ಶನಿವಾರ, ಮೇ 15, 2021
23 °C

ಭಯೋತ್ಪಾದನಾ ನಿಗ್ರಹ ಪಡೆಯಾಗಿ ಎಎನ್‌ಎಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ನಕ್ಸಲ್ ನಿಗ್ರಹ ಪಡೆಯನ್ನು ಭಯೋತ್ಪಾದನಾ ನಿಗ್ರಹ ಪಡೆಯಾಗಿ ಪರಿವರ್ತನೆ ಮಾಡಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು.ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಮಂಗಳವಾರ ನಡೆದ ನಕ್ಸಲ್ ಪೀಡಿತ ಏಳು ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳ ಪರಿಶೀಲನಾ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.'ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಸಿದ್ಧವಿದೆ. ಮುಖ್ಯವಾಹಿನಿಗೆ ಬರುವುದಾದರೆ ನಕ್ಸಲರೊಂದಿಗೆ ಮಾತುಕತೆಗೂ ಸಿದ್ಧರಿದ್ದೇವೆ. ನಕ್ಸಲರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಪರಿಹಾರ ಮೊತ್ತವನ್ನು ಹೆಚ್ಚಿಸಲೂ ಸಿದ್ಧ. ರಾಜ್ಯದಲ್ಲಿ ಈವರೆಗೆ ಐದು ಜನ ನಕ್ಸಲರು ಶರಣಾಗಿದ್ದಾರೆ.ರಾಜ್ಯದಲ್ಲಿ ಸುಮಾರು 30 ಜನ ನಕ್ಸಲರು ಇದ್ದಾರೆಂದು ಅಂದಾಜಿಸಲಾಗಿದೆ. ಅವರನ್ನು ಮನವೊಲಿಸಿ ಮುಖ್ಯವಾಹಿನಿಗೆ ಕರೆತರಲು ಕ್ರಮ ಕೈಗೊಳ್ಳಲಾಗುವುದು' ಎಂದರು.ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಗುಡ್ಡಗಾಡು ಜನರ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ನೀಡಲು ಟಾಟಾ ಕಂಪೆನಿ ಮುಂದೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇತರ ಕಂಪೆನಿಗಳ ಮೂಲಕವೂ ಮಾತುಕತೆ ನಡೆಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆಗಳ ಮೂಲಕ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.1990ರ ಮೂಲ ವೇತನಕ್ಕೆ ಬದಲಾಗಿ 2006ರ ಪರಿಷ್ಕೃತ ಮೂಲ ವೇತನವನ್ನು ನಕ್ಸಲ್ ನಿಗ್ರಹ ಪಡೆಯಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು.ರಾಜ್ಯದಲ್ಲಿ 19 ಸಾವಿರ ಪೊಲೀಸರ ಕೊರತೆ ಇದೆ. ನಾಲ್ಕು ವರ್ಷಗಳಿಂದ ಪೊಲೀಸರ ನೇಮಕಾತಿ ನಡೆದಿಲ್ಲ. ಶೀಘ್ರವಾಗಿ 8 ಸಾವಿರ ಪೊಲೀಸರನ್ನು ನೇಮಕ ಮಾಡಲಾಗುವುದು. ರಾಜ್ಯದಲ್ಲಿ 30ಸಾವಿರ ಪೊಲೀಸರಿಗೆ ವಸತಿ ಕೊರತೆ ಇದೆ. ಈ ವರ್ಷ ನಾಲ್ಕರಿಂದ ಐದು ಸಾವಿರ ಮನೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.ಚರ್ಚ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ನ್ಯಾ. ಸೋಮಶೇಖರ ಆಯೋಗ ನೀಡಿದ ಪ್ರಥಮ ಹಾಗೂ ಮೂರನೇ ವರದಿ ನಡುವೆ ವ್ಯತ್ಯಾಸವಿದ್ದು, ವರದಿಯನ್ನು ಸರ್ಕಾರ ಪುನರ್ ಪರಿಶೀಲನೆ ಮಾಡುತ್ತದೆ ಎಂದು ಜಾರ್ಜ್ ತಿಳಿಸಿದರು.ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್ ಸೊರಕೆ, ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ವಿ.ಉಮೇಶ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಕುಮೊ ಪಚಾವೊ,  ಆಂತರಿಕ ಭದ್ರತಾ ವಿಭಾಗದ ಐಜಿಪಿ ಅಲೋಕ್ ಮೋಹನ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.