ಭಯದ ಕೂಪಕ್ಕೆ ನೂಕಿದ ಕ್ರೌರ್ಯ

7

ಭಯದ ಕೂಪಕ್ಕೆ ನೂಕಿದ ಕ್ರೌರ್ಯ

Published:
Updated:

ಬಾಗಲಕೋಟೆ: ಜಿಲ್ಲೆಯಲ್ಲಿ ವಾರದೊಳಗೆ ನಡೆದ ಮೂರು ಪ್ರತೇಕ ಕೊಲೆ ಪ್ರಕರಣಗಳು ಜನತೆಯನ್ನು ಭಯದ ಕೂಪಕ್ಕೆ ನೂಕಿದೆ, ಅಲ್ಲದೇ ಕ್ರೌರ್ಯದ ಪರಮಾವಧಿಗೆ ಜಿಲ್ಲೆಯ ಪೊಲೀಸ್ ಇಲಾಖೆ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.ಕೌಟುಂಬಿಕ ದ್ವೇಷದಿಂದ ನಡೆದಿರುವ ಮೂರು ಪ್ರಕರಣದ ನಡುವೆ ಸಾಕಷ್ಟು ಸಾಮ್ಯತೆ ಇದ್ದು, ಆರೋಪಿಗಳು ತಮ್ಮ ವೈರಿಗಳನ್ನು ಮುಗಿಸಲು ಬೆಂಕಿಯ ಮೊರೆಹೋಗಿರುವುದು ಆತಂಕಕಾರಿಯಾಗಿದೆ.ಬಾಗಲಕೋಟೆ ತಾಲ್ಲೂಕಿನ ಶಿರೂರ, ಹುನಗುಂದ ತಾಲ್ಲೂಕಿನ ಹಿರೇಮಾಗಿ ಮತ್ತು ಬಲಕುಂದಿಯಲ್ಲಿ ನಡೆದ  ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಮೂರು ಜನ ಬಲಿಯಾಗಿದ್ದಾರೆ. ಇನ್ನು ಮೂರು ಜನ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.ಶಿರೂರ ಆಶ್ರಯ ಕಾಲೋನಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಉಂಟಾದ ವೈಮನಸ್ಸು ಬೆಳೆದು ಕೊನೆಗೆ ಇಡೀ ಕುಟುಂಬವನ್ನೇ ಸಜೀವವಾಗಿ ದಹನ ಮಾಡಲು ಯತ್ನಿಸಿ, ಒಬ್ಬನನ್ನು ಬಲಿ ಪಡೆದಿರುವ ಪ್ರಕರಣ ಅತ್ಯಂತ ಹೇಯವಾಗಿದೆ.ಇದೇ ಪ್ರಕರಣದಲ್ಲಿ ಐದು ತಿಂಗಳ ಗರ್ಭಿಣಿಯನ್ನೂ ಬಿಡದೇ ಬೆಂಕಿ ಹಚ್ಚಿ ಕ್ರೂರತೆ ಮೆರೆದ ರಕ್ತ ಪಿಪಾಸುಗಳನ್ನು ಪೊಲೀಸರು ಅದಾಗಲೇ ಜೈಲು ಸೇರಿಸಿರುವುದು ಸಮಾದಾನದ ಸಂಗತಿ. ಆದರೆ ಈ ಪ್ರಕರಣದಲ್ಲಿ ಶಾಲಾ ಶಿಕ್ಷಕನೇ ನೇರವಾಗಿ ಪಾಲ್ಗೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕೆಲ ತಿಂಗಳ ಹಿಂದಷ್ಟೇ ಇದೇ ಶಿಕ್ಷಕ ಶಾಲೆಯ ಮುಖ್ಯ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಕೊಠಡಿಯೊಳಗೆ ಕೂಡಿಹಾಕಿ ಮನಬಂದಂತೆ ತಳಿಸಿದ್ದ, ಇದೇ ಕಾರಣಕ್ಕೆ ಈತನನ್ನು ಅಮಾನತು ಮಾಡಲಾಗಿತ್ತು.  ಶಿರೂರ ಪ್ರಕರಣವನ್ನು ಕೌಟುಂಬಿಕ ಕಲಹ ಎಂದು ತಿರುಚಲು ಆರೋಪಿಗಳು ಹವಣಿಸಿದ್ದಾರೆ. ಆದರೆ ಇದು ಮೇಲ್ನೋಟಕ್ಕೆ ತಿಳಿಯುವಂತೆ ಕೌಟುಂಬಿಕ ಕಲಹ ಅಲ್ಲ, ಕಡಿವಾಲ ಕುಟುಂಬದ ಅಮಾನವೀಯತೆಯ ಸಂಕೇತವಾಗಿದೆ.ಅಮೀನಗಡ ಸಮೀಪದ ಹಿರೇಮಾಗಿಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ತಮ್ಮ ಹಾಗೂ ತಮ್ಮನ ಹೆಂಡತಿಯನ್ನು ಅಮಾನುಷವಾಗಿ ಹೊಡೆದು ಸಾಯಿಸಿ ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಶವಗಳನ್ನು ಹುಲ್ಲಿನ ಬಣವೆಗೆ ಹಾಕಿ ಸುಟ್ಟುಹಾಕಿರುವುದು ಈ ಭಾಗದ ಜನತೆ ಮನೆಯಿಂದ ಹೊರಗೆ ಹೆಜ್ಜೆ ಇಡಲು ಅಂಜುವಂತೆ ಮಾಡಿದೆ.ಹಿರೆಮಾಗಿ ಪ್ರಕಟಣದಲ್ಲಿ ಆರೋಪಿ ಪರಾರಿಯಾಗಿದ್ದು, ಈತನಿಂದ  ಮೃತಪಟ್ಟ ದಂಪತಿಯ ಇಬ್ಬರು ಮಕ್ಕಳ ಜೀವಕ್ಕೆ ಮತ್ತೇನಾದರು ಅಪಾಯ ಆಗಬಹುದು ಎಂಬ ಆತಂಕ ಗ್ರಾಮಸ್ಥರನ್ನು ಕಾಡತೊಡಗಿದೆ. ಆದಷ್ಟು ಬೇಗ ಈತನನ್ನು ಪೊಲೀಸರು ಸೆರೆ ಹಿಡಿದು ತಕ್ಷ ಶಿಕ್ಷೆ ನೀಡಬೇಕು ಎಂಬುದು ಜನತೆಯ ಆಗ್ರಹವಾಗಿದೆ.ಇನ್ನು ಇಳಕಲ್ ಸಮೀಪದ ಬಲಕುಂದಿ ತಾಂಡಾದಲ್ಲಿ ತವರು ಮನೆಗೆ ಹೋಗಿದ್ದ ಪತ್ನಿ ಕರೆಯಲು ಹೋದ ಪತಿಯನ್ನು ಮಾವನ ಮನೆಯವರು ಹಗ್ಗದಿಂದ ಕಟ್ಟಿಹಾಕಿ ಸೀಮೆಎಣ್ಣೆ ಸುರಿದು ಸಾಯಿಸಲು ಯತ್ನಿಸಿರುವುದು ಜನತೆಯ ಭಯವನ್ನು ಮತ್ತಷ್ಟು ಹೆಚ್ಚಿಸಿದೆ.ಒಂದೇ ವಾರದೊಳಗೆ ನಡೆದ ಈ ಮೂರು ಪ್ರಕರಣ ಜಿಲ್ಲೆಯ ಜನತೆಯನ್ನು ಭಯಭೀತಿ ಗೊಳಿಸಿರುವ ಜೊತೆಗೆ  ಮಾಧ್ಯಮಗಳಲ್ಲಿ ರಾಜ್ಯದಾದ್ಯಂತ ಸುದ್ದಿಯಾಗುವ ಮೂಲಕ ರಾಜ್ಯದ ಜನತೆಯ ದೃಷ್ಠಿಯಲ್ಲಿ ಜಿಲ್ಲೆಗೆ ಕೆಟ್ಟ ಸಂದೇಶ ರವಾನೆಯಾಗುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry