ಶುಕ್ರವಾರ, ಮೇ 14, 2021
31 °C

ಭಯೋತ್ಪಾದನೆ ನಿಗ್ರಹ: ಸಿ.ಎಂ ಅಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಯೋತ್ಪಾದನೆ ನಿಗ್ರಹ: ಸಿ.ಎಂ ಅಭಯ

ಬೆಂಗಳೂರು:  `ನಗರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಬೆದರಿಕೆಗಳಿಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಭಯೋತ್ಪಾದನೆ ಹತ್ತಿಕ್ಕಲು ಸರ್ಕಾರ ಸನ್ನದ್ಧವಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದ ಕೋರಮಂಗಲ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ಗುರುವಾರ ನಡೆದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ನಗರಕ್ಕೆ ಭಯೋತ್ಪಾದಕರು ಬರುತ್ತಿದ್ದಾರೆ ಎಂಬ ವದಂತಿ ಹಬ್ಬಿದ್ದ ಬೆನ್ನಲ್ಲೇ ಬುಧವಾರ ಇಸ್ರೊ ಸೇರಿದಂತೆ ನಗರದ ಪ್ರತಿಷ್ಠಿತ ಸಂಸ್ಥೆಗಳಿಗೆ ಬೆದರಿಕೆಯ ಪತ್ರಗಳು ಬಂದಿವೆ. ಈ ಬೆದರಿಕೆಗಳಿಗೆ ಸರ್ಕಾರ ತಕ್ಕ ಉತ್ತರ ನೀಡಲಿದೆ. ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ' ಎಂದರು.

ಸಮಾರಂಭದಲ್ಲಿ 126 ಮಂದಿ ಪೊಲೀಸರಿಗೆ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, `ನಗರದಲ್ಲಿ ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಪೊಲೀಸ್ ಕ್ಯಾಂಟೀನ್ ತೆರೆಯಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ಪೊಲೀಸ್ ಕ್ಯಾಂಟೀನ್‌ಗಳು ಆರಂಭಗೊಳ್ಳಲಿವೆ. ಈ ಕ್ಯಾಂಟೀನ್‌ಗಳ ಉತ್ಪನ್ನಗಳಿಗೆ ಮೌಲ್ಯವರ್ಧಿತ ತೆರಿಗೆಯಿಂದ (ವ್ಯಾಟ್) ವಿನಾಯ್ತಿ ಇರಲಿದೆ. ಇದರಿಂದ ಆಹಾರ ಉತ್ಪನ್ನಗಳು ಹಾಗೂ ಗೃಹೋಪಯೋಗಿ ವಸ್ತುಗಳು ಪೊಲೀಸರಿಗೆ ಕಡಿಮೆ ಬೆಲೆಯಲ್ಲಿ ದೊರೆಯಲಿವೆ' ಎಂದರು.`ರಾಜ್ಯದಲ್ಲಿ ಶೇ 42ರಷ್ಟು ಪೊಲೀಸ್ ಸಿಬ್ಬಂದಿಗೆ ವಸತಿ ಗೃಹಗಳ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಪೊಲೀಸರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅವರಿಂದ ಜನ ಸಾಮಾನ್ಯರಿಗೆ ಉತ್ತಮ ಸೇವೆಯನ್ನು ಒದಗಿಸುವುದು ಸರ್ಕಾರದ ಉದ್ದೇಶ. ಪೊಲೀಸರು ಸಾರ್ವಜನಿಕರೊಂದಿಗೆ ಮಾನವೀಯತೆ ನಡೆದುಕೊಳ್ಳಬೇಕು' ಎಂದರು.`ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಗಳಲ್ಲಿರುವ ಪೊಲೀಸ್ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು.ಪೋಲೀಸ್ ಇಲಾಖೆಗೆ 8 ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷ 8 ಸಾವಿರ ಸಿಬ್ಬಂದಿ ನೇಮಿಸಿಕೊಳ್ಳಲಾಗುವುದು' ಎಂದರು.

ಗೌರವಧನ  ರೂ 10 ಸಾವಿರಕ್ಕೆ ಹೆಚ್ಚಳ

ಮುಖ್ಯಮಂತ್ರಿಗಳ ಪದಕದೊಂದಿಗೆ ನೀಡುವ ಗೌರವಧನವನ್ನು ಮುಂದಿನ ವರ್ಷದಿಂದ ರೂ 10 ಸಾವಿರಕ್ಕೆ ಏರಿಸಲಾಗುವುದು. ಈವರೆಗೆ ್ಙ 5 ಸಾವಿರ ಗೌರವಧನ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಈ ಮೊತ್ತವನ್ನು ಹೆಚ್ಚಿಸಲಾಗುವುದು.

ಈವರೆಗೆ ಆರೋಗ್ಯಭಾಗ್ಯ ಯೋಜನೆಯಡಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವ ಪೊಲೀಸ್ ಸಿಬ್ಬಂದಿಗೆ ಮಾತ್ರ ಚಿಕಿತ್ಸಾ ಭತ್ಯೆ ನೀಡಲಾಗುತ್ತಿತ್ತು. ಇನ್ನು ಮುಂದೆ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವ ಸಿಬ್ಬಂದಿಗೂ ಚಿಕಿತ್ಸಾ ಭತ್ಯೆ ನೀಡಲಾಗುವುದು.

-ಸಿದ್ದರಾಮಯ್ಯ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.