ಭಾನುವಾರ, ನವೆಂಬರ್ 17, 2019
29 °C

ಭತ್ತ, ರೇಷ್ಮೆಯಾಯಿತು; ಈಗ ಮಾವಿನ ಸರದಿ

Published:
Updated:

ಕೋಲಾರ: ಭತ್ತ, ರೇಷ್ಮೆಗೆ ಬೆಂಬಲ ಬೆಲೆ ನೀಡಬೇಕೆಂದು ಹಲವು ಜಿಲ್ಲೆಗಳ ರೈತರು ಆಗ್ರಹಿಸಿ ಆಸೆಯಿಂದ ಎದುರು ನೋಡುತ್ತಿದ್ದಾರೆ. ಈಗ ಜಿಲ್ಲೆಯ ಮಾವು ಬೆಳೆಗಾರರು ಬೆಂಬಲ ಬೆಲೆಗಾಗಿ ಆಗ್ರಹಿಸಿದ್ದಾರೆ.ಅದಕ್ಕಾಗಿ ಬುಧವಾರ ಶ್ರೀನಿವಾಸಪುರದ ಮಾವು ಮಾರುಕಟ್ಟೆ ಬಳಿ ರಸ್ತೆತಡೆ ನಡೆಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.ಎರಡು ತಿಂಗಳಿಂದ ಆಗಾಗ್ಗೆ ಕಾಣಿಸಿಕೊಂಡ ಮಳೆ-ಗಾಳಿಯಿಂದ ನೆಲಕಚ್ಚಿದ ಮಾವಿನ ಆಸೆ ಬಿಟ್ಟು, ಮರದಲ್ಲೆ ಉಳಿದಿದ್ದ ಮಾವು ಕೈ ಹಿಡಿದೀತೆಂದು ನಂಬಿದವರಿಗೆ ಈಗ ಮಾರುಕಟ್ಟೆ ನಿರಾಶೆ ಮೂಡಿಸಿದೆ. ಹೊರರಾಜ್ಯಗಳಲ್ಲೂ ಮಾವು ಇಳುವರಿ ಹೆಚ್ಚಿರುವುದರಿಂದ ಬೆಲೆ ಇಳಿಮುಖವಾಗಿದೆ.ರಾಜ್ಯದಲ್ಲಿ ಬೆಳೆಯಲಾಗುವ ಮಾವಿನ ಪ್ರಮಾಣದಲ್ಲಿ (1,17,381 ಹೆಕ್ಟೇರ್) ಶೇ 47ಕ್ಕೂ ಹೆಚ್ಚು ಪ್ರದೇಶ ಈ ಜಿಲ್ಲೆಯಲ್ಲಿಯೇ ಇದೆ. ಏಷ್ಯಾ ಖಂಡದಲ್ಲೆ ಒಂದೇ ತಾಕಿನಲ್ಲಿ  (ಸಾವಿರಾರು ಎಕರೆಯ ವ್ಯಾಪ್ತಿಯಲ್ಲಿ ಒಂದೇ ಸಮನೆ) ಅಧಿಕ ಪ್ರಮಾಣದಲ್ಲಿ (22,325 ಹೆಕ್ಟೇರ್) ಮಾವು ಬೆಳೆಯುವ ಪ್ರದೇಶವೆಂಬ ಖ್ಯಾತಿಯನ್ನು ಪಡೆದಿರುವ ಇದೇ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬೆಳೆಗಾರರು ಧರಣಿ ನಡೆಸಿರುವುದು ಸನ್ನಿವೇಶದ ತೀವ್ರತೆಗೆ ಕನ್ನಡಿ ಹಿಡಿದಿದೆ.ಮಾವನ್ನು ಕೊಳ್ಳಲೆಂದು ಪ್ರತಿ ಬಾರಿಯೂ ತಮಿಳುನಾಡು, ಆಂಧ್ರದಿಂದ ವ್ಯಾಪಾರಿಗಳು ಬರುತ್ತಿದ್ದರು. ಈಗ ಆ ರಾಜ್ಯಗಳಲ್ಲೂ ಮಾವು ಇಳುವರಿ ಹೆಚ್ಚಿದೆ. ಹೀಗಾಗಿ ಜಿಲ್ಲೆಯಲ್ಲಿ ಬೆಳೆದಿರುವ ಮಾವಿಗೆ ಬೇಡಿಕೆ ಕಡಿಮೆಯಾಗಿದೆ. ಜ್ಯೂಸ್ ಕಾರ್ಖಾನೆಗಳ ಮಂದಿಯೂ ಆಸಕ್ತಿ ತೋರುತ್ತಿಲ್ಲ. ಶ್ರೀನಿವಾಸಪುರದ ಮಾರುಕಟ್ಟೆಯಲ್ಲಿರುವ ಮಂಡಿಗಳ ಮಾಲೀಕರು ಬೆಳೆಗಾರರಿಗೆ  `ಮಾವು ತರಬೇಡಿ~ ಎಂದು ಹೇಳುತ್ತಿದ್ದಾರೆ.ಬೆಲೆ ಕುಸಿತ: ಉತ್ಪಾದನೆ ಹೆಚ್ಚಾದಷ್ಟು ಬೇಡಿಕೆ ಕಡಿಮೆಯಾಗುವ ಅರ್ಥಶಾಸ್ತ್ರದ ಸಿದ್ಧಾಂತಕ್ಕೆ ಮಾವು ಈಗ ನಿದರ್ಶನ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 25ರಿಂದ 30ರಷ್ಟು ಬೆಲೆಯೂ ಇಲ್ಲವಾಗಿರುವುದು ಬೆಳೆಗಾರರನ್ನು ಕಂಗಾಲು ಮಾಡಿದೆ.ಕಳೆದ ವರ್ಷ ತೋತಾತಪುರಿ ಪ್ರತಿ ಟನ್ನಿಗೆ 18ರಿಂದ 20 ಸಾವಿರ ರೂಪಾಯಿಗೆ ಮಾರಾಟವಾಗಿತ್ತು. ಈ ಬಾರಿ 3ರಿಂದ 4 ಸಾವಿರ ರೂಪಾಯಿ ಮಾತ್ರ ಬೆಲೆ ಇದೆ. ವಿವಿಧ ತಳಿಯ ಮಿಶ್ರ ಮಾವು (ನಾಟಿ ಮಾವು) ಟನ್‌ಗೆ ಒಂದೂವರೆಯಿಂದ ಎರಡು ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಮಲ್ಲಿಕಾ, ಬೇನಿಶಾ ತಳಿ ಮಾವು ಟನ್‌ಗೆ 19-20 ಸಾವಿರ ರೂಪಾಯಿಯಂತೆ ಕಳೆದ ಬಾರಿ ಬೆಲೆ ಇತ್ತು. ಈ ಬಾರಿ ಕೇವಲ 10 ಸಾವಿರ ರೂಪಾಯಿಗೆ ಕುಸಿದಿದೆ. ಕಳೆದ ಬಾರಿ ಟನ್‌ಗೆ ರೂ 35 ಸಾವಿರದವರೆಗೂ ಬಾದಾಮಿ ಮಾವಿಗೆ ಬೆಲೆ ಇತ್ತು. ಈಗ ಅದು 22ರಿಂದ 23 ಸಾವಿರಕ್ಕೆ ಕುಸಿದಿದೆ.ತರಬೇಡಿ: ಬೆಲೆ ಕುಸಿತ ಬೆಳೆಗಾರರನ್ನು ಒಂದೆಡೆ ಕಂಗಾಲು ಮಾಡಿದ್ದರೆ, ಮತ್ತೊಂದೆಡೆ `ಈಗಾಗಲೇ ಜಾಸ್ತಿಯಾಗಿದೆ. ಮಂಡಿಗೆ ಇನ್ನು ಕಾಯಿ ತರಬೇಡಿ~ ಎಂದು ಮಂಡಿ ಮಾಲಿಕರು ಹೇಳುತ್ತಿದ್ದಾರೆ.

`ಕೊಳ್ಳೋರೆ ಇಲ್ಲ~ ಎಂಬಂಥ ಈ ಸನ್ನಿವೇಶ ಬೆಳೆಗಾರರಲ್ಲಿ ಹತಾಶೆಯನ್ನೇ ಮೂಡಿಸಿದೆ. ಇಂಥ ಹತಾಶೆಯ ಪರಿಣಾಮವಾಗಿಯೇ ಬುಧವಾರ ರೈತರು ಮಾರುಕಟ್ಟೆ ಬಳಿ ರಸ್ತೆ ತಡೆ ನಡೆಸಿದರು.ಬೆಲೆ ಹೆಚ್ಚಳ: ಮಂಡಿಗಳಲ್ಲಿ ಮಾವನ್ನು ಕನಿಷ್ಠ ಬೆಲೆಗೆ ಕೇಳುತ್ತಿರುವ ಹೊತ್ತಿನಲ್ಲೆ, ಚಿಲ್ಲರೆಯಾಗಿ ಮಾರಲಾಗುವ ಮಾವಿನ ಬೆಲೆ ಹೆಚ್ಚಾಗಿಯೇ ಇರುವುದು ವಿಪರ್ಯಾಸ. ವಿವಿಧ ಜಾತಿಯ ಮಾವಿನ ಬೆಲೆ ಪ್ರತಿ ಕೆಜಿಗೆ 25ರೂಪಾಯಿಯಿಂದ 50 ರೂಪಾಯಿವರೆಗೆ ಇದೆ.ಸಂಘ ನಿಷ್ಕ್ರಿಯ: ಕೆಲವು ವರ್ಷಗಳ ಹಿಂದೆ ರೂಪು ತಲೆದ ಮಾವು ಬೆಳೆಗಾರರ ಸಂಘವೂ ನಿಷ್ಕ್ರಿಯಗೊಂಡಿದೆ ಎಂಬುದು ಹಲವು ಬೆಳೆಗಾರರ ಆರೋಪ. ಹಣ ದುರುಪಯೋಗವೂ ಸೇರಿದಂತೆ ಹಲವು ಆರೋಪಗಳಿಗೆ ಗುರಿಯಾಗಿರುವ ಸಂಘ ಬೆಳೆಗಾರರ ನೆರವಿಗೆ ಬಂದಿದ್ದು ಕಡಿಮೆ.ಇದೀಗ ರಸ್ತೆತಡೆ ನಡೆಸಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಶ್ರೀನಿವಾಸಪುರದವರೇ ಆಗಿರುವ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿಯವರ ಗಮನಕ್ಕೆ ಸಮಸ್ಯೆಯನ್ನು ತರಲಾಗಿದೆ ಎಂದು ರೈತರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)