ಭಟ್ಟರ ತಿಂಡಿಯ ಗಾಡಿ

7
ಬೋರ್ಡ್ ರೂಮಿನ ಸುತ್ತ ಮುತ್ತ

ಭಟ್ಟರ ತಿಂಡಿಯ ಗಾಡಿ

Published:
Updated:
ಭಟ್ಟರ ತಿಂಡಿಯ ಗಾಡಿ

ಸರಿಯಾದ ಬೆಲೆಯೊಂದ ನಿಗದಿ ಪಡಿಸುವ  ಕಲೆಯು/

ಸರಳವೆಂದೆಣಿಸಿ ನೀ ಮೋಸ ಹೋಗದಿರು//

ಸರಕು ಎಂತೇ ಇರಲಿ, ಸೂಕ್ತ ಬೆಲೆ ಕಟ್ಟದಿರೆ/

ಮರುಕ ಪಡುವೆಯೊ ಕಡೆಗೆ -ವನ್ಯಜೀವಿ//

ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನ ದೂರವಾಣಿ ನಗರದಲ್ಲಿ. ಟೆಲಿಫೋನ್ ಕಾರ್ಖಾನೆ ಪಕ್ಕದಲ್ಲೇ ನಮ್ಮ ಕಾಲೊನಿ. ಆ ದಿನಗಳಲ್ಲಿ ಕಾರ್ಖಾನೆಯೂ ಲಾಭದಾಯಕವಾಗಿದ್ದು ಕಾಲೊನಿಯಲ್ಲಿದ್ದ ಸರಿ ಸುಮಾರು ನಾಲ್ಕು ಸಾವಿರ ಕುಟುಂಬಗಳು ನೆಮ್ಮದಿಯ ಜೀವನ ನಡೆಸಿದ್ದವು.ಮೂವತ್ತೆಂಟು ವರ್ಷಗಳ ಹಿಂದಿನ ಮಾತು. ಕಾರ್ಖಾನೆಯ ಮುಖ್ಯದ್ವಾರದ ಹೊರಗೆ ರಸ್ತೆಯಲ್ಲಿ ಇಳಿವಯಸ್ಸಿನ ಭಟ್ಟರೊಬ್ಬರು ತಳ್ಳುವ ಗಾಡಿಯೊಂದರಲ್ಲಿ ವಿಧವಿಧವಾದ ಕರಿದ ತಿಂಡಿಗಳನ್ನು ತಂದು ಮಾರುತ್ತಿದ್ದರು. ಭಟ್ಟರ ಆ `ತಿಂಡಿಯ ಗಾಡಿ' ಕಾಲೊನಿಯಲ್ಲೆಲ್ಲ ಅತ್ಯಂತ ಜನಪ್ರಿಯವಾಗಿತ್ತು. ಗಾಡಿಯಲ್ಲಿದ್ದ ದೊಡ್ಡ ದೊಡ್ಡ ಸ್ಟೀಲ್ ಪಾತ್ರೆಗಳಲ್ಲಿ ದುಂಡಾದ ರುಚಿಕರವಾದ ನಿಪ್ಪಟ್ಟು, ಖಾರದ ಕಡಲೆ ಬೀಜ ಹಾಗೂ ಹೆಸರುಬೇಳೆ, ಕಡ್ಡಿಯ ರೂಪದಿಂದ ಹಿಡಿದು ಮೈಮುದುರಿ ಕುಳಿತ ಲಲನೆಯವರೆಗಿನ ಭಂಗಿಗಳಲ್ಲಿ ಬರುತ್ತಿದ್ದ ಖಾರಾಸೇವೆಯ ಮೂರ‌್ನಾಲ್ಕು ವೈವಿಧ್ಯಗಳು, ಗರಿಗರಿಯಾದ ಕರಿಬೇವಿನ ಸೊಪ್ಪಿನೊಂದಿಗೆ ಕಣ್ಣನ್ನು ತಂಪಾಗಿಸುತ್ತಿದ್ದ ಚೌಚೌ... ಹೀಗೆ ಎಲ್ಲವೂ ಅಲ್ಲಿರುತ್ತಿತ್ತು. ಹಲ್ಲುಗಳಿಲ್ಲದ ಬೊಚ್ಚುಬಾಯಿಯಲ್ಲೇ ವಿಶ್ವ ನಾಚುವಂತಹ ಆತ್ಮೀಯ ನಗುವೊಂದನ್ನು ಬೀರಿ ಭಟ್ಟರು ಗಿರಾಕಿ ಕೇಳಿದ ತಿಂಡಿಯನ್ನು ಕಾಗದವನ್ನು ಮಡಚಿ ಪೊಟ್ಟಣದಲ್ಲಿ ಕಟ್ಟಿಕೊಡುತ್ತಿದ್ದರು. ಅವರ ಅಳತೆಯ ಮೇರೆಯ ಪೊಟ್ಟಣವೊಂದಕ್ಕೆ ಒಂದು ರೂಪಾಯಿ.ಇವೆಲ್ಲದರ ಹೊರತಾಗಿ ಅವರ ಗಾಡಿಯ ವಿಶೇಷತೆಯೆಂದರೆ ಅವರು ಮಾರುತ್ತಿದ್ದ ಚಕ್ಕುಲಿ ಅಥವಾ ಮುರುಕು. ಅದನ್ನವರು ಶುದ್ಧ ತುಪ್ಪದಲ್ಲಿ ಮಾಡುತ್ತಿದ್ದರು. ನಮ್ಮ ಹೆಬ್ಬೆಟ್ಟಿನ ಗಾತ್ರದಷ್ಟು ದಪ್ಪವಿರುತ್ತಿದ್ದ ಚಕ್ಕುಲಿಯ ಕಡ್ಡಿಯೊಂದನ್ನು ಬಾಯಿಗಿಟ್ಟರೆ ಕ್ಷಣಾರ್ಧದಲ್ಲಿ ಕರಗೇ ಹೋಗುತ್ತಿತ್ತು. ಇದು ಮಾತ್ರ ಅವರದೇ ಆದ ಗುಪ್ತ ಪಾಕಸೂತ್ರ! ಇದರ ಪೊಟ್ಟಣಕ್ಕೆ ಮಾತ್ರ ಎರಡು ರೂಪಾಯಿಯ ವಿಶೇಷ ಬೆಲೆ.ಭಟ್ಟರು ತಮ್ಮ ಗಾಡಿಯನ್ನು ದಿನವೂ ಪಕ್ಕದ ಕೃಷ್ಣರಾಜಪುರದಿಂದ ಸುಮಾರು ಮೂರು ಗಂಟೆಯ ಹೊತ್ತಿಗೆ ಕಾರ್ಖಾನೆಯ ಗೇಟಿನ ಹತ್ತಿರ ತರುತ್ತಿದ್ದರು. ನಾಲ್ಕೂಕಾಲು ಹಾಗೂ ಐದೂವರೆಯ ಎರಡು ಶಿಫ್ಟುಗಳು ಮುಗಿದು ಕಾರ್ಮಿಕರು ತಮ್ಮ ಮನೆಗಳಿಗೆ ತಲುಪುವಷ್ಟರಲ್ಲಿ ಭಟ್ಟರ ಗಾಡಿ ಖಾಲಿಯಾಗಿರುತ್ತಿತ್ತು. ಮನೆಗೆ ಅತಿಥಿಗಳು ಬರಲಿದ್ದಾರೆ ಹಾಗೂ ಅವರಿಗಾಗಿ ಏನಾದರೂ ತಿಂಡಿ ತರಬೇಕೆಂಬ ಯೋಚನೆಯೊಂದಿಗೆ ಆರು ಗಂಟೆಗೆ ನಾವಲ್ಲಿ ಬಂದರೆ, ಭಟ್ಟರೂ ಇಲ್ಲ, ಅವರ ಗಾಡಿಯೂ ಇಲ್ಲ. ಅವರ ತಿಂಡಿಗಳ ಘಮ ಮಾತ್ರ ಗಾಳಿಯಲ್ಲಿ ಇನ್ನೂ ಸುಳಿದಾಡುತ್ತ `ನಾನಾರಿಗೂ ಕಾಯುವವನಲ್ಲ' ಎಂದು ಅಣಕಿಸಿಬಿಡುತ್ತಿತ್ತು. ಇದು ಭಟ್ಟರ ತಿಂಡಿಯ ಗಾಡಿಯ ಮಹತ್ವ.ಹೀಗಿರುವಾಗ ಒಂದು ದಿನ ಅವರಂತಹುದೇ ಗಾಡಿಯೊಂದರಲ್ಲಿ ಅವರು ಮಾರುತ್ತಿದ್ದ ತಿಂಡಿಗಳೇ ತುಂಬಿದ ಸ್ಟೀಲ್ ಪಾತ್ರೆಗಳೊಂದಿಗೆ ಕಾಲೊನಿಯಲ್ಲಿದ್ದ ಸರ್ಕಲ್ ಬಳಿ ಹೊಸತಾಗಿ ಬಂದು ವ್ಯಾಪಾರ ಶುರು ಮಾಡಿದ್ದೇ ಕೇರಳ ಮೂಲದ ಕಾಕ. ವಯಸ್ಸಿನಲ್ಲಿ ಭಟ್ಟರಿಗಿಂತ ಬಲು ಚಿಕ್ಕವನಾದರೂ ವ್ಯಾಪಾರದಲ್ಲಿ ನುರಿತವ. ಹಾಗಾಗಿಯೇ ಆತ ತನ್ನ ಗಾಡಿಯನ್ನು ಕಾರ್ಖಾನೆಯ ಮುಂದೆ ಭಟ್ಟರ ಗಾಡಿಯ ಹತ್ತಿರ ನಿಲ್ಲಿಸದೆ ಸೀದಾ ಕಾಲೊನಿಯ ಒಳಕ್ಕೇ ತಂದಿದ್ದ. ಅವನ ಗಾಡಿ ಭಟ್ಟರ ಗಾಡಿಗಿಂತ ಸ್ವಚ್ಛವಿರುತ್ತಿತ್ತು. ಸದಾ ಶುಭ್ರವಾದ ಬಿಳಿಯ ಪಂಚೆ ಹಾಗೂ ಅಂಗಿ ತೊಟ್ಟು ಗಿರಾಕಿಗಳನ್ನು ದೂರದಿಂದಲೇ ಗಮನಿಸಿ ಶುಭ್ರ ನಗೆಯೊಂದನ್ನು ಬೀರುತ್ತಿದ್ದ.ರುಚಿಯಲ್ಲಿ ಕಾಕನ ಚಕ್ಕುಲಿಯನ್ನು ಹೊರತುಪಡಿಸಿದರೆ ಮಿಕ್ಕ ತಿಂಡಿಗಳೆಲ್ಲ ಭಟ್ಟರ ರುಚಿಗೆ ಸವಾಲೆಸೆದು ಸಡ್ಡು ಹೊಡೆದು ನಿಲ್ಲುತ್ತಿದ್ದವು. ಅವನ ತಿಂಡಿಗಳೆಲ್ಲ ಅವನ ಅಳತೆಯ ಮೇರೆಯ ಪೊಟ್ಟಣಕ್ಕೆ ಐವತ್ತು ಪೈಸೆ ಮಾತ್ರ. ಅವನ ಚಕ್ಕುಲಿಯ ಬೆಲೆಯೂ ಅದೇ ಐವತ್ತು ಪೈಸೆ!ಈಗ ಭಟ್ಟರ ತಿಂಡಿಯ ಗಾಡಿಗೆ ಗಿರಾಕಿಗಳ ಸಂಖ್ಯೆ ಸ್ವಲ್ಪ ಕಡಿಮೆಯಾಯಿತು. ಶಿಫ್ಟ್ ಮುಗಿಸಿ ಬಸ್ಸುಗಳಲ್ಲಿ ಸಿಟಿಗೆ ತೆರಳುತ್ತಿದ್ದ ನೌಕರರೆಲ್ಲ ಭಟ್ಟರಲ್ಲೇ ಉಳಿದರೆ ಕಾಲೊನಿಯಲ್ಲಿದ್ದ ಕಾರ್ಮಿಕರಲ್ಲಿ ಬಹುತೇಕರು ಈಗ ಕಾಕನ ಗಿರಾಕಿಗಳಾಗಿ ಅರ್ಧದಷ್ಟು ದುಡ್ಡನ್ನು ಉಳಿಸಿಕೊಳ್ಳುತ್ತಿದ್ದರು. ಅದೂ ಅಲ್ಲದೆ ನಾಲ್ಕರ ಹೊತ್ತಿಗೆ ಸರ್ಕಲ್ ಸೇರುತ್ತಿದ್ದ ಕಾಕ, ಸುಮಾರು ರಾತ್ರಿ ಒಂಬತ್ತರವರೆಗೂ ಇರುತ್ತಿದ್ದ. ಊಟ ಮುಗಿಸಿ ಬಾಯಾಡಿಸುತ್ತಾ ಮಾತಿಗಿಳಿವ ಚಟದವರಿಗೆಲ್ಲ ಈಗ ಕಾಕನ ಗಾಡಿಯೇ ಪರಿಹಾರ.ಇದನ್ನು ಮನಗಂಡ ಭಟ್ಟರು ಆಗ ಮಾಡಿದ್ದೇ ಮಾರಾಟ ವಿಭಾಗದವರೆಲ್ಲರಿಗೂ ಮಾದರಿಯಾದೀತು. ಕಾಕನ ಶುಭ್ರತೆಯನ್ನು ತರಲು ಅವರಿಂದ ಸಾಧ್ಯವಿರಲಿಲ್ಲ. ಗಾಡಿಯನ್ನು ಕಾಲೊನಿಯ ಒಳಕ್ಕೆ ತಂದು ರಾತ್ರಿ ಎರಡನೇ ಆಟದ ಸಿನೆಮಾ ಸಮಯದವರೆಗೂ ನಿಲ್ಲಿಸಿಕೊಳ್ಳುವಷ್ಟು ಚೈತನ್ಯ ಅವರಿಗಿರಲಿಲ್ಲ. ತಮ್ಮ ತಿಂಡಿಗೆ ಬೇರೆಯದೇ ರುಚಿಯನ್ನು ತರುವುದೂ ಆಗದ ಮಾತು.ಹಾಗಾಗಿ ಅವರು ಮೊದಲು ಮಾಡಿದ್ದು ಇಷ್ಟೆ. ಚಕ್ಕುಲಿಯನ್ನು ಹೊರತಾಗಿ ತಮ್ಮ ಎಲ್ಲ ತಿಂಡಿಗಳ ಪೊಟ್ಟಣದ ಅಳತೆಯನ್ನು ಕಾಕನ ಪೊಟ್ಟಣದ ಅಳತೆಗೆ ಇಳಿಸಿ ದರವನ್ನು ರೂಪಾಯಿಯಿಂದ ಐವತ್ತು ಪೈಸೆಗೆ ತಂದರು. ಅಲ್ಲಿಗೆ ಅವರಿಬ್ಬರೂ ಒಂದೇ ಪ್ರಮಾಣದ ಒಂದೇ ಬೆಲೆಯ ಒಂದೇ ಗುಣಮಟ್ಟದ ವಸ್ತುವಿನ ವ್ಯಾಪಾರಿಗಳಾದರು. ಕಾಕನ ಅಳತೆಯಲ್ಲಿ ವ್ಯತ್ಯಾಸವನ್ನು ಗ್ರಹಿಸಿರದ ಜನ, ಭಟ್ಟರು ತಮ್ಮ ಪೊಟ್ಟಣದ ಅಳತೆಯನ್ನು ಕಡಿಮೆ ಮಾಡಿ ದರವನ್ನು ಇಳಿಸಿದ ತಕ್ಷಣವೇ ಕಾಕನ ಮರ್ಮವನ್ನು ಅರಿತುಕೊಂಡರು. ಹಲವಾರು ಮಂದಿ ಕಾಕನನ್ನು ತೊರೆದು ಮತ್ತೆ ಭಟ್ಟರ ಬಳಿ ಹಿಂತಿರುಗಿದರೆಂದರೆ ಉತ್ಪ್ರೇಕ್ಷೆಯಲ್ಲ.ನಂತರದ್ದು ತಮ್ಮ ಚಕ್ಕುಲಿಯ ಬೆಲೆ. ಇದನ್ನು ಮಾತ್ರ ಭಟ್ಟರು ಕಡಿಮೆ ಮಾಡಲೇ ಇಲ್ಲ. ಅದವರ ಟ್ರಂಪ್ ಕಾರ್ಡ್! ಬದಲಾಗಿ ತುಪ್ಪದ ಬೆಲೆ ಏರುತ್ತಿದೆ ಎಂದು ತಮ್ಮ ಗಿರಾಕಿಗಳಿಗೆ ತಿಳಿಸುತ್ತಲೇ ಮೊದಲಿದ್ದ ಪ್ರಮಾಣದಷ್ಟೇ ಚಕ್ಕುಲಿಗೆ ಈಗವರು ಎರಡು ರೂಪಾಯಿ ಇಪ್ಪತ್ತು ಪೈಸೆ ಮಾಡಿದ್ದರು. ಅಂದರೆ ಶೇಖಡಾ ಹತ್ತರಷ್ಟು ಹೆಚ್ಚಳ ಬೆಲೆ. ಅದಕ್ಕಿಂತ ಮಿಗಿಲಾಗಿ, ಕಾಕನ ಚಕ್ಕುಲಿಯಲ್ಲಿ ತುಪ್ಪವಿಲ್ಲ ಎಂಬ ಸತ್ಯವನ್ನು ನಿಶ್ಶಬ್ದವಾಗಿ ಸಾರಿದ್ದರು. ಅವರ ಚಕ್ಕುಲಿಯ ಸವಿಯನ್ನು ಬಲ್ಲ ಯಾರೂ ಕೂಡ ಕಾಕನ ಚಕ್ಕುಲಿ ತಿಂದು `ಹಾಹಾ' ಎಂದುದನ್ನು ನಾನು ಕಂಡಿಲ್ಲ. ಅವರ ಚಕ್ಕುಲಿಗೆಂದೇ ಭಟ್ಟರನ್ನು ಅರಸಿ ಬರುತ್ತಿದ್ದವರು ಈಗ ಕಾಕನ ಬೆಲೆಗೆ ಅವರಲ್ಲಿ ದೊರೆಯುತ್ತಿದ್ದ ಇನ್ನುಳಿದ ತಿಂಡಿಗಳನ್ನೂ ಅಲ್ಲೇ ಕೊಳ್ಳುತ್ತಿದ್ದರು.ಇವಕ್ಕೆಲ್ಲ ಪೂರಕವೆಂಬಂತೆ ಭಟ್ಟರು ತಮ್ಮ ಗಾಡಿಯಲ್ಲಿ ಹೊಸ ಸ್ಟೀಲ್ ಪಾತ್ರೆಯೊಂದನ್ನು ಸ್ಥಾಪಿಸಿ ಅದರಲ್ಲಿ ಗೋಡಂಬಿ, ದ್ರಾಕ್ಷಿಗಳಿಂದ ಕಣ್ಣಿಗೆ ರಂಜನೆ ನೀಡುತ್ತಿದ್ದ ರವೆ ಉಂಡೆಗಳನ್ನು ಮಾರಲು ಶುರುವಿಟ್ಟರು. ಖಾರದ ಜೊತೆ ಜೊತೆಗೇ ಸಿಹಿ ಒಳ್ಳೆಯ ಕಾಂಬಿನೇಶನ್ ಎಂಬುದು ಅದನ್ನನುಭವಿಸಿ ಸುಖಿಸಿದವರಿಗೇ ತಿಳಿದೀತು!ಇದಾದ ನಂತರ ಭಟ್ಟರ ತಿಂಡಿಯ ಗಾಡಿ ಸಂಜೆ ಆರರ ಮುನ್ನವೇ ಎಂದಿನಂತೆ ಪೂರ್ತಿ ಖಾಲಿಯಾಗಿ, ಮೇಲೆ ಮಾಡಿ ಕಟ್ಟಿರುತ್ತಿದ್ದ ಅವರ ಪಂಚೆಯ ಒಳಗಿನಿಂದ ಮಂಡಿಯವರೆಗೆ ಇಣುಕುತ್ತಿದ್ದ ಚಡ್ಡಿಯ ಜೇಬಿನಲ್ಲಿ ಲಾಭದ ಹಣ ಮಾತ್ರ ತುಂಬಿರುತ್ತಿತ್ತು. ಆದರೆ, ಕಾಕ ತನ್ನ ಗಾಡಿಯನ್ನು ಮುಚ್ಚಿ ಮನೆಗೆ ಹೊರಡುವ ಹೊತ್ತಿಗೆ ಈಗ ರಾತ್ರಿ ಹತ್ತೂಕಾಲರ ಶಿಫ್ಟಿನ ಮಂದಿ ತಮ್ಮ ಮನೆಗಳನ್ನು ಸೇರಿರುತ್ತಿದ್ದರು.ಒಂದು ವಸ್ತುವಿನ ಬೆಲೆಯನ್ನು ಹೇಗೆ ನಿಗದಿ ಪಡಿಸಬೇಕೆಂಬ ಕಲೆಯನ್ನು ನಾವೆಲ್ಲ ಭಟ್ಟರಿಂದ ಕಲಿಯಬಹುದು. ವಸ್ತುವಿಗೆ ನಿಜವಾದ ಬೆಲೆ ಬಂದು ಅಂಟಿಕೊಳ್ಳುವುದು ಅದಕ್ಕೆ ಮಾರುಕಟ್ಟೆಗನುಸಾರವಾಗಿ ಸೂಕ್ತ ಬೆಲೆಯೊಂದನ್ನು ನಾವು ಕಟ್ಟಿದಾಗಲೇ ಎಂಬ ಸತ್ಯವನ್ನು ಭಟ್ಟರು ಸಾಬೀತು ಮಾಡಿದ್ದಾರೆ.ಭಟ್ಟರ ತಿಂಡಿಯ ಗಾಡಿಯ ಕತೆಯನ್ನು ಮತ್ತೊಮ್ಮೆ ಓದಿಕೊಳ್ಳಿ. ಕಾಕನನ್ನು ಸೋಲಿಸಲಾಗದ ಯಾವುದೇ ತಿಂಡಿಯ ಬೆಲೆಯನ್ನೂ ಕಾಕನ ತಿಂಡಿಯ ಬೆಲೆಗೆ ಸರಿದೂಗಿದರೆ ಹೊರತು ತಮ್ಮದೇ ಪ್ರತಿಷ್ಠೆಯನ್ನು ಬೀರಲಿಲ್ಲ. ಹಾಗೆಂದು ಬೆಲೆಯನ್ನು ಸುಮ್ಮಗೆ ಇಳಿಸಿ ಇಲ್ಲಿಯವರೆಗೆ ನಾನು ಗಿರಾಕಿಗಳಿಂದ ಹೆಚ್ಚು ಹಣವನ್ನು ಪಡೆಯುತ್ತಿದ್ದೆ ಎಂದೂ ಸಾರಲೂ ಇಲ್ಲ. ಬೆಲೆಯ ಕುಸಿತದೊಂದಿಗೇ ತಮ್ಮ ಅಳತೆಯನ್ನೂ ಇಳಿಸಿ, ತಮ್ಮ ಹೊಸ ಬೆಲೆಗೆ ಒಂದು ತಾರ್ಕಿಕವಾದ ಆಯಾಮ ಕಲ್ಪಿಸಿಕೊಟ್ಟರು. ಅಂತೆಯೇ ಚಕ್ಕುಲಿಯನ್ನು ಮಾತ್ರ ಇವೆಲ್ಲವುಗಳಿಂದ ಹೊರಕ್ಕಿಟ್ಟು ತುಪ್ಪದ ಬೆಲೆ ಜಾಸ್ತಿಯಾಗಿದೆ ಎನ್ನುತ್ತಾ ಅದರ ಬೆಲೆಯನ್ನೂ ಹೆಚ್ಚಿಸಿದರು. ಕಾಕನ ಎಣ್ಣೆಯಲ್ಲಿ ಕರೆದ ಚಕ್ಕುಲಿಗೂ ತನ್ನ ಶುದ್ಧ ತುಪ್ಪದ ಚಕ್ಕುಲಿಗೂ ಹೋಲಿಕೆಯೇ ಇಲ್ಲ ಎಂಬುದನ್ನು ಬೆಲೆ ಏರಿಕೆಯ ಮೂಲಕ ಭಟ್ಟರು ಅದೆಷ್ಟು ದೃಢವಾಗಿ ಸಾರಿದರೆಂದರೆ, ಅವರ ಗಿರಾಕಿಗಳೂ ಅವರ ನಿಲುವನ್ನೇ ಸ್ಪಷ್ಟೀಕರಿಸಿದರು ಎಂಬಲ್ಲಿಯೇ ಮಾರಾಟ ವಿಭಾಗದವರಿಗೆಲ್ಲ ಇಲ್ಲಿ ಅನನ್ಯ ಕಲಿಕೆ ಇದೆ.ಬೋರ್ಡ್ ರೂಮಿನ ಸುತ್ತಮುತ್ತಲಿನ ಮಂದಿ ತಮ್ಮ ವಸ್ತುವಿಗೆ ಬೆಲೆ ಕಟ್ಟುವ ಈ ಕೆಲಸವನ್ನು ಅತ್ಯಂತ ಹಗುರವೆಂದು ಪರಿಗಣಿಸದೆ ಅದಕ್ಕೆ ಸಲ್ಲಬೇಕಾದ ಗೌರವವನ್ನು ನೀಡಲೇಬೇಕು. ಸೂಕ್ತ ಬೆಲೆಯನ್ನು ನಿಗದಿ ಪಡಿಸುವ ಕೆಲಸಕ್ಕೆ ಬೇಕಾದ ಸಮಯ, ಹಣ, ಕಲಿಕೆ, ಮಾರುಕಟ್ಟೆಯ ಒಳಹೊರಗುಗಳ ಸೂಕ್ಷ್ಮಜ್ಞಾನ, ಸಮೀಕ್ಷೆಗಳ ಪರಾಮರ್ಶೆ, ತಮ್ಮದೇ ವಸ್ತುವಿನ ಬಗೆಗೆ ಪ್ರಾಮಾಣಿಕ ಅಭಿಪ್ರಾಯಗಳು ಹಾಗೂ ಗ್ರಾಹಕರ ಆಶೋತ್ತರಗಳ ಆಳವಾದ ಅಧ್ಯಯನ ಹಾಗೂ ತಿಳಿವಳಿಕೆ - ಹೀಗೆ ಎಲ್ಲವನ್ನೂ ಅವಸರವಿಲ್ಲದೇ ಸಮಾಧಾನದಿಂದ ಸರಿಹೊಂದಿಸಬೇಕು.ಏಕೆಂದರೆ, ಸೂಕ್ತ ಬೆಲೆಯೊಂದನ್ನು ಹೊಂದಿರದ ವಸ್ತು ಅದೆಷ್ಟೇ ಅದ್ವಿತೀಯವಾದರೂ, ಅದಕ್ಕೆ ಬೆಲೆ ಇಲ್ಲ. ನೆಲೆಯಂತೂ ಇಲ್ಲವೇ ಇಲ್ಲ!ಲೇಖಕರನ್ನು  satyesh.bellur@gmail.com ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry