ಭರತನಾಟ್ಯ ಶಕಪುರುಷನಿಗೆ ಅರ್ಥಪೂರ್ಣ ನಮನ

7
ಲಯ ಹಾಸ್ಯ

ಭರತನಾಟ್ಯ ಶಕಪುರುಷನಿಗೆ ಅರ್ಥಪೂರ್ಣ ನಮನ

Published:
Updated:
ಭರತನಾಟ್ಯ ಶಕಪುರುಷನಿಗೆ ಅರ್ಥಪೂರ್ಣ ನಮನ

ಭರತನಾಟ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟು ಪುರುಷ ನರ್ತನ ಮತ್ತು ಕಲಾವಿದ ದಂಪತಿಯ ನೃತ್ಯ ಕಾರ್ಯಕ್ರಮಗಳಿಗೆ ಎಂದಿಗೂ ನಿಲ್ಲದಂತಹ ತಾಳ ತಟ್ಟಿದ ಸಾಹಸಿಗ-ಕನ್ನಡಿಗ ಪ್ರೊ. ಯು.ಎಸ್. ಕೃಷ್ಣರಾವ್ ಅವರ ಜನ್ಮ ಶತಮಾನೋತ್ಸವವನ್ನು ವೈವಿಧ್ಯಮಯವಾಗಿ ಹಾಗೂ ಅದ್ದೂರಿಯಾಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ರವೀಂದ್ರ ಕಲಾಕ್ಷೇತ್ರ ಮತ್ತು ಭಾರತೀಯ ವಿದ್ಯಾಭವನದ ಸಭಾಂಗಣಗಳಲ್ಲಿ  ಆಚರಿಸಲಾಯಿತು.ರಾಯರ ಹಿರಿಯ ಶಿಷ್ಯೆಯರಾದ ಶಾರದಾ ರುದ್ರ, ಮೈತ್ರೇಯಿ ಬ್ರಹ್ಮನ್, ಗಾಯಿತ್ರಿ, ಡಾ. ಸರ್ವೋತ್ತಮ ಕಾಮತ್, ನಂದಿನಿ ಮೆಹ್ತಾ, ಶೋಭಾ ವಿ. ರಮಣಿ ಮತ್ತಿತರ ಅಭಿಮಾನಿಗಳು ಆಯೋಜಿಸಿದ್ದ ಮೂರು ದಿನಗಳ ಸಂಭ್ರಮದಲ್ಲಿ ರಾಜ್ಯ ಸರ್ಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ, ಕರ್ನಾಟಕ ನೃತ್ಯಕಲಾ ಪರಿಷತ್ತು ಮತ್ತು ಮಹಾಮಾಯ ಸಂಸ್ಥೆಗಳೂ ಸಹಕಾರ ನೀಡಿದ್ದುದು ಸ್ವಾಗತಾರ್ಹ.ರಾವ್ ಅವರನ್ನು ಕುರಿತಾದ ವಿಶೇಷ ಲೇಖನಗಳು, ಅಪೂರ್ವ ಭಾವಚಿತ್ರಗಳ ಸಂಪುಟ ಇತ್ಯಾದಿಯನ್ನೊಳಗೊಂಡ ನರ್ತಕ ವರೇಣ್ಯ ಎಂಬ ಆಕರ್ಷಕ ಸ್ಮರಣ ಸಂಚಿಕೆಯನ್ನೂ ಶತಮಾನೋತ್ಸವದ ಅಂಗವಾಗಿ ಪ್ರಕಟಿಸಲಾಯಿತು. ಅವರು ಸಂಯೋಜಿಸಿದ್ದ ಕೆಲವು ರಚನೆಗಳ `ನೃತ್ಯ ಮಾಯಾ' ಸೀಡಿ ಬಿಡುಗಡೆ, ಕೃಷ್ಣರಾಯರು ತಮ್ಮ ಪತ್ನಿ ಚಂದ್ರಭಾಗಾದೇವಿಯವರೊಡನೆ ನೀಡಿದ ಕಾರ್ಯಕ್ರಮಗಳು ಮತ್ತು ಅವರ ಸಾಧನೆಗಳನ್ನು ದಾಖಲಿಸುವ ಚಿತ್ರಗಳ ಪ್ರದರ್ಶನವೂ ನಡೆಯಿತು.ಅವರ ಪ್ರಮುಖ ಹಾಗೂ ಪ್ರಸಿದ್ಧ ಶಿಷ್ಯೆಯರ ನೃತ್ಯ ಕಾರ್ಯಕ್ರಮಗಳು, ಅವರ ಒಡನಾಡಿ ಕಲಾವಿದರ ಸನ್ಮಾನ, ಹಿರಿಯ ಕಲಾ ವಿರ್ಶಕ ಎಸ್.ಎನ್. ಚಂದ್ರಶೇಖರ್ ಅವರಿಗೆ ಗೌರವಾರ್ಪಣೆ, ಅವರ ಜೀವನ ಮತ್ತು ಕೊಡುಗೆಗಳ ಬಗೆಗೆ ವಿಚಾರ ಸಂಕಿರಣ ಮತ್ತು ಅವರನ್ನು ಕುರಿತಾದ ಹೆಚ್.ಎನ್. ಸುರೇಶ್ ಮತ್ತು ಆಶಿಷ್ ಮೋಹನ್ ಖೋಕರ್ ಅವರು ತಯಾರಿಸಿರುವ ಸಾಕ್ಷ್ಯಚಿತ್ರಗಳ ಪ್ರದರ್ಶನಗಳು ಶತಮಾನೋತ್ಸವ ಸಂಭ್ರಮದ ಆಯಾಮಗಳನ್ನು ವಿಸ್ತರಿಸಿದವು.ಪ್ರೌಢಾಭಿನಯ

ಶುಕ್ರವಾರ ಸಂಜೆ ಶತಮಾನಾಚರಣೆಯ ವಿಧ್ಯುಕ್ತ ಉದ್ಘಾಟನೆಯ ನಂತರ ಹಿರಿಯ ಭರತನಾಟ್ಯ ಕೋವಿದೆ ಸೋನಾಲ್ ಮಾನ್‌ಸಿಂಗ್ ಅವರ ಸೊಗಸಾದ ನೃತ್ಯವಿತ್ತು. ತಮ್ಮ ಪ್ರದರ್ಶನಗಳಿಂದ ಇಂದಿಗೂ ಜನಪ್ರಿಯರಾಗಿದ್ದಾರೆ. ಅವರು ಕೃಷ್ಣರಾವ್ ದಂಪತಿಯ ಹಿರಿಯ ಶಿಷ್ಯರಲ್ಲೊಬ್ಬರು.ಮಲೆಯಾಳಿ ಭಾಷೆಯಿಂದ ಹಿಂದಿಗೆ ಅನುವಾದಗೊಂಡಿರುವ ವಲತ್ತೋಳ್ ಅವರ ರಚನೆಯೊಂದನ್ನು ಆಧರಿಸಿ ಅವರು ಮೇರಿ ಎಂಬ ನಾಯಕಿಯು ಭಗವಂತನ ಸಾನಿಧ್ಯವನ್ನು ಬಯಸಿ ಹೋದಾಗ ಪ್ರಾಯಶ್ಚಿತ್ತಕ್ಕಿಂತ ಪಶ್ಚಾತ್ತಾಪವೇ ಪರಿಹಾರ ಎಂಬ ಸಂದೇಶವನ್ನು ನೀಡುವ ಸನ್ನಿವೇಶವನ್ನು ಹಾಗೂ ಆಕೆಯ ಸ್ಥಿತಿಗತಿಗಳನ್ನು ಪ್ರೌಢವಾಗಿ ಅಭಿನಯಿಸಿದರು. ಅತಿ ಸರಳ ಹಾಗೂ ಸಾಮಾನ್ಯ ವೇಷಭೂಷಣಗಳಷ್ಟನ್ನೇ ತೊಟ್ಟು ಅವರು ಅಚ್ಚರಿಗೊಳಿಸಿದರಾದರೂ ಅವರ ಅಭಿನಯ ಸೂಕ್ಷ್ಮ ಸಂವೇದನೆಗಳಿಂದ ತುಂಬಿತ್ತು. ಅಭವ, ಕಲಾ ನಿಪುಣತೆ, ಭಾವ ಸಂಪನ್ನತೆ ರಸಿಕರ ಅಭಿನಂದನೆಗೆ ಪಾತ್ರವಾಯಿತು. ಅವರ ಸಾತ್ವಿಕಾಭಿನಯ ಪಕ್ವವಾಗಿತ್ತು.ಇಷ್ಟಾದರೂ, ತಮ್ಮ ಗುರು ಕೃಷ್ಣರಾವ್ ಅವರು ಬೋಧಿಸಿದ ಯಾವುದಾದರೂ ಸಾಂಪ್ರದಾಯಿಕ ರಚನೆಯನ್ನು ನಿರೂಪಿಸಿ ತಮ್ಮ ನಮನಗಳನ್ನು ಸಲ್ಲಿಸಿದ್ದರೆ ಹೆಚ್ಚು ಅರ್ಥಪೂರ್ಣವೆನಿಸುತ್ತಿತ್ತು.ಕೃಷ್ಣರಾವ್ ದಂಪತಿಯ ಶಿಷ್ಯರಲ್ಲಿ ಒಬ್ಬರಾಗಿದ್ದ ಕೆ.ಎಂ. ರಾಮನ್ ಅವರ ಪುತ್ರ ಹರೀಶ್ ಅವರು ತೋಡಿ ವರ್ಣ (ಏರನಾಪೈ ಸಾಹಿತ್ಯವನ್ನು ಸೀತಾರಾಮ  ಎಂದು ಬದಲಿಸಿ ರಾಮನನ್ನು ಕುರಿತಾದ ನಿರೂಪಣೆ)ವನ್ನು ಬಹು ಉತ್ಸಾಹದಿಂದ ನಿರೂಪಿಸಿದರು. ಹಿರಿಯ ಗಾಯಕ ಚೆನ್ನಕೇಶವಯ್ಯ ಅವರ ಗಾಯನ ಹಿಂದಿನ ಕಾಲದ ಗಾಯನದ ಬೆಡಗನ್ನು ಸೂಸಿತು.ಯುವ ಕೂಚಿಪುಡಿ ನರ್ತಕಿ ಪ್ರತೀಕ್ಷಾ ಕಾಶಿ ರಂಗ ದೇವತೆಯನ್ನು ವಂದಿಸಿ ತರಂಗಂ (ಪಾಹಿ ಪಹಿ ಶ್ರೀಕೃಷ್ಣ ) ಬಂಧವನ್ನು (ತಟ್ಟೆಯ ಮೇಲೆ ನರ್ತಿಸಿ) ಸುಲಲಿತವಾಗಿ ಮಂಡಿಸಿದರು.ಕಲಾತ್ಮಕ ಕಥಕ್

ತಮ್ಮ ಕಥಕ್ ಮತ್ತು ಭರತನಾಟ್ಯ ಪ್ರದರ್ಶನಗಳು, ವಾರ್ಷಿಕ ಕಲಾ ನಾದಂ ನೃತ್ಯೋತ್ಸವಗಳು ಹಾಗೂ ಉತ್ತಮ ಶಿಷ್ಯರನ್ನು ತಯಾರಿಸುತ್ತಿರುವ ಸಮರ್ಥ ಬೋಧಕರಾಗಿ ಹೆಸರುವಾಸಿಯಾಗಿರುವ ನಂದಿನಿ ಕೆ. ಮೆಹ್ತಾ ಅವರು ಕೃಷ್ಣರಾವ್ ದಂಪತಿಯ ಬಹುಮಾನಿತ ಶಿಷ್ಯೆ.ಎಂದಿನಂತೆ ಮುರಳೀಮೋಹನ್ ಅವರೊಡಗೂಡಿ ಶ್ರೇಷ್ಠ ಮಟ್ಟದ ಕಥಕ್ ನೃತ್ಯ ನೈಪುಣ್ಯವನ್ನು ತೋರಿದರು. ನಂದಿನಿ-ಮುರಳಿ ಜೋಡಿ ನಟರಾಜ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಅವರ ಶಿಷ್ಯೆಯರಾದ ಸ್ಮಿತಾ ಶ್ರೀನಿವಾಸನ್, ಪೂರ್ಣಾ ಆಚಾರ್ಯ, ಚಂದನ ಮತ್ತು ಸೌಮ್ಯ ಅವರು `ಬಸಂತ್' ಎಂಬ ಸಮೂಹ ನೃತ್ಯದಲ್ಲಿ ವಸಂತ ಋತುವಿನ ಬೆಡಗನ್ನು ಅನಾವರಣಗೊಳಿಸಿದರು. ಅದಕ್ಕಾಗಿ ಅವರು ಬಳಸಿದ ಕಥಕ್ ಭಾಷೆ ಸಮೃದ್ಧವಾಗಿತ್ತು. ಸಮೂಹ ನೃತ್ಯ ಗಳಿಲ್ಲರಬೇಕಾದ ಶಿಸ್ತು, ಹೊಂದಾಣಿಕೆ, ಕ್ಷಣಾರ್ಧದಲ್ಲಿ  ಅದಲುಬದಲುಗೊಳ್ಳಬೇಕಾದ ಸ್ಥಿತಿಗತಿಗಳ ಗ್ರಹಿಕೆ ಹಾಗೂ ಅದಕ್ಕೆ ತಕ್ಕುದಾದ ಸ್ಪಂದನ, ಸಮೂಹ ಸಂರಚನೆಗಳು ಇವೇ ಮುಂತಾದ ವಿಶೇಷತೆಗಳಿಂದ ಅವರ ಪ್ರದರ್ಶನ ರಂಜಿಸಿತು.ನಂದಿನಿ-ಮುರಳಿ, ರಾಧಾ-ಕೃಷ್ಣರನ್ನು ಕುರಿತಾದ ತಮ್ಮ ನೆಚ್ಚಿನ `ರುಸೀಲೀ ರಾಧಾ ರುಸೀಲಾ ಮಾಧವ್'ನ ಪ್ರಸ್ತುತಿಯಲ್ಲಿ ಅಭಿನಯ ಕಲೆಯ ಪರಾಕಾಷ್ಠೆಯನ್ನು ಮುಟ್ಟಿದರು.ಬೆಳಕು ಬೀರಿದ ವಿಚಾರ ಸಂಕಿರಣ

ಶನಿವಾರದಂದು ಬೆಳಿಗ್ಗೆ ಭಾರತೀಯ ವಿದ್ಯಾ ಭವನದ ಖಿಂಚಾ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಸೋನಾಲ್ ಮಾನ್‌ಸಿಂಗ್, ಹಿರಿಯ ಶಾಸ್ತ್ರೀಯ ನೃತ್ಯಗಳ  ಸಂಚಾರಿ ವಿಶ್ವಕೋಶ ಎನ್ನಬಹುದಾದ ಡಾ. ಸುನಿಲ್ ಕೊಠಾರಿ, ತಮ್ಮ ಆಳವಾದ ಕಲಾ ವಿಮರ್ಶೆಗಳು ಮತ್ತು ಬರಹಗಳಿಗೆ ಪ್ರಸಿದ್ಧಿಯಾಗಿರುವ ದೆಹಲಿ ನಿವಾಸಿ ಕನ್ನಡತಿ ಲೀಲಾ ವೆಂಕಟರಾಮನ್, ಡಾ. ಸರ್ವೋತ್ತಮ ಕಾಮತ್, ಮೈಸೂರು ವಿ. ಸುಬ್ರಹ್ಮಣ್ಯ ಹಾಗೂ ವೇಣು ವಿದ್ವಾಂಸ ಬಿ. ಶಂಕರರಾವ್ ಅವರು ತಮ್ಮ ವಿಚಾರಗಳನ್ನು ಮಂಡಿಸಿದರು.ಸೋನಾಲ್ ಮಾನ್‌ಸಿಂಗ್ ಅವರು ಭಾವೋದ್ರೇಕದಿಂದ ಗದ್ಗದಿತರಾಗಿ ತಮ್ಮ ಗುರು ಕೃಷ್ಣರಾವ್ ಅವರ ಹಿರಿಮೆಯನ್ನು ವಿವರಿಸಿದರು. ತಾವು ಆಗಿನ ಬೊಂಬಾಯಿಯಿಂದ ಬೆಂಗಳೂರಿಗೆ ಬಂದು ಅವರಲ್ಲಿ ನೃತ್ಯ ಕಲಿತ ಪರಿಯನ್ನು ಆತ್ಮೀಯವಾಗಿ ವರ್ಣಿಸಿದರು. ತಮ್ಮ ಗುರುಗಳು ತೋರಿದ ಪ್ರೀತಿ, ವಿಶ್ವಾಸ, ಅವರ ಕುಟುಂಬದ ಸದಸ್ಯರೊಡನೆ ಅವರು ಬೆಸೆದುಕೊಂಡ ರೀತಿ ಮತ್ತು ಕೃಷ್ಣರಾಯರ ಶಿಕ್ಷಣ ವೈಶಿಷ್ಟ್ಯತೆಗಳನ್ನು ಅವರು ಸೊಗಸಾಗಿ ನೆನಪಿಸಿಕೊಂಡರು.ಡಾ. ಸುನಿಲ್ ಕೊಠಾರಿ ಅವರು ಕೃಷ್ಣರಾಯರ ಶಿಸ್ತುಬದ್ಧ ಜೀವನ ಮತ್ತು ಕಳಂಕರಹಿತ ಕಲಾ ಪರಿಪೂರ್ಣತೆಯ ಬಗೆಗೆ ಅವರು ನೀಡುತ್ತಿದ್ದ ಪ್ರಾಶಸ್ತ್ಯವನ್ನು ಸೋದಾಹರಣ ಪ್ರಸ್ತುತಪಡಿಸಿದರು. ವಿಷಮ ಪರಿಸ್ಥಿತಿಗಳಲ್ಲಿ ಅವರು ಧೃತಿಗೆಡದೆ ಮುನ್ನಡೆದು ಭರತನಾಟ್ಯ ಕ್ಷೇತ್ರವನ್ನು ವಿವಿಧ ರೂಪಗಳಲ್ಲಿ  ಹಾಗೂ ವಿವಿಧ ಹಂತಗಳಲ್ಲಿ ಯಾವ ರೀತಿಯಲ್ಲಿ ಶ್ರೀಮಂತಗೊಳಿಸಿದರು ಎಂಬುದನ್ನೂ ಅವರು ಉಲ್ಲೇಖಿಸಿದರು.ಲೀಲಾ ವೆಂಕಟರಾಮನ್ ಅವರು ಕೃಷ್ಣರಾವ್ ಅವರನ್ನು ಕೇವಲ ಸಾಂಸ್ಕೃತಿಕ ರಾಯಭಾರಿ ಎಂದು ಸಂಬೋಧಿಸಿ ಸೀಮಿತಗೊಳಿಸಲು ಇಚ್ಛಿಸದೆ ಅವರು ಅದಕ್ಕೂ ಮೀರಿದ ಕಾರ್ಯಗಳನ್ನು ಮಾಡಿದರೆಂದರು. ದೇಶದ ಹಳ್ಳಿ ಹಳ್ಳಿಗಳಿಗೂ ತೆರಳಿ ಕಲೆಯ ಪ್ರಸಾರ ಮಾಡಿ ತಮ್ಮ ಬದುಕನ್ನೇ ಭರತನಾಟ್ಯಮಯಗೊಳಿಸಿ ಜಟಕಾ ಬಂಡಿಯಲ್ಲಿ ಪ್ರಯಾಣಿಸುತ್ತಿದ್ದ ಅವರು ತಮ್ಮ ಶ್ರದ್ಧೆ, ಬದ್ಧತೆ, ಉತ್ಸಾಹಗುಂದದ ಕಾಳಜಿ ಮತ್ತು ಛಲದಿಂದ ಮುಂದುವರೆದು ವಿಮಾನದಲ್ಲಿ ಹಾರಾಡಿ ವಿದೇಶಗಳಲ್ಲೂ ತಮಗೆ ವಿಶಿಷ್ಟ ಸ್ಥಾನವನ್ನು ಗಿಟ್ಟಿಸಿಕೊಂಡ ಸಾಹಸಗಾಥೆಯನ್ನು ಅವರು ಪ್ರಶಂಸಿಸಿದರು. ಸುಬ್ರಹ್ಮಣ್ಯ ಅವರು ಕೃಷ್ಣರಾಯರನ್ನು ಕುರಿತಾದ ತಮ್ಮ ಲೇಖನವನ್ನು ಟಿಪ್ಪಣಿಗಳೊಂದಿಗೆ ವಾಚಿಸಿ ಅವರು ನಡೆದ ದಾರಿಯನ್ನು ಗುರುತಿಸಿದರು. ಸರ್ವೋತ್ತಮ ಕಾಮತ್ ಅವರು ಗುರುಗಳಾಗಿ ಅವರಿಂದ ತಾವು ಪಡೆದುಕೊಂಡ ವರಪ್ರದ ಅಂಶಗಳನ್ನು ವರ್ಣಿಸಿದರು.ಒಟ್ಟಿನಲ್ಲಿ, ಮೇರು ಕಲಾವಿದ ದಂಪತಿಯನ್ನು ಶತಮಾನೋತ್ಸವ ಸಂದರ್ಭದಲ್ಲಿ ಹೀಗೆ ವೈವಿಧ್ಯಮಯ ಮತ್ತು ವರ್ಣಮಯ ಕಾರ್ಯಕ್ರಮಗಳೊಂದಿಗೆ ಸ್ಮರಿಸುವ ಮೂಲಕ ಅವರ ಹಿರಿಯ ಶಿಷ್ಯವೃಂದ ಅರ್ಥಪೂರ್ಣ ನಮನ ಸಲ್ಲಿಸಿದ್ದು ಅನುಕರಣೀಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry