ಭಯ ಆತಂಕಗಳ ಹಾದಿಯಲ್ಲಿ...

7

ಭಯ ಆತಂಕಗಳ ಹಾದಿಯಲ್ಲಿ...

Published:
Updated:
ಭಯ ಆತಂಕಗಳ ಹಾದಿಯಲ್ಲಿ...

ಪತ್ರಕರ್ತ ಎಂದರೆ ಮೂಲತಃ ಸಿಡಿದೇಳುವ ಸ್ವಭಾವದವನು. ತನ್ನ ಸುತ್ತಲಿನ `ಪ್ರಪಂಚ~ ಇನ್ನಷ್ಟು ಉತ್ತಮವಾಗಿರಬೇಕು ಎಂಬ ತುಡಿತವುಳ್ಳವನು. ತಾನು ಹೋರಾಡುವ ಕಾರಣಗಳು ಸರಿಯಾಗಿಯೇ ಇರುತ್ತವೆ ಎಂಬ ದೃಢ ವಿಶ್ವಾಸ ಉಳ್ಳವನೂ ಆಗಿರುತ್ತಾನೆ ಎಂಬ ನಂಬಿಕೆ ಈಗ ನಿಧಾನವಾಗಿ ಕುಸಿಯುತ್ತಿದೆ. ನಿರ್ಭೀತ ಪತ್ರಿಕೋದ್ಯಮ ಭಾರತೀಯರ ಪಾಲಿಗೆ ಇಂದು ಗಗನಕುಸುಮವಾಗುತ್ತಿದೆ. ಎಲ್ಲರೂ ಅಂದುಕೊಂಡಂತೆ ಅದು ಈಗ ಒಂದು ವೃತ್ತಿಯಾಗಿ ಉಳಿಯುತ್ತಿಲ್ಲ. ಕ್ರಾಂತಿಯಾಗಿಯೂ ಕಂಗೊಳಿಸುತ್ತಿಲ್ಲ.ಒಂದೆಡೆ ಭ್ರಷ್ಟಾಚಾರ ಮೇರೆ ಮೀರಿ ಸಮಾಜವನ್ನು ಹರಿದು ಮುಕ್ಕುತ್ತಿದ್ದರೆ ಅದನ್ನು ಪೋಷಿಸುವ ಜನರು ಪ್ರತಿಭಟಿಸುವ ಜೀವಗಳನ್ನು ಮುಲಾಜ್ಲ್ಲಿಲದೆ ಮುಗಿಸುತ್ತಿದ್ದಾರೆ. ಅಪರಾಧಗಳನ್ನು ನೀರು ಕುಡಿದಷ್ಟು ಸುಲಭವಾಗಿ ದಕ್ಕಿಸಿಕೊಳ್ಳುತ್ತಿದ್ದಾರೆ. ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಮಧ್ಯಪ್ರದೇಶದ ಉಮರಿಯಾದಲ್ಲಿ ಪತ್ರಕರ್ತರ ಮೈ ಬೆಚ್ಚಗಾಗಿಸುವಂತಹ ಘಟನೆಯೊಂದು ನಡೆದಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಹೇಗೆ ಕಂಪಿಸುತ್ತಿದೆ ಎಂಬುದನ್ನು ಮತ್ತೆ ಮನವರಿಕೆ ಮಾಡಿಕೊಡುವ ಮೂಲಕ  ಪ್ರಜ್ಞಾವಂತರನ್ನು ಜಿಜ್ಞಾಸೆಗೆ ತಳ್ಳಿದೆ.ಹಿಂದಿಯ `ನವಭಾರತ~ ಹಾಗೂ ಇಂಗ್ಲಿಷ್‌ನ `ಹಿತವಾದ~ ಪತ್ರಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದ 42 ವರ್ಷದ ಪತ್ರಕರ್ತ ಚಂದ್ರಿಕಾ ರಾಯ್ ಅವರ ಇಡೀ ಕುಟುಂಬವನ್ನು ಫೆ.18ರಂದು ಉಮರಿಯಾದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 40 ವರ್ಷದ ಅವರ ಪತ್ನಿ ದುರ್ಗಾ, 19 ವರ್ಷದ ಮಗ ಜಲಜ್ ಹಾಗೂ  17ರ ಪ್ರಾಯದ ಮಗಳು ನಿಶಾಳನ್ನು ಅವರ ಮನೆಯಲ್ಲಿ ಅಮಾನುಷವಾಗಿ ಕೊಚ್ಚಿ ಹಾಕಲಾಗಿದೆ.ಉಮರಿಯಾ ಜಿಲ್ಲಾ ಕೇಂದ್ರ. ಇಲ್ಲಿನ ಕಲ್ಲಿದ್ದಲು ಗಣಿಗಾರಿಕೆ ಆರಂಭವಾದದ್ದು 1881ರಲ್ಲಿ. ಸಹಜವಾಗಿಯೇ ಗಣಿಗಾರಿಕೆ ಎಂದರೆ ಅದಕ್ಕೆ ಇರಬೇಕಾದ ಎಲ್ಲ ಆಯಾಮಗಳೂ ಇಲ್ಲಿ ಆಳವಾಗಿ ಬೇರೂರಿ ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡಿವೆ.

 

ಇಂತಹ ಸಾಮ್ರಾಜ್ಯದ ಅವ್ಯವಹಾರ, ಅಕ್ರಮಗಳನ್ನು ಚಂದ್ರಿಕಾ ರಾಯ್ ಪದೇ ಪದೇ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಕಲ್ಲಿದ್ದಲು ಲೂಟಿ ಮಾಡುವ ಜನರ ಅನ್ಯಾಯ, ಭ್ರಷ್ಟತೆಗಳನ್ನು ನಿರ್ದಾಕ್ಷಿಣ್ಯವಾಗಿ ಬಯಲುಗೊಳಿಸುತ್ತಿದ್ದರು. `ಈ ಕಾರಣಕ್ಕಾಗಿಯೇ ಅವರ ಇಡೀ ಕುಟುಂಬವನ್ನು ಮುಗಿಸಲಾಗಿದೆ~ ಎಂಬ ಸಂಗತಿಯನ್ನು ಈಗ ಸ್ಥಳೀಯರು ದುಃಖದಿಂದ ಹೇಳುತ್ತಿದ್ದಾರೆ.ಆದರೂ ಪೊಲೀಸರು ಈ ಘಟನೆಗೆ ಹೊಸ ಕಥೆಯನ್ನೇ ಹೆಣೆಯುವ ಪ್ರಯತ್ನದಲ್ಲಿದ್ದಾರೆ. ಚಂದ್ರಿಕಾ ರಾಯ್ ಅವರ ಕುಟುಂಬ ಹತ್ಯೆಯಾಗಲು ಜಮೀನು ವಿವಾದವೇ ಕಾರಣ ಎಂಬ ಸಬೂಬುಗಳನ್ನು ಹರಿಬಿಡುತ್ತಿದ್ದಾರೆ. ಖೊಟ್ಟಿ ಹೇಳಿಕೆ, ಸುಳ್ಳು ಸಾಕ್ಷಿಗಳನ್ನು ದಾಖಲೆಯ ಮೇಲೆ ತರುವ ತರದೂದಿನಲ್ಲಿ ಚಡಪಡಿಸುತ್ತಿದ್ದಾರೆ. ಚಂದ್ರಿಕಾ ರಾಯ್ ಕುಟುಂಬದ ಖೂನಿಗೆ ಇರಬಹುದಾದ ಮಾಫಿಯಾದ ನಂಟನ್ನು ಮುಚ್ಚಿಡುವ  ಕೆಲಸವನ್ನು ಅವರು ಶ್ರದ್ಧೆಯಿಂದ ಮಾಡುತ್ತಿದ್ದಾರೆ.ಮಾಧ್ಯಮಗಳು ಅತಿರಂಜನೆಯ ಸಂಗತಿಗಳತ್ತಲೇ ಬಾಯ್ದೆರೆದು ನಿಂತಿರುವ ಈ ಹೊತ್ತಿನಲ್ಲಿ ರಾಯ್ ಕೊಲೆಯ ಕಾರಣಗಳನ್ನು ಪತ್ತೆ ಮಾಡಲು ಭಾರತೀಯ ಪತ್ರಿಕಾ ಮಂಡಳಿ ಸತ್ಯಶೋಧನೆಗೆ ಸಮಿತಿಯೊಂದನ್ನು ರಚಿಸಿದೆ. ಕಾನೂನಿನ ಪರಿಧಿಯಲ್ಲಿ ಅಪರಾಧಿಗಳನ್ನು ಶಿಕ್ಷಿಸುವ ಛಲದಿಂದ ತನ್ನ ಕಾರ್ಯವನ್ನು ತಾನು ಸದ್ದಿಲ್ಲದೆ ಮಾಡಹೊರಟಿದೆ. ಆದರೂ ಸಂಘಟಿತ ಅಪರಾಧ, ಮಾಫಿಯಾಗಳ ದರ್ಬಾರು ಇಂತಹ ಕೊಲೆಗಳ ಹಿಂದೆ ಹೇಗೆ ಕೆಲಸ ಮಾಡುತ್ತಿರುತ್ತವೆ ಎಂಬುದನ್ನು ರಾಯ್ ಹತ್ಯೆಯ ನಂತರದ ಬೆಳವಣಿಗೆಗಳು ನಮ್ಮನ್ನು ಚಕಿತಗೊಳಿಸುತ್ತವೆ. ಜನಪರ ಸಂಘಟನೆ, ಅನ್ಯಾಯದ ವಿರುದ್ಧ ಪ್ರತಿಭಟನೆ ಅಥವಾ ಅವ್ಯವಹಾರಗಳನ್ನು ಪತ್ರಿಕೆಯಲ್ಲಿ ಬಯಲಿಗೆಳೆಯುವ ಜನರನ್ನು ದುಷ್ಟಶಕ್ತಿಗಳು ಹೇಗೆ ಮುಗಿಸಿ ಹಾಕುತ್ತವೆ, ಯಾರೆಷ್ಟೇ ಎದೆ ಬಡಿದುಕೊಂಡು ಅತ್ತರೂ ಇಂತಹ ಕೂಗುಗಳ ಹುಟ್ಟನ್ನು ಹೇಗೆ ಅಡಗಿಸುತ್ತವೆ ಎನ್ನುವುದಕ್ಕೆ ಈ ಘಟನೆ ಮತ್ತೊಂದು ನಿದರ್ಶನವಾಗಿದೆ.1992ರ ಸೆಪ್ಟೆಂಬರ್ 9ರಂದು ನಮ್ಮ ರಾಜ್ಯದ (ಮಂಡ್ಯ ಜಿಲ್ಲೆಯ) ಕೆಂಚನಹಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಇಂಥದ್ದೇ ಒಂದು ಘಟನೆ ನಡೆದಿತ್ತು. 40-45ರ ವಯೋಮಾನದ ವಕೀಲ ಕಂಚನಹಳ್ಳಿ ಗಂಗಾಧರಮೂರ್ತಿ ಆವತ್ತು ತಮ್ಮ ಬೈಕಿನಲ್ಲಿ ಕೋರ್ಟಿಗೆ ಹೊರಟಿದ್ದರು.ನಡು ದಾರಿಯಲ್ಲಿ ಬೈಕನ್ನು ಅಡ್ಡಗಟ್ಟಿದ ಪಾತಕಿಗಳು ಅವರನ್ನು ಗದ್ದೆಯಲ್ಲಿ ಓಡಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದರು. ಗಂಗಾಧರ ಮೂರ್ತಿ ವೃತ್ತಿನಿರತ ವಕೀಲರಾಗಿದ್ದವರು.

 

ಹವ್ಯಾಸಿ ಪತ್ರಕರ್ತರಾಗಿ ಸ್ಥಳಿಯ ಸಮಸ್ಯೆಗಳನ್ನು ನಿಯಮಿತವಾಗಿ ವಾರ ಪತ್ರಿಕೆಯೊಂದಕ್ಕೆ ಬರೆಯುತ್ತಿದ್ದವರು. ಹೀಗಾಗಿ ಅಲ್ಲಿನ ದುಷ್ಟ ರಾಜಕಾರಣಿಗಳ ಪಾಲಿಗೆ ಅವರು ಪ್ರತಿಭಟನೆಯ ಸಣ್ಣ ದನಿಯಾಗಿದ್ದರು. ಆದರೆ ಅವರನ್ನು ಬರ್ಬರವಾಗಿ ಹತ್ಯೆ ಮಾಡುವ ಮೂಲಕ ಅನ್ಯಾಯದ ವಿರುದ್ಧದ ದನಿಯನ್ನೇ ಅಡಗಿಸುವ ಪ್ರಯತ್ನ ಮಾಡಲಾಯಿತು.ಸಾಮಾಜಿಕ ಕಾಳಜಿ ಇರುವ ಪತ್ರಕರ್ತ ಸ್ವಂತ ಲಾಭದ ಬಗ್ಗೆ ಯೋಚಿಸುವುದಿಲ್ಲ.  ಸಮಾಜದ ಬಗ್ಗೆ ತನಗಿರುವ ಗುರುತರ ಜವಾಬ್ದಾರಿಯ ಅರಿವು, ಕೆಚ್ಚು ಮತ್ತು ನಿಸ್ವಾರ್ಥತೆಗಳು ಅವನನ್ನು ಹೆಚ್ಚು ಆಕರ್ಷಿಸಿರುತ್ತವೆ. ಆದರೆ ಈ ಆದರ್ಶಗಳ ಹಾದಿಯಲ್ಲಿ ನಡೆಯುವುದು ಎಷ್ಟು ಕಷ್ಟ ಎಂಬುದಕ್ಕೆ ರಾಯ್ ಕೊಲೆಯಂತಹ ಘಟನೆಗಳು ವೃತ್ತಿನಿರತರಿಗೆ ಆಗಾಗ್ಗೆ ಭಯ ಮತ್ತು ಎಚ್ಚರಿಕೆಗಳನ್ನು ಹುಟ್ಟಿಸುತ್ತಲೇ ಇರುತ್ತವೆ.

 

2011ರ ಜೂನ್ 11ರಂದು ಮುಂಬೈನ ಪೊವಾಯ್ ಪ್ರದೇಶದಲ್ಲಿ ಹಾಡಹಗಲೇ ಹತ್ಯೆಗೀಡಾದ `ಮಿಡ್ ಡೇ~ ಪತ್ರಿಕೆಯ ಜ್ಯೋತಿರ್ಮಯಿ ಡೇ ಪ್ರಕರಣವೂ ಇಂತಹದ್ದೇ. ಮುಂಬೈನ ಅಪರಾಧ ಚಟುವಟಿಕೆಗಳ ಬಗ್ಗೆ ಡೇ ಬರೆಯುತ್ತಿದ್ದ ವರದಿ-ಲೇಖನಗಳೇ ಅವರ ಪ್ರಾಣಕ್ಕೆ ಕಂಟಕವಾದವು.`ಇಂಡಿಯನ್ ಎಕ್ಸ್‌ಪ್ರೆಸ್~ ಪತ್ರಿಕೆಯ ದೆಹಲಿ ವರದಿಗಾರ್ತಿ ಶಿವಾನಿ ಭಟ್ನಾಗರ್ ಕೂಡಾ ಬರವಣಿಗೆಯಿಂದಾಗಿಯೇ ಪ್ರಾಣ ಕಳೆದುಕೊಂಡ ಪತ್ರಕರ್ತೆ. ಇಂಥ ಹೆಸರುಗಳು ಭಾರತದಲ್ಲಿ ಬಹಳಷ್ಟಿವೆ. ಕೆದಕುತ್ತಾ ಹೋದರೆ ಇನ್ನಷ್ಟು, ಮತ್ತಷ್ಟು ಬಲಿಯಾದ ಜೀವಗಳ ವಿವರಗಳು ನಮಗೆ ಸಿಗುತ್ತವೆ. ಸಂಘ ಸಂಸ್ಥೆಗಳ ಮುಖಾಂತರ ಸಾಮಾಜಿಕ ಸೇವೆಗೆ ಮುಂದಾಗುವ ಜನರು, ಧಾರ್ಮಿಕ ಪ್ರಚಾರದಲ್ಲಿ ತೊಡಗಿದವರು, ಕಾರ್ಮಿಕ ಸಂಘಟನೆಗಳ ನೇತೃತ್ವ ವಹಿಸಿದವರು... ಹೀಗೆ ವಿವಿಧ ಮಜಲುಗಳಲ್ಲಿ ಜನರ ಧ್ವನಿಯಾಗಿ ನಿಂತ ನಿಸ್ವಾರ್ಥಿಗಳ ಮೇಲೆ ದುಷ್ಟ ಶಕ್ತಿಗಳು ಯಾವಾಗಲೂ ಒಂದು ಕೆಟ್ಟ ಕಣ್ಣನ್ನು ಇಟ್ಟಿರುತ್ತವೆ.

 

ಕಡೆಗೊಮ್ಮೆ ಅವು ತಮ್ಮ ಹುಳುಕು ಬಯಲಿಗೆಳೆದವರನ್ನು ನಿರ್ದಾಕ್ಷಿಣ್ಯವಾಗಿ ಮುಗಿಸುವ ಹಂತಕ್ಕೇ ಸಾಗಿಬಿಡುತ್ತವೆ. ನಾಗರಿಕ ಸಮಾಜ, ಕಾನೂನು, ಮಾನವ ಹಕ್ಕು ಉಲ್ಲಂಘನೆ ಎಂದೆಲ್ಲಾ ಬಡಬಡಿಸುವ ಹೊತ್ತಿಗೆ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ. ಸತ್ತವರು ಆಕಾಶದಲ್ಲಿನ ಕೋಟಿ ನಕ್ಷತ್ರಗಳಲ್ಲಿ ಒಂದು ಸಣ್ಣ ನಕ್ಷತ್ರ ಎಂಬಂತಾಗಿರುತ್ತಾರೆ!ವಿಶ್ವದಲ್ಲೇ ಇಂದು ಪತ್ರಕರ್ತರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶ ಎಂದರೆ ನೆರೆಯ ಪಾಕಿಸ್ತಾನ. ಹಾಗೆಯೇ ಆಫ್ಘಾನಿಸ್ತಾನವೂ ಹೌದು. ಇಲ್ಲೆಲ್ಲಾ ಪತ್ರಕರ್ತರನ್ನು ಕೋಳಿ ಕೊಯ್ದಂತೆ ಕೊಯ್ಯುವ ಪ್ರವೃತ್ತಿಯನ್ನು ಉಗ್ರಗಾಮಿಗಳು ಆಗಾಗ್ಗೆ ಪ್ರದರ್ಶಿಸುತ್ತಲೇ ಇರುತ್ತಾರೆ. ಇರಾಕ್, ರಷ್ಯಾ, ಚೀನಾಗಳಲ್ಲೂ ಇದೇ ಹಣೆಬರಹ.ಮಾಫಿಯಾಗಳು ಹೇಗಿರುತ್ತವೆ ಎಂದರೆ ಭಾರತದ ಬಹುತೇಕ ಗಣಿಗಳಲ್ಲಿ ಕಾರ್ಮಿಕರು ಮಾಫಿಯಾದ ದಾದಾಗಳು ಹೇಳಿದಂತೆಯೇ ಕೇಳಬೇಕು. ಅವುಗಳ ಮಸಲತ್ತು ಒಂದೆರಡಲ್ಲ. ಎಲ್ಲ ಅಕ್ರಮಗಳನ್ನು ಪೋಷಿಸುವುದೇ ಈ ಮಾಫಿಯಾಗಳ, ಮಾಲೀಕರ  ಕೆಲಸ. ಇವರ ಕಾನೂನುಬಾಹಿರ ಕೃತ್ಯಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಸಂಬಳ ಹಂಚುವವರೂ ಮಾಫಿಯಾದವರೇ ಆಗಿರುತ್ತಾರೆ. ಎಷ್ಟೋ ಜನ ಇಲ್ಲಿ ಕಾರ್ಮಿಕರ ಹೆಸರಿನಲ್ಲಿ ಪುಕ್ಕಟೆ ಸಂಬಳ ಪಡೆಯುತ್ತಿರುತ್ತಾರೆ. ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್‌ಗಳಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಲೇ ಬಂದಿದೆ.

 

ಈ ಸಾಲಿಗೆ ಈಗ ಗೋವಾ ಮತ್ತು ಕರ್ನಾಟಕಗಳೂ ಸೇರಿಕೊಂಡಿದ್ದು ಮುಂಚೂಣಿಯಲ್ಲಿವೆ. ಇಲ್ಲೆಲ್ಲಾ ದೊರೆಯುವ ಕಲ್ಲಿದ್ದಲು, ಲಿಗ್ನೈಟ್, ಸ್ವಾಭಾವಿಕ ಇಂಧನ, ಬಾಕ್ಸೈಟ್, ತಾಮ್ರ, ಬಂಗಾರ, ಕಬ್ಬಿಣ, ಸತು, ಮ್ಯಾಂಗನೀಸ್, ಫಾಸ್ಫೇಟ್‌ನಂತಹ ಖನಿಜಗಳು ಭಾರತದ ಆರ್ಥಿಕತೆ ಹಾಗೂ ಸಾಮಾಜಿಕ ಸ್ವರೂಪಗಳನ್ನೇ ಬದಲಿಸಿಬಿಟ್ಟಿವೆ. ಬಹುತೇಕ ಗಣಿಗಾರಿಕೆಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ರಾಜಕೀಯ ಪಕ್ಷಗಳು ಕೈಗೆತ್ತಿಕೊಂಡಿರುವುದನ್ನು ಮಾಧ್ಯಮಗಳು ಪತ್ತೆಹಚ್ಚಿವೆ. ಆರ್ಥಿಕ ಉದಾರೀಕರಣದ ನಂತರ ಇವತ್ತು ಭಾರತದಲ್ಲಿ ಗಣಿಗಾರಿಕೆ ಎಂಬುದು ಪರ್ಯಾಯ ಸರ್ಕಾರ ಅಥವಾ ಪಾಳೇಗಾರಿಕೆಯ ಚಕ್ರಾಧಿಪತ್ಯದಲ್ಲಿ ಮೆರೆಯುತ್ತಿರುವುದನ್ನು ಯಾರೂ ಅಲ್ಲಗಳೆಯಲಾಗದು.ಪತ್ರಕರ್ತರ ರಕ್ಷಣಗೆಂದೇ ಮೀಸಲಾದ ಪತ್ರಕರ್ತರ ರಕ್ಷಣಾ ಸಮಿತಿ ಎಂಬುದೊಂದು ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜೀವಂತವಾಗಿದೆಯಾದರೂ ಇಂಥವುಗಳನ್ನೇ ನೆಚ್ಚಿಕೊಂಡು ಪತ್ರಕರ್ತರು ಬದುಕು ಸಾಗಿಸುವಂತಿಲ್ಲ.  `ಹೌದಪ್ಪ~ಗಳ ಅಂಗಳದಿಂದ ಹೊರಬಂದು ತಮ್ಮದೇ ಸಾಮಾಜಿಕ ತುಡಿತಗಳಲ್ಲಿ ಬದುಕುವ ಪ್ರಾಮಾಣಿಕ ಪತ್ರಕರ್ತರ ಜೀವಕ್ಕೆ ಅಪಾಯ ಸದಾ ಕಟ್ಟಿಟ್ಟ ಬುತ್ತಿಯೇ ಸರಿ ಎಂಬಂತಹ ಸನ್ನಿವೇಶ ಎಲ್ಲೆಡೆ ಇದೆ.1992ರಿಂದಲೂ ಜಗತ್ತಿನಾದ್ಯಂತ ಪತ್ರಕರ್ತರ ಹತ್ಯೆಗಳು ಹೆಚ್ಚುತ್ತಲೇ ಇವೆ. ಪತ್ರಕರ್ತರ ರಕ್ಷಣಾ ಸಮಿತಿ ಈವರೆವಿಗೂ ಒಟ್ಟು 880 ಪತ್ರಕರ್ತರ ಹತ್ಯೆಗಳನ್ನು ಲೆಕ್ಕವಿಟ್ಟಿದೆ. ಕರಾಚಿಯಲ್ಲಿ ಉಗ್ರರ ಕೈಗೆ ಸಿಕ್ಕು ಹತ್ಯೆಗೀಡಾದ  ಯಹೂದಿ ಪತ್ರಕರ್ತ ಡೇನಿಯಲ್ ಪರ್ಲ್, ಆಫ್ಘಾನಿಸ್ತಾನದಲ್ಲಿನ ರೂಪರ್ಟ್ ಹ್ಯಾಮರ್ ಕೊಲೆಗಳು ಎಂಥವರ ಎದೆಯನ್ನೂ ಝಲ್ಲೆನಿಸುವಂತೆ ಮಾಡುತ್ತವೆ.ಇರಾಕ್‌ನಲ್ಲಿ ಅತ್ಯಂತ ಹೆಚ್ಚು ಪತ್ರಕರ್ತರ ಹತ್ಯೆಗಳು ಸಂಭವಿಸಿವೆ ಎಂಬುದರತ್ತ ಇದೇ ರಕ್ಷಣಾ ಸಮಿತಿ ಬೊಟ್ಟು ಮಾಡುತ್ತದೆ. ಬಹುತೇಕ ಹತ್ಯಾ ಪ್ರಕರಣಗಳಲ್ಲಿ, `ಈ ಪತ್ರಕರ್ತನನ್ನು ಇಂತಹುದೇ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬ ವ್ಯಾಖ್ಯಾನ ಕೊನೆಗೂ ದೃಢವಾಗುವುದೇ ಇಲ್ಲ~ ಎಂಬ ಅಂಶವನ್ನೂ ಈ ಸಮಿತಿ ವೈಜ್ಞಾನಿಕ ಸಂಶೋಧನೆಗಳ ಮೂಲಕ ಖಚಿತಪಡಿಸುತ್ತದೆ. ಅಂದರೆ ಇದರರ್ಥ ಒಬ್ಬ ಪತ್ರಕರ್ತನ ಹತ್ಯೆ ನಡೆದ ನಂತರ ಸ್ಥಳೀಯ ಮಾಫಿಯಾ, ರಾಜಕಾರಣಿಗಳು, ಸಮಾಜಘಾತುಕ ಶಕ್ತಿಗಳ ಮಿಲಾಯಿತಿಯಿಂದ ವಿಚಾರಣೆ, ತನಿಖೆ ಎಲ್ಲವೂ ದುರ್ಬಲವಾಗುತ್ತವೆ ಎಂಬುದನ್ನು ಇದು ವಿಶದಪಡಿಸುತ್ತದೆ.ಯುದ್ಧಭೂಮಿ, ಅಶಾಂತ ವಲಯಗಳು, ನಿರಂತರ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ಸದಾ ಜೀವ ಕೈಯ್ಯಲ್ಲಿ ಹಿಡಿದುಕೊಂಡೇ ಕೆಲಸ ಮಾಡುವ ಸ್ಥಿತಿ ಇದೆ. ಇದೇ ಕಾರಣಕ್ಕೋ ಏನೋ ಸೆನ್ಸೇಷನಲ್ ಪತ್ರಿಕೋದ್ಯಮ ಇವತ್ತು ಜನಪ್ರಿಯವಾಗುತ್ತಿದೆ. ಸತ್ಯಕ್ಕೆ ಹತ್ತಿರವಾದ ವರದಿಗಳು, ಪತ್ರಕರ್ತರು ವಿರಳವಾಗುತ್ತಿದ್ದಾರೆ. ಸತ್ಯಕ್ಕೆ ಹತ್ತಿರವಾಗಿ ಪತ್ರಕರ್ತ ನಡೆದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ರಾಯ್ ಅವರ ಕೊಲೆಯಂತಹ ಘಟನೆಗಳು ಪತ್ರಕರ್ತರನ್ನು ಅಣಕಿಸುತ್ತವೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry