ಸೋಮವಾರ, ಏಪ್ರಿಲ್ 19, 2021
25 °C

ಭರಚುಕ್ಕಿ ಒಡಲು; ಬರಿದಾಗುವ ದಿಗಿಲು

ಕೆ.ಎಚ್. ಓಬಳೇಶ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯ ಶಿವನಸಮುದ್ರದ ಬಳಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್)ನಿಂದ ನಿರ್ಮಾಣಕ್ಕೆ ಉದ್ದೇಶಿಸಿರುವ ಜಲವಿದ್ಯುತ್ ಘಟಕದ ಪರಿಣಾಮ ಭರಚುಕ್ಕಿ ಜಲಪಾತದ ಸೌಂದರ್ಯಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ.345 ಮೆ.ವಾ. ಸಾಮರ್ಥ್ಯದ ಘಟಕ ಸ್ಥಾಪಿಸಲು ಕೆಪಿಸಿಎಲ್‌ನಿಂದ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ಸಂಬಂಧ ಸರ್ವೇಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಭರಚುಕ್ಕಿ ಜಲಪಾತಕ್ಕೆ ನೀರು ಹೋಗುವ ಮೇಲ್ಭಾಗದ ಒಂದು ಕಿ.ಮೀ. ಬಳಿ ಹೊನ್ನೂರು ಗುಡ್ಡದವರೆಗೆ 14 ಮೀ. ಎತ್ತರದ ತಡೆಗೋಡೆ ನಿರ್ಮಿಸಲು ನಿರ್ಧರಿಸಲಾಗಿದೆ. 2 ಕಿ.ಮೀ. ಉದ್ದದ ತಡೆಗೋಡೆ ನಿರ್ಮಾಣದಿಂದ ಸಾಕಷ್ಟು ನೀರು ನಿಲ್ಲಲಿದ್ದು, ಗುಡ್ಡದ ಸಮೀಪವಿರುವ ಬೂದಗಟ್ಟೆದೊಡ್ಡಿಯಲ್ಲಿ ಘಟಕದ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.ದಶಕದ ಹಿಂದೆ ರಾಜ್ಯದ ಈ ಯೋಜನೆಗೆ ತಮಿಳುನಾಡು ತಗಾದೆ ತೆಗೆದಿತ್ತು. ಹೀಗಾಗಿ, ಯೋಜನೆ ನೆನೆಗುದಿಗೆ ಬಿದ್ದಿತ್ತು. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರನ್ನು ಕಾವೇರಿ ನದಿಗೆ ಬಿಡುವ ಬಗ್ಗೆ ತಮಿಳುನಾಡಿಗೆ ಮನದಟ್ಟು ಮಾಡಿಕೊಟ್ಟ ನಂತರ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಯೋಜನೆ ಜಾರಿಗೆ ತಮಿಳುನಾಡು, ರಾಜ್ಯ ಸರ್ಕಾರಕ್ಕೆ ಸಲಹೆ ಮುಂದಿಟ್ಟಿತ್ತು. ಪ್ರಸ್ತುತ ಕೇಂದ್ರದ ಅನುಮತಿಯೂ ದೊರಕಿದೆ. ತಡೆಗೋಡೆಯ ಹಿನ್ನೀರಿನಲ್ಲಿ ಸುಮಾರು 200 ಎಕರೆಯಷ್ಟು ಫಲವತ್ತಾದ ಕೃಷಿಭೂಮಿ ಮುಳುಗಡೆಯಾಗಲಿದೆ. ಆದರೆ, ತಡೆಗೋಡೆ ನಿರ್ಮಾಣದಿಂದ ನೀರು ಭರಚುಕ್ಕಿಗೆ ಹೋಗುವುದು ಸ್ಥಗಿತಗೊಳ್ಳಲಿದೆ. ಭಾರಿ ಮಳೆ ಸುರಿದು ಪ್ರವಾಹ ಉಂಟಾಗುವ ವೇಳೆಯಷ್ಟೇ ಜಲಪಾತದ ನೈಜ ಸೌಂದರ್ಯ ಕಾಣಲು ಸಾಧ್ಯವಾಗಲಿದೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರನ್ನು ಪುನಃ ಜಲಪಾತದತ್ತ ಬಿಡುವುದಿಲ್ಲ. ಬೂದಗಟ್ಟೆದೊಡ್ಡಿಯಲ್ಲಿ ಘಟಕ ಸ್ಥಾಪಿಸುವುದರಿಂದ ಬಳಕೆಯಾದ ನೀರು ಭರಚುಕ್ಕಿಗೆ ಬರಲು ಸಾಧ್ಯವೂ ಇಲ್ಲ. ಇದರಿಂದ ಜಲಪಾತ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬುದು ಪರಿಸರವಾದಿಗಳ ಆತಂಕ.ಸತ್ತೇಗಾಲದ ಬಳಿ ಕಾವೇರಿ ನದಿ ಕವಲಾಗಿ ಹರಿಯುತ್ತದೆ. ಒಂದು ಕವಲು ಗಗನಚುಕ್ಕಿ ಕಡೆಗೆ ಹಾಗೂ ಮತ್ತೊಂದು ಭರಚುಕ್ಕಿಯತ್ತ ಸಾಗುತ್ತದೆ. ಈಗಾಗಲೇ, ನೀರು ಗಗನಚುಕ್ಕಿ ಜಲಪಾತಕ್ಕೆ ಹೋಗುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಿ ಖಾಸಗಿ ಕಂಪೆನಿಯೊಂದಕ್ಕೆ ವಿದ್ಯುತ್ ಉತ್ಪಾದನೆಗೆ ಅವಕಾಶ ಕಲ್ಪಿಸಲಾಗಿದೆ.  ವಿದ್ಯುತ್ ಉತ್ಪಾದನೆಗೆ ಬಳಕೆಯಾಗುವ ನೀರು ಜಲಪಾತ ಸೇರುತ್ತಿಲ್ಲ. ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇದರಿಂದ ನೀರಿನ ಹರಿವು ಕಡಿಮೆಯಾಗಿದ್ದು, ಗಗನಚುಕ್ಕಿ ಸೊಬಗು ಕಳೆದುಕೊಂಡಿದೆ. ಭರಚುಕ್ಕಿ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರನ್ನು ಪುನಃ ಭರಚುಕ್ಕಿಗೆ ಬಿಡುವ ಬಗ್ಗೆ ಯೋಜನೆಯಡಿ ಪ್ರಸ್ತಾಪಿಸಿಲ್ಲ ಎನ್ನುವುದು ಪರಿಸರವಾದಿಗಳ ದೂರು.‘ಮಳೆಗಾಲದಲ್ಲಿ ಹರಿಯುವ ಹೆಚ್ಚುವರಿ ನೀರು ಬಳಸಿಕೊಂಡು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ತಡೆಗೋಡೆಯಿಂದ ವಿದ್ಯುತ್ ಉತ್ಪಾದನೆಗೆ ಬೇಕಾಗುವಷ್ಟು ನೀರನ್ನು ಮಾತ್ರವೇ ಬಳಸಿಕೊಳ್ಳಲಾಗುವುದು. ಉಳಿದ ನೀರು ಜಲಪಾತಕ್ಕೆ ಹೋಗಲಿದೆ. ಸಂಪೂರ್ಣವಾಗಿ ನೀರು ಸ್ಥಗಿತಗೊಳ್ಳುವುದಿಲ್ಲ. ಆತಂಕಪಡುವ ಅಗತ್ಯವಿಲ್ಲ. ಸದ್ಯಕ್ಕೆ ಯೋಜನೆಯ ಸರ್ವೇಕಾರ್ಯ ಆರಂಭಿಸಲಾಗಿದೆ’ ಎನ್ನುತ್ತಾರೆ ಕೆಪಿಸಿಎಲ್‌ನ ಅಧಿಕಾರಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.