ಭಯ ಬಿಡಿ; ವಿಶ್ವಾಸ ಇಡಿ

ಸೋಮವಾರ, ಜೂಲೈ 15, 2019
25 °C

ಭಯ ಬಿಡಿ; ವಿಶ್ವಾಸ ಇಡಿ

Published:
Updated:

ಒಂದು ಕಂಪೆನಿಯ ಉನ್ನತ ಹುದ್ದೆಯಿಂದ ಹಿಡಿದು ಜವಾನನ ಕೆಲಸದವರೆಗೂ ಸಂದರ್ಶನ ಇರುತ್ತದೆ. ಕೆಲವರಿಗೆ ಸಂದರ್ಶನ ಎಂದರೇ ಎದೆಯಲ್ಲಿ ಡವಡವ ಪ್ರಾರಂಭವಾಗುತ್ತದೆ. ಅಂಥವರು ಭಯಪಟ್ಟೇ ಸಂದರ್ಶನದಲ್ಲಿ ವಿಫಲರಾಗುತ್ತಾರೆ. ಸಂದರ್ಶನಕ್ಕೆ ತೆರಳಿದಾಗ ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ. ಹೆದರಿಕೊಂಡರೆ ಗೊತ್ತಿರುವ ವಿಷಯಗಳೂ ಮರೆತು ಹೋಗುತ್ತವೆ. ಆದ್ದರಿಂದ ಧೈರ್ಯಶಾಲಿಯಾಗಿ ಸಂದರ್ಶನ ಎದುರಿಸಿ. ಗೊತ್ತಿರುವಷ್ಟನ್ನು ಆತ್ಮವಿಶ್ವಾಸದಿಂದ ಉತ್ತರಿಸಿ. ತೆರಳುವ ಮುನ್ನ ಸರಿಯಾಗಿ ಹೋಂವರ್ಕ್ ಮಾಡಿಕೊಳ್ಳಿ. ಇಂಗ್ಲಿಷ್‌ನಲ್ಲಿ ಸರಾಗವಾಗಿ ಮಾತನಾಡುವುದನ್ನು ಕಲಿಯಿರಿ.ಇನ್ನು ಸರಳ ವಿಧಾನದಲ್ಲಿ ಇಂಗ್ಲಿಷ್ ಕಲಿಯಲು ಪ್ರತಿನಿತ್ಯ ಯಾವುದಾದರೊಂದು ಇಂಗ್ಲಿಷ್ ದಿನಪತ್ರಿಕೆಯನ್ನು ತಪ್ಪದೇ ಓದಿ. ಟಿ.ವಿ.ಯಲ್ಲಿ ನ್ಯೂಸ್ ನೋಡಿ. ಇದರಿಂದ ಭಾಷೆ ಸುಧಾರಿಸುವುದಲ್ಲದೇ ಸಾಮಾನ್ಯ ಜ್ಞಾನವನ್ನೂ ಹೆಚ್ಚಿಸಿಕೊಳ್ಳಬಹುದು. ಕಂಪ್ಯೂಟರ್, ಇಂಟರ್‌ನೆಟ್, ದೇಶದ ಆರ್ಥಿಕ ಸ್ಥಿತಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿಕೊಳ್ಳಿ. ಪ್ರಚಂಡ ವಿಶ್ವಾಸದೊಂದಿಗೆ ಸಂದರ್ಶನ ಎಂಬ ಯುದ್ಧವನ್ನು ಎದುರಿಸಲು ಸಿದ್ಧರಾಗಿ. ಸಂದರ್ಶನದ ವೇಳೆಗಿಂತ ಸ್ವಲ್ಪ ಮೊದಲೇ ಸ್ಥಳ ತಲುಪಿ. ಸರಳವಾದ ಉಡುಗೆ ಧರಿಸಿ. ಮೇಕಪ್ ಸಹ ಸರಳವಾಗಿ ಗೌರವಯುತವಾಗಿದ್ದು,   ಸ್ಮಾರ್ಟ್ ಲುಕ್ ಕೊಡುವಂತೆ ಇರಬೇಕು.ಸಂದರ್ಶನಕ್ಕೆ ಹೋಗುವ ಮುನ್ನ ಆ ಕಂಪೆನಿಯ ಬಗ್ಗೆ ಮಾಹಿತಿ ಸಂಗ್ರಹಿಸಿ. ಯಾವುದೇ ಕಾರಣಕ್ಕೂ ಕಂಪೆನಿಯ ಬಗ್ಗೆ ನಕಾರಾತ್ಮಕ ಅಂಶಗಳನ್ನು ಪ್ರಸ್ತಾಪಿಸಬೇಡಿ. ನೀವು ಮೊದಲು ಬೇರೆ ಕಡೆ ಕೆಲಸ ಮಾಡುತ್ತಿದ್ದಲ್ಲಿ ಆ ಕಂಪೆನಿ, ಅಲ್ಲಿನ ವ್ಯವಸ್ಥೆಯನ್ನು ಅಥವಾ ಬಾಸ್‌ನ್ನು  ಟೀಕಿಸಬೇಡಿ.ನಿಮ್ಮ ಸಾಮರ್ಥ್ಯ, ಕೆಲಸದ ಬಗೆಗಿರುವ ಆಸಕ್ತಿ, ಶ್ರಮ, ದುಡಿಮೆ, ಪ್ರಾಮಾಣಿಕತನದ ಬಗ್ಗೆ ಹೇಳಿ. ನೆನಪಿರಲಿ, ಆತ್ಮಪ್ರಶಂಸೆ ಅತಿಯಾಗದಂತೆ ಗಮನ ವಹಿಸಿ. ನಿಮಗಿರುವ ಪರಿಣತಿ, ವಿಶೇಷ ಅರಿವು, ಎಂಥ ಒತ್ತಡಕ್ಕೂ ಒಳಗಾಗದೇ ದುಡಿಯುವ ಮನೋಭಾವ, ಎಲ್ಲದರಲ್ಲೂ ನಿಮಗಿರುವ ಜ್ಞಾನದ ಬಗ್ಗೆ ತಿಳಿಸಿ ಅವರ ಗಮನ ಸೆಳೆಯಿರಿ. ಯಾವುದೇ ಕಾರಣಕ್ಕೂ ನಿಮ್ಮ ಕುಟುಂಬದ ಸಮಸ್ಯೆಗಳನ್ನು ಹೇಳಬೇಡಿ. ಕೊಟ್ಟ ಕೆಲಸವನ್ನು ಲಕ್ಷ್ಯ ಕೊಟ್ಟು ಅಚ್ಚುಕಟ್ಟಾಗಿ ನೆರವೇರಿಸುತ್ತೇನೆ ಎಂದು ಮನದಟ್ಟು ಮಾಡಿ. ಇನ್ನು ಕೆಲವೆಡೆ ಫೋನ್ ಅಥವಾ ಇಂಟರ್‌ನೆಟ್  ಮುಖಾಂತರ ಕೂಡ ಸಂದರ್ಶನ ತೆಗೆದುಕೊಳ್ಳುವುದುಂಟು. ಇಂಥ ಸಂದರ್ಭದಲ್ಲಿ ತುಂಬಾ ಗಮನ ವಹಿಸಬೇಕು. ನಿಮಗೆ ಬೇಕಾಗುವ ಎಲ್ಲ ದಾಖಲಾತಿಗಳನ್ನೂ ನಿಮ್ಮ ಎದುರೇ ಇಟ್ಟುಕೊಳ್ಳಿ. ಮಕ್ಕಳು ನಿಮ್ಮ ಕೋಣೆಯಲ್ಲಿ ಬಂದು ಗಲಾಟೆ ಮಾಡದಂತೆ ನೋಡಿಕೊಳ್ಳಿ. ನಿಮ್ಮ ದೂರವಾಣಿ ಅಥವಾ ಇಂಟರ್‌ನೆಟ್ ಸರಿಯಾಗಿ ಕಾರ್ಯ ಮಾಡುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಫೋನ್‌ನಲ್ಲಿ ಸರಿಯಾಗಿ ಕೇಳಿಸಿಕೊಂಡು ಆತ್ಮವಿಶ್ವಾಸದಿಂದ ಉತ್ತರಿಸಿ.ನಿಮ್ಮನ್ನು ಕೆಲಸಕ್ಕೆ ತೆಗೆದುಕೊಂಡರೆ ನೀವು ಕಂಪೆನಿಗೆ ಒಂದು ಆಸ್ತಿ ಆಗಬಲ್ಲಿರಿ ಎಂಬ ಭಾವನೆ ಮೂಡಿಸಲು ಪ್ರಯತ್ನಿಸಿ. ನಿಮ್ಮ ಉತ್ತಮ ಕಾರ್ಯದಕ್ಷತೆ ಮತ್ತು ಯಶಸ್ಸು ನೋಡಿ ಅದೃಷ್ಟವೇ ನಿಮ್ಮ ಬಾಗಿಲು ತಟ್ಟಿ ಒಳಗೆ ಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry