ಭಯದ ನೆರಳಲ್ಲಿ ಬಾವಲಿ ಬಳಗ

7

ಭಯದ ನೆರಳಲ್ಲಿ ಬಾವಲಿ ಬಳಗ

Published:
Updated:

ಶ್ರೀನಿವಾಸಪುರ: ಶ್ರೀನಿವಾಸಪುರದ ಸುತ್ತಮುತ್ತ ಮಾವಿನ ತೋಟದಲ್ಲಿ ಅಡ್ಡಾಡುವವರಿಗೆ ಗುಂಡೇಟಿನಿಂದ ಸತ್ತುಬಿದ್ದ ಬಾವಲಿಗಳು ಕಂಡುಬರುವುದು ಸಾಮಾನ್ಯ. ರಾತ್ರಿ ಹೊತ್ತು ಮೇವಿಗೆ ಹೊರಡುವ ಈ ಹಾರಾಡುವ ಸಸ್ತನಿಗಳು ಅತ್ತಿ, ಆಲ, ಗೋಣಿ, ಅರಳಿ ಮುಂತಾದ ಮರಗಳಲ್ಲಿನ ಹಣ್ಣುಗಳನ್ನು ಸವಿದು ಹೊಟ್ಟೆ ತುಂಬಿಸಿಕೊಂಡು ಬೆಳಗಾಗುವುದರೊಳಗೆ ತಮ್ಮನೆಲೆಯನ್ನು ಸೇರಿಕೊಳ್ಳುತ್ತವೆ.ಆದರೆ ಮೇವಿಗೆ ಹೊರಟ ಬಾವಲಿಗಳೆಲ್ಲಾ ಮತ್ತೆ ಕ್ಷೇಮವಾಗಿ ಹಿಂದಿರುಗುತ್ತವೆ ಎಂದು ಹೇಳಲಾಗದು. ಬಾವಲಿಗಳ ಮಾಂಸ ರುಚಿಗೆ ಹೆಸರಾಗಿರುವುದರಿಂದ ಮತ್ತು ಅವುಗಳ ಮಾಂಸವನ್ನು ನಾಟಿ ವೈದ್ಯರು ಕೆಲವು ರೋಗಗಳಿಗೆ ಔಷಧಿಯನ್ನಾಗಿ ಸಲಹೆ ಮಾಡುವುದರಿಂದ, ಬೇಟೆಗಾರರು ಹಣ್ಣಿನ ಮರಗಳ ಕೆಳಗೆ ಅಡಗಿ ಕುಳಿತು ಬಂದೂಕಿನಿಂದ ಬೇಟೆಯಾಡುತ್ತಾರೆ. ರೋಗಿಯ ಅಗತ್ಯಕ್ಕೆ ತಕ್ಕಂತೆ ಬಾವಲಿಯ ಬೆಲೆ ನಿಗದಿಯಾಗಿರುತ್ತದೆ ಎನ್ನುತ್ತಾರೆ ಸ್ಥಳೀಯರು.ಹಾಗೆ ಗುಂಡೇಟಿನಿಂದ ಗಾಯಗೊಂಡ ಬಾವಲಿಗಳು ಕೆಲವೊಮ್ಮೆ ಕತ್ತಲಲ್ಲಿ ಒಂದಷ್ಟು ದೂರ ಹಾರಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುವುದುಂಟು. ಬೇಟೆಗಾರರ ಕೈ ತಪ್ಪಿದ ಬಾವಲಿಗಳು ಹಗಲಲ್ಲಿ ಅಡ್ಡಾಡುವವರ ಕಣ್ಣಿಗೆ ಬೀಳುತ್ತವೆ. ಕೆಲವೊಮ್ಮೆ ಹೀಗೆ ನೆಲಕ್ಕೆ ಉರುಳಿದ ಬಾವಲಿಗಳು ನಾಯಿ ನರಿಗಳ ಪಾಲಾಗುವುದೂ ಉಂಟು. ಇಷ್ಟಕ್ಕೂ ಈ ಬಾವಲಿಗಳು ಎಲ್ಲಿಂದ ಬರುತ್ತವೆ ಎಂದು ತಿಳಿಯುವ ಕುತೂಹಲವೆ ? ಸಾವಿರಾರು ಸಂಖ್ಯೆಯಲ್ಲಿ ಈ ಬಾವಲಿಗಳು ಶ್ರೀನಿವಾಸಪುರದ ಪೊಲೀಸ್ ಠಾಣೆ ಎದುರಲ್ಲಿನ ಹಾಗೂ ಮಹಾತ್ಮಾಗಾಂಧಿ ಸ್ಮಾರಕ ಪುರಭವನದ ಎದುರು ರಸ್ತೆ ಬದಿಯಲ್ಲಿನ ಎತ್ತರವಾದ ಮರಗಳಲ್ಲಿ ಹಲವು ದಶಕಗಳಿಂದ ಮನೆ ಮಾಡಿಕೊಂಡಿವೆ. ಸದಾ ಜನನಿಬಿಡ ಪ್ರದೇಶದಲ್ಲಿ ನೆಲೆ ಕಂಡುಕೊಂಡಿರುವ ಈ ಅಪರೂಪದ ಸಸ್ತನಿಗಳು ಪಟ್ಟಣದ ಒಂದು ವಿಶೇಷವೂ ಹೌದು.ಮರಗಳಲ್ಲಿ ತಲೆಕೆಳಗಾಗಿ ನೇತಾಡುವ ಬಾವಲಿಗಳು ಬಸ್ ನಿಲ್ದಾಣದಿಂದ ಚನ್ನಾಗಿ ಕಾಣುವುದರಿಂದ ಪಟ್ಟಣದ ಮೇಲೆ ಹಾದು ಹೋಗುವ ಪ್ರಯಾಣಿಕರು ಅವುಗಳನ್ನು ನೋಡಿ ಆನಂದಪಡುತ್ತಾರೆ. ಬಾವಲಿಗಳ ಮೇಲೆ ಸಂಶೋಧನೆ ಮಾಡುವವರು ಬಂದು ಕೆಲವು ದಿನ ತಂಗಿ ಅವುಗಳ ಚಲನವಲನಗಳನ್ನು ಗಮನಿಸುತ್ತಾರೆ. ಸಂಜೆ ಕತ್ತಲು ಬೀಳುವಾಗ ಅವು ಮರಗಳನ್ನು ಬಿಟ್ಟು ಒಮ್ಮೆಗೇ ದಿಕ್ಕು ದಿಕ್ಕಿಗೆ ಹಾರುವುದನ್ನು ನೋಡುವುದೇ ಒಂದು ಚೆಂದ.ಮಹಾತ್ಮಾಗಾಂಧಿ ರಸ್ತೆಯಲ್ಲಿನ ಈ ಬಾವಲಿ ಮರಗಳ ಕೆಳಗೆ ಜನ ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೇರೆ ಬೇರೆ ಕಾರಣಗಳಿಗಾಗಿ ಪಟಾಕಿ ಸಿಡಿಸಿ ವಿಜಯೋತ್ಸವಗಳನ್ನು ಆಚರಿಸುವುದುಂಟು. ಆಗ ಬಾವಲಿಗಳು ಹೆದರಿ ಕಿರುಚುತ್ತ ಮರಗಳ ಮೇಲೆ ಹಾರಾಡುತ್ತವೆ. ಆ ಮರಗಳ ಕೆಳಗೆ ಬಾವಲಿಗಳ ನೆಮ್ಮದಿ ಕೆಡಿಸುವ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಾರದು ಎಂಬ ಪರಿಸರವಾದಿಗಳ ಒತ್ತಾಸೆ. ಇಂದು ಅಳಿವಿನ ಅಂಚಿನಲ್ಲಿರುವ ಈ ಅಪರೂಪದ ಹಾರಾಡುವ ಸಸ್ತನಿಗಳ ರಕ್ಷಣೆಗೆ ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂಬುದು ಪರಿಸರ ಪ್ರೇಮಿಗಳ ಮನವಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry