ಭಾನುವಾರ, ಏಪ್ರಿಲ್ 11, 2021
22 °C

ಭತ್ತದ ಸಸಿಗೆ ಹೆಚ್ಚಿದ ಬೇಡಿಕೆ: ಬೆಲೆಯೂ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭತ್ತದ ಸಸಿಗೆ ಹೆಚ್ಚಿದ ಬೇಡಿಕೆ: ಬೆಲೆಯೂ ಹೆಚ್ಚು

ಸಿರುಗುಪ್ಪ: ಸೋನಾ ಮಸೂರಿ ಭತ್ತ  ಸಸಿಗಳಿಗೆ ಭಾರಿ ಬೇಡಿಕೆ ಇದ್ದು ದುಬಾರಿ ಬೆಲೆಗೆ ಇಲ್ಲಿ ಮಾರಾಟವಾಗುತ್ತಿವೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡುವ ಸೋನಾಮಸೂರಿ ಭತ್ತದ ಸಸಿಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ. 



 ಈ ಭಾಗದಲ್ಲಿ ಬೆಳೆಯುವ ಸಸಿಗಳನ್ನು ಪಕ್ಕದ ಸಿಂಧನೂರು, ಗಂಗಾವತಿ, ಬಳ್ಳಾರಿ ಮತ್ತು ಆಂಧ್ರದ ಗಡಿಭಾಗದ ರೈತರು ಖರೀದಿಸುವುದು ಇಲ್ಲಿ ರೂಢಿಯಿದ್ದು ಅದಕ್ಕಾಗಿ ಇಲ್ಲಿಯ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತದ  ಸಸಿಗಳನ್ನು ಹಾಕಿ ರೈತರಿಂದ ಮುಂಗಡ ಹಣ ಪಡೆಯುವ ವ್ಯವಹಾರ ಇಲ್ಲಿ ಜೋರು.  



ಸಾಮಾನ್ಯವಾಗಿ ಪ್ರತಿ ಬಾರಿ ಈ ಸಸಿ ಮಾರಾಟ ಮಾಡಲು ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ನೀರಿನ ಲಭ್ಯತೆಯ ಮೇರೆಗೆ ಸಸಿಗಳನ್ನು ಹಾಕಿ ಮಾರಾಟ ಮಾಡಲು ಸಿದ್ಧರಾಗುತ್ತಿದ್ದರು.



ಆದರೆ ಈ ವರ್ಷ ತುಂಗಭದ್ರಾ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದಲ್ಲದೇ ಮುಂಗಾರು ಮಳೆಯ ವೈಫಲ್ಯದಿಂದ ನೀರಿನ ಕೊರತೆ ಉಂಟಾಗಿ ಬಹಳಷ್ಟು ರೈತರು ಸಸಿ ಮಡಿಗಳನ್ನು ಹಾಕಿ ನೀರಿಲ್ಲದೇ ಸಸಿಗಳು ಒಣಗಿ ಹೋಗಿದ್ದವು, ಇನ್ನು ಹಲವು ರೈತರು ಟ್ಯಾಂಕರ್‌ಗಳ ಮೂಲಕ ಸಸಿಗಳಿಗೆ ನೀರು ಹರಿಸಿ ರಕ್ಷಿಸಿಕೊಂಡಿದ್ದರು.



ಆದರೂ ಈ ವರ್ಷ ಸಸಿಗಳ ಕೊರತೆ ಇರುವುದರಿಂದ ರೈತರು ಇರುವ ಸಸಿಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸುವ ಪ್ರಕ್ರಿಯೆ ಜೋರಾಗಿದೆ. ಇದರ ಜೊತೆಗೆ ಸಸಿ ಕೀಳುವ, ಸಾಗಾಣಿಕೆ ಮಾಡುವ ವೆಚ್ಚ ಕೂಡ ದುಬಾರಿಯಾಗಿದೆ ಎಂದು ಎಪಿಎಂಸಿ ಸದಸ್ಯ ಬೇವೂರು ಬಸವರಾಜಗೌಡ ತಿಳಿಸಿದರು.



ತುಂಗಭದ್ರಾ ಜಲಾಶಯದ ಕಾಲುವೆಯ ಉಪ ಕಾಲುವೆಗಳಿಗೆ ನೀರು ಬಿಡುಗಡೆ ಮತ್ತು ನದಿ ಪಾತ್ರದ ಏತ ನೀರಾವರಿ ಜಮೀನುಗಳಲ್ಲಿ ಭತ್ತದ ಸಸಿ ನಾಟಿ ಮಾಡಲು ನಾ ಮುಂದು ನೀ ಮುಂದು ಎಂದು ಏಕಕಾಲಕ್ಕೆ ರೈತರು ಮುಂದಾಗಿದ್ದರಿಂದ ಸಸಿಗಳ ಬೆಲೆ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.



ಪ್ರತಿ ವರ್ಷ ಸಾಮಾನ್ಯವಾಗಿ ಒಂದು ಸೆಂಟ್ಸ್ ಸಸಿಗೆ 400-ರಿಂದ 500 ರೂಪಾಯಿವರೆಗೆ ಖರೀದಿ ದರ ಇರುತ್ತಿತ್ತು, ಈ ಬಾರಿ ಒಂದು ಸೆಂಟ್ಸ್ ಸಸಿಗೆ 800ರಿಂದ 1200 ರೂಪಾಯಿ ವರೆಗೆ ಮಾರಾಟವಾಗುತ್ತಿವೆ ಎಂದು ಇಬ್ರಾಂಪುರದ ಪ್ರಗತಿಪರ ರೈತ ಬಿ.ಎಸ್.ರಾಜಾಗೌಡ ಸಸಿ ಬೆಲೆ ಗಗನಕ್ಕೇರಿದೆ ಎಂದು ಹೇಳಿದ.



ಒಂದು ಎಕರೆಗೆ 2 ರಿಂದ 3 ಸೆಂಟ್ಸ್ ಸಸಿ ಬೇಕಾಗುತ್ತದೆ, ಸಸಿಗಳಿಗೆ ನಾವು ಸಾವಿರಾರು ರೂಪಾಯಿ ವೆಚ್ಚ ಭರಿಸಬೇಕಾಗಿದೆ, ಇನ್ನು ನಾಟಿ ಮಾಡಲು ಕೃಷಿ ಕೂಲಿಕಾರರು ಒಂದು ಎಕರೆಗೆ 1600 ರಿಂದ 1700 ರೂಪಾಯಿವರೆಗೆ ನಿಗದಿ ಮಾಡಿದ್ದಾರೆ ಎಂದು ಇಬ್ರಾಂಪುರ ಗ್ರಾಮದ ಬಸವೇಶ್ವರ ಏತ ನೀರಾವರಿ ಸಂಘದ ಅಧ್ಯಕ್ಷ ಪೀರ್‌ಸಾಬ್ ಭತ್ತ  ನಾಟಿ ದುಬಾರಿಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ.



ಪ್ರತಿ ವರ್ಷ ಆಗಸ್ಟ್ ಮೊದಲನೇ ವಾರದೊಳಗೆ ಭತ್ತ  ಸಸಿ ನಾಟಿ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು ಆದರೆ ಈ ವರ್ಷ ಮುಂಗಾರು ಮಳೆ ಕೊರತೆಯಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಸಂಗ್ರಹವಿಲ್ಲದೇ ಕಾಲುವೆಗಳಿಗೆ ಆಗಸ್ಟ್‌ನಲ್ಲಿ ನೀರು ಬಿಡುಗಡೆ ಮಾಡಿದ್ದರಿಂದ ಅವಧಿ ಮೀರಿದ ಸಸಿಗಳನ್ನು ರೈತರು ಅನಿವಾರ್ಯವಾಗಿ ಭತ್ತ  ನಾಟಿ ಮಾಡಲು ಆರಂಭಿಸಿದ್ದಾರೆ ಎಂದರು.



ಅಲ್ಲದೇ ತುಂಗಭದ್ರಾ ಮತ್ತು ಹಗರಿ ನದಿಯಲ್ಲಿ ನೀರು ಬತ್ತಿದ್ದರಿಂದ ನದಿ ಪಾತ್ರದ ಏತ ನೀರಾವರಿಗಳಿಗೆ ಭತ್ತ  ಸಸಿ ನಾಟಿ ಮಾಡಲು ವಿಳಂಬವಾಗಿದೆ, ರೈತರು ನದಿ ನೀರಿಗಾಗಿ ಹಗಲಿರುಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.



ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ  ನಾಟಿ ಮಾಡಲು ನೀರಿನ ಕೊರತೆಯಿಂದ ಕೃಷಿ ಚಟುವಟಿಕೆಗಳು ಮಂದಗತಿ ಯಲ್ಲಿ ನಡೆಯುತ್ತಿವೆ ಎಂದು ಕರ್ಚಿಗನೂರು ಗ್ರಾಮದ ರೈತ ರೇವಣಶಾಸ್ತ್ರಿ ಆತಂಕ ವ್ಯಕ್ತಪಡಿಸಿದ. ಅವಧಿ ಮೀರಿದ ಸಸಿಗಳನ್ನು ನಾಟಿ ಮಾಡುವುದರಿಂದ ಮುಂದೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ ಎಂದರು.



ಭತ್ತದ ಕಣಜವಾದ ಈ ಭಾಗದಲ್ಲಿ ಈ ಬಾರಿ ಭತ್ತ  ನಾಟಿ ಮಾಡುವ ಪ್ರಕ್ರಿಯೆಗೆ ಹಳ್ಳಿಗಳಲ್ಲಿ ಕೃಷಿ ಕೂಲಿಕಾರರು ನಗರಗಳತ್ತ ಗುಳೆ ಹೋಗಿದ್ದ ಪರಿಣಾಮ ಕೂಲಿಕಾರರ ಕೊರತೆಯೂ ರೈತರನ್ನು ಕಾಡುತ್ತಿದೆ. ಇದ್ದ ಕೂಲಿಕಾರರಿಗೆ ದುಪ್ಪಟ್ಟು ಹಣ ತೆತ್ತು ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ ಎನ್ನುತ್ತಾರೆ ರೈತಾಪಿ ವರ್ಗ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.