ಬುಧವಾರ, ನವೆಂಬರ್ 13, 2019
23 °C

ಭದ್ರಾ ಅಭಯಾರಣ್ಯದಲ್ಲಿ ಹುಲಿಗಳಿಗಿಲ್ಲ ರಕ್ಷಣೆ!

Published:
Updated:

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ನಡೆದಿರುವ ಹುಲಿ ಬೇಟೆ ಪ್ರಕರಣ, ಕೇರಳದಲ್ಲಿ ಹುಲಿ ಚರ್ಮ ಪತ್ತೆಯಾಗುವ ಮೂಲಕ ಎರಡು ವರ್ಷಗಳ ನಂತರ ಬೆಳಕಿಗೆ ಬಂದಿದೆ. ಅಲ್ಲದೆ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿಯ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ನಾಲ್ಕು ಹುಲಿ ಉಗುರುಗಳು ಪತ್ತೆಯಾಗಿದ್ದು, ಭದ್ರಾ ಅಭಯಾ ರಣ್ಯದಲ್ಲಿ ಹುಲಿಗಳಿಗೆ ರಕ್ಷಣೆ ಇದೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.ಎನ್.ಆರ್.ಪುರದ ಷಹಜಿ ಎಂಬಾತ 2010ರಲ್ಲಿ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಹೆಬ್ಬೆ ವಲಯದಲ್ಲಿ ಚಿರತೆ ಬೇಟೆಯಾಡಿದ್ದ. ಭದ್ರಾವತಿಯ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿ, ಚಿರತೆ ಚರ್ಮ ವಶಪಡಿಸಿ ಕೊಂಡಿದ್ದರು.ಜಾಮೀನು ಮೇಲೆ ಬಿಡುಗಡೆಯಾಗಿದ್ದ ಆರೋಪಿ ಷಹಜಿ ಸ್ವಲ್ಪ ದಿನಗಳಲ್ಲೇ ಹೆಬ್ಬೆ ವಲಯದಲ್ಲಿ ಹುಲಿ ಬೇಟೆ ಯಾಡಿ ಚರ್ಮವನ್ನು ಕೇರಳದ ಅಂತರರಾಷ್ಟ್ರೀಯ ಸಂಪರ್ಕ ಹೊಂದಿರುವ ವನ್ಯಜೀವಿ ಉತ್ಪನ್ನ ಕಳ್ಳಸಾಗಣೆದಾರರ ಇಕ್ಬಾಲ್ ಎಂಬಾತನಿಗೆ ಮಾರಾಟ ಮಾಡಿದ್ದ.ಕೇರಳ ಅರಣ್ಯ ಅಧಿಕಾರಿಗಳು ಒಂದು ತಿಂಗಳ ಹಿಂದೆ ಇಕ್ಬಾಲ್ ಮನೆ ಮೇಲೆ ದಾಳಿ ನಡೆಸಿದಾಗ ಹುಲಿ ಚರ್ಮ ಸಿಕ್ಕಿದೆ. ವಿಚಾರಣೆ ನಡೆಸಿದಾಗ ಬೇಟೆಗೆ ಬಲಿಯಾದ ಹುಲಿ ಭದ್ರಾ ಅಭಯಾರಣ್ಯಕ್ಕೆ ಸೇರಿದ್ದೆನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ವಶಪಡಿಸಿಕೊಂಡಿರುವ ಹುಲಿ ಚರ್ಮ ಮತ್ತು ಭದ್ರಾ ಅಭಯಾರಣ್ಯದಲ್ಲಿ ದಾಖಲಿಸಿರುವ ಛಾಯಾಚಿತ್ರಕ್ಕೆ ತಜ್ಞರು ಹೋಲಿಸಿ ನೋಡಿದಾಗ ತಾಳೆಯಾಗಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್.ಮಲ್ಲೇನಹಳ್ಳಿಯಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿರುವ ಇಬ್ಬರು ಕಳ್ಳಬೇಟೆಗಾರರಾದ ಕನಕ ಮತ್ತು ಶ್ರವಣ ಎಂಬುವವರ ಬಳಿ ಇದ್ದ 4 ಹುಲಿ ಉಗುರುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಉಗುರುಗಳ ಮೂಲವೂ ಭದ್ರಾ ಅಭಯಾರಣ್ಯವೇ ಆಗಿರುವ ಶಂಕೆ ವ್ಯಕ್ತವಾಗಿದೆ. ಕಾರ್ಯಾಚರಣೆ ವೇಳೆ ಹುಲಿ ಚರ್ಮವೂ ಸಿಗುವ ಸುಳಿವು ಇತ್ತು. ಆದರೆ, ಸ್ವಲ್ಪದರಲ್ಲಿ ತಪ್ಪಿ ಹೋಗಿದೆ ಎನ್ನುತ್ತಾರೆ ಶಶಿಕುಮಾರ್.ಈಗ ಸೆರೆ ಸಿಕ್ಕಿರುವ ಆರೋಪಿಗಳು ಪಕ್ಕಾ ವೃತ್ತಿಪರ ಬೇಟೆಗಾರರು. ಹುಲಿ, ಚಿರತೆ, ಕಡವೆ, ಜಿಂಕೆ, ಕಾಡು ಕುರಿ, ಕಾಡು ಬೆಕ್ಕು, ಬರ್ಕ, ಕಾಡು ಕೋಳಿ ಹಿಡಿಯುವ ಉರುಳನ್ನು ಹೊಂದಿದ್ದರು. ಇವರ ಸಂಪರ್ಕ ಜಾಲ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಮುಂಬೈವರೆಗೂ ವಿಸ್ತರಿಸಿದೆ ಎನ್ನುತ್ತಾರೆ ತನಿಖೆ ನಡೆಸುತ್ತಿರುವ ಪೊಲೀಸರು.`ಬೇಟೆಗಾರರ ಜಾಲ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ವನ್ಯಜೀವಿಗಳ ಸಂರಕ್ಷಣೆಗೆ ಕಠಿಣ ಕಾನೂನುಗಳಿದ್ದರೂ ಅನುಷ್ಠಾನವಾಗುತ್ತಿಲ್ಲ. ರಕ್ಷಕರೇ ಅರಣ್ಯ ಸಂಪನ್ಮೂಲದ ಲೂಟಿಗೆ ಇಳಿದಿದ್ದಾರೆ. ವಾರದ ಹಿಂದೆ ಅರಣ್ಯ ಇಲಾಖೆಯ ಒಬ್ಬ ಅಧಿಕಾರಿ ಮತ್ತು ಇನ್ನೊಬ್ಬ ಸಿಬ್ಬಂದಿ ಬೀಟೆ ಮರ ಕದ್ದು ಕುಯ್ಯಿಸುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ. ದಿನಕ್ಕೊಂದು ವನ್ಯಜೀವಿ ಬೇಟೆಗಾರರಿಗೆ ಬಲಿಯಾಗುತ್ತಿವೆ. ಹುಲಿ ಹತ್ಯೆ ತಡೆಯಬೇಕಾದ ಬೇಟೆ ನಿಗ್ರಹ ಶಿಬಿರಗಳು ಮತ್ತು ಅರಣ್ಯ ಉತ್ಪನ್ನ ಕಳ್ಳಸಾಗಣೆ ತಡೆಯುವ ಜಾಗೃತ ದಳಗಳು ಗಾಢ ನಿದ್ರೆಯಲ್ಲಿವೆ' ಎಂದು ಭದ್ರಾ ವೈಲ್ಡ್‌ಲೈಫ್ ಕನ್ಸರ್‌ವೇಷನ್ ಟ್ರಸ್ಟ್‌ನ ಡಿ.ವಿ.ಗಿರೀಶ್ ವಿಷಾದಿಸುತ್ತಾರೆ.`2006ರಿಂದ 12ರವರೆಗೆ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ 9 ಆನೆ, 4 ಚಿರತೆ, 2 ಹುಲಿ, 1 ಕಾಟಿ ಹತ್ಯೆ ನಡೆದಿದೆ. 9 ಆನೆಗಳ ಪೈಕಿ 2 ಆನೆಗಳ ಹತ್ಯೆ ದಂತಕ್ಕಾಗಿಯೇ ನಡೆದಿದೆ. ಇನ್ನು ಜಿಂಕೆ, ಕಡವೆ, ಕಾಡುಹಂದಿ ಬೇಟೆ ಲೆಕ್ಕ ಇಟ್ಟವರು ಯಾರು? ಎನ್ನುವಂತಾಗಿದೆ.ಎಕೋ ಡೆವಲಪ್‌ಮೆಂಟ್ ಕಮಿಟಿಗೆ ಹುಲಿ ಯೋಜನೆಯಿಂದ ಅನುದಾನ ಬರುತ್ತಿದೆ. ಅನುದಾನಕ್ಕಾಗಿ ಭದ್ರಾ ಅರಣ್ಯದಲ್ಲಿ ಬೇಟೆ ನಿಗ್ರಹಿಸಲಾಗಿದೆ ಎನ್ನುವ ಸುಳ್ಳು ದಾಖಲೆ ತೋರಿಸುತ್ತಾರೆ' ಎನ್ನುವುದು ವನ್ಯಜೀವಿ ಕಾರ್ಯಕರ್ತ ಜಿ.ವೀರೇಶ್ ದೂರು.`ಒಂದು ಬೇಟೆ ನಿಗ್ರಹ ಶಿಬಿರದಲ್ಲಿ ಕನಿಷ್ಠ 8 ಮಂದಿ ಇರಬೇಕು. ಆದರೆ, ಭದ್ರಾ ಅಭಯಾರಣ್ಯ ವ್ಯಾಪ್ತಿಯ 36 ಬೇಟೆ ನಿಗ್ರಹ ಶಿಬಿರಗಳಲ್ಲೂ ತಲಾ ಇಬ್ಬರು ಮಾತ್ರ ಇರುತ್ತಾರೆ. ದಾಖಲೆ ಪುಸ್ತಕದಲ್ಲಿ ಮಾತ್ರ 8 ಮಂದಿ ಉಂಟು. ಕಾಲ್ನಡಿಗೆಯಲ್ಲಿ ಗಸ್ತು ತಿರುಗುವ ವ್ಯವಸ್ಥೆ ನಿಂತೇ ಹೋಗಿದೆ. ಭದ್ರಾ ಹಿನ್ನೀರಿನಲ್ಲಿ ಮೀನು, ಕಾಡು ಪ್ರಾಣಿಗಳ ಶಿಕಾರಿ ಹಾಗೂ ಬೆಲೆ ಬಾಳುವ ಮರಗಳ ಕಳ್ಳಸಾಗಣೆ ನಿರಂತರ ನಡೆಯುತ್ತಿದೆ' ಎಂದು ದೂರುತ್ತಾರೆ ಅವರು.`ಸಿಡಬ್ಲ್ಯುಎಸ್ ಮತ್ತು ಭದ್ರಾ ವನ್ಯಜೀವಿ ವಿಭಾಗ ಜಂಟಿಯಾಗಿ 2012ರ ಏಪ್ರಿಲ್ 18ರಿಂದ ಮೇ 8ರವರೆಗೆ ನಡೆಸಿದ ಗಣತಿ ವೇಳೆ ಹುಲಿಗಳ 33 ಛಾಯಾಚಿತ್ರಗಳು ಸೆರೆಯಾಗಿವೆ. ಇದರಲ್ಲಿ 13 ಚಿತ್ರಗಳು ಭಿನ್ನವಾಗಿವೆ. ಅಭಯಾರಣ್ಯದಲ್ಲಿ ಸುಮಾರು 100 ಕ್ಯಾಮೆರಾ ಟ್ರ್ಯಾಪಿಂಗ್ ಇದೆ. 2010-11ರ ಅಂಕಿ ಅಂಶದ ಪ್ರಕಾರ ಭದ್ರಾದಲ್ಲಿ 33 ಚದರ ಕಿ.ಮೀ.ಗೆ ಅಂದಾಜು 1 ಹುಲಿ ಇದೆ' ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.ಈ ಹಿಂದಿನ ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್, ಶಿಕಾರಿಪುರ ತಾಲ್ಲೂಕಿನ ಗಾಮಾ ಬಳಿ ಸೆರೆ ಸಿಕ್ಕಿದ್ದ ಹೆಬ್ಬುಲಿಯನ್ನು ಮುತ್ತೋಡಿಗೆ ಬಿಡಲು 2011ರ ಮೇ ತಿಂಗಳಲ್ಲಿ ಭೇಟಿ ನೀಡಿದ್ದರು. ಆಗ ಭದ್ರಾ ಅಭಯಾರಣ್ಯದಲ್ಲಿ ಅಂದಾಜು 32ರಿಂದ 35 ಹುಲಿಗಳಿವೆ. ಹುಲಿ ಸಂತತಿ ವೃದ್ಧಿಗೆ ಭದ್ರಾ ಅಭಯಾರಣ್ಯ ದೇಶದಲ್ಲೆ ಪ್ರಶಸ್ತವಾಗಿದೆ ಎಂದು ಹೇಳಿದ್ದರು. ಭದ್ರಾ ಅಭಯಾರಣ್ಯದ ಒಟ್ಟು ವಿಸ್ತೀರ್ಣ 1070 ಚದರ ಕಿ.ಮೀ. ಇದೆ. ಇದರಲ್ಲಿ 500 ಚದರ ಕಿ.ಮೀ. ಕೋರ್‌ಜೋನ್ ಮತ್ತು 570 ಚದರ ಕಿ.ಮೀ. ಬಫರ್ ಜೋನ್ ಎಂದು ಗುರುತಿಸಲಾಗಿದೆ.

ಪ್ರತಿಕ್ರಿಯಿಸಿ (+)