ಭದ್ರಾವತಿ ವಿಐಎಸ್‌ಪಿ: ಖಾಸಗೀಕರಣದ ಹುನ್ನಾರ ?

7
ಕಾರ್ಮಿಕರ ನಿದ್ದೆಗೆಡಿಸಿರುವ ಪ್ರಕ್ರಿಯೆ

ಭದ್ರಾವತಿ ವಿಐಎಸ್‌ಪಿ: ಖಾಸಗೀಕರಣದ ಹುನ್ನಾರ ?

Published:
Updated:
ಭದ್ರಾವತಿ ವಿಐಎಸ್‌ಪಿ: ಖಾಸಗೀಕರಣದ ಹುನ್ನಾರ ?

ಭದ್ರಾವತಿ: ಒಂದೂವರೆ ದಶಕದಲ್ಲಿ ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್) ಇಲ್ಲಿನ ವಿಐಎಸ್‌ಪಿ ಕಾರ್ಖಾನೆಯನ್ನು ಎರಡು ಬಾರಿ ಜಾಗತಿಕ ಟೆಂಡರ್‌ ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಖಾಸಗೀಕರಣ ಮಂತ್ರ ಪಠಿಸಿದೆ.ಕಾರ್ಖಾನೆಯಲ್ಲಿ ಬೀಡು ಕಬ್ಬಿಣ ಕರಗಿ ಬಿಸಿ ಲೋಹವಾಗಿ ಹೊರ ಬರುವ ಪ್ರಕ್ರಿಯೆ ತಣ್ಣಗಿರಬಹುದು. ಆದರೆ, ಸೈಲ್‌ ಆಡಳಿತದ ಬಂಡವಾಳ ಹಿಂತೆಗೆತ, ಸಹಭಾಗಿತ್ವ ಪ್ರಸ್ತಾವ ಟೆಂಡರ್‌ ಬಿಸಿ ಇಲ್ಲಿನ ಕಾರ್ಮಿಕರ, ಚುನಾಯಿತ ಪ್ರತಿನಿಧಿಗಳ, ಕಾರ್ಮಿಕ ಮುಖಂಡರ, ನಾಗರಿಕರ ನಿದ್ದೆಗೆಡಿಸಿದೆ.ಹೌದು !  2007ರ ಸುಮಾರಿಗೆ ಬಂಡವಾಳ ಹಿಂತೆಗೆತ ಸಂಬಂಧ ಜಾಗತಿಕ ಟೆಂಡರ್‌ ಪ್ರಕ್ರಿಯೆ ನಡೆಸಿದ್ದ ಸೈಲ್‌ ಆಡಳಿತ ಈಗ ಏಕಾಏಕಿ 19ನೇ ಸೆಪ್ಟೆಂಬರ್‌ 2013ರಂದು ಸಹಭಾಗಿತ್ವ ಯೋಜನೆಯ ಟೆಂಡರ್‌ ಕರೆಯುವ ಮೂಲಕ ಮತ್ತೊಂದು ಶಾಕ್‌ ನೀಡಿದೆ. 

ವಿಶೇಷ ಎಂದರೆ ಈ ಎರಡು ಪ್ರಸ್ತಾವ ಹೊರಬಿದ್ದಿದ್ದು ಕಾರ್ಖಾನೆಗೆ ಬರುತ್ತಿದ್ದ ಕೆಮ್ಮಣ್ಣುಗುಂಡಿ ಅದಿರು ನಿಂತ ನಂತರ ಎಂಬುದು ಗಮನಾರ್ಹ ಅಂಶ. 1923 ರಿಂದ ಜೂನ್‌ 2004 ರ ತನಕ ಅದಿರು ಕೊರತೆ ಎದುರಿಸದ ಕಾರ್ಖಾನೆ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಗಣಿಯನ್ನು ಕಳೆದುಕೊಂಡಿತು.ಸೈಲ್‌ ಯುಗ: ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿದ್ದ ವಿಐಎಸ್‌ಎಲ್‌ 1989ರಲ್ಲಿ ಸೈಲ್‌ ಅಂಗಸಂಸ್ಥೆಯಾಗಿ ಸೇರ್ಪಡೆಗೊಂಡಿತು. 1998 ಡಿಸೆಂಬರ್‌ನಲ್ಲಿ ಈ ಕಾರ್ಖಾನೆ ಸಂಪೂರ್ಣ ಸೈಲ್‌ ಜತೆಗೆ ವಿಲೀನವಾಗುವ ಮೂಲಕ ವಿಐಎಸ್‌ಪಿ ಎಂದು ಬದಲಾಯಿತು.

ಇಷ್ಟರಲ್ಲಿ ಸಾಕಷ್ಟು ನಷ್ಟದ ಹಾದಿ ಹಿಡಿದಿದ್ದ ಕಾರ್ಖಾನೆ ಸ್ವಂತ ಗಣಿ ಕಳೆದುಕೊಂಡು ತನ್ನ ಉತ್ಪಾದನಾ ವೆಚ್ಚವನ್ನು ಕಡಿತ ಮಾಡಿಕೊಳ್ಳಲು ಸಾಧ್ಯವಾಗದೆ ಮತ್ತಷ್ಟು ಆರ್ಥಿಕ ಹಿನ್ನಡೆ ಅನುಭವಿಸಿತು. ಸಮಿತಿ ವರದಿ: ಸೈಲ್‌ ಆಡಳಿತಕ್ಕೆ ಸೇರುವ ಸಂದರ್ಭದಲ್ಲೇ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದ ವಿಐಎಸ್‌ಪಿ ಹೊಸ ಬಂಡವಾಳ ನಿರೀಕ್ಷೆ ಹೊಂದಿತ್ತು. ಆದರೆ, ಅದರ ಭಾಗವಾದ ದಿನದಿಂದ ಕಾರ್ಖಾನೆ ಅಪೇಕ್ಷೆಗೆ ತಕ್ಕಷ್ಟು ಬಂಡವಾಳ ಮಾತ್ರ ಹರಿದು ಬರಲಿಲ್ಲ.

ಈ ನಡುವೆ ಕಾರ್ಖಾನೆಯ ಪುನಶ್ಚೇತನ, ಬಂಡವಾಳ ಹೂಡಿಕೆ, ನಷ್ಟದ ಹಾದಿಯಿಂದ ಮೇಲೆ ತರಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ವರದಿ ನೀಡಲು ಮೆಕಾನ್‌ ಕನ್ಸಲ್ಟಿಂಗ್‌ ಕಂಪೆನಿಯನ್ನು ಉಕ್ಕು ಪ್ರಾಧಿಕಾರ ನೇಮಿಸಿತ್ತು. ಕಂಪೆನಿ ನೀಡಿದ ವರದಿಯಲ್ಲಿ ತುರ್ತಾಗಿ ` 4,500 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವ ಇದ್ದರೂ ಸಹ ವೆಚ್ಚ ಕಡಿತಕ್ಕೆ ಮಾನವ ಸಂಪನ್ಮೂಲ ಕಡಿತ, ಸಹಭಾಗಿತ್ವ ಯೋಜನೆ ಹಾಗೂ ಬಂಡವಾಳ ಹಿಂತೆಗೆತ ಪ್ರಕ್ರಿಯೆಯ ಅಗತ್ಯತೆ ಕುರಿತಾದ ಅಂಶಗಳು ಅಡಗಿತ್ತು ಎನ್ನಲಾಗಿದೆ.ಇದರ ಭಾಗವಾಗಿ ಮೊದಲ ಜಾಗತಿಕ ಟೆಂಡರ್‌ನಲ್ಲಿ ‘ಬಂಡವಾಳ ಹಿಂತೆಗೆತ’ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಪೂನಾ ಮೂಲದ ಸನ್‌ಫ್ಲಾಗ್‌ ಅಲಾಯ್‌ ಸ್ಟೀಲ್‌ ಪ್ಲಾಂಟ್‌ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು.ಇದಕ್ಕೆ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ಒಂದಿಷ್ಟು ವರ್ಷಗಳ ಕಾಲ ಸೈಲ್‌ ಯಾವುದೇ  ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡದೆ ಬಂಡವಾಳ ಸಹ ಹೂಡಿಕೆ ಮಾಡದೆ  ನಿರ್ಲಕ್ಷ್ಯ ತೋರಿದ ಕಾರಣ ನಷ್ಟತೆ ಪ್ರಮಾಣ ಹೆಚ್ಚುತ್ತಾ ಸಾಗಿತು.ಗಣಿ ಬೇಡಿಕೆ: ಕೆಮ್ಮಣ್ಣುಗುಂಡಿ ಅದಿರು ನಿಂತ ನಂತರ, ಸ್ವಂತ ಗಣಿ ಮಂಜೂರಾತಿಯ ಭಾಗ್ಯ ಮಾತ್ರ ಕಾರ್ಖಾನೆಗೆ ಲಭಿಸಿಲ್ಲ. ಒಂದು ಬಾರಿ ಮಂಜೂರಾದ ಗಣಿ ಜಾಗ ಕುರಿತಾಗಿ ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಲಯ ಮೆಟ್ಟಿಲೇರಿದ ಕಾರಣ ಅದು ಕೈತಪ್ಪಿತು.ಇದಾದ ನಂತರ ರಾಜ್ಯ ಸರ್ಕಾರ ಬಳ್ಳಾರಿ ಬಳಿ 126.96 ಹೆಕ್ಟರ್‌ ಭೂಮಿ ಮಂಜೂರಾತಿ ಪ್ರಸ್ತಾವ ನೀಡಿದ್ದು, ಇದಕ್ಕೆ ಅನುಮತಿ ಸಿಕ್ಕಿದೆ. ಜತೆಗೆ ಸಂಬಂಧಿಸಿದ ಕಾರ್ಮಿಕ ಮುಖಂಡರು, ಚುನಾಯಿತ ಪ್ರತಿನಿಧಿಗಳು ರಾಜ್ಯ ಸರ್ಕಾರದ ಮುಖಾಂತರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಕೆ ಮಾಡುವ ಪ್ರಯತ್ನ ಸಾಗಿದೆ.ಭದ್ರಾವತಿ ವಿಐಎಸ್‌ಪಿ ಸಾಕಷ್ಟು ಭೂಮಿ, ನೀರು, ವಿದ್ಯುತ್‌, ಉತ್ತಮ ವ್ಯವಸ್ಥೆಯ ಟೌನ್‌ಷಿಪ್‌ ಹೀಗೆ ಹತ್ತು ಹಲವು ಉತ್ತಮ ಸವಲತ್ತು ಹೊಂದಿದ್ದರು, ಕೇವಲ ಸ್ವಂತ ಗಣಿ ಕೊರತೆಯಿಂದ ಸಾಕಷ್ಟು ಸಂಕಷ್ಟ ಎದುರಿಸಿದೆ.ಆದರೆ ಈ ಯಾವುದೇ ಅಂಶವನ್ನು ಗಮನಿಸದ ಸೈಲ್‌ ಆಡಳಿತ ತನ್ನ ವ್ಯಾಪ್ತಿಗೆ ವಿಐಎಸ್‌ಪಿ ಸೇರಿದ ದಿನದಿಂದ ಹೊಸ ಬಂಡವಾಳ ಹಾಕದೆ, ವರದಿಯ ಆಧಾರದ ಮೇಲೆ ಹಲವು ಪ್ರಕ್ರಿಯೆಗೆ ಮುಂದಾಗಿರುವುದು ನೌಕರರ ಆಕ್ರೋಶ ಹೆಚ್ಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry