ಭದ್ರಾ ಮೇಲ್ದಂಡೆ ಹಗರಣ: 26ರೊಳಗೆ ವರದಿಗೆ ಆದೇಶ

7

ಭದ್ರಾ ಮೇಲ್ದಂಡೆ ಹಗರಣ: 26ರೊಳಗೆ ವರದಿಗೆ ಆದೇಶ

Published:
Updated:

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಗುತ್ತಿಗೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಿಸಿರುವ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ಅಕ್ಟೋಬರ್ 26ರೊಳಗೆ ವರದಿ ಸಲ್ಲಿಸುವಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ಆರಂಭಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ದೂರಿನಲ್ಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ಅ. 26ರೊಳಗೆ ವರದಿ ಸಲ್ಲಿಸುವಂತೆ ಆದೇಶ ನೀಡಿದರು.ಮಂಗಳವಾರ ವಿಚಾರಣೆಯ ವೇಳೆ ತನಿಖೆಯ ಪ್ರಗತಿ ಕುರಿತು ನ್ಯಾಯಾಲಯಕ್ಕೆ ವಿವರ ನೀಡಿದ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಗಿರೀಶ್, ತನಿಖೆ ಪೂರ್ಣಗೊಳಿಸಲು ಎರಡು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಸದ್ಯ ದಾಖಲೆಗಳನ್ನು ಕಲೆಹಾಕಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿನ ತಾಂತ್ರಿಕ ಅಂಶಗಳ ಬಗ್ಗೆ ತಜ್ಞರಿಂದ ಅಭಿಪ್ರಾಯ ಪಡೆಯಬೇಕಿದೆ. ಹಲವು ಅಧಿಕಾರಿಗಳ ಹೇಳಿಕೆ ದಾಖಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲಾವಕಾಶ ನೀಡಬೇಕೆಂದು ಕೋರಿದರು.ಆದರೆ ಪೊಲೀಸರ ಕೋರಿಕೆಯನ್ನು ಪೂರ್ಣವಾಗಿ ಮಾನ್ಯಮಾಡದ ನ್ಯಾಯಾಧೀಶರು, ಅ. 26ರವರೆಗೆ ಕಾಲಾವಕಾಶ ನೀಡಿದರು. ಅರ್ಜಿದಾರರಾದ ವೈ.ಎಸ್.ವಿ.ದತ್ತ ವಿಚಾರಣೆ ವೇಳೆ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry