ಭದ್ರತಾ ಮಂಡಳಿ ಸುಧಾರಣೆಗೆ ಜಿ-4 ಒತ್ತಡ

7

ಭದ್ರತಾ ಮಂಡಳಿ ಸುಧಾರಣೆಗೆ ಜಿ-4 ಒತ್ತಡ

Published:
Updated:

ವಿಶ್ವಸಂಸ್ಥೆ (ಪಿಟಿಐ): ಈ ವರ್ಷ ತುರ್ತಾಗಿ ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯನ್ನು ಸುಧಾರಣೆ ಮಾಡಬೇಕು ಎಂದು ಜಿ-4 ರಾಷ್ಟ್ರಗಳಾದ ಭಾರತ, ಬ್ರೆಜಿಲ್, ಜರ್ಮನಿ ಹಾಗೂ ಜಪಾನ್ ಶನಿವಾರ ಇಲ್ಲಿ ಮತ್ತೊಮ್ಮೆ ಒತ್ತಾಯಿಸಿವೆ.

ಈ ಜಾಗತಿಕ ಸಂಸ್ಥೆಯ ಸರ್ವೋಚ್ಚ ಶಾಂತಿಯ ಮತ್ತು ಭದ್ರತೆಯ ಅಂಗವನ್ನು ಹೇಗೆ ಸುಧಾರಣೆ ಮಾಡಬೇಕು ಎಂಬುದರ ಬಗ್ಗೆ ವಿಶ್ವಸಂಸ್ಥೆಯ 192 ಸದಸ್ಯ ರಾಷ್ಟ್ರಗಳಲ್ಲಿ ಯಾವುದೇ ಸರ್ವ ಸಮ್ಮತ ನಿರ್ಧಾರ ಆಗಿಲ್ಲ. ಆದರೂ ಈ ಗುರಿಯನ್ನು ಸಾಧಿಸಲು ಜಿ-4 ದೇಶಗಳು ತಮ್ಮ ಪ್ರಚಾರಾಂದೋಲವನ್ನು ಮುಂದುವರಿಸಿವೆ. ಈ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಇತರ ಮೂರು ಮಿತ್ರ ದೇಶಗಳೊಡನೆ ಶುಕ್ರವಾರ ಸಂಜೆ ಸಭೆ ನಡೆಸಿ ಚರ್ಚಿಸಿದರು.

“ಪ್ರಸಕ್ತ ವಾಸ್ತವಿಕ ಭೌಗೋಳಿಕ ಸನ್ನಿವೇಶಕ್ಕೆ ಸರಿಹೊಂದುವಂತೆ ನೈಜ ಮಾದರಿಯಲ್ಲಿ ಭದ್ರತಾ ಮಂಡಳಿಯನ್ನು ಸುಧಾರಣೆ ಮಾಡುವ ಸವಾಲಿನೊಂದಿಗೆ ಸದಸ್ಯತ್ವವನ್ನು ಹೆಚ್ಚಿಸುವ ಮೂಲಕ ಜಾಗತಿಕ ಸಂಸ್ಥೆಯನ್ನು ವಿಸ್ತರಿಸಬೇಕು ಎಂದು ವಿಶ್ವಸಂಸ್ಥೆಯ ಮೇಲೆ ಒತ್ತಡಗಳು ಹೆಚ್ಚಿತ್ತಿವೆ” ಎಂದು ಜಿ-4 ಸಭೆಯ ನಂತರ ಬ್ರೆಜಿಲ್ ವಿದೇಶಾಂಗ ಸಚಿವ ಆಂಟಾನಿಯೊ ಡಿ ಅಗುಯಾರ್ ಪ್ಯಾಟ್ರಿಯೋಟಾ ಸುದ್ದಿಗಾರರಿಗೆ ತಿಳಿಸಿದರು.

ಜಿ-4 ರಾಷ್ಟ್ರಗಳ ಸಚಿವರು ಸಭೆಯ ಬಳಿಕ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ‘ಭದ್ರತಾ ಮಂಡಳಿಯ ಕಾಯಂ ಮತ್ತು ಕಾಯಂ ಅಲ್ಲದ (ಹಂಗಾಮಿ) ಸದಸ್ಯತ್ವಗಳ ವರ್ಗೀಕರಣವನ್ನು ಶೀಘ್ರ ವಿಸ್ತರಣೆ ಮಾಡಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಮೇಲೆ ಒತ್ತಡ ಹೆಚ್ಚಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಬಗ್ಗೆ ಸಭೆ ಒಪ್ಪಿಗೆ ಸೂಚಿಸಿದೆ’ ಎಂದು ತಿಳಿಸಿದೆ. ಈ ಗುರಿ ಸಾಧಿಸಲು ಇತರ ರಾಷ್ಟ್ರಗಳ ಜೊತೆ ಸಮಾಲೋಚಿಸಲು ಮತ್ತು ಪರಸ್ಪರ ಸಹಕಾರದಿಂದ ಮುಕ್ತವಾಗಿ ಕೆಲಸ ಮಾಡಲು ಸಿದ್ಧವಿರುವುದಾಗಿ ಈ ದೇಶಗಳು ಪುನರುಚ್ಚರಿಸಿವೆ.

ಭಾರತವು ಸುಮಾರು 19 ವರ್ಷಗಳ ತರುವಾಯ ವಿಶ್ವಸಂಸ್ಥೆಯ ಕಾಯಂ ಅಲ್ಲದ ರಾಷ್ಟ್ರವಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಿರುವ ಕೃಷ್ಣ, ಭದ್ರತಾ ಮಂಡಳಿಯನ್ನು ಸುಧಾರಣೆ ಮಾಡುವ ಉನ್ನತ ಧ್ಯೇಯದೊಂದಿಗೆ ಮಾತುಕತೆ ನಡೆಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕಳೆದ ಆರು ತಿಂಗಳಲ್ಲಿ ಎರಡನೇ ಸಮಾಲೋಚನಾ ಸಭೆ ನಡೆಸಿರುವ ಅವರು, ಜಿ-4 ರಾಷ್ಟ್ರಗಳ ಸಭೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ‘ತುರ್ತು ಅವಶ್ಯಕತೆಯಾಗಿ ಭದ್ರತಾ ಮಂಡಳಿಯನ್ನು ಸುಧಾರಣೆ ಮಾಡಬೇಕೆಂದು ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಭದ್ರತಾ ಮಂಡಳಿಯು 21ನೇ ಶತಮಾನದ ವಾಸ್ತವತೆಯನ್ನು ಎದುರಿಸುವ ಅವಶ್ಯಕತೆ ಇದೆ’ ಎಂದು ಹೇಳಿದ ಜರ್ಮನಿ ವಿದೇಶಾಂಗ ಸಚಿವ ಗುಯಿಡೊ ವೆಸ್ಟರ್‌ವೆಲ್ಲೆ, ‘ಜಿ-4 ರಾಷ್ಟ್ರಗಳು ಸ್ವಹಿತಾಸಕ್ತಿಯಿಂದ ಈ ಒತ್ತಡವನ್ನು ಹಾಕುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಭದ್ರತಾ ಮಂಡಳಿಯಲ್ಲಿ ಆಫ್ರಿಕಾಕ್ಕೆ ಕಾಯಂ ಸ್ಥಾನ ದೊರಕಿಸುವ ಅವಶ್ಯಕತೆಯ ಬಗ್ಗೆಯೂ ಜಿ4 ದೇಶಗಳು ಒಮ್ಮತಾಭಿಪ್ರಾಯ ವ್ಯಕ್ತಪಡಿಸಿವೆ. ಕಳೆದ ಎರಡು ದಶಕಗಳಿಂದಲೂ ಭದ್ರತಾ ಮಂಡಳಿಯ ಸುಧಾರಣೆಗೆ ಒತ್ತಡ ಪ್ರಕ್ರಿಯೆ ನಡೆದಿದ್ದು ಆದರೆ ಎಷ್ಟು ಸ್ಥಾನಗಳನ್ನು ಹೆಚ್ಚಿಸಬೇಕೆಂಬ ಬಗ್ಗೆ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ. ಜಿ4 ರಾಷ್ಟ್ರಗಳ ಸಚಿವರು ಭದ್ರತಾ ಮಂಡಳಿಯ ಸುಧಾರಣೆಗೆ ಒಲವು ತೋರಿರುವ ವಿಶ್ವಸಂಸ್ಥೆ ಮಹಾಸಭೆಯ ಅಧ್ಯಕ್ಷ ಜೋಸೆಫ್ ಡಯಾಸ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry