ಶುಕ್ರವಾರ, ಜೂನ್ 18, 2021
24 °C

ಭರತನಾಟ್ಯದ ಬೇರಿನ ಶಾಲೆ

–ಹೇಮಾ ವೆಂಕಟ್ Updated:

ಅಕ್ಷರ ಗಾತ್ರ : | |

ನಗರದಲ್ಲಿ ಭರತನಾಟ್ಯ ಕಲಿಯುವವರಿಗೂ, ಕಲಿಸುವವರಿಗೂ ಬರವಿಲ್ಲ. ಬಡಾವಣೆಗೊಂದರಂತೆ ಭರತನಾಟ್ಯ ಶಾಲೆಗಳು ಸಿಗುತ್ತವೆ. ಆಧುನಿಕ ಶೈಲಿಯೊಂದಿಗೆ ಭರತನಾಟ್ಯವೂ ಹೆಜ್ಜೆ ಹಾಕಿದೆ. ಆದರೆ ಭರತನಾಟ್ಯವನ್ನು ಸಾಂಪ್ರದಾಯಿಕ ಶೈಲಿಯಲ್ಲಿಯೇ ಕಲಿಸುತ್ತಾ, ಅದರ ಅನನ್ಯತೆಯನ್ನು ಉಳಿಸಿಕೊಂಡು ಬರುತ್ತಿರುವ ಸಂಸ್ಥೆಯೊಂದು 1948ನೇ ಇಸವಿಯಲ್ಲಿಯೇ ಆರಂಭವಾಗಿದೆ. ಅದುವೇ ‘ಅಕಾಡೆಮಿ ಆಫ್ ಭರತನಾಟ್ಯ’.ಅಕಾಡೆಮಿ ಎಂದರೆ ಸಾಕು ಸರ್ಕಾರದ ಅಡಿಯಲ್ಲಿ ಬರುವ ಸಾಹಿತ್ಯ, ಲಲಿತಕಲೆ, ಸಂಗೀತ–ನಾಟಕ, ಯಕ್ಷಗಾನ–ಜಾನಪದ ಅಕಾಡೆಮಿಗಳು ನೆನಪಿಗೆ ಬರುತ್ತವೆ. ಆದರೆ 1940ರ ದಶಕದಲ್ಲಿ ಭರತನಾಟ್ಯದ ದಂತಕತೆ ಎನಿಸಿರುವ ಮೀನಾಕ್ಷಿ ಸುಂದರಂ ಪಿಳ್ಳೈ ಮತ್ತು ಮುತ್ತುಕುಮಾರ ಪಿಳ್ಳೈ ಅವರ ಶಿಷ್ಯ ಟಿ.ಕೆ.ನಾರಾಯಣ ‘ಅಕಾಡೆಮಿ ಆಫ್‌ ಭರತನಾಟ್ಯ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಟಿ.ಕೆ. ನಾರಾಯಣ ಹಾಸನದವರು. ಆ ಕಾಲದಲ್ಲಿ ಹೈದರಾಬಾದ್‌ನ ‘ಕಾಲೇಜ್‌ ಆಫ್‌ ಮ್ಯೂಸಿಕ್‌ ಅಂಡ್‌ ಡಾನ್ಸ್‌’ನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಹೆಸರು ಮಾಡಿದವರು.ಅವರ ಜೊತೆಗೆ ನೃತ್ಯ ಕಲಾವಿದೆ, ಪತ್ನಿ ವಿಜಯಲಕ್ಷ್ಮಿ ಅಕಾಡೆಮಿಯ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತವರು. ನಾಲ್ಕು ದಶಕಗಳ ಕಾಲ ಹೈದರಾಬಾದ್‌ ಮತ್ತು ಸಿಕಂದರಾಬಾದ್‌ಗಳಲ್ಲಿ ದಣಿವರಿಯದ ನೃತ್ಯ ತರಗತಿ ನೀಡಿದ ಪ್ರತಿಭಾವಂತೆ. ನಟುವಾಂಗದಲ್ಲಿ ನೃತ್ಯ ಮತ್ತು ಸಂಗೀತವನ್ನು ತಾನೇ ನಿರ್ವಹಿಸುತ್ತಿದ್ದ ವಿಜಯಲಕ್ಷ್ಮಿ  1961ರಲ್ಲಿ  ಯುರೋಪ್‌ ಮತ್ತು ರಷ್ಯಾದಲ್ಲಿ ಖ್ಯಾತ ನೃತ್ಯಗಾರ್ತಿ ಕಮಲಾ ಅವರಿಂದ ಪ್ರದರ್ಶನ ನೀಡುವ ಅವಕಾಶ ಪಡೆದರು. ಆಮೇಲೆ ಸಿಂಗಪುರ ಫೈನ್‌ ಆರ್ಟ್ಸ್ ಸೊಸೈಟಿಯಲ್ಲಿ ನೃತ್ಯ ತರಗತಿ ನೀಡಿದರು.ಅವರ ನಂತರ ಅಕಾಡೆಮಿಯ ನಿರ್ದೇಶಕರಾಗಿರುವವರು ಅವರ ಮಗಳು ಗಾಯತ್ರಿ ಕೇಶವನ್‌. ಇವರೂ  ನಲವತ್ತು ವರ್ಷಗಳಿಂದ ನೃತ್ಯ ಕಲಿಸುತ್ತಿದ್ದಾರೆ. ಇವರು ಭರತನಾಟ್ಯದ ಜೊತೆಗೆ ಕರ್ನಾಟಕ ಸಂಗೀತವನ್ನೂ ಕಲಿಸುತ್ತಿದ್ದಾರೆ. 1973ರಲ್ಲಿಯೇ ಭಾರತ ಸರ್ಕಾರದ ಸ್ಕಾಲರ್‌ಶಿಪ್‌ ಗಾಯತ್ರಿ. ಅಕಾಡೆಮಿಯ ಜೊತೆಗೆ ಬೆಂಗಳೂರು ವಿವಿ ನೃತ್ಯ ಪರೀಕ್ಷಕರಾಗಿಯೂ ನ್ಯಾಷನಲ್  ಹಿಲ್‌ವೀವ್‌ ಪಬ್ಲಿಕ್‌ ಸ್ಕೂಲ್‌ನ ನೃತ್ಯಶಿಕ್ಷಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.ಗಾಯತ್ರಿ ಅವರ ಮಕ್ಕಳಾದ ಮೈತ್ರೇಯಿ ಮತ್ತು ಮಾತಂಗಿ ಅಕಾಡೆಮಿಯ ನೃತ್ಯ ಶಿಕ್ಷಕರು. ಭರತನಾಟ್ಯವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಕಲಿಸುತ್ತಿದ್ದಾರೆ. ಈ ಹಿಂದೆ ಕೋರಮಂಗಲದಲ್ಲಿದ್ದ ಅಕಾಡೆಮಿಯ ಕಚೇರಿ ಈಗ ರಾಜರಾಜೇಶ್ವರಿನಗರದಲ್ಲಿದೆ. ಅಕಾಡೆಮಿಯ ಧ್ಯೇಯ ಮತ್ತು ಸಾಧನೆಯ ಬಗ್ಗೆ ಹೇಳುತ್ತಾ ನೃತ್ಯಕ್ಕೂ ಶುದ್ಧತೆಯ ಮುದ್ರೆ ಬೇಕೇ ಬೇಕು ಎನ್ನುತ್ತಾರೆ ಗಾಯತ್ರಿ ಕೇಶವನ್‌. ಕಲಿಕೆಯೇ ಮುಖ್ಯ

ನಮ್ಮದು ಪಂದನಲ್ಲೂರು ಶೈಲಿಯ ಭರತನಾಟ್ಯ. ಇದು ಪುರಾತನ ಮತ್ತು ಶುದ್ಧ ಸಾಂಪ್ರದಾಯಿಕ ಶೈಲಿಯ ನೃತ್ಯಪ್ರಕಾರ. ಗುರು ಮುತ್ತುಕುಮಾರ ಪಿಳ್ಳೈ ನಂತರ ಅವರ ಶಿಷ್ಯ ನಮ್ಮ ತಂದೆ ಟಿ.ಕೆ.ನಾರಾಯಣ ಈ ನೃತ್ಯವನ್ನು ಮುಂದುವರಿಸಿಕೊಂಡು ಬಂದರು. ಈ ನೃತ್ಯದಲ್ಲಿ ಬಾಡಿಲೈನ್‌ಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ತುಂಬ ಗೌರವಯುತವಾದ ಪ್ರದರ್ಶನವಿರುತ್ತದೆ.ಇಲ್ಲಿ ಯಾವುದೂ ಹೆಚ್ಚು ಅಥವಾ ಕಡಿಮೆ ಇರುವುದಿಲ್ಲ. ಸಮತೋಲನವಾದ ನೃತ್ಯವಿರುತ್ತದೆ. ಈಗಲೂ ಈ ಶೈಲಿಗೆ ಬೇಡಿಕೆ ಇದೆ. ನಮ್ಮಲ್ಲಿ ಕಲಿತ ಅನೇಕ ವಿದೇಶೀಯರು ಕೆನಡ, ಅಮೆರಿಕ ಮುಂತಾದ ಕಡೆ ತರಗತಿಗಳನ್ನು ನಡೆಸುತ್ತಿದ್ದಾರೆ. ನಮಗೆ ಹೆಚ್ಚು ಕಾರ್ಯಕ್ರಮಗಳನ್ನು ನಡೆಸುವ ಆತುರವಿಲ್ಲ. ಇಲ್ಲಿ ಕಲಿಕೆ ಮುಖ್ಯ.ನಾನು ನಲವತ್ತು ವರ್ಷಗಳಿಂದ ಇದೇ ಕ್ಷೇತ್ರದಲ್ಲಿದ್ದರೂ ವಿದ್ಯಾರ್ಥಿಯೇ ಎಂಬ ಭಾವವಿದೆ. ಕಲಿಸುವ ಮೂಲಕ ಮತ್ತೇನೋ ಕಲಿಯುತ್ತೇವೆ. ಇಲ್ಲಿ ಕಲಿಸುವುದೇ ಮುಖ್ಯ. ನಮ್ಮ ಸಂಸ್ಥೆಯ ಧ್ಯೇಯವೇ ಕಲಿಕೆಯಾಗಿರುವುದರಿಂದ ನಾವು ಕಾರ್ಯಕ್ರಮ ನೀಡುವ ದಿನವೂ ತರಗತಿ ನಿಲ್ಲಿಸುವುದಿಲ್ಲ. ನಾನು, ನನ್ನ ಮಕ್ಕಳಾದ ಮೈತ್ರೇಯಿ ಮತ್ತು ಮಾತಂಗಿ ತರಗತಿ ನಡೆಸುತ್ತೇವೆ.

ನಮ್ಮಲ್ಲಿ ವರ್ಷಕ್ಕೆ ಒಂದೇ ಸಲ ಪ್ರವೇಶ (ಅಡ್ಮಿಷನ್‌) ಇರುತ್ತದೆ. ಮಕ್ಕಳಿಗೆ ಜೂನ್‌ನಲ್ಲಿ ತರಗತಿ ಆರಂಭವಾಗುತ್ತದೆ.  ಕೆಲಸಕ್ಕೆ ಹೋಗುವ ಮಹಿಳೆಯರು ವಾರಾಂತ್ಯಗಳಲ್ಲಿ ಬರುತ್ತಾರೆ. ಕೆಲವರು ಸಂಜೆ 4ರಿಂದ 8ರವರೆಗೆ ಬರುತ್ತಾರೆ. ವಿದೇಶಗಳ ಕೆಲ ಆಸಕ್ತರು ಬಂದು ಒಂದೆರಡು ತಿಂಗಳು ನಿರಂತರವಾಗಿ ಕಲಿತು ಹೋಗುತ್ತಾರೆ.ಸಾಮಾನ್ಯವಾಗಿ ಜೂನಿಯರ್‌, ಸೀನಿಯರ್‌ ಪರೀಕ್ಷೆ ಬರೆದವರೆಲ್ಲ ತರಗತಿ ನಡೆಸುತ್ತಾರೆ. ಆದರೆ ಅದು ಸರಿಯಾದ ಕ್ರಮ ಅಲ್ಲ. ಇಲ್ಲಿ ಪರೀಕ್ಷೆ ಮುಖ್ಯ ಅಲ್ಲವೇ ಅಲ್ಲ. ನಮ್ಮ ಹಿರಿಯ ಕಲಾವಿದರೆಲ್ಲ ಯಾವುದೇ ಪರೀಕ್ಷೆ ಬರೆದವರಲ್ಲ. ಕಡಿಮೆ ಎಂದರೂ ಹತ್ತು ಹದಿನೈದು ವರ್ಷವಾದರೂ ನೃತ್ಯ ಕಲಿತಿರಬೇಕು. ಅಂಥವರು ಕಲಿಸಲು ಯೋಗ್ಯರಾಗಿರುತ್ತಾರೆ. ಕಾರ್ಯಕ್ರಮಗಳೂ ಅಷ್ಟೇ ಉತ್ಕೃಷ್ಟ ಮಟ್ಟದಲ್ಲಿರಬೇಕು. ಸಂಖ್ಯೆ ಮುಖ್ಯವಲ್ಲ.

ಗಾಯತ್ರಿ ಕೇಶವನ್‌, ಅಕಾಡೆಮಿ ನಿರ್ದೇಶಕಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.