ಗುರುವಾರ , ಅಕ್ಟೋಬರ್ 17, 2019
27 °C

ಭಯೋತ್ಪಾದನಾ ನಿಗ್ರಹ ಕೇಂದ್ರಕ್ಕೆ ಅಸ್ತು

Published:
Updated:

ನವದೆಹಲಿ: ದೇಶದ ಮೇಲೆ ನಡೆಯುತ್ತಿರುವ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ `ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ~ (ಎನ್‌ಸಿಟಿಸಿ) ಸ್ಥಾಪನೆಗೆ ಭದ್ರತಾ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಗುರುವಾರ ಅನುಮೋದನೆ ನೀಡಿತು. ಗೃಹ ಸಚಿವಾಲಯದ ಮಹತ್ವಾಕಾಂಕ್ಷೆ ಯೋಜನೆ ಆಗಿರುವ ಎನ್‌ಸಿಟಿಸಿ ಭಯೋತ್ಪಾದನಾ ನಿಗ್ರಹ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲ ಸಂಸ್ಥೆಗಳಿಗೆ ಮಧ್ಯವರ್ತಿಯಾಗಿ ಕೆಲಸ ಮಾಡಲಿದೆ.

ಪ್ರಧಾನಿ ಮನಮೋಹನ್‌ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ವ್ಯವಹಾರಗಳ ಸಂಬಂಧದ ಸಂಪುಟ ಸಮಿತಿ ಒಂದು ಗಂಟೆ ಚರ್ಚೆ ನಡೆಸಿದ ಬಳಿಕ ಎನ್‌ಸಿಟಿಸಿ ಸ್ಥಾಪನೆಗೆ ಒಪ್ಪಿಗೆ ನೀಡಿತು. ಇದು ಭಯೋತ್ಪಾದನೆ ವಿರುದ್ಧದ ಮಾಹಿತಿ ಸಂಗ್ರಹ ಮತ್ತು ಕಾರ್ಯಾಚರಣೆ ಜಾಲವನ್ನು ವ್ಯವಸ್ಥಿತಗೊಳಿಸಲಿದೆ. ಗೃಹ ಸಚಿವ ಪಿ. ಚಿದಂಬರಂ ಅವರ ಕಲ್ಪನೆ ಕೂಸು ಎಂದು ಹೇಳಲಾಗುತ್ತಿದೆ.

ಎನ್‌ಸಿಟಿಸಿ ಮುಖ್ಯಸ್ಥರಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಥವಾ ಅದಕ್ಕಿಂತ ಉನ್ನತ ದರ್ಜೆಯ ಐಪಿಎಸ್ ಅಧಿಕಾರಿ ನೇಮಕ ಆಗಲಿದ್ದಾರೆ. ಈ ಅಧಿಕಾರಿ ಗುಪ್ತದಳ ಅಥವಾ ಭದ್ರತಾ ಸಂಸ್ಥೆಗಳಿಗೆ ಸೇರಿದವರಾಗಿರುತ್ತಾರೆ. ಎನ್‌ಸಿಟಿಸಿ ಸ್ಥಾಪನೆ ಪ್ರಸ್ತಾಪ ಕಳೆದ ಒಂದು ವರ್ಷದಿಂದ ಸಂಪುಟ ಸಮಿತಿ ಅನುಮತಿಗಾಗಿ ಕಾದಿತ್ತು. ವಿವಿಧ ಸಚಿವಾಲಯಗಳು ಎನ್‌ಸಿಟಿಸಿ ಕೊಡಮಾಡುವ ಉದ್ದೇಶಿತ ಅಧಿಕಾರ ಮತ್ತು ಕಾರ್ಯಾಚರಣೆ ಕುರಿತು ಆಕ್ಷೇಪವೆತ್ತಿದ ಪರಿಣಾಮ ತೀರ್ಮಾನ ವಿಳಂಬವಾಗಿತ್ತು.

ಗುಪ್ತದಳ, ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ (ಆರ್‌ಎಡಬ್ಲ್ಯು), ಗುಪ್ತದಳ ಜಂಟಿ ಸಮಿತಿ (ಜೆಐಸಿ) ಮತ್ತು ರಾಜ್ಯ ಗುಪ್ತದಳಕ್ಕೆ ಎನ್‌ಸಿಟಿಸಿ ಮಧ್ಯವರ್ತಿಯಾಗಿ ಕೆಲಸ ಮಾಡಲಿದೆ. ಈ ಸಂಸ್ಥೆಗಳು ಭಯೋತ್ಪಾದನಾ ಸಂಬಂಧಿತ ವಿವರಗಳನ್ನು ಎನ್‌ಸಿಟಿಸಿಗೆ ಪೂರೈಸಬೇಕು. ಸಂಶೋಧನೆ ಮತ್ತು ವಿಶ್ಲೇಷಣೆ ಮೂಲಕ ಎನ್‌ಸಿಟಿಸಿ ಮುಂದಿನ ಕಾರ್ಯಯೋಜನೆ ನೀಡಲಿದೆ.

ಸರ್ಕಾರ ಎನ್‌ಸಿಟಿಸಿ ಸ್ಥಾಪನೆ ಕುರಿತು ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಿದೆ. ಕೇಂದ್ರ ಮತ್ತು ರಾಜ್ಯ ಪೊಲೀಸ್ ವಿಭಾಗಗಳಿಂದ ಎರವಲು ಪಡೆದ ಪೊಲೀಸರು ಮೊದಲಿಗೆ ಕೇಂದ್ರದಲ್ಲಿ ಕೆಲಸ ಮಾಡಲಿದ್ದಾರೆ. ಅನಂತರ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕವಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತೀರ್ಮಾನ ಇಲ್ಲ: ಈ ಮಧ್ಯೆ, ರೈತರೇ ನಡೆಸುವ ಕೃಷಿ ಪೂರಕ ಉದ್ಯಮಗಳಿಗೆ `ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ~ (ಎನ್‌ಸಿಡಿಸಿ) ದಿಂದ ಸಾಲ ಸೌಲಭ್ಯ ಒದಗಿಸುವ ಪ್ರಸ್ತಾಪ ಕುರಿತು ಕೇಂದ್ರ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ಆರ್ಥಿಕ ವ್ಯವಹಾರಗಳ ಮೇಲಿನ  ಸಂಪುಟ ಸಮಿತಿ (ಸಿಸಿಇಎ) ಸಭೆಗೆ ಕೃಷಿ ಸಚಿವ ಶರದ್ ಪವಾರ್ ಗೈರು ಹಾಜರಾದ ಕಾರಣ ಈ ಸಂಬಂಧ ನಿರ್ಧಾರ ಮುಂದಕ್ಕೆ ಹಾಕಲಾಯಿತು.

ಎನ್‌ಸಿಡಿಸಿ ಸದ್ಯ ಕೊಯ್ಲು ನಂತರದ ಚಟುವಟಿಕೆ ಹಾಗೂ ತೋಟಗಾರಿಕೆ ಬೆಳೆ ಸಂಸ್ಕರಣಾ ಕಾರ್ಯಗಳಲ್ಲಿ ತೊಡಗಿರುವ ಸಹಕಾರ ಸಂಘಗಳಿಗೆ ಸಾಲ ನೀಡುತ್ತಿದೆ. ದೇಶದಲ್ಲಿ ಇಂಥ ಸುಮಾರು ಆರು ಲಕ್ಷ ಸಹಕಾರಿ ಸಂಘಗಳಿವೆ. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಲಿರುವ ಶರದ್ ಪವಾರ್ ಮುಂದಿನ ವಾರ ರಾಜಧಾನಿಗೆ ಹಿಂತಿರುಗಲಿದ್ದಾರೆ. ಅನಂತರ ಎನ್‌ಸಿಡಿಸಿ ವಿಷಯ ಸಿಸಿಇಎ ಮುಂದೆ ಚರ್ಚೆಗೆ ಬರುವ ಸಾಧ್ಯತೆಯಿದೆ.

ಎನ್‌ಸಿಪಿ ಮುಖ್ಯಸ್ಥರಾದ ಶರದ್ ಪವಾರ್ ಎನ್‌ಸಿಡಿಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರು ನಡೆಸುವ ಉದ್ಯಮಗಳ ಸಾಲ ಸೌಲಭ್ಯ ಕೊಡುವ ಪ್ರಸ್ತಾಪ ಮಂಡಿಸಿದ್ದಾರೆ. ಇದರಿಂದ ಸುಮಾರು 160ಕ್ಕೂ ಹೆಚ್ಚು ಸಂಸ್ಥೆಗಳಿಗೆ ಪ್ರಯೋಜನವಾಗಲಿದೆ. ಅಲ್ಲದೆ, ಕೊಯ್ಲು ನಂತರ ಮತ್ತು ತೋಟಗಾರಿಕೆ ಬೆಳೆಗಳ ಸಂಸ್ಕರಣೆಯಲ್ಲಿ ತೊಡಗಿರುವ ಸಹಕಾರ ಸಂಘಗಳು ರೈತರ ಉತ್ಪಾದನಾ ಸಂಸ್ಥೆಗಳಾಗಿ ಪರಿವರ್ತನೆ ಆಗಲು ಸಹಕಾರಿ ಆಗಲಿದೆ ಎಂದು ಭಾವಿಸಲಾಗಿದೆ.

ಆದರೆ,  ಕೃಷಿ ಸಚಿವಾಲಯ ಸಿಸಿಇಎಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಸಹಕಾರಿ ಸಂಘಗಳು ಕೇಂದ್ರ ಮತ್ತು ರಾಜ್ಯದ ಬಾಕಿ ಪಾವತಿಸಿದ ಬಳಿಕ ಉತ್ಪಾದನಾ ಸಂಸ್ಥೆಗಳಾಗಿ ಪರಿವರ್ತನೆಗೊಳ್ಳಲು ಅನುಮತಿ ನೀಡಬೇಕು ಎಂದು ಹೇಳಿದೆ. ಸಕ್ಕರೆ ಉದ್ಯಮಕ್ಕೆ ಪ್ರಸ್ತಾಪ ನೇರವಾಗಿ ಅನ್ವಯ ಆಗುವುದಿಲ್ಲ ಎಂದು ಹೇಳಲಾಗಿದೆ.

ಆರೋಗ್ಯ ವಿಮೆ ವಿಸ್ತಾರ

ಗಂಭೀರ ಕಾಯಿಲೆಗಳಿಂದ ನರಳುವ ಅಸಂಘಟಿತ ವಲಯದ ಕಾರ್ಮಿಕರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ `ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ~ ಫಲಾನುಭವಿಗಳ ಜಾಲವನ್ನು ವಿಸ್ತರಿಸುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಕೈಗೊಂಡಿತು.

ಈ ಯೋಜನೆ ಈಗ ಎಂಎನ್‌ಆರ್‌ಇಜಿಎ, ಬೀದಿ ವ್ಯಾಪಾರಿಗಳು, ಮನೆ ಕೆಲಸದವರು, ಬೀಡಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಿಗೆ ಅನ್ವಯ ಆಗುತ್ತಿದ್ದು, ಯೋಜನೆ ವ್ಯಾಪ್ತಿಯನ್ನು ಅಸಂಘಟಿತ ವಲಯಗಳಿಗೆ ವಿಸ್ತರಿಸಲು ತೀರ್ಮಾನಿಸಿತು.

`ಇದು ಸರ್ಕಾರದ ಯಶೋಗಾಥೆ ಆಗಿದ್ದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ, ವಿಶ್ವಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಅಸಂಘಟಿತ ವಲಯವನ್ನು ಯೋಜನೆ ವ್ಯಾಪ್ತಿಗೆ ತರುವ ಅಗತ್ಯವಿದೆ~ ಎಂದು ಸಭೆ ಅಭಿಪ್ರಾಯಪಟ್ಟಿತು.

Post Comments (+)