ಶುಕ್ರವಾರ, ಮಾರ್ಚ್ 5, 2021
21 °C
ಪಂಚಾಯ್ತಿ ಸಮರ -ಪಂಚಾಯಿತಿ ಚುನಾವಣೆಯತ್ತ ರೈತರ ನಿರಾಸಕ್ತಿ, ಹಳ್ಳಿಯಲ್ಲಿ ಕಾವೇರದ ಚರ್ಚೆ

ಭದ್ರೆಯ ಗುಂಗು; ಪಡೆಯದ ರಂಗು

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಭದ್ರೆಯ ಗುಂಗು; ಪಡೆಯದ ರಂಗು

ದಾವಣಗೆರೆ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯ ಪರಿಣಾಮ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಸಮಾಜವಾದಿ ಪಕ್ಷಗಳ ಮುಖಂಡರು ಟಿಕೆಟ್‌ ಹಂಚಿಕೆ, ಸಭೆ– ಸಮಾರಂಭ, ಟಿಕೆಟ್‌ ಸಿಗದೇ ಅಸಮಾಧಾನಗೊಂಡವರನ್ನು ಸಮಾಧಾನ ಪಡಿಸುವಲ್ಲಿ ನಿರತರಾಗಿದ್ದರೆ, ಜಿಲ್ಲೆಯ ಅನ್ನದಾತ ಮಾತ್ರ ಈ ಚುನಾವಣೆಯತ್ತ ಇನ್ನೂ ನಿರಾಸಕ್ತಿ ತಳೆದಿದ್ದಾನೆ! ಜಿಲ್ಲೆಯ ರೈತರಿಗೆ ಈ ಬಾರಿ ಭದ್ರಾ ನೀರಿನದ್ದೇ ಚಿಂತೆ.ಕಳೆದ ‘ಕಾಡಾ’ ಸಭೆಯಲ್ಲಿ ನೀರು ಕೊಡುವುದಾಗಿ ಘೋಷಣೆ ಮಾಡಿದ ಪರಿಣಾಮ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಂತಸಗೊಂಡಿದ್ದರು. ಚುನಾವಣೆ ಜೊತೆಗೆ ಭತ್ತದ ನಾಟಿಯನ್ನೂ ಮಾಡುವ ಖುಷಿಯಲ್ಲಿದ್ದರು. ಆದರೆ, ಭದ್ರೆ ಹರಿಯದ ಪರಿಣಾಮ ಹಳ್ಳಿಯಲ್ಲಿ ಚುನಾವಣೆಯ ರಂಗು ಕಾಣಿಸುತ್ತಿಲ್ಲ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ ತಾಲ್ಲೂಕಿನ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಚುನಾವಣೆ ಕುರಿತು ಕಾವೇರಿದ ಚರ್ಚೆಗಳು ನಡೆಯುತ್ತಿಲ್ಲ. ಎಲ್ಲಿ ಕುಳಿತರು, ನಿಂತರೂ ನೀರಿನ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಸಾಲ ಮಾಡಿರುವ ರೈತರು ಸಾಲ ತೀರಿಸುವ ಚಿಂತೆಯಲ್ಲಿದ್ದಾರೆ.ಗ್ರಾಮೀಣ ಪ್ರದೇಶದವರು ಹಗಲಿನ ವೇಳೆ ಗದ್ದೆಯಲ್ಲಿ ರೊಳ್ಳೆ ಹೊಡೆಯುವುದು, ಸಸಿಮಡಿ, ನೀರುಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡು ಸಂಜೆ ವೇಳೆಗೆ ಚುನಾವಣೆ ಚರ್ಚೆ, ಓಲೈಕೆಯಲ್ಲಿ ಮಗ್ನರಾಗುತ್ತಿದ್ದರು. ಇದೀಗ ಜಿಲ್ಲೆಯ ಹಳ್ಳಿಯಲ್ಲಿ ಅಂತಹ ವಾತಾವರಣ ಕಾಣಿಸುತ್ತಿಲ್ಲ. ಶಾಮನೂರು, ಜರೀಕಟ್ಟೆ, ಮಿಟ್ಲಕಟ್ಟೆ, ದೇವರಬೆಳಕೆರೆ, ಮಲೇಬೆನ್ನೂರು ಸುತ್ತಮುತ್ತ, ಹೊನ್ನಾಳಿ, ಕುಂದೂರು, ಹದಡಿ, ಚೀಲೂರು, ಕತ್ತಲಗೆರೆ, ಹಿರೇಕೋಗಲೂರು, ತ್ಯಾವಣಿಗೆ, ಮತ್ತಿ ಕ್ಯಾಂಪ್‌ನಲ್ಲಿ ಸೇರಿದಂತೆ ನೂರಾರು ಹಳ್ಳಿಗಳಲ್ಲಿ ಕೊಳವೆಬಾವಿ ಆಶ್ರಯಿಸಿ, ಸಸಿ ಮಾಡಿಸಿಕೊಂಡಿದ್ದಾರೆ. ಅಲ್ಲಲ್ಲಿ ಅವೂ ಸಹ ನೀರಿಲ್ಲದೇ ಒಣಗಿ ನಿಂತಿವೆ. ನೀರಾವರಿ ಆಶ್ರಯಿಸಿರುವ ಹಳ್ಳಿಗಳಲ್ಲಿ ಇನ್ನೂ ರಾಜಕೀಯ ಕಾವು ಪಡೆಯದಿರುವುದು ರಾಜಕೀಯ ಪಕ್ಷಗಳಿಗೂ ತಲೆನೋವಾಗಿದೆ.ನೀರಿನಲ್ಲೂ ಅಡಗಿದೆ ಲೆಕ್ಕಾಚಾರ: ಭದ್ರಾ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ಜನವರಿ 29ರಂದು ಪ್ರತಿಭಟನೆಗೆ ಮುಂದಾಗಿದೆ. ಜಲಾಶಯದಲ್ಲಿ  ಅಗತ್ಯ ನೀರಿನ ಸಂಗ್ರಹವಿದೆ. ಬಿಜೆಪಿ ಆಡಳಿತದಲ್ಲಿದ್ದಾಗಲೂ ಇಷ್ಟೇ ಪ್ರಮಾಣದ ನೀರು ಜಲಾಶಯದಲ್ಲಿತ್ತು. ರೈತರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಭತ್ತದ ಬೆಳೆಗೆ ನೀರು ಹರಿಸಲಾಗಿತ್ತು. ಇದೀಗ ಏಕೆ ಸಾಧ್ಯವಾಗುತ್ತಿಲ್ಲ ಎಂದು ವಾದಿಸುತ್ತಾರೆ ಬಿಜೆಪಿ ಮುಖಂಡರು.ಕಳೆದ ತಿಂಗಳೂ ಸಹ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಅದರ ಫಲವಾಗಿ ಭರವಸೆ ಮಾತ್ರ ಸಿಕ್ಕಿತ್ತು. ಇದೀಗ ಚುನಾವಣೆ ಹೊಸ್ತಿಲಲ್ಲಿಯೇ ಮತ್ತೊಮ್ಮೆ ‘ಕಾಡಾ’ ಕಚೇರಿಗೆ ಮುತ್ತಿಗೆ ಹಾಕಿದೆ. ಕಾಂಗ್ರೆಸ್ ಮುಖಂಡರೂ ಸಹ ಭದ್ರಾ ನೀರು ಹರಿಸಲೇಬೇಕು ಎಂಬ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.ಫೆಬ್ರುವರಿ 13ರ ಮೊದಲ ಹಂತದಲ್ಲಿಯೇ ದಾವಣಗೆರೆಯಲ್ಲೂ ಮತದಾನ ನಡೆಯುತ್ತಿದ್ದು ಅಷ್ಟರೊಳಗೆ ಭದ್ರಾ ನೀರು ಹರಿಯಬೇಕು. ಆ ಹೊತ್ತಿಗೆ ಜಿಲ್ಲೆಯ ಗದ್ದೆಗಳಲ್ಲಿ ಹಸಿರಿನ ಸಿಂಚನವಾದರೆ ಲಾಭವಾಗಲಿದೆ ಎಂಬ ಲೆಕ್ಕಾಚಾರದಲ್ಲೂ ರಾಜಕೀಯ ಪಕ್ಷಗಳಿವೆ. ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯ ಅಖಾಡಕ್ಕೆ ಇಳಿಯುವ ಘೋಷಣೆ ಮಾಡಿರುವ ರೈತ ಸಂಘಟನೆಗಳೂ ಭದ್ರಾ ನೀರು ಹರಿಸಲೇಬೇಕು ಎಂದು ಆಗ್ರಹಿಸುತ್ತಿವೆ. ‘ಕಾಡಾ ಮಾತು ನಂಬಿ ಸಸಿ ಮಡಿ ಮಾಡಿಕೊಂಡೆವು. ರಸಗೊಬ್ಬರ ದಾಸ್ತಾನು ಸಹ ಮಾಡಿಕೊಂಡಿದ್ದೇವೆ. ಈಗಾಗಲೇ ಜೇಬಿಗೆ ಕತ್ತರಿ ಬಿದ್ದಿದೆ. ಹೀಗಾಗಿ ನಮಗೆ ಪಂಚಾಯಿತಿ ಚುನಾವಣೆ ಚಿಂತೆಗಿಂತ ಭತ್ತದ ಬೆಳೆಯದ್ದೆ ಚಿಂತೆಯಾಗಿದೆ. ಚುನಾವಣೆ ಬರುತ್ತೆ; ಹೋಗುತ್ತೆ. ಭತ್ತ ಬೆಳೆಯದಿದ್ದರೆ ನಮಗೆ ಜೀವನ ನಿರ್ವಹಣೆ ಕಷ್ಟವಾಗಲಿದೆ. ಆಕಾಂಕ್ಷಿಗಳು ಇನ್ನೂ ಟಿಕೆಟ್‌ ಪಡೆಯುವ ಕಸರತ್ತಿನಲ್ಲಿರುವ ಕಾರಣಕ್ಕೆ ಹಳ್ಳಿಯತ್ತ ಮುಖಮಾಡಿಲ್ಲ. ಪ್ರಚಾರ ಹಾಗೂ ಸಭೆಗೆ ಬರುವವರಿಗೆ ನೀರು ಹರಿಸುವಂತೆ ತಾಕೀತು ಮಾಡುತ್ತೇವೆ’ ಎನ್ನುತ್ತಾರೆ ಹದಡಿ ಗ್ರಾಮದ ರೇವಣಸಿದ್ದಪ್ಪ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.