ಭತ್ತಕ್ಕೆ ಕೊಳವೆ ಹುಳು ರೋಗ

7

ಭತ್ತಕ್ಕೆ ಕೊಳವೆ ಹುಳು ರೋಗ

Published:
Updated:

ಮಂಡ್ಯ: ಮುಂಗಾರು ಹಂಗಾಮಿನಲ್ಲಿ ನಾಟಿಯಾಗಿರುವ ಭತ್ತದ ಬೆಳೆಯ ತಾಕುಗಳಲ್ಲಿ ಬೆಂಕಿ ರೋಗ ಹಾಗೂ ಕೊಳವೆ ಹುಳು ರೋಗ ಬಾಧೆ ಜಿಲ್ಲೆಯಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದೆ.ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಾಲು, ಕಿರಂಗೂರು, ನಗುವನಹಳ್ಳಿ, ಕೂಡಲಕುಪ್ಪೆ, ಹಾಗೂ ಮಂಡ್ಯ ತಾಲ್ಲೂಕಿನ ಶಿವಳ್ಳಿ, ಗುನ್ನಾಯಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಂಕಿ ರೋಗದ ಬಾಧೆಯು ಅಲ್ಲಲ್ಲಿ ಕಂಡು ಬಂದಿದೆ. ಇತರೆ ತಾಲ್ಲೂಕಿನಲ್ಲಿಯೂ ಸಹ, ಅಲ್ಲಲ್ಲಿ ಭತ್ತದ ಬೆಳೆಗೆ ಈ ರೋಗ ತಗುಲಿದೆ.ಮಂಡ್ಯ ತಾಲ್ಲೂಕಿನ ಮೊಡಚಾಕನಹಳ್ಳಿ, ಚಂದಗಾಲು, ಶಿವಳ್ಳಿ, ಗುನ್ನಾಯಕನಹಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಭತ್ತದ ಬೆಳೆಗೆ ಕೊಳವೆ ಹುಳು ಬಾಧೆಯೂ ಅಲ್ಲಲ್ಲಿ ಕಾಣಿಸಿಕೊಂಡಿದೆ. ‘ರೈತರು ಮುಂಜಾಗ್ರತಾ ಕ್ರಮವಾಗಿ, ಶಿಫಾರಸು ಮಾಡಿದ ರಾಸಾಯನಿಕ ಔಷಧಗಳನ್ನು ಅಗತ್ಯ ಪ್ರಮಾಣದಲ್ಲಿ ಸಿಂಪಡಿಸುವ ಮೂಲಕ ರೋಗಗಳನ್ನು ಹತೋಟಿಗೆ ತರಬಹುದು’ ಎಂದು ಮಂಡ್ಯ ತಾಲ್ಲೂಕಿನ ವಿ.ಸಿ. ಫಾರ್ಮ್‌ ವಲಯ ಕೃಷಿ ಸಂಶೋಧನಾ ಕೇಂದ್ರದ (ಭತ್ತದ ವಿಭಾಗ) ವಿಜ್ಞಾನಿಗಳು ತಿಳಿಸಿದ್ದಾರೆ.ಬೆಂಕಿ ರೋಗ:  ‘ರೋಗ ತಗುಲಿದ ಭತ್ತದ ತಾಕುಗಳಲ್ಲಿ ಬೆಳೆಯ ಗರಿಗಳ ಮೇಲೆ ಆರಂಭದಲ್ಲಿ ವಜ್ರಾಕಾರದ ಕಂದು ಬಣ್ಣದ ಚುಕ್ಕೆಗಳು ಕಂಡು ಬರುತ್ತವೆ. ಚುಕ್ಕೆಗಳ ಮಧ್ಯ ಭಾಗವು ಬೂದಿ ಬಣ್ಣ ಹೊಂದಿರುತ್ತದೆ. ಕ್ರಮೇಣ ಈ ಚುಕ್ಕೆಗಳು ದೊಡ್ಡದಾಗಿ ಒಂದಕ್ಕೊಂದು ಕೂಡಿಕೊಂಡು ಎಲೆ ಒಣಗಿ ಬೆಳೆ ಸುಟ್ಟಂತೆ ಕಾಣಿಸುತ್ತದೆ. ಇದು, ಈ ರೋಗದ ಲಕ್ಷಣ’ ಎಂದು ವಿ.ಸಿ.ಫಾರ್ಮ್‌ ವಲಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಡಿ.ಕೆ. ಸಿದ್ದೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.‘ಈ ರೋಗದ ಹತೋಟಿಗಾಗಿ ಪ್ರತಿ ಲೀಟರ್‌ ನೀರಿಗೆ ಒಂದು ಗ್ರಾಂ ಕಾರ್ಬನ್‌ ಡೈಜಿಮ್‌ ಶಿಲೀಂಧ್ರನಾಶಕವನ್ನು ಬೆರೆಸಿ, ಎಕರೆಗೆ 100 ರಿಂದ 150 ಲೀ. ದ್ರಾವಣವನ್ನು ಸಿಂಪಡಿಸಬೇಕು, ಬೆಳೆಗಳಿಗೆ ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದಾಗ ಬೆಂಕಿರೋಗವು ಹೆಚ್ಚಾಗುತ್ತದೆ. ಹೀಗಾಗಿ, ಯೂರಿಯಾ ಗೊಬ್ಬರವನ್ನು ಮಿತಿವಾಗಿ ಬಳಸುವುದು ಸೂಕ್ತ’ ಎಂದು ಸಲಹೆ ನೀಡಿದರು.

ಕೊಳವೆ ಹುಳು: ‘ರೆಕ್ಕೆಗಳ ಮೇಲೆ ಸಣ್ಣ ಸಣ್ಣ ಕಂದು ಮಚ್ಚೆಗಳಿರುವ ಬಿಳಿ ಪತಂಗಗಳು, ಭತ್ತದ ಎಳೆ ಪೈರಿಗೆ ಹೆಚ್ಚು ಹಾನಿ ಮಾಡುತ್ತದೆ. ಅನೇಕ ಚಿಟ್ಟೆಗಳು ಬೆಳೆ ಮಧ್ಯ ಭಾಗದಲ್ಲಿ ಹಾರಾಡುವುದನ್ನು ಗಮನಿಸಬಹುದು.ನಾಟಿ ಮಾಡಿದ 10–15 ದಿನಗಳ ನಂತರ ಮರಿ ಹುಳುಗಳು ಸಸಿಗಳ ತುದಿ ಭಾಗವನ್ನು ಕತ್ತರಿಸಿ ಕೊಳವೆಗಳನ್ನು ಮಾಡಿಕೊಳ್ಳುತ್ತವೆ. ಮೊದಮೊದಲು ಹುಳು ತಗುಲಿದ ಗರಿಗಳಲ್ಲಿ ಎಣೆಯಾಕಾರದ ಬಿಳಿ ಗೆರೆಗಳು ಕಾಣುತ್ತವೆ. ಕ್ರಮೇಣ ಗರಿಗಳು ಒಣಗಿ ಬೆಳೆ ಅಲ್ಲಲ್ಲಿ ಬೆಳ್ಳಗಾದಂತೆ ಕಾಣುತ್ತದೆ’ ಎನ್ನುತ್ತಾರೆ ಹಿರಿಯ ವಿಜ್ಞಾನಿ ಡಾ. ಡಿ.ಕೆ.ಸಿದ್ದೇಗೌಡ‘ಈ ಹುಳುವಿನ ಬಾಧೆಯ ಲಕ್ಷಣಗಳು ಕಂಡುಬಂದರೆ ಎರಡು ದಿನಗಳ ಮಟ್ಟಿಗೆ ತಾಕಿನಿಂದ ನೀರನ್ನು ಸಂಪೂರ್ಣ ಬಸಿಯಬೇಕು. ನೀರುಗಾಲುವೆ ಹಾಗು ಬದುಗಳನ್ನು ಸ್ವಚ್ಛವಾಗಿಡಬೇಕು. ಪ್ರತಿ ಲೀಟರ್‌ ನೀರಿಗೆ 2 ಎಂ.ಎಲ್‌. ಕ್ಲೋರೋಪೈರಿಪಾಸ್‌ 20 ಇ.ಸಿ. ಕೀಟನಾಶಕವನ್ನು ಸಿಂಪಡಿಸಿದರೆ, ಈ ರೋಗವನ್ನು ಹತೋಟಿಗೆ ತರಬಹುದು. ಎಕರೆಗೆ 100 ರಿಂದ 150 ಲೀ. ದ್ರಾವಣವನ್ನು ಸಿಂಪಡಿಸಬೇಕು’ ಎಂದು ವಿವರಿಸಿದರು.ಈ ರೋಗಗಳು ಕಾಣಿಸಿಕೊಂಡಿದ್ದಕ್ಕೆ ರೈತರು ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ, ಶಿಫಾರಸ್ಸು ಮಾಡಿದ ಔಷಧವನ್ನು ನಿಗದಿತ ಪ್ರಮಾಣದಲ್ಲಿ ಸಿಂಪಡಿಸುವ ಮೂಲಕ ಈ ರೋಗಗಳನ್ನು ಹತೋಟಿ ಮಾಡಬಹುದು ಎಂದು ಸಲಹೆ ನೀಡಿದರು.

ಮಾಹಿತಿಗೆ, ವಿ.ಸಿ.ಫಾರ್ಮ್‌ ವಲಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಡಿ.ಕೆ.ಸಿದ್ದೇಗೌಡ (ಮೊ.ಸಂ. 94496 87599) ಅವರನ್ನು ಸಂರ್ಪಕಿಸಬಹುದು. ಸಮೀಪದ ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.

ಕೆ. ಚೇತನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry