ಗುರುವಾರ , ನವೆಂಬರ್ 21, 2019
22 °C

ಭತ್ಯೆಗಾಗಿ ಕೃಷ್ಣಭಟ್‌ರಿಂದ ಸರ್ಕಾರಕ್ಕೆ ಸುಳ್ಳು ಮಾಹಿತಿ

Published:
Updated:

ಶಿವಮೊಗ್ಗ: ಪಿ.ವಿ. ಕೃಷ್ಣಭಟ್ ವಿಧಾನ ಪರಿಷತ್ತು ಸದಸ್ಯರಾಗಿ ನೇಮಕಗೊಂಡ ನಂತರ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ, ಸರ್ಕಾರಿ ಸೌಲಭ್ಯ ಪಡೆದಿರುವುದು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳಿಂದ ತಿಳಿದು ಬಂದಿದೆ ಎಂದು ಕೆಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಪಿ. ಪುರುಷೋತ್ತಮ್ ಹೇಳಿದರು.ಕೃಷ್ಣಭಟ್ ಸಂಘ-ಪರಿವಾರದ ಮಾರ್ಗದರ್ಶಕರು. ಇಂಥಹವರೇ ಸರ್ಕಾರಿ ಭತ್ಯೆ ಪಡೆಯುವ ಉದ್ದೇಶದಿಂದ ತಮ್ಮ ವಿಳಾಸವನ್ನು ತೀರ್ಥಹಳ್ಳಿಯ ಪಟ್ಲಮನೆ ಎಂಬುದಾಗಿ ನಮೂದಿಸಿ, ಇಲ್ಲಿಂದಲೇ ಕಲಾಪಗಳಿಗೆ ಭಾಗವಹಿಸಿದ ರೀತಿ ಭತ್ಯೆ ಪಡೆದಿರುವುದು ದಾಖಲೆಗಳಲ್ಲಿ ದೃಢಪಟ್ಟಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕೃಷ್ಣಭಟ್ ತಮ್ಮ ವಾಸವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ವರ್ಗಾಯಿಸಿದ್ದಾರೆ. ಶಿವಮೊಗ್ಗದಲ್ಲಿ ಮನೆ ಇದ್ದರೂ ಜಿ ಕೆಟಗೇರಿ ನಿವೇಶನವೊಂದನ್ನು ಪಡೆದಿದ್ದಾರೆ. ಅದು ಸಣ್ಣ ವಿಸ್ತೀರ್ಣದ್ದು ಎಂದು ತಕರಾರು ಮಾಡಿ, ದೊಡ್ಡ ವಿಸ್ತೀರ್ಣದ ನಿವೇಶನವನ್ನು ಒತ್ತಡ ಹಾಕಿ ಪಡೆದುಕೊಂಡಿದ್ದಾರೆ ಎಂದು ದೂರಿದರು.ಮಾರ್ಗದರ್ಶನ ಮಾಡಬೇಕಾದವರೆ ಈ ರೀತಿ ನಡೆದುಕೊಂಡರೆ ನೈತಿಕತೆ ಯಾವುದು? ಸ್ವಯಂ ಸೇವಕರ ಮನಸ್ಸಿನಲ್ಲಿ ಈ ಬಗ್ಗೆ ಗೊಂದಲವಿದೆ. ಇದನ್ನು ಪರಿಹರಿಸಬೇಕು ಎಂದು ಸಂಘ ಪರಿವಾರದ ಮುಖಂಡರಿಗೆ ಆಹ್ವಾನ ನೀಡಿದರು.ಯಡಿಯೂರಪ್ಪ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಅಧಿಕಾರದಿಂದ ಕೆಳಗಿಳಿಸಿದ ಸಂಘ ಪರಿವಾರದ ಮುಖಂಡರು, ಈಗ ಈಶ್ವರಪ್ಪ ಅವರು ವಿವಿಧ ರಾಜ್ಯಗಳಲ್ಲಿ ಆಸ್ತಿ ಮಾಡಿರುವುದು, ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಿದ ಪ್ರಕರಣಗಳಿವೆ. ಅವರ ಮನೆ ಮೇಲೆ ಲೋಕಾಯುಕ್ತರ ದಾಳಿ ನಡೆದಿದೆ. ನೋಟು ಎಣಿಸುವ ಯಂತ್ರ ಸಿಕ್ಕಿದೆ. ಹಾಗಾದರೆ, ಅವರ ಮೇಲೆ ಏಕೆ ಕ್ರಮ ಇಲ್ಲ. ಈ ಧ್ವಂದ್ವ ಏಕೆ? ಇದನ್ನು ಸಂಘಪರಿಹಾರದ ಮುಖಂಡರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಪೂರ್ಣಾವಧಿ ಕಾರ್ಯಕರ್ತರಾಗಿದ್ದ ಗುರುಮೂರ್ತಿ ಅವರನ್ನು ಜೀತದಾಳು ಎಂದು ಟೀಕಿಸಿದ್ದಾರೆ. ಹಾಗಾದರೆ, ಸಂಘಕ್ಕೆ ಪೂರ್ಣಾವಧಿಯಾಗಿ ಕೆಲಸ ಮಾಡುತ್ತಿರುವವರೆಲ್ಲರೂ ಜೀತದಾಳುಗಳೇ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸಂಘ ಪರಿವಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಕೆಜೆಪಿ ಶಿವಮೊಗ್ಗ ನಗರ ಅಭ್ಯರ್ಥಿ ಎಸ್. ರುದ್ರೇಗೌಡ, ಮುಖಂಡರಾದ ಸದಾಶಿವಪ್ಪಗೌಡ, ಸುಧೀರ್,  ನಾಗರಾಜ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)