ಮಂಗಳವಾರ, ಅಕ್ಟೋಬರ್ 15, 2019
29 °C

ಭದ್ರಾ ಮೇಲ್ದಂಡೆ ಅಕ್ರಮ: ವರದಿ ಸಲ್ಲಿಕೆಗೆ ಜ.30ರ ಗಡುವು

Published:
Updated:

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆ ಎರಡನೇ ಹಂತದ ಕಾಮಗಾರಿಯ ಗುತ್ತಿಗೆ ನೀಡಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕುರಿತ ತನಿಖೆಯ ಅಂತಿಮ ವರದಿ ಸಲ್ಲಿಕೆಗೆ ಲೋಕಾಯುಕ್ತ ಪೊಲೀಸರಿಗೆ ನೀಡಿದ್ದ ಗಡುವನ್ನು ಇದೇ 30ರವರೆಗೆ ವಿಸ್ತರಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.ಈ ಮೊದಲು ನ್ಯಾಯಾಲಯ ನೀಡಿದ್ದ ಗಡುವಿನ ಪ್ರಕಾರ ಮಂಗಳವಾರ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಬೇಕಿತ್ತು. ತನಿಖೆ ಪೂರ್ಣಗೊಂಡಿದ್ದು ಕೆಲ ಅಂಶಗಳ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಕೋರಿ ವರದಿಯನ್ನು ಕಳುಹಿಸಲಾಗಿದೆ ಎಂದು ತನಿಖಾ ತಂಡ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಗಡುವನ್ನು ವಿಸ್ತರಿಸಿದರು.ಕಳೆದ ಆಗಸ್ಟ್‌ನಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ವೈ.ಎಸ್.ವಿ.ದತ್ತ, `ಭದ್ರಾ ಮೇಲ್ದಂಡೆ ಯೋಜನೆ ಎರಡನೇ ಹಂತದ ಕಾಮಗಾರಿಯ ಗುತ್ತಿಗೆಯನ್ನು ಆರ್.ಎನ್.ಶೆಟ್ಟಿ-ಜ್ಯೋತಿ ಜಂಟಿ ಪಾಲುದಾರಿಕೆ ಕಂಪೆನಿಗೆ ನೀಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ  ಕುಟುಂಬದ ಸದಸ್ಯರ ಮೂಲಕ 13 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ~ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಆಗಸ್ಟ್ 8ರಂದು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು.ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಗಿರೀಶ್, ಪ್ರಕರಣಕ್ಕೆ ಸಂಬಂಧಿಸಿದ ಕೆಲ ಅಂಶಗಳ ಕುರಿತು ಕಾನೂನು ತಜ್ಞರ ಅಭಿಪ್ರಾಯ ಕೋರಿರುವ ಹಿನ್ನೆಲೆಯಲ್ಲಿ ಅಂತಿಮ ವರದಿ ಸಲ್ಲಿಕೆಗೆ ಮೂರು ವಾರ ಕಾಲಾವಕಾಶ ನೀಡುವಂತೆ ಕೋರಿದರು. ತನಿಖೆಯ ಪ್ರಗತಿ ಕುರಿತು ವಾಸ್ತವಿಕ ವರದಿಯನ್ನೂ ಸಲ್ಲಿಸಿದರು. ತನಿಖಾ ತಂಡ ಸಲ್ಲಿಸಿರುವ ವಾಸ್ತವಿಕ ವರದಿ, ತನಿಖಾಧಿಕಾರಿಯ ಬೇಡಿಕೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, ಗಡುವನ್ನು ಮೂರು ವಾರಗಳ ಕಾಲ ವಿಸ್ತರಿಸಿದರು.

Post Comments (+)