಾರೆ. ‘ಯೋಗರಾಜ್‌ ಭಟ್‌ ಸರ್‌ ಅದ್ಭುತ ವ್ಯಕ್ತಿ. ಅವರ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಾಗ ತುಂಬ ಖುಷಿ ಪಟ್ಟಿದ್ದೇನೆ. ನನಗೆ ಅವರ ವರ್ಕಿಂಗ್‌ ಸ್ಟೈಲ್‌ ಇಷ್ಟ’ ಎಂದು ಭಟ್ಟರ ಕೆಲಸದ ಶೈಲಿಯನ್ನು ಮೆಚ್ಚಿಕೊಳ್ಳುತ್ತಾರೆ ವೈಶಾಲಿ.



‘ನನ್ನ ಹೆಸರೇ ಅನುರಾಗಿ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಗೆ ವೈಶಾಲಿ ಉತ್ತರಿಸಿದ್ದು ಹೀಗೆ: ‘ಯೋಗರಾಜ್‌ ಭಟ್‌ ಅವರ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ತುಂಬ ದಿನಗಳ ಹಿಂದೆ ನಾನು ಸಿನಿಮಾ ಆಡಿಷನ್‌ ಒಂದರಲ್ಲಿ ಅವರನ್ನು ಭೇಟಿ ಮಾಡಿದ್ದೆ.



ಆಡಿಷನ್‌ನಲ್ಲಿ ನನ್ನ ಅಭಿನಯ ಕೌಶಲವನ್ನು ಭಟ್ಟರು ಮೆಚ್ಚಿದ್ದರು. ಆದಾದ ತುಂಬ ದಿನಗಳ ನಂತರ ಈ ಸಿನಿಮಾದ ಆಡಿಷನ್‌ನಲ್ಲಿ ಪಾಲ್ಗೊಂಡಿದ್ದೆ. ಹಿಂದೆ ನಡೆದ ಆಡಿಷನ್‌ನಲ್ಲಿ ನಾನು ಭಾಗವಹಿಸಿದ್ದನ್ನು ಅವರು ನೆನಪಿನಲ್ಲಿಟ್ಟುಕೊಂಡಿದ್ದರು. ಯಾವ ಕಲಾವಿದ ಯಾವ ಪಾತ್ರಕ್ಕೆ ಹೊಂದುತ್ತಾನೆ, ಅವರಿಂದ ಅಭಿನಯವನ್ನು ಹೇಗೆ ಹೊರತೆಗೆಯಬೇಕು ಎಂಬ ಕಲೆ ಅವರಿಗೆ ಚೆನ್ನಾಗಿ ಕರಗತವಾಗಿದೆ. ಈ ಸಿನಿಮಾದಲ್ಲಿ ಮಾಡ್‌ ಹುಡುಗಿಯ ಪಾತ್ರಕ್ಕೆ ನಾನು ಹೊಂದುತ್ತೇನೆ ಎಂದು ಅನಿಸಿದ್ದರಿಂದಲೇ ಅವಕಾಶ ಸಿಕ್ಕಿತು’.



ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ವೈಶಾಲಿಗೆ ಮಲ್ಟಿಸ್ಟಾರ್‌ ಚಿತ್ರಗಳಲ್ಲಿ ನಟಿಸುವ ಕುರಿತಂತೆ ಯಾವುದೇ ತಕರಾರು ಇಲ್ಲ. 



‘ಒಬ್ಬ ನಟಿ ನಿರ್ವಹಿಸುವ ಪಾತ್ರ ಪುಟ್ಟದಾಗಿದ್ದರೂ, ಅದು ಪರಿಣಾಮಕಾರಿಯಾಗಿರಬೇಕು ಎಂಬುದು ನನ್ನ ನಿಲುವು.  ಯಾವುದೇ ಕಲಾವಿದನಾದರೂ ನಟಿಸುವಾಗ ಸ್ಟ್ರಿಪ್ಟ್‌ಗೆ ಅನುಗುಣವಾಗಿಯೇ ಅಭಿನಯಿಸಬೇಕು. ನಮ್ಮ ಅಭಿನಯ ಕಥೆ ಬೇಡುವ ಭಾವತೀವ್ರತೆಯನ್ನು ಮುಟ್ಟುವಂತಿರಬೇಕು. ಅಂತಹ ಪಾತ್ರ ಮಾಡುವ ಅವಕಾಶ ಸಿಕ್ಕರೆ ನನಗೆ ಬೇರೆ ಇನ್ಯಾವ ಸಂಗತಿಗಳು ಕಾಡುವುದಿಲ್ಲ.



ಒಂದು ಸೀನ್‌ನಲ್ಲಿ ನಾನು ಕೇವಲ ಒಂದು ನಿಮಿಷ ಕಾಣಿಸಿಕೊಂಡರೂ ಅದು  ಪ್ರೇಕ್ಷಕನ ಮನಸ್ಸನ್ನು ಕಾಡುವ ಗುಣ ಹೊಂದಿರಬೇಕು. ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೂ ಮಹತ್ವವಿದೆ. ಮೂವರು ನಾಯಕಿಯರಲ್ಲಿ ಒಬ್ಬಳಾಗಿರುವುದಕ್ಕೆ ನನಗೆ ತುಂಬ ಸಂತೋಷವಿದೆ. ಹಾಗಾಗಿ, ಉತ್ತಮ ಕತೆಯಿದ್ದರೆ ಮಲ್ಟಿಸ್ಟಾರ್‌ ಸಿನಿಮಾಗಳಲ್ಲಿ ನಟಿಸಲು ನಾನು ಸಿದ್ಧ’ ಎನ್ನುವ ವೈಶಾಲಿಗೆ ಈ ಚಿತ್ರದಲ್ಲಿ ಭಟ್ಟರು ಅತ್ಯುತ್ತಮ ಪಾತ್ರವನ್ನೇ ನೀಡಿದ್ದಾರಂತೆ.



ಶಿವರಾಜ್‌ ಕುಮಾರ್‌ ಅಭಿನಯದ ‘ಶಿವಲಿಂಗ’ ಸಿನಿಮಾದಲ್ಲಿ ನಟಿಸಿದ್ದ ವೈಶಾಲಿ, ಈ ಸಿನಿಮಾ ಸೂಪರ್‌ಹಿಟ್‌ ಆಗಿದ್ದಕ್ಕೆ ತುಂಬ ಸಂತೋಷ ವ್ಯಕ್ತಪಡಿಸುತ್ತಾರೆ. ‘‘ಶಿವಣ್ಣ ಅವರಂತಹ ನಟ, ಪಿ. ವಾಸು ಅವರಂತಹ ನಿರ್ದೇಶಕರ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.



‘ಶಿವಲಿಂಗ’ ಸಿನಿಮಾ ಹಿಟ್‌ ಆಯ್ತು. ಈ ಸಿನಿಮಾ ಬಿಡುಗಡೆಯಾಗುವ ಮುನ್ನ ನನಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸುತ್ತದೆ ಎಂದು ನನ್ನ ಒಳಮನಸ್ಸು ನುಡಿದಿತ್ತು. ಅದು ನಿಜವಾಯ್ತು. ಪ್ರೇಕ್ಷಕರ ಮನಗೆದ್ದ ಇಂತಹದ್ದೊಂದು ಅದ್ಭುತ ಚಿತ್ರದಲ್ಲಿ ನಾನು ಪಾಲುದಾರಳಾಗಿದ್ದಕ್ಕೆ ಹೆಮ್ಮೆ ಇದೆ’ ಎಂದು ತಮ್ಮ ತುಟಿಗಳಿಂದ ಸಂತೋಷದ ನಗು ತುಳುಕಿಸುತ್ತಾರೆ ವೈಶಾಲಿ. 

  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.