ಭರಣ ಕಂಸಾಳೆ ಮಕ್ಕಳ ಕೈಸಾಳೆ

7

ಭರಣ ಕಂಸಾಳೆ ಮಕ್ಕಳ ಕೈಸಾಳೆ

Published:
Updated:

ಇದ್ದ ಸಣ್ಣ ಸಭಾಂಗಣದ ಒಂದು ಮೂಲೆಯಲ್ಲೇ ಮಕ್ಕಳು ತಾಲೀಮು ನಡೆಸುತ್ತಿದ್ದರು. ಕೆಲವರ ಕೈಲಿದ್ದ ಕಂಸಾಳೆಗೂ ಚಿತ್ರಕ್ಕೂ ಸಂಬಂಧವಿತ್ತು.`ಚಿನ್ನಾರಿಮುತ್ತ~ ತರಹದ ಅಪರೂಪದ ಮಕ್ಕಳ ಚಿತ್ರ ಕೊಟ್ಟ 19 ವರ್ಷಗಳ ನಂತರ ನಾಗಾಭರಣ ಶೃತಾಲಯ ಸಂಸ್ಥೆಯ ಮೂಲಕ `ಕಂಸಾಳೆ ಕೈಸಾಳೆ~ ಮಕ್ಕಳ ಚಿತ್ರ ನಿರ್ದೇಶಿಸಿದ್ದಾರೆ. ಅದರ ಹಾಡುಗಳ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿಣ್ಣರ ಹಾಡು ಹೊನಲಾಯಿತು.ಬಹುತೇಕ ಕಮರ್ಷಿಯಲ್ ಚಿತ್ರಗಳ ಆಡಿಯೋ ಬಿಡುಗಡೆ ಸಮಾರಂಭಕ್ಕಿಂತ ಇದು ಸಂಪೂರ್ಣ ಭಿನ್ನವಾಗಿತ್ತು. ಮಾತಿನಲ್ಲಿ ಚುರುಕಾಗಿರುವ ಕೆಲವು ಮಕ್ಕಳು ನಿರೂಪಣೆ ಮಾಡಿದರು. ವೇದಿಕೆ ಮೇಲೆ ಮೊದಲು ಕಾಲಿಟ್ಟದ್ದೂ ಮಕ್ಕಳೇ. ಕಾರ್ಯಕ್ರಮ ಶುರುವಾದದ್ದು ಕಂಸಾಳೆ ಪದದಿಂದ. ಸಾನ್ವಿ ಎಂಬ ಪುಟ್ಟ ಮಗು ನಿಧನಿಧಾನಕ್ಕೆ ಹೆದರುತ್ತಾ ಪೆಟ್ಟಿಗೆ ತೆಗೆದು ಅತಿಥಿಗಳ ಕೈಗೆ ಸೀಡಿ ಕೊಡುವ ಮೂಲಕ ಆಡಿಯೋ ಬಿಡುಗಡೆ ನೆರವೇರಿತು.ಗೊತ್ತೇ ಇರದ ಕಂಸಾಳೆ ಕಲಿಯುವಾಗ ಇದ್ದ ಭಯ, ಮಾದೇಶನ ಬೆಟ್ಟ ಹತ್ತಿದ ಖುಷಿ, ಕಾಡುಗಳಲ್ಲಿ ಅಲೆದಾಡಿದ್ದು, ಆನೆಗಳ ಜೊತೆ ನಟಿಸಿದ್ದು, ಬದಿಗಾಲಲ್ಲಿ ನಡೆಯುವಾಗ ಕಲ್ಲು-ಮುಳ್ಳು ಚುಚ್ಚಿ ಆದ ನೋವು, ಪೆಟ್ಟು ಮಾಡಿಕೊಂಡೂ ನಟಿಸುವಾಗ ಅದು ಮರೆತುಹೋಗುತ್ತಿದ್ದದ್ದು ಎಲ್ಲವನ್ನು ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಅಮರರಾಜ್ ಹಾಗೂ ಸ್ನೇಹಿತ್ ಮೆಲುಕುಹಾಕಿದರು.ಚಿತ್ರದಲ್ಲಿ ಮಾದಯ್ಯ ಎಂಬ ಕಂಸಾಳೆ ಗುರುವಿನ ಪಾತ್ರದಲ್ಲಿ ನಟಿಸಿರುವ ನಟ ಶ್ರೀಧರ್ ತಮ್ಮ ಹಾಗೂ ನಾಗಾಭರಣ ನಡುವಿನ ದೀರ್ಘ ಕಾಲದ ನಂಟಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಮೈಮರೆತು ಕಂಸಾಳೆ ನೃತ್ಯ ಮಾಡುತ್ತಿದ್ದಾಗ ತಲೆಗೆ ಪೆಟ್ಟು ಮಾಡಿಕೊಂಡು ಹೊಲಿಗೆ ಹಾಕಿಸಿಕೊಂಡರೂ ಅದೇನೂ ದೊಡ್ಡ ನೋವಲ್ಲ ಎಂದು ಅವರು ವಿನಯದಿಂದ ಹೇಳುತ್ತಾ, ಒಮ್ಮೆ ತಲೆ ಮುಟ್ಟಿಕೊಂಡರು. ಕಂಸಾಳೆಯ ಮೂಲಕ ಜೀವನಮೌಲ್ಯವನ್ನು ಹೇಳಿರುವ ನಾಗಾಭರಣ ಅವರ ಈ ಯತ್ನದ ಹೊಗಳಿಕೆಗೇ ಶ್ರೀಧರ್ ಮಾತಿನ ಸಿಂಹಪಾಲು ಮೀಸಲಿತ್ತು.ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಕೆ.ಕಲ್ಯಾಣ್ ಎಂದಿನ ತಮ್ಮ ಪ್ರಾಸಬದ್ಧ ಶೈಲಿಯ ಮಾತನ್ನು ಹರಿಬಿಟ್ಟರು. ಅವರ ಪ್ರಕಾರ ಪದ್ಯ, ಗದ್ಯ, ವಾದ್ಯ, ಸಾಧ್ಯತೆ ಇಡೀ ಚಿತ್ರದ ಜೀವಾಳ. ನಾದದ ಹಿಂದೆ ಪಾದ ಬೆಳೆಸುವ ಪ್ರಯಾಣ ಈ ಚಿತ್ರದಲ್ಲಿದೆ ಎಂದ ಅವರಿಗೆ, ನಾಗರಿಕತೆ ಹಾಗೂ ಮುಳುಗುವ ಪರಂಪರೆಯ ಪ್ರಸ್ತಾಪವೂ ಕಂಡಿದೆ. ನಾಗಾಭರಣ ಚಿತ್ರಗಳ ಅಭಿಮಾನಿ ತಾವು ಎಂದು ಹೇಳಿಕೊಂಡ ಅವರು ಈ ಅವಕಾಶ ಸಿಕ್ಕಿದ್ದಕ್ಕೆ ಕೃತಾರ್ಥರಾದರು.ಆಡಿಯೋ ಹಕ್ಕನ್ನು ಪಡೆದಿರುವ ಲಹರಿ ಸಂಸ್ಥೆಯ ವೇಲು `ಹಾಡುಗಳು ಅದ್ಭುತವಾಗಿವೆ~ ಎಂದೇ ಮಾತನ್ನು ಆರಂಭಿಸಿದ್ದು. ಕಡಿಮೆ ಅವಧಿಯಲ್ಲಿ ಇಷ್ಟೊಂದು ಮಕ್ಕಳಿಗೆ ತರಬೇತಿ ಕೊಟ್ಟು ನಟಿಸುವಂತೆ ಮಾಡಿದ ನಾಗಾಭರಣರ ಪ್ರಯತ್ನವನ್ನು ಅವರು ಶ್ಲಾಘಿಸಿದರು.ಛಾಯಾಗ್ರಾಹಕ ಅನಂತ್ ಅರಸ್ ಇದೇ ಮೊದಲ ಬಾರಿಗೆ ಇಡೀ ಚಿತ್ರವನ್ನು ರೆಡ್ ಕ್ಯಾಮೆರಾ ಬಳಸಿ ಚಿತ್ರೀಕರಿಸಿದ್ದನ್ನು ಹೇಳಿಕೊಂಡರು. `ನಾಗಮಂಡಲ~ ಚಿತ್ರದಲ್ಲಿ ಸಹಾಯಕ ಛಾಯಾಗ್ರಾಹಕರಾಗಿದ್ದ ಅವರಿಗೆ ಹಾಗೂ `ಶಿಶುನಾಳ ಷರೀಫ~ ಚಿತ್ರದ ಮೂಲಕ ಸಂಕಲನ ಸಹಾಯಕರಾಗಿ ಪದಾರ್ಪಣೆ ಮಾಡಿದ್ದ ಕೆಂಪರಾಜ್‌ಗೆ ನಾಗಾಭರಣ ಬಗ್ಗೆ ಅತೀವ ಗೌರವ. ಈ ಚಿತ್ರದಲ್ಲಿ ಇಬ್ಬರೂ ಸ್ವತಂತ್ರವಾಗಿ ಕೆಲಸ ಮಾಡಿದ್ದಾರೆ.ಬದುಕಿನುದ್ದಕ್ಕೂ ತಲಕಾಡು ಬಳಿಯ ತಮ್ಮೂರಿನ ಜಾತ್ರೆಯ ಕಂಸಾಳೆ ನಾದ ಕಾಡುತ್ತಿತ್ತು. ಅದೀಗ ಚಿತ್ರವಾಗಿದೆ ಎಂಬ ಹೆಮ್ಮೆ ನಾಗಾಭರಣ ಅವರದ್ದು. ಮಕ್ಕಳ ಸಿನಿಮಾ ಎಂಬುದು ಆ ಕ್ಷಣಕ್ಕೆ ಹುಟ್ಟಿ ಮರೆಯಾಗಕೂಡದು; ಅದು ಚಳವಳಿಯಾಗಬೇಕು ಎಂಬುದು ಕಳಕಳಿ. ಅದಕ್ಕೆ ನೀರೆರೆದವರು ನಿರ್ಮಾಪಕ ಮಹೇಶ್.ಚಿತ್ರದ ಎರಡು ಹಾಡುಗಳನ್ನು ಪ್ರದರ್ಶಿಸಿದಾಗ ಮಕ್ಕಳು ತಮ್ಮನ್ನು ತಾವೇ ಕಂಡು ಹಿರಿಹಿರಿ ಹಿಗ್ಗಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry