`ಭಯೋತ್ಪಾದನೆ ಕಾಯ್ದೆ' ವ್ಯಾಖ್ಯೆ ವಿಸ್ತರಣೆ

7
ಸಂಸತ್ತಿನಲ್ಲಿ ಮಸೂದೆ ಅಂಗೀಕಾರ

`ಭಯೋತ್ಪಾದನೆ ಕಾಯ್ದೆ' ವ್ಯಾಖ್ಯೆ ವಿಸ್ತರಣೆ

Published:
Updated:

 


ನವದೆಹಲಿ (ಪಿಟಿಐ): ದೇಶದ ಆರ್ಥಿಕ ಸುಭದ್ರತೆ ವಿಷಯವನ್ನೂ ಸೇರಿಸಲಾದ `ಭಯೋತ್ಪಾದನೆ ಕಾಯ್ದೆ' ವ್ಯಾಖ್ಯೆಯನ್ನು ವಿಸ್ತರಿಸುವ ಮಸೂದೆಯನ್ನೂ ಎಡ ಪಕ್ಷಗಳು, ಜೆಡಿಯು ಹಾಗೂ ಆರ್‌ಜೆಡಿ ಸದಸ್ಯರ ಸಭಾತ್ಯಾಗದ ನಡುವೆ ಗುರುವಾರ ಸಂಸತ್ತು ಅಂಗೀಕರಿಸಿತು.

 


ಅಕ್ರಮ ಚಟುವಟಿಕೆ (ತಡೆ) ಕಾಯ್ದೆ -2012 ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕರಿಸಲಾಯಿತು. ಯಾವುದೊಂದು ಉಗ್ರರ ಸಂಘಟನೆ ವಿರುದ್ಧ ಹೇರಲಾಗುವ ನಿಷೇಧದ ಅವಧಿಯನ್ನು ಎರಡರಿಂದ ಐದು ವರ್ಷಗಳವರೆಗೆ ವಿಸ್ತರಿಸುವುದಕ್ಕೂ ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಲೋಕಸಭೆಯಲ್ಲಿ ಈಗಾಗಲೇ ಈ ಮಸೂದೆ ಅಂಗೀಕಾರವಾಗಿದೆ. ಶಸ್ತ್ರಾಸ್ತ್ರಗಳ ಸಂಗ್ರಹ, ಭಯೋತ್ಪಾದನೆ ತಡೆ ಚಟುವಟಿಕೆಯ ನಿಧಿಗೆ ಮತ್ತಷ್ಟು ಮೊತ್ತ ಒದಗಿಸಲು ಮಸೂದೆಯಲ್ಲಿ ಹೇಳಲಾಗಿದೆ.

 


ಈ ಸಂಬಂಧ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವ ಆರ್.ಪಿ.ಎನ್. ಸಿಂಗ್, `ತಿದ್ದುಪಡಿಯಾದ ಈ ಮಸೂದೆ ದುರ್ಬಳಕೆಯಾಗಬಾರದು. ಈ ಮಸೂದೆ ಭಯೋತ್ಪಾದನೆ ಹಾಗೂ ಭಯೋತ್ಪಾದಕರ ವಿರುದ್ಧವಾಗಿದೆ. ಕೇವಲ ಬಂದೂಕಿನ ಸದ್ದು ಮಾತ್ರ ಭಯೋತ್ಪಾದನೆ ಎನಿಸುವುದಿಲ್ಲ, ದೇಶದ ಆರ್ಥಿಕತೆಯ ಮೇಲಿನ ದಾಳಿಯೂ ಇದರ ವ್ಯಾಪ್ತಿಗೆ ಒಳಪಡುತ್ತದೆ' ಎಂದು ತಿಳಿಸಿದರು.

 


ತಿದ್ದುಪಡಿಗೊಂಡ ಮಸೂದೆ ವ್ಯಾಪ್ತಿಗೆ ಸ್ವಯಂಸೇವಾ ಸಂಸ್ಥೆಗಳನ್ನೂ ಸೇರಿಸಲು ಬಿಜೆಪಿ ಆರಂಭದಲ್ಲಿ ಒತ್ತಾಯಿಸಿತ್ತು. ನಂತರ ತನ್ನ ವಾದ ಹಿಂಪಡೆಯಿತು. ಕಾರ್ಮಿಕ ಸಂಘಟನೆಗಳನ್ನು ಈ ವಿಷಯದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಟೀಕೆ ಸಿಪಿಎಂನಿಂದ ಕೇಳಿಬಂತು.

 


ತರಾತುರಿಯಲ್ಲಿ ಈ ಮಸೂದೆ ಮಂಡಿಸುವುದಕ್ಕಿಂತ ಸಾಕಷ್ಟು ಚಿಂತನಮಂಥನ ನಡೆಯಬೇಕು, ಇದಕ್ಕಾಗಿ ಆಯ್ಕೆ ಸಮಿತಿ ನೆರವು ಪಡೆಯಬೇಕು ಎಂಬ ಸಲಹೆಯನ್ನು ಕೆಲವು ಸದಸ್ಯರು ನೀಡಿದರು. ತಿದ್ದುಪಡಿಯಾದ ಮಸೂದೆ ಪೊಲೀಸರಿಗೆ ಮತ್ತಷ್ಟು ಅಧಿಕಾರ ನೀಡುವುದರಿಂದ ಮುಗ್ಧರನ್ನು ಶೋಷಿಸಲು ಇದು ಮತ್ತೊಂದು ಅಸ್ತ್ರವಾಗುತ್ತದೆ ಎಂಬ ಅಸಮಾಧಾನವನ್ನೂ ಕೆಲ ಸದಸ್ಯರು ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry