ಭದ್ರತಾ ಸಿಬ್ಬಂದಿಯಿಂದ ಸೂಚನೆ ನಿರ್ಲಕ್ಷ್ಯ

7

ಭದ್ರತಾ ಸಿಬ್ಬಂದಿಯಿಂದ ಸೂಚನೆ ನಿರ್ಲಕ್ಷ್ಯ

Published:
Updated:

ಕೆಜಿಎಫ್‌: ಬಿಜಿಎಂಎಲ್‌ ಚಿನ್ನದ ಗಣಿ ಆಸ್ತಿಪಾಸ್ತಿ ರಕ್ಷಣೆಗೆ ಸಂಬಂಧಿಸಿದಂತೆ ಆಡಳಿತ ವರ್ಗ ನೀಡುತ್ತಿದ್ದ ಸಲಹೆ ಸೂಚನೆಗಳನ್ನು ಭದ್ರತಾ ಸಿಬ್ಬಂದಿ ಕಡೆ­ಗಣಿಸುತ್ತಿದ್ದರು. ಇದರಿಂದಾಗಿ ಗಣಿ­ಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾ­ಗಿತ್ತು ಎಂದು ತಿಳಿದುಬಂದಿದೆ.ಗಣಿಯಲ್ಲಿ ನಡೆಯುತ್ತಿರುವ ಕಳ್ಳ­ತನದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳು­ವಂತೆ ಆಡಳಿತ ವರ್ಗ ಹಲವಾರು ಬಾರಿ ಭದ್ರತಾ ಇಲಾಖೆಗೆ ಪತ್ರ ಬರೆದು, ಸೂಚನೆ ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ­ಯನ್ನು ಸಹ ನೀಡಿತ್ತು. ಆದರೂ ಭದ್ರತಾ ಸಿಬ್ಬಂದಿ ಅದನ್ನು ನಿರ್ಲಕ್ಷ್ಯ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.ಕಳೆದ ಮೇ ತಿಂಗಳಿನಲ್ಲಿ ನಂದಿದುರ್ಗ ಮಿಲ್‌ನ ಬಾಲ್‌ ಮಿಲ್‌ ಸಬ್‌­ಸ್ಟೇಷನ್‌­ನಲ್ಲಿ ತಾಮ್ರದ ತಂತಿಗಳು ಕಳ್ಳತನ­ವಾಗಿ­ದ್ದವು. ಅದರ ಮೌಲ್ಯ ಸುಮಾರು ಹದಿನೈದು ಸಾವಿರ ರೂಪಾಯಿಗಳಾಗಿ­ದ್ದವು. ಸದರಿ ಮಿಲ್‌ನಲ್ಲಿ ಭದ್ರತಾ ಸಿಬ್ಬಂದಿ ಹಗಲಿರಳು ಕಾವಲು ಕಾಯು­ತ್ತಿದ್ದರೂ ಕಳ್ಳರು ರಾಜಾರೋಷವಾಗಿ ಗಣಿಯೊಳಗೆ ಪ್ರವೇಶಿಸಿ ತಾಮ್ರದ ತಂತಿ­ಗಳನ್ನು ಕದ್ದು ತೆಗೆದುಕೊಂಡು ಹೋಗಿ­ದ್ದರು. ಈ ಸಂಬಂಧವಾಗಿ ತನಿಖೆ ನಡೆಸಿ ಪೊಲೀಸರಿಗೆ ದೂರು ನೀಡುವಂತೆ ಆಡ­ಳಿತ ಮಂಡಳಿ ಸೂಚನೆ ಇದ್ದರೂ ಭದ್ರತಾ ಅಧಿಕಾರಿ ದೂರು ನೀಡಿರಲಿಲ್ಲ ಎಂದು ಹೇಳಲಾಗಿದೆ.ಅದೇ ರೀತಿ ಕಳೆದ ಜುಲೈ ತಿಂಗಳಲ್ಲಿ ಹೆನ್ರೀಸ್‌ ವೈಂಡಿಂಗ್‌ ರೂಂನಲ್ಲಿ ಸಹ ಕಳ್ಳತನ ನಡೆದಿತ್ತು.  ಗಣಿಯ ಇಡಿ ವಿಭಾಗದಲ್ಲಿ ನಡೆದ ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಗಣಿ ಗೋಡೆ­ಯನ್ನು ನಾಶ ಮಾಡಿ ಕಳ್ಳತನ ಪ್ರಯತ್ನ ನಡೆಸಲಾಗಿತ್ತು. ಆದರೆ ಸದರಿ ಪ್ರಕರಣ­ವನ್ನು ಪೊಲೀಸರಿಗೆ ತಿಳಿಸದೆ, ಭದ್ರತಾ ಸಿಬ್ಬಂದಿ ಗೋಡೆಯನ್ನು ಮರು ನಿರ್ಮಾಣ ಮಾಡಿದ್ದರು.ಅದೇ ರೀತಿ ಎನ್‌ಡಿ ಮಿಲ್‌ನಲ್ಲಿ ಸಹ ಕಳ್ಳತನ­ವಾಗುತ್ತಿತ್ತು. ಕಳ್ಳರನ್ನು ಪೊಲೀಸರೇ ಹಿಡಿಯಬೇಕಾಯಿತು. ಭದ್ರತಾ ಸಿಬ್ಬಂದಿ ಕರ್ತ್ಯವ್ಯದಿಂದ ವಿಮುಖ­ರಾಗಿ­ದ್ದಾರೆ. ದುಷ್ಕರ್ಮಿಗಳ ಜೊತೆ ಶಾಮೀ­ಲಾಗಿರಬಹುದೆಂಬ ಶಂಕೆ­ಯನ್ನು ಆಡಳಿತ ಮಂಡಳಿ ವ್ಯಕ್ತ­ಪಡಿಸಿತ್ತು.ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಪೊಲೀ­ಸರಿಗೆ ದೂರು ನೀಡುವಂತೆ ಆಡಳಿತ ಮಂಡಳಿ ಸೂಚನೆ ನೀಡಿದ್ದರೂ ಅದನ್ನು ಸಹ ಭದ್ರತಾ ಸಿಬ್ಬಂದಿ ನಿರ್ಲಕ್ಷಿಸಿದ್ದರು ಎಂದು ‘ಪ್ರಜಾವಾಣಿ’ಗೆ ಲಭ್ಯವಾದ ಮಾಹಿತಿಯಲ್ಲಿ ತಿಳಿದುಬಂದಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry